ಮಡಿಕೇರಿ, ಡಿ. 11: ಭಾರತ ಸರಕಾರದ ಯುವಜನ ವ್ಯವಹಾರ ಹಾಗೂ ಕ್ರೀಡಾ ಸಚಿವಾಲಯ ಮಡಿಕೇರಿ, ನೆಹರೂ ಯುವ ಕೇಂದ್ರ ಕೊಡಗು ಹಾಗೂ ಶ್ರೀ ವಿಘ್ನೇಶ್ವರ ಮಹಿಳಾ ಮಂಡಳಿಯ ಆಶ್ರಯದಲ್ಲಿ ಕಲ್ಲುಬಾಣೆಯಲ್ಲಿ ಅಂತರರಾಷ್ಟ್ರೀಯ ಸ್ವಯಂಸೇವಕರ ದಿನಾಚರಣೆ ಹಾಗೂ ಕೋವಿಡ್-19 ಜಾಗೃತಿ ಅರಿವು ಕಾರ್ಯಕ್ರಮ ನಡೆಸಲಾಯಿತು.

ಸ್ಥಳೀಯ ಪ್ರಾಥಮಿಕ ಶಾಲಾ ನಿವೃತ್ತ ಮುಖ್ಯ ಶಿಕ್ಷಕಿ ಜಯಲಕ್ಷ್ಮಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಕೊರೊನಾ ವೈರಸ್ ಕಾಯಿಲೆಯನ್ನು ಮಟ್ಟಹಾಕುವಲ್ಲಿ ಸಮಾಜ ಬಾಂಧವರು ಆದಷ್ಟು ಎಚ್ಚರಿಕೆಯ ಮುಂಜಾಗ್ರತಾ ಕ್ರಮ ಪಾಲಿಸಬೇಕು ಎಂದರು. ಸ್ವಯಂಸೇವಕರಿಗೆ ಸಹಕಾರ ನೀಡುವಂತಾಗಬೇಕೆಂದು ಮನವಿ ಮಾಡಿಕೊಂಡರು.

ಸಭಾಧ್ಯಕ್ಷತೆಯನ್ನು ಬಡಕಡ ಅರುಣ್ ವಹಿಸಿದ್ದರು. ವೇದಿಕೆಯಲ್ಲಿ ಮುಖ್ಯ ಅತಿಥಿಗಳಾಗಿ ಬೇಟೋಳಿ ಅಂಗನವಾಡಿ ಶಿಕ್ಷಕಿ ಸವಿತಾ, ರಾಷ್ಟ್ರೀಯ ಸೇವಾ ಕಾರ್ಯಕರ್ತೆಯರಾದ ಮೇರಿ, ಧನಲಕ್ಷ್ಮಿ ಉಪಸ್ಥಿತರಿದ್ದರು. ದಿನದ ಮಹತ್ವ ಹಾಗೂ ಪ್ರಾಸ್ತಾವಿಕವಾಗಿ ಮಹಿಳಾ ಮಂಡಳಿ ಅಧ್ಯಕ್ಷೆ ಬಡಕಡ ರೇಷ್ಮಾ ಅರುಣ್ ಮಾತನಾಡಿದರು. ಸಮಾರಂಭದಲ್ಲಿ ಸದಸ್ಯರು, ಸಾರ್ವಜನಿಕರಿಗೆ ವಿವಿಧ ಕ್ರೀಡಾ ಸ್ಪರ್ಧೆ ಹಾಗೂ ಸಾಂಸ್ಕøತಿಕ ಕಾರ್ಯಕ್ರಮಗಳನ್ನು ನಡೆಸಿ, ವಿಜೇತರಿಗೆ ಬಹುಮಾನವನ್ನು ವಿತರಿಸಲಾಯಿತು.

ಅನನ್ಯ ಪ್ರಾರ್ಥಿಸಿ, ಕಾರ್ಯದರ್ಶಿ ದಿವ್ಯ ಸ್ವಾಗತಿಸಿದರು. ನೆಹರೂ ಯುವ ಕೇಂದ್ರದ ರಾಷ್ಟ್ರೀಯ ಸೇವಾ ಕಾರ್ಯಕರ್ತೆ ಧನಲಕ್ಷ್ಮಿ ನಿರೂಪಿಸಿ, ಮಹಿಳಾ ಮಂಡಳಿ ಸದಸ್ಯೆ ಮೀನಾಕ್ಷಿ ವಂದಿಸಿದರು. - ಸಾಬ