ಕುಶಾಲನಗರ, ಡಿ. 11: ಪಶ್ಚಿಮಘಟ್ಟಗಳ ಸಂರಕ್ಷಣೆಗೆ ಕಸ್ತೂರಿ ರಂಗನ್ ಸಮಿತಿ ನೀಡಿರುವ ವರದಿಯ ಪುನರ್ ಪರಿಶೀಲನೆಯಾಗುವುದ ರೊಂದಿಗೆ ಅನುಷ್ಠಾನಗೊಳಿಸಿ ರಾಜ್ಯದ ಎಲ್ಲೆಡೆಯ ಅರಣ್ಯಗಳ ರಕ್ಷಣೆಗೆ ವಿಶೇಷ ಯೋಜನೆ ರೂಪಿಸಲಾಗುವುದು ಎಂದು ರಾಜ್ಯ ಪಶ್ಚಿಮ ಘಟ್ಟಗಳ ಸಂರಕ್ಷಣಾ ಕಾರ್ಯಪಡೆ ಸಮಿತಿ ಅಧ್ಯಕ್ಷ ಶಾಂತೆಯಂಡ ರವಿ ಕುಶಾಲಪ್ಪ ಹೇಳಿದರು.

ಕುಶಾಲನಗರದ ಗಡಿಭಾಗದಲ್ಲಿ ಬಿಜೆಪಿ ಕಾರ್ಯಕರ್ತರು ಸ್ವಾಗತ ಕೋರುವ ಮೂಲಕ ಬರಮಾಡಿಕೊಂಡ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ರವಿ ಕುಶಾಲಪ್ಪ, ಕಸ್ತೂರಿ ರಂಗನ್ ವರದಿ ಹಿನ್ನೆಲೆಯಲ್ಲಿ ಗ್ರಾಮ ಮಟ್ಟದಲ್ಲಿ ಮತ್ತೆ ಭೌಗೋಳಿಕ ಸಮೀಕ್ಷೆ ನಡೆಸಬೇಕಿದೆ. ಅರಣ್ಯದ ಅಂಚಿನಲ್ಲಿರುವ ನಿವಾಸಿಗಳಿಗೆ ಯಾವುದೇ ರೀತಿಯ ಸಮಸ್ಯೆಯಾಗ ಬಾರದು. ಇದರೊಂದಿಗೆ ಆನೆ ಸೇರಿದಂತೆ ಕಾಡು ಪ್ರಾಣಿಗಳ ಸಂಘರ್ಷಕ್ಕೆ ಶಾಶ್ವತ ಪರಿಹಾರ ಕಂಡುಹಿಡಿಯಬೇಕು. ಕೊಡಗು ಸೇರಿದಂತೆ ಎಲ್ಲೆಡೆ ನೆಲೆ ಕಂಡಿರುವ ಅರಣ್ಯ ವಾಸಿಗಳಿಗೆ ಮೂಲ ಸೌಕರ್ಯವನ್ನು ಒದಗಿಸುವ ಚಿಂತನೆ ನಡೆಯಬೇಕಾಗಿದೆ. ಇಲಾಖೆಗಳು ಏರಿಯಲ್ ಸರ್ವೆ ಮಾಡುವುದನ್ನು ಕೈಬಿಟ್ಟು ಮಾನವ ಸಂಪನ್ಮೂಲ ದೊಂದಿಗೆ

(ಮೊದಲ ಪುಟದಿಂದ) ಸರ್ವೆ ಕಾರ್ಯ ಆಗಬೇಕಾಗಿದೆ. ನದಿ-ಅರಣ್ಯಗಳ ಮೂಲಸ್ವರೂಪಕ್ಕೆ ಧಕ್ಕೆಯಾಗದಂತೆ ಎಚ್ಚರವಹಿಸುವ ಯೋಜನೆ ರೂಪಿಸಲಾಗುವುದು. ಪ್ರವಾಸಿಗರಿಂದ ಪರಿಸರಕ್ಕೆ ಉಂಟಾಗುವ ಹಾನಿ ತಪ್ಪಿಸುವ ನಿಟ್ಟಿನಲ್ಲಿ ಎಲ್ಲಾ ಇಲಾಖೆ ಅಧಿಕಾರಿಗಳೊಂದಿಗೆ ಚರ್ಚಿಸಲಾಗುವುದು. ಈ ಎಲ್ಲಾ ಅಭಿವೃದ್ಧಿಗಳೊಂದಿಗೆ ವನ್ಯಜೀವಿ ಮತ್ತು ಮಾನವನ ಸಂಘರ್ಷಕ್ಕೆ ಪರಿಹಾರ ಕಂಡುಹಿಡಿಯಲು ಸಾಧ್ಯ ಎಂದರು.

