ಮಡಿಕೇರಿ, ಡಿ. 12: ಕಾಫಿಯ ಉತ್ತಮ ಸ್ವಾದಕ್ಕೆ ಗ್ರಾಹಕರು ಮನಸೋತರೆ ಮಾತ್ರ ಜಾಗತಿಕವಾಗಿ ಕಾಫಿ ಬೆಳೆಗೆ ಉತ್ತಮ ದರ ದೊರಕಲು ಸಾಧ್ಯವಿದೆ. ಈ ನಿಟ್ಟಿನಲ್ಲಿ ನೈಸರ್ಗಿಕವಾಗಿ ಸ್ವಾದಭರಿತ ಕಾಫಿ ಬೆಳೆಸುವತ್ತ ಬೆಳೆಗಾರರು ಗಮನ ಹರಿಸಬೇಕೆಂದು ಪೆÇನ್ನಂಪೇಟೆ ಅರಣ್ಯ ಮಹಾವಿದ್ಯಾಲಯದ ಡೀನ್ ಡಾ. ಸಿ.ಜಿ. ಕುಶಾಲಪ್ಪ ಕರೆ ನೀಡಿದ್ದಾರೆ.ನಗರದ ಹೊರವಲಯದಲ್ಲಿನ ಕ್ಯಾಪಿಟಲ್ ರೆಸಾರ್ಟ್‍ನಲ್ಲಿ ಕೊಡಗು ಮಹಿಳಾ ಕಾಫಿ ಜಾಗೃತಿ ಸಂಘದ 18ನೇ ವಾರ್ಷಿಕ ಮಹಾಸಭೆಯಲ್ಲಿ ಮಾತನಾಡಿದ ಡಾ. ಸಿ.ಜಿ. ಕುಶಾಲಪ್ಪ, ವಿಯೆಟ್ನಾಂ, ಬ್ರೆಜಿಲ್ ದೇಶಗಳು ಬೃಹತ್ ಪ್ರಮಾಣದಲ್ಲಿ ಕಾಫಿಯ ಉತ್ಪಾದನೆ ಮಾಡಿದರೂ ಕೂಡ ಕಾಫಿ ಕೃಷಿಗೆ ಹೂಡಿಕೆ ಮಾಡಿದ ಮೂಲ ಬಂಡವಾಳವೇ ಅವರ ಕೈಗೆ ಎಟುಕುತ್ತಿಲ್ಲ. ಆ ದೇಶಗಳಲ್ಲಿ ಕಾಫಿ ಕೃಷಿಗೆ ಅತ್ಯಧಿಕ ಪ್ರಮಾಣದಲ್ಲಿ ರಾಸಾಯನಿಕಗಳ ಬಳಕೆ ಮಾಡುತ್ತಿರುವುದೇ ಇದಕ್ಕೆ ಕಾರಣ ಎಂದು ವಿಶ್ಲೇಷಿಸಿದರು.ಕೊಡಗಿನ ಕಾಫಿ ಬೆಳೆಗಾರರು ಕೂಡ ರಾಸಾಯನಿಕಗಳ ಬಳಕೆಯನ್ನು ಕಡಿಮೆ ಮಾಡಿ ನೈಸರ್ಗಿಕವಾಗಿ ಕಾಫಿ ಕೃಷಿಯಲ್ಲಿ ತೊಡಗಬೇಕು. ಕೊಡಗು ಜಿಲ್ಲೆಯಲ್ಲಿ ನೈಸರ್ಗಿಕ ಅರಣ್ಯದಿಂದ ಆವೃತವಾದ ಪ್ರದೇಶಗಳಲ್ಲಿ ಕಾಫಿಯನ್ನು ಬೆಳೆಯುತ್ತಿದ್ದು, 360 ತಳಿಯ ವೈವಿಧ್ಯಮಯ ಮರಗಳು ಕೊಡಗಿನ ಕಾಫಿ ತೋಟಗಳಲ್ಲಿವೆ. ಇದರಿಂದ ವಿಶ್ವ ಗುಣಮಟ್ಟದ ಕಾಫಿಯನ್ನು ಬೆಳೆಯಲು ಕೊಡಗಿನ ಕಾಫಿ ಬೆಳೆಗಾರರಿಗೆ ಸಾಧ್ಯವಾಗಲಿದೆ. ಈ ರೀತಿಯಾಗಿ ಬೆಳೆಯುವ ಕಾಫಿಗೆ ವಿಶ್ವ ಮಾನ್ಯತೆಯೂ ಇದ್ದು, ಉತ್ತಮ ಬೆಲೆಯೂ ದೊರಕಲು ಸಾಧ್ಯವಾಗುತ್ತದೆ ಎಂದು ಅಭಿಪ್ರಾಯಪಟ್ಟರು. ಕಾಫಿ ಬೆಳೆಗಾರರು ಕಾಫಿ ಗಿಡದಿಂದ ಕಾಫಿ ಕಪ್‍ನವರೆಗೂ ಗುಣಮಟ್ಟ ಕಾಯ್ದುಕೊಳ್ಳಬೇಕು ಎಂದೂ ಕುಶಾಲಪ್ಪ ಸಲಹೆ ನೀಡಿದರು.ಕಾಫಿ ಮಂಡಳಿಯ ಗುಣಮಟ್ಟ ತಜ್ಞ ವಿಕ್ರಂ ಕುಟ್ಟಯ್ಯ ಮಾತನಾಡಿ, ಎಲ್ಲಾ ಅಗತ್ಯ ವಸ್ತುಗಳ ಬೆಲೆಯಲ್ಲಿ ಏರಿಕೆಯಾಗುತ್ತಲೇ ಇದ್ದರೂ ವಾಣಿಜ್ಯ ಬೆಳೆಯಾದ ಕಾಫಿ ಫಸಲಿನ ಬೆಲೆಯಲ್ಲಿ ಕಳೆದ 25 ವರ್ಷಗಳಲ್ಲಿ ಯಾವುದೇ ಗಮನಾರ್ಹ ಏರಿಕೆಯಾಗದೇ ಇರುವುದು ಬೆಳೆಗಾರರು ಚಿಂತಿಸಲೇಬೇಕಾದ ವಿಚಾರವಾಗಿದೆ ಎಂದು ಹೇಳಿದರು.

(ಮೊದಲ ಪುಟದಿಂದ) ವಿಶ್ವದ ಪ್ರಮುಖ ವಾಣಿಜ್ಯ ಬೆಳೆಯಾಗಿರುವ ಕಾಫಿಯ ಬೆಲೆ ನಿರೀಕ್ಷಿತ ಪ್ರಮಾಣದಲ್ಲಿ ಹೆಚ್ಚದೇ ಇರುವುದು ಕಳವಳಕಾರಿಯಾಗಿದೆ. 25 ವರ್ಷಗಳ ಹಿಂದೆ ಅರೇಬಿಕಾ ಕಾಫಿ ತೋಟ ನಿರ್ವಹಣೆಗೆ ರೂ. 25 ಸಾವಿರ ಇದ್ದದ್ದು ಈಗ ರೂ. 80 ಸಾವಿರಕ್ಕೆ ತಲುಪಿದೆ. ರೋಬಸ್ಟಾ ಕಾಫಿ ನಿರ್ವಹಣೆ ರೂ. 15 ಸಾವಿರ ಇದ್ದದ್ದು ಈಗ ರೂ. 60 ಸಾವಿರಕ್ಕೆ ಹೆಚ್ಚಾಗಿದೆ. ಚಿನ್ನದ ಬೆಲೆ ರೂ. 9 ಸಾವಿರದಿಂದ ರೂ. 50 ಸಾವಿರಕ್ಕೆ ಏರಿಕೆಯಾಗದೆ. ಹೀಗಿದ್ದರೂ ಕಾಫಿಯ ಬೆಲೆ ಮಾತ್ರ 25 ವರ್ಷಗಳಲ್ಲಿ ಹೆಚ್ಚಿನ ಏರಿಕೆಯಾಗಲೇ ಇಲ್ಲ. ಕಾಫಿ ಕೃಷಿ ತೋಟದ ನಿರ್ವಹಣಾ ವೆಚ್ಚ ಮತ್ತು ಅದರಿಂದ ಬರುವ ಆದಾಯದ ಹೋಲಿಕೆಯಲ್ಲಿ ತಾಳಮೇಳವೇ ಇಲ್ಲದಂಥ ದುಸ್ಥಿತಿಯಿದೆ ಎಂದೂ ವಿಕ್ರಂ ಕುಟ್ಟಯ್ಯ ವಿಶ್ಲೇಷಿಸಿದರು.

