ಮಡಿಕೇರಿ, ಡಿ. 11: ಕೇಂದ್ರ ಸರಕಾರವು ಆಯುರ್ವೇದ ವೈದ್ಯರಿಗೆ ಶಸ್ತ್ರ ಚಿಕಿತ್ಸೆ ನೀಡಲು ಅವಕಾಶ ನೀಡಿರುವ ಕ್ರಮ ವಿರೋಧಿಸಿ ಇಂದು ಭಾರತೀಯ ವೈದ್ಯಕೀಯ ಸಂಘ (ಐ.ಎಂ.ಎ.) ನೀಡಿದ್ದ ಖಾಸಗಿ ಆಸ್ಪತ್ರೆಗಳ ಒ.ಪಿ.ಡಿ. ಪ್ರತಿಭಟನೆ ಕರೆಗೆ ಬೆಂಬಲವಾಗಿ ಕೊಡಗಿನಲ್ಲಿ ಖಾಸಗಿ ಆಸ್ಪತ್ರೆಗಳ ವೈದ್ಯರು ಕಪ್ಪುಪಟ್ಟಿಯೊಂದಿಗೆ ತಮ್ಮ ವಿರೋಧ ವ್ಯಕ್ತಪಡಿಸಿದರು.ಆಸ್ಪತ್ರೆಗಳಲ್ಲಿ ಒ.ಪಿ.ಡಿ. ಬಂದ್ ಮಾಡದಿದ್ದರೂ ಸರಕಾರದ ಈ ನಿಲುವನ್ನು ವಿರೋಧಿಸಿ ಕಪ್ಪುಪಟ್ಟಿ ಯೊಂದಿಗೆ ಕೆಲಸ ನಿರ್ವಹಿಸಿ ತುರ್ತು ಸೇವೆಗಳಿಗೆ ಅವಕಾಶ ನೀಡಿರುವದಾಗಿ ಐ.ಎಂ.ಎ.ಯ ಜಿಲ್ಲಾ ಅಧ್ಯಕ್ಷ ಡಾ. ಶ್ಯಾಮ್ ಅಪ್ಪಣ್ಣ ತಿಳಿಸಿದ್ದಾರೆ.ಸರಕಾರದ ಕ್ರಮವನ್ನು ಕೈಬಿಡುವಂತೆ ಒತ್ತಾಯಿಸಿ ಈ ಕುರಿತ ಮನವಿಯನ್ನು ಸಂಘದ ವತಿಯಿಂದ ಜಿಲ್ಲಾಧಿಕಾರಿಗಳಿಗೆ ಸಲ್ಲಿಸಲಾಯಿತು. ಈ ಸಂದರ್ಭ ಡಾ. ಶ್ಯಾಮ್ ಅಪ್ಪಣ್ಣ, ಮಾಜಿ ಅಧ್ಯಕ್ಷ ಡಾ. ಮೋಹನ್ ಅಪ್ಪಾಜಿ, ಕಾರ್ಯದರ್ಶಿ ಡಾ. ಪ್ರಶಾಂತ್, ಖಜಾಂಚಿ ಡಾ. ಸುಧಾಕರ್, ಉಪಾಧ್ಯಕ್ಷರಾದ ಡಾ. ಅಜಿತ್‍ಕುಮಾರ್, ಡಾ. ಲಕ್ಷ್ಮಿನಾರಾಯಣ್, ಮಕ್ಕಳ ತಜ್ಞ ಡಾ. ದೇವಯ್ಯ ಅವರುಗಳು ಪಾಲ್ಗೊಂಡಿದ್ದರು.