ಮಡಿಕೇರಿ, ಡಿ. 11: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದಲ್ಲಿ ದುಡಿಯುತ್ತಿರುವ ನೌಕರರನ್ನು ಸರಕಾರಿ ನೌಕರರಾಗಿ ಪರಿಗಣಿಸಿ, ಸರಕಾರಿ ನೌಕರರಿಗೆ ದೊರಕುತ್ತಿರುವ ಎಲ್ಲಾ ಸೌಲಭ್ಯಗಳನ್ನು ಒದಗಿಸುವಂತೆ ಒತ್ತಾಯಿಸಿ ಸಾರಿಗೆ ನಿಗಮದ ಚಾಲಕರು ಹಾಗೂ ನಿರ್ವಾಹಕರು ಬಸ್ ಸಂಚಾರ ಸ್ಥಗಿತಗೊಳಿಸಿ ಅನಿರ್ಧಿಷ್ಟಾವಧಿ ಮುಷ್ಕರಕ್ಕೆ ಇಳಿದಿದ್ದಾರೆ. ದಿಢೀರ್ ಮುಷ್ಕರದಿಂದಾಗಿ ಮಾಹಿತಿ ಇಲ್ಲದೆ ಪರ ಊರುಗಳಿಗೆ ತೆರಳಲು ಆಗಮಿಸಿದ್ದ ಪ್ರಯಾಣಿಕರು ಪರದಾಡುವಂತಾಯಿತು. ಮುಷ್ಕರ ನಿರತ ಸಿಬ್ಬಂದಿಗಳು ನಿಲ್ದಾಣದಲ್ಲಿಯೇ ಪೆಂಡಾಲ್ ಹಾಕಿ ಊಟ ಮಾಡಿದರೆ, ಖಾಸಗಿ ಬಸ್‍ಗಳು, ಟೆಂಪೋಗಳು ಅವಕಾಶ ಬಳಸಿಕೊಂಡು ಪ್ರಯಾಣಿಕರ ಅನುಕೂಲಕ್ಕಾಗಿ ಒಂದಷ್ಟು ಸಂಚಾರ ಆರಂಭಿಸಿದವು.ರೈತರ ಬೇಡಿಕೆಗಳ ಈಡೇರಿಕೆಗಳಿಗೆ ಹೋರಾಟ ನಡೆಯುತ್ತಿರುವಂತೆ ಸಾರಿಗೆ ನಿಗಮದ ಬೇಡಿಕೆಗಳ ಬಗ್ಗೆ ಪ್ರಸ್ತಾಪಿಸಿದ ನಾಯಕರನ್ನು ಬಂಧಿಸಿದ ಹಿನ್ನೆಲೆಯಲ್ಲಿ ದಿಢೀರ್ ಪ್ರತಿಭಟನೆಗಳಿಂದ ಸಾರಿಗೆ ನಿಗಮದ ಚಾಲಕರು ಹಾಗೂ ನಿರ್ವಾಹಕರು ತಮ್ಮನ್ನು ಕೂಡ ಸರಕಾರಿ ನೌಕರರನ್ನಾಗಿ ಪರಿಗಣಿಸಬೇಕು, ಸರಕಾರಿ ನೌಕರರಿಗೆ ಸಿಗುತ್ತಿರುವ ಎಲ್ಲಾ ಸೌಲಭ್ಯಗಳೂ ತಮಗೂ ಸಿಗಬೇಕೆಂಬ ಬೇಡಿಕೆ ಮುಂದಿಟ್ಟಿದ್ದಾರೆ. ರಾಜ್ಯವ್ಯಾಪಿ ನಡೆಯುತ್ತಿರುವ ಮುಷ್ಕರಕ್ಕೆ ಜಿಲ್ಲೆಯಲ್ಲಿಯೂ ವ್ಯಾಪಕ ಬೆಂಬಲ ದೊರೆತಿದ್ದು, ಮಡಿಕೇರಿ ಬಸ್ ನಿಲ್ದಾಣಕ್ಕೆ ಬಂದ (ಮೊದಲ ಪುಟದಿಂದ) ಬಸ್‍ಗಳು ಮತ್ತೆ ಬೇರೆಡೆಗೆ ತೆರಳದೇ ನಿಲ್ದಾಣದಲ್ಲಿಯೇ ನಿಲುಗಡೆಗೊಂಡವು.

