ಗೋಣಿಕೊಪ್ಪಲು, ಡಿ. 11: ಪ್ರತಿಷ್ಠಿತ ಅಂತರ್ರಾಷ್ಟ್ರೀಯ ಸಂಸ್ಥೆಯಾದ ಓಸಾಟ್ (ಔSಂಂಖಿ) (ವನ್ ಸ್ಕೂಲ್ ಎಟ್ ಎ ಟೈಮ್) ಸಂಸ್ಥೆ ವತಿಯಿಂದ ದಕ್ಷಿಣ ಕೊಡಗಿನ ಮಾಯಮುಡಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳ ಉತ್ತಮ ಕಲಿಕೆಗಾಗಿ ರೂ. 40 ಲಕ್ಷ ವೆಚ್ಚದಲ್ಲಿ ನಿರ್ಮಾಣ ವಾಗಲಿರುವ ಗುಣಮಟ್ಟದ ಕಟ್ಟಡ ನಿರ್ಮಾಣಕ್ಕೆ ಭೂಮಿಪೂಜೆ ನೆರವೇರಿಸಲಾಯಿತು.

ಓಸಾಟ್ ಸಂಸ್ಥೆಯ ಯೋಜನಾ ಮುಖ್ಯಸ್ಥ ಪಿ.ವಿ. ಸುಬ್ರಮಣ್ಯ ಭಟ್ ಹಾಗೂ ನಿರ್ದೇಶಕರಾದ ಎನ್.ವಿ. ಜಿ.ಕೆ. ಭಟ್ ಸಮ್ಮುಖದಲ್ಲಿ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರು, ಕ್ಷೇತ್ರ ಶಿಕ್ಷಣಾಧಿಕಾರಿಗಳು ಶಾಲಾಭಿವೃದ್ಧಿ ಸಮಿತಿಯ ಪದಾಧಿಕಾರಿಗಳು ಶಿಕ್ಷಕ ವೃಂದ ಕಾರ್ಯಕ್ರಮದಲ್ಲಿ ಭಾಗಿಗಳಾಗಿದ್ದರು. ಶಾಲೆಯ ಆವರಣದ ವಿಸ್ತೀರ್ಣ ವಾದ ಜಾಗದಲ್ಲಿ ನೂತನ ಕೊಠಡಿಯ ನಿರ್ಮಾಣದ ಕಾಮಗಾರಿ ಆರಂಭ ವಾಗಲಿದ್ದು, ನುರಿತ ಗುತ್ತಿಗೆದಾರರಿಂದ ಕಾಮಗಾರಿ ನಿರ್ವಹಿಸಲಾಗುವುದು. ಇದರ ಪ್ರಯೋಜನವನ್ನು ಈ ಭಾಗದ ವಿದ್ಯಾರ್ಥಿಗಳು ಪಡೆದುಕೊಳ್ಳುವ ಮೂಲಕ ಶಿಕ್ಷಣವನ್ನು ಮುಂದುವರೆಸ ಬೇಕು. ಕಳೆದೆರೆಡು ವರ್ಷಗಳಿಂದ ಕೊಡಗು ಜಿಲ್ಲೆ ಪ್ರಾಕೃತಿಕ ವಿಕೋಪಕ್ಕೆ ತುತ್ತಾದ ಸಂದರ್ಭದಲ್ಲಿ ಹಲವಾರು ಸರ್ಕಾರಿ ಶಾಲೆಗಳಿಗೂ ಹಾನಿ ಉಂಟಾಗಿದ್ದು ಇದರಲ್ಲಿ ಮಾಯಮುಡಿ ಶಾಲೆಯ ಕೊಠಡಿಗಳು ಅಪಾಯದ ಹಂತದಲ್ಲಿರುವುದನ್ನು ಮನಗಂಡು ಸಂಸ್ಥೆ ವತಿಯಿಂದ ದಾನಿಗಳು ನೀಡಿದ ಹಣವನ್ನು ಕ್ರೋಢೀಕರಿಸಿ 51ನೇ ಕಾರ್ಯಕ್ರಮವಾಗಿ 4 ಕೊಠಡಿಗಳ ಶಾಲಾ ಕಟ್ಟಡವನ್ನು ನಿರ್ಮಾಣ ಮಾಡಲಾಗುತ್ತಿದೆ ಎಂದು ಸಂಸ್ಥೆಯ ಮುಖ್ಯಸ್ಥರಾದ ಪಿ.ವಿ. ಸುಬ್ರಮಣ್ಯ ಭಟ್ ಹಾಗೂ ಎನ್.ವಿ. ಜಿ.ಕೆ. ಭಟ್ ತಿಳಿಸಿದರು.

