ಶ್ರೀಮಂಗಲ, ಡಿ. 10: ಯುಕೊ ಸಂಘಟನೆಯ ಆಶ್ರಯದಲ್ಲಿ ತಾ. 25 ರಂದು ಕೊಡವಾಮೆಯ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ‘ಯುಕೊ ಕೊಡವ ತಕ್ಕೋರ್ಮೆ 2020’ ಎಂಬ ಕೊಡವ ಸಾಂಪ್ರದಾಯಿಕ ಹಾಗೂ ಪಾರಂಪರಿಕ ತಕ್ಕ ಮುಖ್ಯಸ್ಥರ ಸಮಾವೇಶ ನಡೆಯಲಿದೆ. ಹಾಗೆಯೇ ವರ್ಷಂಪ್ರತಿ ಯುಕೊ ಸÀಂಘಟನೆಯ ಆಶ್ರಯದಲ್ಲಿ ನಡೆಯುವ ಜಾಗತಿಕ ಕೊಡವ ಸಾಂಸ್ಕøತಿಕ ಸಮ್ಮಿಲನ “ಏಳನೇ ಯುಕೊ ಕೊಡವ ಮಂದ್ ನಮ್ಮೆ 2020”ನ್ನು ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ 2021ನೇ ಜನವರಿ 10 ರಂದು ಬೈರನಾಡ್ ಮಂದ್‍ನ ಆಶೀರ್ವಾದದೊಂದಿಗೆ ಅಮ್ಮತ್ತಿ ಒಂಟಿಯಂಗಡಿಯ ಸರಕಾರಿ ಪ್ರಾಥಮಿಕ ಶಾಲಾ ಮೈದಾನದಲ್ಲಿ ನಡೆಸಲು ತೀರ್ಮಾನಿಸಲಾಗಿದೆ ಎಂದು ಯುಕೊ ಸಂಘಟನೆಯ ಅಧ್ಯಕ್ಷ ಕೊಕ್ಕಲೆಮಾಡ ಮಂಜು ಚಿಣ್ಣಪ್ಪ ತಿಳಿಸಿದ್ದಾರೆ.

ಪೊನ್ನಂಪೇಟೆಯಲ್ಲಿ ನಡೆದ ಸಂಘಟನೆಯ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ನಮ್ಮ ಪೂರ್ವಜರು ಅನಾದಿಕಾಲದಿಂದಲೂ ಅತ್ಯಂತÀ ಶ್ರದ್ಧೆ ಹಾಗೂ ಭಕ್ತಿಯಿಂದ ಗೌರವಪೂರ್ವಕವಾಗಿ ನಡೆಸಿಕೊಂಡು ಬರುತ್ತಿರುವ “ತಕ್ಕಾಮೆ” ಎಂಬ ವಿಶಿಷ್ಠ ಆಡಳಿತಾತ್ಮಕ ವ್ಯವಸ್ಥೆಯು ಇಂದಿನ ಪರಿಸ್ಥಿತಿಯ ಹೊಡೆತಕ್ಕೆ ಸಿಲುಕಿ ಬಹುತೇಕ ತನ್ನ ಮಹತ್ವವನ್ನು ಕಳೆದುಕೊಂಡು ಸೊರಗಿ ನಿಂತಿದೆ. ಆದರೆ, ಈ ತಕ್ಕಾಮೆ ಎಂಬ ವ್ಯವಸ್ಥೆಯಲ್ಲಿ ಕೊಡವರ ಮಂದ್ ಎಂಬ ವಿವಿದೋದ್ದೇಶ ಧಾರ್ಮಿಕ ಕೇಂದ್ರದ ತಳಹದಿಯಲ್ಲಿ ‘ಹಿಡ್ಕಟ್ಟ್’ ಎಂಬ ಅಲಿಖಿತ ಸಂವಿಧಾನವನ್ನು ರೂಪಿಸಿ ಸಂಪ್ರದಾಯ ಬದ್ದ ಆಚರಣೆಗಳ ಮೂಲಕ ಕೊಡವರ ಸಾಮಾಜಿಕ, ಧಾರ್ಮಿಕ, ಸಾಂಸ್ಕøತಿಕ ಹಾಗೂ ರಾಜಕೀಯವಾದ ಅಸ್ಥಿತ್ವವನ್ನು ಪೀಳಿಗೆಯಿಂದ ಪೀಳಿಗೆಗೆ ಮುನ್ನಡೆಸಿಕೊಂಡು ಬಂದಿರುವುದಾಗಿದೆ. ಆದ್ದರಿಂದ ಸ್ಥಿತ್ಯಂತರದ ಹೊಡೆತಕ್ಕೆ ಸಿಲುಕಿ ನಲುಗುತ್ತಿರುವ ತಕ್ಕಾಮೆಯನ್ನು ಬಲಪಡಿಸುವುದರ ಮೂಲಕ ಕೊಡವಾಮೆಯನ್ನು ‘ಹಿಡ್ಕಟ್ಟ್’ ಎಂಬ ಸಂವಿದಾನದಡಿಯಲ್ಲಿ ಪಾವಿತ್ರ್ಯತೆಯನ್ನು ಕಾಪಾಡಿಕೊಳ್ಳುವುದರ ಮೂಲಕ ಮತ್ತೊಮ್ಮೆ ಘತವೈಭವದೊಂದಿಗೆ ಕೊಡವಾಮೆಯನ್ನು ಪುನರ್ ಪ್ರತಿಷ್ಠಾಪಿಸುವ ಸಂಕಲ್ಪ ತೊಟ್ಟು ಈ ಸಮಾವೇಶವನ್ನು ಆಯೋಜಿಸಲಾಗಿದೆ ಎಂದು ಅವರು ತಿಳಿಸಿದರು.

