ಗೋಣಿಕೊಪ್ಪಲು, ಡಿ. 11: ಭಾರತೀಯ ಜನತಾ ಪಾರ್ಟಿ ಸುಳ್ಳಿನ ಸರಮಾಲೆಯನ್ನು ಜನತೆಯ ಮುಂದಿಡುವ ಮೂಲಕ ಮತದಾರ ರನ್ನು ತನ್ನತ್ತ ಸೆಳೆಯುವ ಪ್ರಯತ್ನ ಮಾಡುತ್ತಿದೆ. ಆದರೆ ಪ್ರಬುದ್ದ ಪ್ರಜ್ಞಾವಂತ ಮತದಾರರು ಕಾಂಗ್ರೆಸ್ ಪಕ್ಷ ಮಾಡಿರುವ ಅಭಿವೃದ್ಧಿ ಕೆಲಸಗಳನ್ನು ಮನದಲ್ಲಿಟ್ಟುಕೊಂಡು ಮುಂಬರುವ ಹಲವು ಚುನಾವಣೆ ಗಳಲ್ಲಿ ಕಾಂಗ್ರೆಸ್ ಪಕ್ಷದ ಕೈ ಹಿಡಿಯಲಿ ದ್ದಾರೆಂದು ಕಾಂಗ್ರೆಸ್ ಹಿರಿಯ ಮುಖಂಡ ಅಜಿತ್ ಅಯ್ಯಪ್ಪ ಆಶಾಭಾವನೆ ವ್ಯಕ್ತಪಡಿಸಿದರು.

ಗೋಣಿಕೊಪ್ಪಲುವಿನ ಸ್ವಾತಂತ್ರ್ಯ ಹೋರಾಟಗಾರರ ಭವನದಲ್ಲಿ ಆಯೋಜನೆಗೊಂಡಿದ್ದ ಪೊನ್ನಂಪೇಟೆ ಬ್ಲಾಕ್ ಕಾಂಗ್ರೆಸ್‍ನ ಅಸಂಘಟಿತ ಕಾಂಗ್ರೆಸ್ ಸಮಿತಿ ಸಭೆಯಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿದ ಇವರು ಕಾಂಗ್ರೆಸ್ ಪಕ್ಷವು ಜಾತ್ಯಾತೀತ ನೆಲಗಟ್ಟಿನಲ್ಲಿ ಎಲ್ಲಾ ಸಮುದಾಯ ಗಳನ್ನು ಒಟ್ಟಾಗಿ ಕರೆದುಕೊಂಡು ಹೋಗುವ ಏಕೈಕ ಪಕ್ಷವಾಗಿ ಕೆಲಸ ನಿರ್ವಹಿಸಿದೆ ಎಂದರು.

ಪೊನ್ನಂಪೇಟೆ ಬ್ಲಾಕ್ ಕಾಂಗ್ರೆಸ್‍ನ ಅಧ್ಯಕ್ಷ ಮೀದೇರಿರ ನವೀನ್ ಮಾತನಾಡಿ ಬ್ಲಾಕ್ ವ್ಯಾಪ್ತಿಯಲ್ಲಿ ಹಲವು ಘಟಕಗಳು ಸಕ್ರಿಯವಾಗಿ ಕೆಲಸ ನಿರ್ವಹಿಸುವ ಮೂಲಕ ಪಕ್ಷ ಸಂಘಟನೆ ನಡೆಸುತ್ತಿದೆ. ಉತ್ತಮ ರೀತಿಯಲ್ಲಿ ಪಕ್ಷ ಕಟ್ಟುವವರಿಗೆ ಪಕ್ಷವು ಉತ್ತಮ ಸ್ಥಾನಗಳನ್ನು ನೀಡಲಿದೆ ಎಂದರು. ಚುನಾವಣೆಯನ್ನು ಹಗುರವಾಗಿ ಪರಿಗಣಿಸದೆ ಶಕ್ತಿ ಮೀರಿ ಕೆಲಸ ನಿರ್ವಹಿಸಿ ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸಲು ಪ್ರಾಮಾಣಿಕ ಪ್ರಯತ್ನ ಮಾಡಬೇಕು.