ಶಾಲಾ ಆಡಳಿತ ಮಂಡಳಿಯ ಹಾಗೂ ಶಿಕ್ಷಕ ವೃಂದದೊಂದಿಗೆ ಸಭೆ ನಡೆಸಿದ

(ಮೊದಲ ಪುಟದಿಂದ) ಸಂಸ್ಥೆಯ ಪ್ರಮುಖರು ಯೋಜನೆಯ ಪ್ರತಿ ಪೈಸೆಯ ಹಣವು ಅತ್ಯಮೂಲ್ಯ ವಾಗಿದ್ದು ದಾನಿಗಳು ಸಂಸ್ಥೆಯ ಮೇಲೆ ನಂಬಿಕೆ ಇಟ್ಟು ಹಣ ನೀಡಿದ್ದಾರೆ. ಈ ಯೋಜನೆಯನ್ನು ಸಮರ್ಪಕವಾಗಿ ಬಳಸಿಕೊಳ್ಳಬೇಕು. ನಿಗದಿತ ಅವಧಿಯೊಳಗೆ ಕಾಮಗಾರಿಗಳು ಮುಗಿಯಲಿದೆ. ಈ ನಿಟ್ಟಿನಲ್ಲಿ ಶಿಕ್ಷಕ ವೃಂದ ಹೆಚ್ಚಿನ ನಿಗಾವಹಿಸಬೇಕು. ಸಮಯಕ್ಕೆ ಸರಿಯಾಗಿ ಮಾಹಿತಿಗಳನ್ನು ಆಗಿಂದ್ದಾಗಿಯೆ ಕಳುಹಿಸಿಕೊಡುವಂತೆ ತಿಳಿಸಿದರು.

ಪ್ರಮುಖರಾದ ಟಿಪ್ಪು ಬಿದ್ದಪ್ಪ ಮಾತನಾಡಿ, ಗ್ರಾಮೀಣ ಶಾಲೆಯ ಮೇಲೆ ನಂಬಿಕೆ ಇಟ್ಟು ದೊಡ್ಡ ಮೊತ್ತದ ಹಣವನ್ನು ನೀಡಿರುವುದು ಮೆಚ್ಚುಗೆ ವಿಷಯ, ಸಂಸ್ಥೆಯು ನಮ್ಮ ಮೇಲಿಟ್ಟಿರುವ ಗೌರವವನ್ನು ಕಾಪಾಡುವುದಾಗಿ ಭರವಸೆ ನೀಡಿದರು.

ಭೂಮಿ ಪೂಜೆ ವೇಳೆ ಶಿಕ್ಷಣ ಇಲಾಖೆಯ ಉಪನಿರ್ದೇಶಕರಾದ ಪೆರಿಗ್ರೆನ್ ಮಚ್ಚಾಡೊ, ವೀರಾಜಪೇಟೆ ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಶ್ರೀಶೈಲ ಬಿಳಗಿ, ಶಾಲೆಯ ಮುಖ್ಯೋಪಾಧ್ಯಾಯರಾದ ಎಂ.ಎ. ಸೋಫಿಯ, ಬಿ.ಆರ್.ಸಿ. ವನಜಾಕ್ಷಿ, ಸಿ.ಆರ್.ಪಿ. ಕೆ.ಬಿ. ಪುಷ್ಪ, ಶಾಲಾ ಆಡಳಿತ ಮಂಡಳಿಯ ರಹೀಂ, ಪ್ರಮುಖರಾದ ಸಣ್ಣುವಂಡ ವಿಶ್ವನಾಥ್, ಕಾಳಪಂಡ ಟಿಪ್ಪು ಬಿದ್ದಪ್ಪ, ಪುಚ್ಚಿಮಾಡ ರಾಯ್ ಮಾದಪ್ಪ, ಗುತ್ತಿಗೆದಾರರಾದ ಸಂದೀಪ್, ವಲಯನ್, ಶಿಕ್ಷಕರಾದ ಸತ್ಯ, ರಾಗಿಣಿ, ನಸೀಮ, ಲೀಲಾ, ಸಹನಾ ಮುಂತಾದವರು ಉಪಸ್ಥಿತರಿದ್ದರು.-ಹೆಚ್.ಕೆ. ಜಗದೀಶ್