ಕಾಡಿನಲ್ಲಿರುವ ಪ್ರಾಣಿಗಳಿಗೆ ಅವಶ್ಯವಿರುವ ಆಹಾರ ದೊರೆಯು ವಂತೆ ಮಾಡಲು ಅರಣ್ಯ ಇಲಾಖೆ ಮೂಲಕ ಕಾರ್ಯಯೋಜನೆ ರೂಪಿಸಲು ಚಿಂತನೆ ಹರಿಸಲಾ ಗುವುದು. ಸಂಘ-ಸಂಸ್ಥೆಗಳ ಸಹಾಯದೊಂದಿಗೆ ಸಲಹೆ ಪಡೆದು ಉತ್ತಮ ಪರಿಸರ ನಿರ್ಮಾಣಕ್ಕಾಗಿ ಕಾರ್ಯಯೋಜನೆ ರೂಪಿಸ ಲಾಗುವುದು ಎಂದರು. ತನ್ನನ್ನು ಸರಕಾರ ಈ ಹುದ್ದೆಗೆ ನಿಯೋಜಿಸಿದ್ದು ಇದು ತನ್ನ ಹಾಗೂ ಬೆಂಬಲಿಗರ ಹಲವು ವರ್ಷಗಳ ದುಡಿಮೆಯ ಫಲವಾಗಿದೆ. ತನ್ನ ಅಧಿಕಾರಾವಧಿಯಲ್ಲಿ ಶ್ರಮವಹಿಸಿ ದುಡಿಯುವುದಾಗಿ ಈ ಸಂದರ್ಭ ತಿಳಿಸಿದರು.

ಕುಶಾಲನಗರ ಕೊಪ್ಪ ಗಡಿಭಾಗದಲ್ಲಿ ಕಾವೇರಿ ಪ್ರತಿಮೆಗೆ ಪೂಜೆ ಸಲ್ಲಿಸಿದ ರವಿ ಕುಶಾಲಪ್ಪ ಅವರನ್ನು ಕೊಡಗು ಜಿಲ್ಲೆಯ ಹಿರಿಯ ಕಿರಿಯ ಬಿಜೆಪಿ ಪ್ರಮುಖರು ಕಾರ್ಯಕರ್ತರು ಆತ್ಮೀಯವಾಗಿ ಬರಮಾಡಿಕೊಂಡರು. ಕೊಂಬು ಕಹಳೆ ವಾದ್ಯದೊಂದಿಗೆ ಬರಮಾಡಿಕೊಂಡ ಕಾರ್ಯಕರ್ತರು ನೂತನ ಅಧ್ಯಕ್ಷರಿಗೆ ಶುಭಾಶಯ ಕೋರಿದರು. ಕುಶಾಲನಗರ ಅರಣ್ಯ ಅಧಿಕಾರಿಗಳು ಹೂಗುಚ್ಚ ನೀಡುವುದರೊಂದಿಗೆ ಅಧ್ಯಕ್ಷರಿಗೆ ಅಭಿನಂದನೆ ಸಲ್ಲಿಸಿದರು. ಕಾವೇರಿ ಸೇತುವೆ ಬಳಿಯಿಂದ ಕುಶಾಲನಗರ ಗಣಪತಿ ದೇವಾಲಯ ತನಕ ಮೆರವಣಿಗೆಯಲ್ಲಿ ಬಂದು ನಂತರ ಗಣಪತಿ ದೇವಾಲಯದಲ್ಲಿ ಪೂಜೆ ಸಲ್ಲಿಸಿದರು.

ಮಡಿಕೇರಿಯಲ್ಲಿ...

ಕರ್ನಾಟಕ ರಾಜ್ಯ ಪಶ್ಚಿಮ ಘಟ್ಟಗಳ ಸಂರಕ್ಷಣಾ ಕಾರ್ಯಪಡೆ ಸಮಿತಿ ಅಧ್ಯಕ್ಷ ಶಾಂತೆಯಂಡ ರವಿ ಕುಶಾಲಪ್ಪ ಅವರು ಶುಕ್ರವಾರ ನಗರದ ಅಂಬೇಡ್ಕರ್ ಭವನದಲ್ಲಿ ಸಂವಿಧಾನ ಶಿಲ್ಪಿ ಅಂಬೇಡ್ಕರ್ ಅವರ ಭಾವಚಿತ್ರಕ್ಕೆ, ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ, ಗುಡ್ಡೆಮನೆ ಅಪ್ಪಯ್ಯ ಗೌಡ, ಜನರಲ್ ಕೆ.ಎಸ್. ತಿಮ್ಮಯ್ಯ, ಮಂಗೇರಿರ ಮುತ್ತಣ್ಣ, ಸ್ಕ್ವಾಡ್ರರ್ನ್ ಲೀಡರ್ ಅಜ್ಜಮಾಡ ಬಿ. ದೇವಯ್ಯ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಿ, ನಮನ ಸಲ್ಲಿಸಿದರು.