ಪ್ರಯಾಣಿಕರ ಪರದಾಟ

ಬಸ್ ಮುಷ್ಕರದ ಬಗ್ಗೆ ಮಾಹಿತಿ ಇಲ್ಲದೆ ಬೇರೆಡೆಗೆ ತೆರಳಲೆಂದು ಬಂದಿದ್ದ ಸಹಸ್ರಾರು ಮಂದಿ ಪ್ರಯಾಣಿಕರು ಪರದಾಡುವಂತಾಯಿತು. ಕೆಲವರು ಬಂದ ದಾರಿಗೆ ಸುಂಕವಿಲ್ಲ ಎಂದು ಹಿಂತೆರಳಿದರೆ ಅನಿವಾರ್ಯವಾಗಿ ಹೋಗಲೇಬೇಕಾದವರು ಬಾಡಿಗೆ ವಾಹನ ಪಡೆದು ತೆರಳಿದರು. ಇನ್ನೂ ಕೆಲವರು ಮುಷ್ಕರ ಮುಗಿಯಬಹುದು, ಬಸ್ ಬರಬಹುದೆಂಬ ಆಶಾಭಾವನೆಯೊಂದಿಗೆ ನಿಲ್ದಾಣದಲ್ಲಿಯೇ ಕಾಯುತ್ತಾ ಕುಳಿತಿದ್ದರು.

ವ್ಯಾನ್ - ಖಾಸಗಿ ಬಸ್

ಬೆಳಿಗ್ಗೆಯಿಂದ ಮುಷ್ಕರ ಆರಂಭವಾಗಿದ್ದರಿಂದ ಕಂಗಾಲಾದ ಪ್ರಯಾಣಿಕರು ಖಾಸಗಿ ವಾಹನ, ಬಸ್‍ಗಳು ಸಿಗಬಹುದೇನೋ ಎಂಬ ಹುಡುಕಾಟದಲ್ಲಿದ್ದರು. ಇದನ್ನೇ ಅವಕಾಶವನ್ನಾಗಿ ಬಳಸಿಕೊಂಡ ವ್ಯಾನ್‍ಗಳು ಕುಶಾಲನಗರದವರೆಗೆ ಪ್ರಯಾಣಿಕರನ್ನು ಕರೆದೊಯ್ದರೆ, ಇತ್ತ ಕೆಲವು ತಿಂಗಳುಗಳಿಂದ ಸಂಚರಿಸದೆ ನಿಲುಗಡೆಗೊಂಡಿದ್ದ ಕೆಲವು ಖಾಸಗಿ ಬಸ್‍ಗಳು ಮೈಸೂರಿನವರೆಗೆ ಪ್ರಯಾಣಿಕರನ್ನು ಕರೆದೊಯ್ದು ಸೇವೆಯಲ್ಲಿ ತೊಡಗಿದ್ದರು. ಪ್ರತಿನಿತ್ಯ ಮಡಿಕೇರಿ ಘಟಕದಿಂದ 130 ಬಸ್‍ಗಳು ಇತರೆಡೆಗೆ ಸಂಚರಿಸುತ್ತಿದ್ದುದು ಇಂದು ಸಂಚಾರ ಸ್ಥಗಿತಗೊಳಿಸಿದ್ದವು. ಈ ನಡುವೆ ಬೇರೆಡೆಯಿಂದ ಸಾರಿಗೆ ಸಂಸ್ಥೆಯ ಕೆಲವು ಬಸ್‍ಗಳು ನಿಲ್ದಾಣದಲ್ಲಿ ನಿಲ್ಲಿಸಲು ಜಾಗವಿಲ್ಲದ ಕಾರಣ, ಸಾರಿಗೆ ಘಟಕದಲ್ಲಿ ನಿಲ್ಲಿಸಲೆಂದು ತೆರಳುತ್ತಿದ್ದಾಗ ಜ. ತಿಮ್ಮಯ್ಯ ವೃತ್ತದಲ್ಲಿ ಬಸ್‍ಗಾಗಿ ಕಾಯುತ್ತಿದ್ದ ಪ್ರಯಾಣಿಕರ ಜಂಗುಳಿಯನ್ನು ಕಂಡು ಸದ್ದಿಲ್ಲದೆ ಪ್ರಯಾಣಿಕರನ್ನು ತುಂಬಿಕೊಂಡು ಮೈಸೂರು ಕಡೆಗೆ ಕರೆದೊಯ್ದ ದೃಶ್ಯವೂ ಗೋಚರಿಸಿತು. ನಡು - ನಡುವೆ ಐರಾವತ ಬಸ್‍ಗಳೂ ಸಂಚರಿಸಿದವು.