ಹಿಂದುಳಿದ ವರ್ಗಗಳ ಬ್ಲಾಕ್ ಅಧ್ಯಕ್ಷರಾದ ಶಾಜಿ ಅಚ್ಚುತ್ತನ್ ಮಾತನಾಡಿ ಅಸಂಘಟಿತ ವಲಯದಲ್ಲಿ ದುಡಿಯುವವರನ್ನು ಸಮಾಜದ ಮುಖ್ಯ ವಾಹಿನಿಗೆ ತರಲು ಕಾಂಗ್ರೆಸ್ ಪಕ್ಷ ಕಟಿಬದ್ದವಾಗಿ ಕೆಲಸ ನಿರ್ವಹಿಸುತ್ತಿದೆ. ಸಂಘಟಿತಗೊಳ್ಳದವರ ಕಷ್ಟದಲ್ಲಿ ಭಾಗಿಯಾಗುವ ಮೂಲಕ ಕೆಲಸ ನಿರ್ವಹಿಸಬೇಕು ಎಂದರು.

ಪೊನ್ನಂಪೇಟೆ ಬ್ಲಾಕ್ ಕಾಂಗ್ರೆಸ್‍ನ ಅಸಂಘಟಿತ ಕಾಂಗ್ರೆಸ್ ಸಮಿತಿಯ ಅಧ್ಯಕ್ಷೆ ಎಂ. ಮಂಜುಳ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಪೊನ್ನಂಪೇಟೆ ಬ್ಲಾಕ್ ಕಾಂಗ್ರೆಸ್‍ನ ಮಹಿಳಾ ಘಟಕದ ಅಧ್ಯಕ್ಷೆ ಕೋಳೇರ ಭಾರತಿ, ತಿತಿಮತಿ ಕ್ಷೇತ್ರದ ಜಿಲ್ಲಾ ಪಂಚಾಯಿತಿ ಸದಸ್ಯ ಪಿ.ಆರ್. ಪಂಕಜ, ಗೋಣಿಕೊಪ್ಪ ನಗರ ಕಾಂಗ್ರೆಸ್ ಅಧ್ಯಕ್ಷ ಕುಲ್ಲಚಂಡ ಪ್ರಮೋದ್ ಗಣಪತಿ, ರವೀಂದ್ರ ಕಾಮತ್, ಮುಂತಾದವರು ಮಾತನಾಡಿದರು. ಸಭೆಯಲ್ಲಿ ಪೊನ್ನಂಪೇಟೆ ಜಿಲ್ಲಾ ಪಂಚಾಯಿತಿ ಸದಸ್ಯರಾದ ಶ್ರೀಜಾಸಾಜಿ ಅಚ್ಚುತ್ತನ್, ಸೇವಾದಳದ ಅಧ್ಯಕ್ಷೆ ತೆರೆಸ ವಿಕ್ಟರ್, ತಾಲೂಕು ಪಂಚಾಯಿತಿ ಸದಸ್ಯರಾದ ಮೂಕಳೇರ ಆಶಾ ಪೂಣಚ್ಚ, ಆಶಾ ಜೇಮ್ಸ್, ಬ್ಲಾಕ್ ಕಾಂಗ್ರೆಸ್‍ನ ಪ್ರಧಾನ ಕಾರ್ಯದರ್ಶಿ ಎ.ಜೆ. ಬಾಬು, ಮತ್ರಂಡ ದಿಲ್ಲು, ತಿತಿಮತಿ ವಲಯ ಅಧ್ಯಕ್ಷರಾದ ವಿನಯ್, ರಜಿನಿ, ನಾಮೇರ ಅಂಕಿತ್, ಕರ್ತಂಡ ಸೋಮಣ್ಣ, ಪೊನ್ನಂಪೇಟೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಮೂಕಳೇರ ಸುಮಿತಾ ಗಣೇಶ್, ತಿತಿಮತಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಶಿವುಕುಮಾರ್, ಕೆ. ಬಾಡಗ ವಲಯ ಅಧ್ಯಕ್ಷ ಮಲ್ಚಿರ ಅಪ್ಪಣ್ಣ, ಸೇರಿದಂತೆ ಇನ್ನಿತರ ಪ್ರಮುಖರು ಹಾಜರಿದ್ದರು. ಅಬ್ದುಲ್ ಸಮ್ಮದ್ ಸ್ವಾಗತಿಸಿ, ವಂದಿಸಿದರು. ದೇವರಪುರದ ಚೆಕ್ಕೆರ ಪ್ರವೀಣ್ ಅವರನ್ನು ಇದೆ ಸಂದರ್ಭ ಪಕ್ಷಕ್ಕೆ ಬರಮಾಡಿಕೊಳ್ಳಲಾಯಿತು.