ಬಳಿಕ ಕೋಟೆಯ ಗಣಪತಿ ದೇವಸ್ಥಾನಕ್ಕೆ ತೆರಳಿ ವಿಶೇಷ ಪೂಜೆ ಸಲ್ಲಿಸಿ ಈಡುಗಾಯಿ ಹೊಡೆದು ಪ್ರಾರ್ಥಿಸಿದರು. ನಂತರ ಸುದ್ದಿಗಾರರ ಜೊತೆ ಮಾತನಾಡಿ, ರಾಜ್ಯದಲ್ಲಿ ಶೇ.33 ರಷ್ಟು ಮತ್ತು ಜಿಲ್ಲೆಯಲ್ಲಿ ಶೇ.80ಕ್ಕಿಂತ ಹೆಚ್ಚು ಅರಣ್ಯವಿದ್ದು, ಅರಣ್ಯ ಮತ್ತು ಪರಿಸರ ಸಮತೋಲನದಿಂದ ಕೂಡಿದಾಗ ಉತ್ತಮ ಬದುಕು ಸಾಧ್ಯ ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದರು. ಕಾಡು ಉಳಿದರೆ ನಾಡು, ನಾಡು ಉಳಿದಲ್ಲಿ ಅಭಿವೃದ್ಧಿ, ಆ ನಿಟ್ಟಿನಲ್ಲಿ ಒಂದಕ್ಕೊಂದು ಸರಪಳಿಯಿದ್ದಂತೆ, ವನ್ಯ ಪ್ರಾಣಿಗಳು ಜೀವಿಸಬೇಕು. ಮಾನವನು ಬದುಕಬೇಕು ಎಂದರು.

ಪಶ್ಚಿಮಘಟ್ಟ ಸಂರಕ್ಷಣೆ ಎಂಬ ಹೆಸರು ಇದ್ದರೂ ಸಹ ರಾಜ್ಯದ ಎಲ್ಲಾ ಭಾಗದಲ್ಲೂ ಅರಣ್ಯ ಸಂರಕ್ಷಣೆ ಅಗತ್ಯವಿದೆ. ಕಾಡಾನೆ ಹಾಗೂ ಮಾನವ ಸಂಘರ್ಷ ತಡೆಯುವ ನಿಟ್ಟಿನಲ್ಲಿ ಇನ್ನಷ್ಟು ಕಾರ್ಯಕ್ರಮ ರೂಪಿಸಬೇಕಿದೆ. ಕಾಡಾನೆಗಳು ನಾಡಿಗೆ ಬರದಂತೆ ತಡೆಯಲು ಅರಣ್ಯ ಪ್ರದೇಶದಲ್ಲಿ ಹೆಚ್ಚು ಬಿದಿರು ಬೆಳೆಸಬೇಕಿದೆ ಎಂದು ಅವರು ಹೇಳಿದರು. ಅರಣ್ಯದ ಅಂಚಿನಲ್ಲಿ ವಾಸಿಸುವ ಆದಿವಾಸಿಗಳಿಗೆ ಕನಿಷ್ಟ ಮೂಲ ಸೌಲಭ್ಯ ಕಲ್ಪಿಸಬೇಕಿದೆ. ಆ ನಿಟ್ಟಿನಲ್ಲಿ ಕಾರ್ಯಪಡೆ ಕಾರ್ಯನಿರ್ವಹಿಸಲಿದೆ ಎಂದು ರವಿ ಕುಶಾಲಪ್ಪ ಅವರು ಹೇಳಿದರು.

ರಾಜ್ಯ ಪಶ್ಚಿಮ ಘಟ್ಟಗಳ ಸಂರಕ್ಷಣಾ ಕಾರ್ಯಪಡೆ ಸಮಿತಿಯು ಜನರಿಗೆ ಹತ್ತಿರವಾಗುವ ನಿಟ್ಟಿನಲ್ಲಿ ಕಾರ್ಯಕ್ರಮ ರೂಪಿಸಲಿದೆ. ಆ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು. ಎಲ್ಲರ ವಿಶ್ವಾಸ ಗಳಿಸಿ ಕರ್ತವ್ಯ ನಿರ್ವಹಿಸಲಾಗುವುದು ಎಂದರು.

