ಗೋಣಿಕೊಪ್ಪಲು, ಡಿ.12: ಸಾಕು ನಾಯಿಯೊಂದು ಅಂಗಳಕ್ಕೆ ದಿಢೀರನೆ ಬಂದಿದ್ದ ಕಾಡಾನೆಯನ್ನು ಕಂಡು ಅದರೆದುರು ನಿಂತು ಬೊಗಳುವ ಮೂಲಕ ಮನೆ ಮಾಲೀಕರಿಗೆ ಎಚ್ಚರಿಕೆ ನೀಡಿ, ಮನೆಯಿಂದ ಹಿರಿಯರನ್ನು ಹೊರ ಕರೆಯುವ ಮೂಲಕ ಮನೆಯ ಯಜಮಾನನ 8 ವರ್ಷ ಪ್ರಾಯದ ಮಗುವನ್ನು ಪ್ರಾಣಾಪಾಯದಿಂದ ಕಾಪಾಡಿದ ಘಟನೆ ತಿತಿಮತಿ ಭದ್ರಗೊಳ ಗ್ರಾಮದಲ್ಲಿ ನಡೆದಿದೆ. ನಾಯಿಯ ಬೊಗಳುವಿಕೆಯಿಂದ ಆಕ್ರೋಶಗೊಂಡ ಒಂಟಿ ಸಲಗವು ಮನೆಯ ಮುಂಭಾಗದಲ್ಲಿ ನಿಲ್ಲಿಸಿದ್ದ ಕಾರನ್ನು ಜಖಂಗೊಳಿಸಿ ಕ್ಷಣಾರ್ಧದಲ್ಲಿ ತೆರಳಿದೆ. ತಿತಿಮತಿ ಪೆಟ್ರೋಲ್ ಬಂಕ್‍ನ ಮಾಲೀಕರಾದ ಪಾಲೆಂಗಡ ಮನುಕುಮಾರ್ ಅವರು ಸಮೀಪದ ಭದ್ರಗೊಳದ ನಿವಾಸಿಯಾಗಿದ್ದು, ಇವರಿಗೆ ಸೇರಿದ ಕಾರು ಕಾಡಾನೆಯ ಸಿಟ್ಟಿಗೆ ಜಖಂಗೊಂಡಿದೆ. ಲಕ್ಷಾಂತರ ಹಣ ನಷ್ಟ ಸಂಭವಿಸಿದೆ.ಶನಿವಾರ ಮುಂಜಾನೆ 8 ಗಂಟೆ ಸುಮಾರಿಗೆ ಇವರ ಸಾಕು ನಾಯಿಯನ್ನು ಗೂಡಿಗೆ ಕಟ್ಟಲು ಮನು ಅವರ ಮಗಳು ಅಂಗಳಕ್ಕೆ ಬಂದಿದ್ದರು. ಕಾಕಾತಾಳಿಯ ಎಂಬಂತೆ ಇದೇ ಸಮಯದಲ್ಲಿ (ಮೊದಲ ಪುಟದಿಂದ) ಕಾಡಾನೆಯೊಂದು ಕಾಫಿ ತೋಟದಿಂದ ದಿಢೀರನೇ ಇವರ ಅಂಗಳಕ್ಕೆ ಪ್ರವೇಶಿಸಿತು. ಈ ಸಂದರ್ಭ ಮನೆಯಲ್ಲಿದ್ದ ನಾಯಿ ಜೋರಾಗಿ ಬೊಗಳುವ ಮೂಲಕ ಕಾಡಾನೆಯನ್ನು ಅಂಗಳದಲ್ಲಿಯೇ ನಿಲ್ಲಿಸಿದೆ. ಮನು ಅವರ ಮಗಳು ಈ ಘಟನೆಯನ್ನು ಕಂಡು ಜೋರಾಗಿ ಕಿರುಚಿಕೊಂಡಿದ್ದಾಳೆ. ಮಕ್ಕಳ ಸದ್ದಿಗೆ ಹಾಗೂ ನಾಯಿಯ ಬೊಗಳುವಿಕೆಗೆ ಮನೆಯಲಿದ್ದ ಹಿರಿಯರು ಹೊರ ಬಂದು ನೋಡುತ್ತಿದ್ದಂತೆಯೇ ಕಾಡಾನೆಯು ನಾಯಿಯ ಮುಂದೆ ನಿಂತಿತ್ತು. ಮಗು ಧೈರ್ಯದಿಂದ ಆನೆಯನ್ನು ನೋಡುತ್ತಲೇ ನಿಂತಿದ್ದಳು ಮನೆಯವರು ಕೂಡಲೇ ಆಗಮಿಸಿ ಬೊಬ್ಬೆ ಹಾಕಿ ಮಗುವನ್ನು ಮನೆಯೊಳಗೆ ಕರೆದೊಯ್ದಿದ್ದಾರೆ. ಇತ್ತ ಸಾಕು ನಾಯಿಯ ಬೊಗಳುವಿಕೆಯಿಂದ ಸಿಟ್ಟುಗೊಂಡ ಕಾಡಾನೆ ಸಮೀಪದಲ್ಲಿದ್ದ ಕಾರನ್ನು ಜಖಂಗೊಳಿಸಿ ತೋಟದಲ್ಲಿ ಮರೆಯಾಗಿದೆ ಸಾಕು ನಾಯಿ ಮಾಡಿದ ಉಪಕಾರದಿಂದ ದೊಡ್ಡ ಅನಾಹುತದಿಂದ ಮಗು ಪಾರಾಗಿದೆ.
