ಮಡಿಕೇರಿ, ಡಿ. 11: ಕುಶಾಲನಗರ ಪೊಲೀಸ್ ಠಾಣಾ ವ್ಯಾಪ್ತಿಯ ಕುಶಾಲನಗರ-ಮಡಿಕೇರಿ ಮುಖ್ಯ ರಸ್ತೆಯ ಮಾದಾಪಟ್ಟಣದಲ್ಲಿ ಕೋಳಿ ವ್ಯಾಪಾರಿಯ ಪಿಕ್‍ಅಪ್ ವಾಹನವನ್ನು ಕಳವು ಮಾಡಿದ್ದ ಆರೋಪಿಗಳನ್ನು ಬಂಧಿಸುವಲ್ಲಿ ಕುಶಾಲನಗರ ಪೊಲೀಸರು ಯಶಸ್ವಿಯಾಗಿದ್ದಾರೆ.

ಈಗೆ 3 ತಿಂಗಳ ಹಿಂದೆ ಕೋಳಿ ವ್ಯಾಪಾರ ಮುಗಿಸಿ ಅಂಗಡಿ ಪಕ್ಕದಲ್ಲಿ ನಿಲ್ಲಿಸಿದ್ದ ಪಿಕ್ ಅಪ್ ವಾಹನವನ್ನು ಆರೋಪಿಗಳು ಕಳವು ಮಾಡಿದ್ದು, ಈ ಬಗ್ಗೆ ಕುಶಾಲನಗರ ಟೌನ್ ಪೊಲೀಸ್ ಠಾಣೆ ಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣದ ಬೆನ್ನು ಹತ್ತಿದ ಕುಶಾಲನಗರ ಪೊಲೀಸರು ಸಿಸಿಟಿವಿ ದೃಶ್ಯಾವಳಿಯನ್ನು ಆಧರಿಸಿ ಆರೋಪಿಗಳ ಪತ್ತೆ ಬಗ್ಗೆ ಸುಳ್ಯ, ಪುತ್ತೂರು, ಕಾಂಞಂಗಾಡ್, ಕಾಸರಗೋಡ್, ಇರಿಟ್ಟಿ (ಕೇರಳ) ಕಡೆಗಳಲ್ಲಿ ಆರೋಪಿಗಳಿಗಾಗಿ ಶೋಧಿಸುತ್ತಿದ್ದರು.

ಸುಳ್ಯದ ಬಳಿ ಕಳವು ಮಾಡಿದ ಪಿಕ್ ಅಪ್ ವಾಹನದ ನಂಬರ್ ಬದಲಾಯಿಸಿ ಮಾರಾಟ ಮಾಡಲು ಯತ್ನಿಸುತ್ತಿದ್ದ ಆರೋಪಿಯನ್ನು ಗುಮಾನಿ ಮೇಲೆ ಹಿಡಿದು ವಿಚಾರಿಸ ಲಾಗಿ ಕುಶಾಲನಗರದಲ್ಲಿ ಕಳವಾಗಿದ್ದ ಸದರಿ ಪಿಕ್ ಅಪ್ ವಾಹನ ಪತ್ತೆಯಾಗಿದೆ. ಈ ಸಂಬಂಧ ಕೇರಳದ ಕಣ್ಣೂರಿನ ರೌಫ್ ಕೆ., ಕರಿಕೆಯ ಅಬ್ದುಲ್ ಫಾರೂಕ್, ಸುಳ್ಯದ ಡೇವಿಡ್ ಪ್ರಶಾಂತ್ ಅವರುಗಳನ್ನು ಬಂಧಿಸಿದ್ದಾರೆ.

ಆರೋಪಿಗಳಿಂದ ಕೆಎ-45- 8304 ನಂಬರಿನ ಪಿಕ್ ಅಪ್ ವಾಹನ ವಶಪಡಿಸಿಕೊಳ್ಳಲಾಗಿದೆ.

ಪೊಲೀಸ್ ವರಿಷ್ಠಾಧಿಕಾರಿ ಕ್ಷಮಾ ಮಿಶ್ರಾ ಮಾರ್ಗದರ್ಶನದಲ್ಲಿ ಡಿವೈಎಸ್‍ಪಿ ಹೆಚ್.ಎಂ. ಶೈಲೇಂದ್ರ ಅವರ ಮಾರ್ಗದರ್ಶನದಲ್ಲಿ ಸಿಪಿಐ ಎಂ. ಮಹೇಶ್, ನೇತೃತ್ವದಲ್ಲಿ ಠಾಣಾಧಿಕಾರಿ ಗಣೇಶ್, ಗೋಪಾಲ್, ಎಎಸ್‍ಐ, ಸಿಬ್ಬಂದಿಯವರಾದ ಚಂದ್ರಶೇಖರ್, ಪ್ರಕಾಶ್, ಸಜಿ, ದಯಾನಂದ, ಸಂದೇಶ್, ಕೊಡಗು ಜಿಲ್ಲಾ ಪೊಲೀಸ್ ಅಪರಾಧ ಪತ್ತೆ ದಳದ ವೆಂಕಟೇಶ್, ಯೊಗೇಶ್ ಕುಮಾರ್, ನಿರಂಜನ್, ಕೊಡಗು ಜಿಲ್ಲಾ ತಾಂತ್ರಿಕ ವಿಭಾಗದ ಸಿಬ್ಬಂದಿಗಳಾದ ರಾಜೇಶ್, ಗಿರೀಶ್ ಅವರುಗಳು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.