ಕುಶಾಲನಗರ, ಡಿ. 11: ಕೋವಿಡ್-19 ನಡುವೆ ಕುಶಾಲನಗರ ಐತಿಹಾಸಿಕ ಗಣಪತಿ ದೇವಾಲಯದ 100ನೇ ವರ್ಷದ ರಥೋತ್ಸವ ತೆರೆಕಂಡಿದೆ. ವರ್ಷಂಪ್ರತಿ ಅದ್ಧೂರಿಯಾಗಿ ನಡೆಯುತ್ತಿದ್ದ ರಥೋತ್ಸವ ಈ ಬಾರಿ ಕೇವಲ ಬೆರಳೆಣಿಕೆಯ ಭಕ್ತಾದಿಗಳ ಉಪಸ್ಥಿತಿಯಲ್ಲಿ ನಡೆಯಿತು.

ಕೋವಿಡ್ ಮಾರ್ಗಸೂಚಿ ಹಿನ್ನೆಲೆ ಜಿಲ್ಲಾಡಳಿತ ಆಚರಣೆಗೆ ಅವಕಾಶ ಕಲ್ಪಿಸದ ಹಿನ್ನೆಲೆ ಈ ಬಾರಿ ನಡೆಯಬೇಕಾಗಿದ್ದ 100ನೇಯ ಗೋಪ್ರದರ್ಶನ, ಜಾತ್ರೆ ರದ್ದುಗೊಂಡು ಉತ್ಸವಾದಿಗಳು ಕೇವಲ ಧಾರ್ಮಿಕ ಆಚರಣೆಗೆ ಸೀಮಿತವಾಗಿ ನಡೆಯಿತು. 9 ದಿನಗಳ ಕಾಲ ದೇವಾಲಯದಲ್ಲಿ ಸೀಮಿತ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ನಡೆದ ರಥೋತ್ಸವ ಸಂದರ್ಭ ಉಳಿದ ಎಲ್ಲಾ ಕಾರ್ಯಕ್ರಮಗಳನ್ನು ಈ ಬಾರಿ ರದ್ದುಗೊಳಿಸಲಾಗಿದೆ. ಜಾತ್ರಾ ಮೈದಾನದಲ್ಲಿ ನಡೆಯಬೇಕಾಗಿದ್ದ ಗೋಪ್ರದರ್ಶನ, ಸಾಂಸ್ಕøತಿಕ ಕಾರ್ಯಕ್ರಮ, ಮನರಂಜನಾ ಅಮ್ಯೂಸ್‍ಮೆಂಟ್ ಪಾರ್ಕ್‍ಗಳು ಈ ಬಾರಿ ಜಾತ್ರೆಯ ಕೊರತೆಯಾಗಿತ್ತು. ಪ್ರತಿ ವರ್ಷ ನಡೆಯುತ್ತಿದ್ದ ಅನ್ನಸಂತರ್ಪಣೆ ಕಾರ್ಯ ಕೂಡ ಈ ಬಾರಿ ನಡೆಯಲಿಲ್ಲ. ಸುಮಾರು 15 ರಿಂದ 20 ಸಾವಿರ ಭಕ್ತಾದಿಗಳು ಸೇರುತ್ತಿದ್ದ ರಥೋತ್ಸವಕ್ಕೆ ಈ ಬಾರಿ ಕೇವಲ 100 ರಷ್ಟು ಸಂಖ್ಯೆಯ ಭಕ್ತಾದಿಗಳು ಮಾತ್ರ ಪಾಲ್ಗೊಳ್ಳುವ ಮೂಲಕ ಕೋವಿಡ್ ಮಾರ್ಗಸೂಚಿಯನ್ನು ಉಲ್ಲಂಘನೆಯಾಗದಂತೆ ಎಚ್ಚರವಹಿಸಲಾಗಿತ್ತು ಎಂದು ಗಣಪತಿ ದೇವಾಲಯ ಆಡಳಿತ ಮಂಡಳಿ ಅಧ್ಯಕ್ಷ ವಿ.ಎನ್. ವಸಂತಕುಮಾರ್ ತಿಳಿಸಿದ್ದಾರೆ. ಮುಂದಿನ ವರ್ಷ ಅದ್ಧೂರಿಯಾಗಿ ಜಾತ್ರೋತ್ಸವ ನಡೆಸುವ ಆಶಾಭಾವನೆ ಹೊಂದಿರುವುದಾಗಿ ಅವರು ಹೇಳಿದ್ದಾರೆ. ಕುಶಾಲನಗರದಲ್ಲಿ ಗಣಪತಿ ದೇವರ ಜಾತ್ರೆ ನಂತರ ಈ ಭಾಗದ ನೂರಾರು ದೇವಾಲಯಗಳಲ್ಲಿ ರಥೋತ್ಸವ ಜಾತ್ರೆಗಳು ನಡೆಯುವುದು ವಾಡಿಕೆಯಾಗಿತ್ತು. ಆ ಹಿನ್ನೆಲೆ ಕುಶಾಲನಗರ ಜಾತ್ರೆಗೆ ಸುತ್ತಮುತ್ತಲಿನ ಹಳ್ಳಿ ಗ್ರಾಮಗಳ ಸಾವಿರಾರು ಸಂಖ್ಯೆಯ ಭಕ್ತಾದಿಗಳು ಆಗಮಿಸುವುದರೊಂದಿಗೆ ಎಲ್ಲೆಡೆಗಳಿಂದ ರಾಸುಗಳನ್ನು ತಂದು ಪ್ರದರ್ಶನಕ್ಕೆ ಇಡುವುದು ನಡೆದುಕೊಂಡು ಬರುತ್ತಿತ್ತು. ಈ ಬಾರಿ ಮನರಂಜನಾ ಪಾರ್ಕ್, ಅಮ್ಯೂಸ್‍ಮೆಂಟ್ ಪಾರ್ಕ್‍ಗಳು ರದ್ದುಗೊಂಡ ಕಾರಣ ಕುಶಾಲನಗರ ಪಟ್ಟಣದಲ್ಲಿ ಮತ್ತು ಜಾತ್ರೆಯಲ್ಲಿ ನಡೆಯುತ್ತಿದ್ದ 1 ಕೋಟಿ ರೂಪಾಯಿಗೂ ಅಧಿಕ ವ್ಯಾಪಾರ ವಹಿವಾಟಿಗೆ ಈ ಬಾರಿ ಕುತ್ತು ಬಂದಿತ್ತು. ಸಣ್ಣಪುಟ್ಟ ಸಂತೆ ವ್ಯಾಪಾರಿಗಳು ಇದರಿಂದ ತಮ್ಮ ವಹಿವಾಟಿಗೆ ಅಡ್ಡಿಯಾಯಿತು ಎಂದು ತಮ್ಮ ಬೇಸರ ವ್ಯಕ್ತಪಡಿಸುತ್ತಿರುವುದು ಕಂಡುಬಂದಿದೆ. ದೇವಾಲಯಕ್ಕೆ ಬರುತ್ತಿದ್ದ ಲಕ್ಷಾಂತರ ಆದಾಯ ಕೂಡ ಈ ಬಾರಿ ಕ್ಷೀಣಿಸಿದೆ. ಆದರೆ ಜಾತ್ರೋತ್ಸವ ಸಂದರ್ಭ 9 ದಿನಗಳ ಕಾಲ ಧಾರ್ಮಿಕ ಕಾರ್ಯಕ್ರಮಗಳಿಗೆ ಯಾವುದೇ ರೀತಿಯ ಅಡ್ಡಿ ಉಂಟಾಗಿಲ್ಲ ಎಂದು ದೇವಾಲಯದ ಪ್ರಧಾನ ಅರ್ಚಕ ಆರ್.ಕೆ. ನಾಗೇಂದ್ರ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಪ್ರಾರಂಭದಲ್ಲಿ ಜಾತ್ರೆಯ ಎಲ್ಲಾ ಚಟುವಟಿಕೆಗಳಿಗೂ ಪೊಲೀಸ್ ಇಲಾಖೆ ಅನುಮತಿ ನೀಡದೆ ಇದ್ದ ಸಂದರ್ಭ ಕ್ಷೇತ್ರದ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಅವರ ಮಧ್ಯಸ್ಥಿಕೆಯಲ್ಲಿ ದೇವಾಲಯ ಆಡಳಿತ ಸಮಿತಿ, ಸಂಘ-ಸಂಸ್ಥೆಗಳು ಹಾಗೂ ಹಿರಿಯ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿ ಕೋವಿಡ್ ಮಾರ್ಗಸೂಚಿ ಉಲ್ಲಂಘನೆಯಾಗದಂತೆ ರಥೋತ್ಸವ ಹಾಗೂ ಕೆಲವು ಕಾರ್ಯಕ್ರಮಗಳನ್ನು ನಡೆಸುವ ಮೂಲಕ 100ನೇಯ ರಥೋತ್ಸವ ಧಾರ್ಮಿಕ ಕಾರ್ಯಕ್ರಮಗಳಿಗೆ ಸೀಮಿತವಾಗಿ ಇದೀಗ ತೆರೆಬಿದ್ದಿದೆ. ಈ ನಡುವೆ 100ನೆಯ ವರ್ಷದ ಜಾತ್ರೋತ್ಸವದ ಅಂಗವಾಗಿ ಸ್ಥಳೀಯ ಕಾವೇರಿ ಪರಿಸರ ರಕ್ಷಣಾ ಬಳಗದ ಸದಸ್ಯರ ಸಂಕಲ್ಪದಂತೆ 100 ಗಿಡಗಳನ್ನು ನೆಟ್ಟು ಬೆಳೆಸುವ ಯೋಜನೆಗೆ ಚಾಲನೆ ನೀಡಲಾಗಿದೆ. ಈ ಸಂಬಂಧ ಕುಶಾಲನಗರ ಸರಕಾರಿ ಬಸ್ ನಿಲ್ದಾಣ ಆವರಣದಲ್ಲಿ ದೇವಾಲಯ ಆಡಳಿತ ಮಂಡಳಿ ಅಧ್ಯಕ್ಷ ವಿ.ಎನ್. ವಸಂತಕುಮಾರ್ ಗಿಡವೊಂದನ್ನು ನೆಡುವ ಮೂಲಕ ಚಾಲನೆ ನೀಡಿದರು.

- ಚಂದ್ರಮೋಹನ್