ನಿಲ್ದಾಣದಲ್ಲಿ ಉರುಳಿದರು...!

ಬೇಡಿಕೆ ಈಡೇರಿಸುವಂತೆ ಪ್ರತಿಭಟನೆಗಿಳಿದಿರುವ ನೌಕರರು ಮಾಧ್ಯಮದವರು ನಿಲ್ದಾಣಕ್ಕೆ ಬಂದ ಸಂದರ್ಭದಲ್ಲಿ ನಿಲ್ದಾಣದಲ್ಲಿಯೇ ಉರುಳು ಸೇವೆ ಮಾಡಿದರು. ಬೇಡಿಕೆ ಈಡೇರಿಸದಿದ್ದರೆ ಎಲ್ಲೆಡೆ ಉರುಳು ಸೇವೆ ಮಾಡುವ ಬಗ್ಗೆ ಮೂಲಕ ಸೂಚನೆ ನೀಡಿದರು.

ಸ್ಥಳದಲ್ಲಿಯೇ ಅಡುಗೆ

ಮಡಿಕೇರಿಯಲ್ಲಿ ಸಾರಿಗೆ ನಿಗಮದ ಘಟಕವಿದ್ದರೂ ಇಲ್ಲಿ ಸ್ಥಳೀಯ ಉದ್ಯೋಗಿಗಳ ಸಂಖ್ಯೆ ಕಡಿಮೆ ಇದೆ. ಅದರಲ್ಲೂ ಬಸ್‍ಗಳು ರಾಜ್ಯಾದ್ಯಂತ ಸಂಚರಿಸುವುದರಿಂದ ಇಂದು ಒಂದು ಊರಿನಲ್ಲಿ ತಂಗಿದರೆ ನಾಳೆ ಮತ್ತೊಂದು ಊರಿನಲ್ಲಿ ತಂಗುವ ಪರಿಸ್ಥಿತಿ ಇದೆ. ಹಾಗಾಗಿ ರಾಜ್ಯದ ಬೇರೆ ಬೇರೆ ಜಿಲ್ಲೆಗಳಿಂದ ಬಸ್‍ಗಳು ಇಲ್ಲಿ ಸ್ಥಗಿತಗೊಂಡಿದ್ದರಿಂದ ಬೇರೆ ಕಡೆಗಳಿಂದ ಬಂದ ನೌಕರರಿಗೆ ಊಟದ ವ್ಯವಸ್ಥೆಗಾಗಿ ನಿಲ್ದಾಣದಲ್ಲಿಯೇ ಶಾಮಿಯಾನ ಹಾಕಿ ಅಡುಗೆ ಮಾಡಿ ಊಟ ಉಣ ಬಡಿಸಲಾಯಿತು. ಎಲ್ಲಾ ಚಾಲಕರು, ನೌಕರರು ತಲಾ ರೂ. 100ರಂತೆ ಹಣ ಸಂಗ್ರಹ ಮಾಡಿ ದಿನಸಿ ಸಂಗ್ರಹಿಸಿ ಅಡುಗೆ ಮಾಡಿ ಸಹಭೋಜನ ಮಾಡಿದರು.