ಸಿ. ಮತ್ತು ಡಿ ಭೂಮಿಗೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ರವಿಕುಶಾಲಪ್ಪ ಅವರು ಫಾರಂ ನಂ.57 ರಡಿ ಅರ್ಜಿ ಸಲ್ಲಿಕೆಗೆ ಶಾಸಕರುಗಳ ಮುಖೇನ 2 ತಿಂಗಳ ಕಾಲಾವಕಾಶಕ್ಕೆ ಮನವಿ ಮಾಡಲಾಗಿದೆ. ಈ ಬಗ್ಗೆ ಸಂಬಂಧಪಟ್ಟವರೊಂದಿಗೆ ಚರ್ಚಿಸಿ ಅಗತ್ಯ ಕ್ರಮಕೈಗೊಳ್ಳಲಾಗುವುದು ಎಂದರು.

ಈ ಸಂದರ್ಭ ಮಡಿಕೇರಿ ಮುಡಾ ಅಧ್ಯಕ್ಷ ರಮೇಶ್ ಹೊಳ್ಳ, ಕುಡಾ ಅಧ್ಯಕ್ಷ ಎಂ.ಎಂ. ಚರಣ್, ಕುಶಾಲನಗರ ಪಟ್ಟಣ ಪಂಚಾಯಿತಿ ಅಧ್ಯಕ್ಷ ಜೈವರ್ಧನ್, ಬಿಜೆಪಿ ಜಿಲ್ಲಾ ಮಾಜಿ ಅಧ್ಯಕ್ಷ ಭಾರತೀಶ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹೆಚ್.ಕೆ. ಮಾದಪ್ಪ, ಜಿಲ್ಲಾ ಉಪಾಧ್ಯಕ್ಷ ಬಿ.ಕೆ. ಅರುಣ್‍ಕುಮಾರ್, ಜಿಲ್ಲಾ ಕಾರ್ಯದರ್ಶಿ ಸತೀಶ್, ರೂಪ ಸತೀಶ್, ಜಿಲ್ಲಾ ವಕ್ತಾರ ಮಹೇಶ್ ಜೈನಿ, ಜಿಲ್ಲಾ ಮಹಿಳಾ ಮೋರ್ಚಾ ಅಧ್ಯಕ್ಷೆ ಶರಿನ್ ಸುಬ್ಬಯ್ಯ, ಜಿಲ್ಲಾ ಮಹಿಳಾ ಮೋರ್ಚಾ ಪ್ರಧಾನ ಕಾರ್ಯದರ್ಶಿ ಅನಿತಾ ಪೂವಯ್ಯ, ಹಿರಿಯ ಸದಸ್ಯ ಜಿ.ಎಲ್. ನಾಗರಾಜ್, ಮಂಡಲ ಪ್ರಧಾನ ಕಾರ್ಯದರ್ಶಿ ಎಂ.ಡಿ. ಕೃಷ್ಣಪ್ಪ, ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷ ದರ್ಶನ್ ಜೋಯಪ್ಪ, ಜಿಲ್ಲಾ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ ನವನೀತ್, ಕುಶಾಲನಗರ ನಗರ ಅಧ್ಯಕ್ಷ ಉಮಾಶಂಕರ್, ಕುಶಾಲನಗರ ಯುವ ಮೋರ್ಚಾ ನಗರ ಅಧ್ಯಕ್ಷ ಸುಮಂತ್, ಕುಶಾಲನಗರ ಪಟ್ಟಣ ಪಂಚಾಯಿತಿ ಸದಸ್ಯ ಅಮೃತ್ ರಾಜ್, ಮಡಿಕೇರಿ ನಗರ ಅಧ್ಯಕ್ಷ ಮನು ಮಂಜುನಾಥ್, ಮಡಿಕೇರಿ ನಗರ ಪ್ರಧಾನ ಕಾರ್ಯದರ್ಶಿ ಅಪ್ಪಣ್ಣ, ಮಡಿಕೇರಿ ಎಪಿಎಂಸಿ ಅಧ್ಯಕ್ಷ ಬೆಪ್ಪುರನ ಮೇದಪ್ಪ, ಮಡಿಕೇರಿ ತಾಲೂಕು ಬಿಜೆಪಿ ಕಾರ್ಯದರ್ಶಿ ಡೀನ್ ಬೋಪಣ್ಣ, ಬಿ.ಕೆ. ಜಗದೀಶ್, ಕಿಮ್ಮುಡಿರ ಜಗದೀಶ್, ತುಳು ಸಾಹಿತ್ಯ ಅಕಾಡೆಮಿ ಸದಸ್ಯ ಪಿ.ಎಂ. ರವಿ, ಅರುಣ್ ಕೂರ್ಗ್, ಕುಂಬಗೌಡನ ಮಧು, ಪೊನ್ನಚ್ಚನ ಮಧು, ಕಡ್ಲೇರ ಕೀರ್ತನ್ ಇನ್ನಿತರರಿದ್ದರು.