ಕುಶಾಲನಗರ, ಡಿ. 12: ಕುಶಾಲನಗರ ಪಶುವೈದ್ಯಕೀಯ ಆಸ್ಪತ್ರೆಯ ನೂತನ ಕಟ್ಟಡ ಕಾಮಗಾರಿಗೆ ಮಡಿಕೇರಿ ಕ್ಷೇತ್ರ ಶಾಸಕ ಅಪ್ಪಚ್ಚುರಂಜನ್ ಭೂಮಿಪೂಜೆ ನೆರವೇರಿಸಿದರು. ನಂತರ ಮಾತನಾಡಿದ ರಂಜನ್, ಪಶುಸಂಗೋಪನೆಗೆ ಹೆಚ್ಚಿನ ಒತ್ತು ನೀಡುವ ನಿಟ್ಟಿನಲ್ಲಿ ಪಶುವೈದ್ಯಕೀಯ ಆಸ್ಪತ್ರೆಗಳಿಗೆ ಪ್ರಾಮುಖ್ಯತೆ ನೀಡಲಾಗುತ್ತಿದೆ. ಗೋವುಗಳ ಸಂರಕ್ಷಣೆಗೆ ರಾಜ್ಯದಲ್ಲಿ ಈಗಾಗಲೇ ಗೋಹತ್ಯೆ ನಿಷೇದ ಕಾಯ್ದೆ ಜಾರಿಗೊಳಿಸಲಾಗಿದೆ ಎಂದ ಅವರು ಪಶುಸಂಗೋಪನೆ, ಬೆಳೆಗಳಿಗೆ ರಾಸಾಯನಿಕ ಗೊಬ್ಬರ ಬದಲಾಗಿ ಸಗಣಿ ಗೊಬ್ಬರ ಬಳಕೆ ಆಗಬೇಕಿದೆ. ಪ್ರತಿ ಜಿಲ್ಲೆಯಲ್ಲಿ ಗೋಶಾಲೆ ತೆರೆಯಲು ಸರಕಾರ ಚಿಂತನೆ ಹರಿಸಿದೆ. ಹಲವು ವರ್ಷಗಳ ಬೇಡಿಕೆಯಂತೆ ಅವಶ್ಯವಿರುವ ಪಶುವೈದ್ಯರು, ಸಿಬ್ಬಂದಿಗಳ ನೇಮಕಕ್ಕೆ ಅಗತ್ಯ ಕ್ರಮಕೈಗೊಳ್ಳಲಾಗುವುದು ಎಂದರು.
ರೂ 36 ಲಕ್ಷ ರೂ ವೆಚ್ಚದಲ್ಲಿ ಕುಶಾಲನಗರದ ಪ್ರಸಕ್ತ ಪಶು ವೈದ್ಯಕೀಯ ಆಸ್ಪತ್ರೆಯ ಆವರಣದಲ್ಲಿ ಎನ್‍ಪಿಸಿಸಿಎಲ್ ಮೂಲಕ ನೂತನ ಕಟ್ಟಡ ಕಾಮಗಾರಿ ಕೈಗೊಳ್ಳಲಾಗಿದೆ ಎಂದು ಮಾಹಿತಿ ಒದಗಿಸಿದರು.
ಕುಶಾಲನಗರ ಪಪಂ ಅಧ್ಯಕ್ಷ ಜೈವರ್ಧನ್, ಉಪಾಧ್ಯಕ್ಷೆ ಸುರಯ್ಯ ಭಾನು, ಕುಡಾ ಅಧ್ಯಕ್ಷ ಎಂ.ಎಂ.ಚರಣ್, ಸದಸ್ಯ ವಿ.ಡಿ.ಪುಂಡರೀಕಾಕ್ಷ, ವೈಶಾಖ್, ಪಪಂ ಸದಸ್ಯರಾದ ಅಮೃತ್‍ರಾಜ್, ಎಂ.ಬಿ.ಸುರೇಶ್, ಎಂ.ವಿ. ನಾರಾಯಣ, ಎಪಿಎಂಸಿ ನಿರ್ದೇಶಕ ಮಂಡೇಪಂಡ ಬೋಸ್ ಮೊಣ್ಣಪ್ಪ, ಬಿಜೆಪಿ ನಗರಾಧ್ಯಕ್ಷ ಉಮಾಶಂಕರ್, ಕುಶಾಲನಗರ ಬಿಜೆಪಿ ಶಕ್ತಿ ಕೇಂದ್ರದ ಅಧ್ಯಕ್ಷ ಬಿ.ಎಸ್. ಶಿವಕುಮಾರ್, ಪ್ರಮುಖರಾದ ರಾಮಚಂದ್ರ, ನಿಸಾರ್, ಪಶು ವೈದ್ಯಕೀಯ ಇಲಾಖೆ ಜಿಲ್ಲಾ ಉಪನಿರ್ದೇಶಕ ಡಾ.ಸುರೇಶ್ ಭಟ್, ವೈದ್ಯ ಡಾ.ಶ್ರೀದೇವ್ ಸೇರಿದಂತೆ ಬಿಜೆಪಿ ಪ್ರಮುಖರು ಇದ್ದರು.