ಕಾಫಿ ಬೆಲೆ ಏರಿಕೆ ಮತ್ತು ಕಾಫಿ ಮಾರುಕಟ್ಟೆಯಲ್ಲಿ ಕೆಲವೊಂದು ಬದಲಾವಣೆ ತರುವ ನಿಟ್ಟಿನಲ್ಲಿ ಕಾಫಿ ಬೆಳೆಗಾರರೆಲ್ಲರೂ ಒಂದು ಸಮುದಾಯವಾಗಿ ಏಕಮತದಿಂದ ಯೋಜನೆ ರೂಪಿಸುವ ಅನಿವಾರ್ಯತೆ ಈಗಿದೆ, ಕಾಫಿ ಉದ್ಯಮ ಹಾದಿ ತಪ್ಪಿದ್ದು ಎಲ್ಲಿ ಎಂಬ ಬಗ್ಗೆಯೂ ಚಿಂತನೆಯಾಗಬೇಕು ಎಂದೂ ವಿಕ್ರಂ ಹೇಳಿದರು.

ಕೊಡಗು ಮಹಿಳಾ ಕಾಫಿ ಜಾಗೃತಿ ಸಂಘದ ಅಧ್ಯಕ್ಷೆ ಪಂದಿಕುತ್ತೀರ ಚಿತ್ರಾ ಸುಬ್ಬಯ್ಯ ಮಾತನಾಡಿ, ತಮ್ಮ ಸಂಘವು ಸತತ 18 ವರ್ಷಗಳಿಂದ ಕಾಫಿಯ ಮಹತ್ವದ ಬಗ್ಗೆ ಹಲವೆಡೆ ತಿಳುವಳಿಕೆ ಮೂಡಿಸುವ ಕಾರ್ಯದಲ್ಲಿ ಸಕ್ರಿಯವಾಗಿದೆ. ಮಹಿಳೆಯರ ಈ ಸಂಘ ವಿಶಿಷ್ಟ ಕಾರ್ಯಚಟುವಟಿಕೆಗಳಿಗೆ ಹೆಸರಾಗಿದೆ. ಯುವತಿಯರೂ ಹೆಚ್ಚಿನ ಸಂಖ್ಯೆಯಲ್ಲಿ ಸಂಘವನ್ನು ಸದಸ್ಯೆಯರಾಗಿ ಸೇರ್ಪಡೆಯಾಗುತ್ತಿರುವುದು ಕಾಫಿ ಉದ್ಯಮಕ್ಕೆ ಆಶಾಭಾವನೆ ಮೂಡಿಸುವಂತಿದೆ ಎಂದರು. 18 ವರ್ಷಗಳ ಸತತ ಕಾರ್ಯಚಟುವಟಿಕೆಯ ಮಹಿಳಾ ಕಾಫಿ ಜಾಗೃತಿ ಸಂಘವು ಮುಂದಿನ ದಿನಗಳಲ್ಲಿ ಯಾವುದೇ ಕಾರಣಗಳಿಂದಲೂ ತನ್ನ ಉದ್ದೇಶಗಳಿಂದ ವಿಮುಖವಾಗಬಾರದು ಎಂದು ಕಿವಿಮಾತು ಹೇಳಿದ ಚಿತ್ರಾ ಸುಬ್ಬಯ್ಯ, ಎಂಥಹ ಸವಾಲುಗಳು, ಅಡೆತಡೆಗಳು ಎದುರಾದರೂ ಮಹಿಳೆಯರು 18 ವರ್ಷಗಳಂತೆಯೇ ಕಾಫಿಗೆ ಆದ್ಯತೆ ನೀಡುವ ಕ್ರಿಯಾಶೀಲ ಸಂಘದಲ್ಲಿ ತೊಡಗಿಸಿಕೊಳ್ಳುವಂತೆಯೂ ಕರೆ ನೀಡಿದರು.