ಇದೇ ಕಾಡಾನೆಯು ಭದ್ರಗೊಳದಿಂದ 8.20ರ ಸಮಯದಲ್ಲಿ ಚರ್ಚ್ ಬಳಿಯಿರುವ ಮುಕ್ಕೋಟ್ ಸ್ಥಳಕ್ಕೆ ತೆರಳಿ ದೇವರಕಾಡು ಪೈಸಾರಿ ನಿವಾಸಿ ಸಿ.ಸಿ. ರವಿ ಎಂಬವರ ಮನೆಯ ಬಳಿ ನಿಲ್ಲಿಸಿದ್ದ ಆಟೋ ರಿಕ್ಷಾವನ್ನು ಜಖಂಗೊಳಿಸಿ 80 ಸಾವಿರಕ್ಕೂ ಅಧಿಕ ನಷ್ಟ ಪಡಿಸಿದೆ. ಈ ಘಟನೆ ಈ ಭಾಗದ ನಾಗರಿಕರನ್ನು ಭಯಭೀತರನ್ನಾಗಿ ಮಾಡಿದೆ. ನಾಗರಿಕರ ಕೂಗಾಟಕ್ಕೆ ಈ ಕಾಡಾನೆಯು ಸಮೀಪದ ಕಾಫಿ ತೋಟದ ಮೂಲಕ ಪ್ರೌಢಶಾಲೆ ಬಳಿಯಿರುವ ಅರಣ್ಯದತ್ತ ತೆರಳಿದೆ. ಈ ಆನೆಯು ಅನೇಕ ಸಮಯದಿಂದ ಈ ಭಾಗದಲ್ಲಿ ಒಂಟಿಯಾಗಿ ಸುತ್ತಾಟ ನಡೆಸುತ್ತಿದ್ದು, ಆಗಿಂದ್ದಾಗ್ಗೆ ತೊಂದರೆಗಳನ್ನು ಮಾಡುತ್ತಲೇ ಇದೆ. ಈ ಬಗ್ಗೆ ಅರಣ್ಯ ಅಧಿಕಾರಿಗಳಿಗೆ ಮಾಹಿತಿ ಇದ್ದರೂ ತಲೆಕೆಡಿಸಿಕೊಂಡಿಲ್ಲ ಎಂಬ ಆರೋಪವೂ ವ್ಯಕ್ತಗೊಂಡಿದೆ.
ಮನು ಅವರ ಮನೆಯಲ್ಲಿ ಕಾಡಾನೆಯು ತೊಂದರೆ ಮಾಡಿದೆ ಎಂಬ ಸುದ್ದಿ ತಿಳಿಯುತ್ತಿದ್ದಂತೆಯೇ ತಿತಿಮತಿ ಅರಣ್ಯ ಇಲಾಖೆಯ ಆರ್‍ಎಫ್‍ಓ ಅಶೋಕ್ ಹುನಗುಂದ ಹಾಗೂ ಸಿಬ್ಬಂದಿ ಘಟನಾ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದರು. ಜಖಂಗೊಂಡ ಕಾರು ಹಾಗೂ ಆಟೋ ರಿಕ್ಷಾ ಮಾಲೀಕರಿಗೆ ಆಗಿರುವ ನಷ್ಟ ಪರಿಹಾರವನ್ನು ಕಲ್ಪಿಸಿಕೊಡುವ ಭರವಸೆ ನೀಡಿದರು. ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಪದಾಧಿಕಾರಿಗಳು ಮನು ಅವರನ್ನು ಭೇಟಿ ಮಾಡಿ ನಂತರ ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳೊಂದಿಗೆ ದೂರವಾಣಿ ಮೂಲಕ ಸಂಪರ್ಕಿಸಿ, ಸೋಮವಾರ ಮುಂಜಾನೆಯೇ ಪರಿಹಾರ ಹಣವನ್ನು ಆಟೋ ರಿಕ್ಷಾ ಮಾಲೀಕರಿಗೆ ಹಾಗೂ ಕಾರಿನ ಮಾಲೀಕರಿಗೆ ನೀಡಲು ವಿಶೇಷ ಕ್ರಮ ವಹಿಸಬೇಕೆಂದು ಮನವಿ ಮಾಡಿದರು. ಸೋಮವಾರ ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳ ಸಭೆಯಲ್ಲಿಯೇ ಪರಿಹಾರ ನೀಡುವ ಬಗ್ಗೆ ಅಗತ್ಯ ಕ್ರಮ ಕೈಗೊಳ್ಳುವುದಾಗಿ ಹಿರಿಯ ಅಧಿಕಾರಿಗಳು ರೈತ ಮುಖಂಡರುಗಳಿಗೆ ಭರವಸೆ ನೀಡಿದರು.
7.30ರ ಸುಮಾರಿಗೆ ಈ ಕಾಡಾನೆಯು ಭದ್ರಗೊಳ ಗ್ರಾಮದ ಹರೀಶ್ ಎಂಬವರ ಮನೆಯ ಸಮೀಪ ಕಾಣಿಸಿಕೊಂಡಿದ್ದು ಹರೀಶ್ ಹಾಗೂ ಕಾರ್ಮಿಕರು ಆನೆಯನ್ನು ಬೊಬ್ಬೆ ಹಾಕಿ ಓಡಿಸಿದ್ದರು. ಇದೇ ಆನೆಯು ಪಾಲೆಂಗಡ ಮನು ಮನೆಯತ್ತ ತೆರಳಿದೆ. ಅರ್ಧ ಗಂಟೆ ಸಮಯದಲ್ಲಿ ಈ ಕಾಡಾನೆಯು ನಡೆಸಿರುವ ಅವಾಂತರ ಈ ಭಾಗದ ಸಾರ್ವಜನಿಕರನ್ನು ಆತಂಕಕ್ಕೀಡುಮಾಡಿದೆ.
-ಹೆಚ್.ಕೆ.ಜಗದೀಶ್