ಮಡಿಕೇರಿ ರಾಜಾಸೀಟ್‍ನಲ್ಲಿ ಕೊಡಗು ಜಿಲ್ಲಾಡಳಿತ ಪ್ರಾರಂಭಿಸುತ್ತಿರುವ ಕೂರ್ಗ್ ವಿಲೇಜ್‍ನಲ್ಲಿ ಕಾಫಿ ಮಂಡಳಿ ಸಹಯೋಗದಲ್ಲಿ ತಮ್ಮ ಸಂಘದ ನಿರ್ದೇಶಕಿ ಕುಮಾರಿ ಕುಂಜ್ಞಪ್ಪ ಕಾಫಿ ಮಳಿಗೆಯನ್ನು ಪ್ರಾರಂಭಿಸಲಿದ್ದು, ಈ ಮೂಲಕ ಕೂರ್ಗ್ ವಿಲೇಜ್‍ನಲ್ಲಿ ಕೊಡಗಿನ ಕಾಫಿಗೇ ವಿಶೇಷ ಮಳಿಗೆ ಲಭಿಸುತ್ತಿರುವುದು ಸ್ವಾಗತಾರ್ಹ ಬೆಳವಣಿಗೆಯಾಗಿದೆ ಎಂದೂ ಚಿತ್ರಾ ಸುಬ್ಬಯ್ಯ ಹರ್ಷ ವ್ಯಕ್ತಪಡಿಸಿದರು.

ಸಂಘದ ಪ್ರಧಾನ ಕಾರ್ಯದರ್ಶಿ ಅಪ್ಪನೆರವಂಡ ಅನಿತಾ ನಂದ, ಜಂಟಿ ಕಾರ್ಯದರ್ಶಿ ಮುಕ್ಕಾಟೀರ ಜ್ಯೋತಿಕಾ ಬೋಪಣ್ಣ ಸೇರಿದಂತೆ ಸಂಘದ ನಿರ್ದೇಶಕಿಯರು ಪಾಲ್ಗೊಂಡಿದ್ದರು. ತೇಲಪಂಡ ಶರಿನ್ ನಂಜಪ್ಪ ಪ್ರಾರ್ಥಿಸಿದರು. ಬಲ್ಲನಮಾಡ ರೀಟಾ ವಂದಿಸಿದರು.

ಕಾಫಿ ಸೇವನೆಗೆ ಉತ್ತೇಜನ ನೀಡುವ ನಿಟ್ಟಿನಲ್ಲಿ 18 ವರ್ಷಗಳ ಹಿಂದೆ ಕೊಡಗಿನಲ್ಲಿ ಪ್ರಾರಂಭವಾದ ಕೊಡಗು ಮಹಿಳಾ ಕಾಫಿ ಜಾಗೃತಿ ಸಂಘದ ವಾರ್ಷಿಕ ಮಹಾಸಭೆಯಲ್ಲಿ ಜಿಲ್ಲೆಯ ಹಲವೆಡೆಗಳಿಂದ ಬಂದಿದ್ದ ನೂರಾರು ಸದಸ್ಯೆಯರು ಪಾಲ್ಗೊಂಡು ಮುಂದಿನ ದಿನಗಳಲ್ಲಿ ಕಾಫಿ ಸೇವನೆ ಸಂಬಂಧಿತ ಜಾಗೃತಿ ಮೂಡಿಸಲು ಹಮ್ಮಿಕೊಳ್ಳಬೇಕಾದ ಕಾರ್ಯಕ್ರಮಗಳ ಬಗ್ಗೆ ಚರ್ಚಿಸಿದರು.