ಈ ಸಮಾವೇಶದ ಮೂಲಕ ತಕ್ಕಾಮೆಯ ವ್ಯವಸ್ಥೆಯಲ್ಲಿ ಬರುವ ಕೊಡಗಿನ ಎಲ್ಲಾ ಸಾಂಪ್ರದಾಯಿಕ ಮಂದ್‍ಗೆ ಒಳಪಟ್ಟಿರುವಂತಹ ಪಾರಂಪರಿಕ ಊರ್‍ತಕ್ಕರು, ನಾಡ್‍ತಕ್ಕರು ಹಾಗೂ ಸೀಮೆತಕ್ಕರನ್ನು ಒಂದೇ ವೇದಿಕೆಯಡಿ ಸಮಾಗಮಗೊಳಿಸಿ ತಕ್ಕಾಮೆಯ ಮಹತ್ವ, ಇಂದಿನ ಸ್ಥಿತಿಗತಿಗಳು ಹಾಗೂ ಮುಂದಿನ ಕಾರ್ಯಯೋಜನೆಗಳ ಕುರಿತಂತೆ ಚರ್ಚಿಸಿ ಮುಂದಕ್ಕೆ ತಕ್ಕಾಮೆಯನ್ನು ಸಮರ್ಥವಾಗಿ ಹಾಗೂ ಸಂಪ್ರದಾಯ ಬದ್ಧವಾಗಿ ನಿಭಾಯಿಸಿಕೊಂಡು ಹೋಗುವುದರ ಕುರಿತಂತೆ ವಿಚಾರ ಮಂಡಿಸಲಾಗುವುದು. ಈ ಕುರಿತಂತೆ ಹಿರಿಯರ ಸಲಹೆ, ಸೂಚನೆ ಹಾಗೂ ಮಾರ್ಗದರ್ಶನದೊಂದಿಗೆ ಮುಂದಿನ ಯೋಜನೆಯನ್ನು ರೂಪಿಸಲಾಗುವುದು ಎಂದು ಅವರು ಮಾಹಿತಿ ನೀಡಿದರು.

ದಕ್ಷಿಣ ಕೊಡಗಿನ ಪೊನ್ನಂಪೇಟೆ ಸಮೀಪ ಬೇಗೂರು ಗ್ರಾಮದಲ್ಲಿರುವ ಕೇವ್‍ರಿಡ್ಜ್ ರೆಸಾರ್ಟ್‍ನಲ್ಲಿ ಈ ಸಮಾವೇಶವನ್ನು ಆಯೋಜಿಸಲಾಗಿದ್ದು, ಬೆಳಿಗ್ಗೆ 10.30 ಗಂಟೆಗೆ ಸರಿಯಾಗಿ ಸಮಾವೇಶವನ್ನು ದೇಶತಕ್ಕರಲ್ಲಿ ಒಬ್ಬರು ಹಾಗೂ ಅಖಿಲ ಕೊಡವ ಸಮಾಜದ ಅಧ್ಯಕ್ಷರೂ ಆಗಿರುವ ಮಾತಂಡ ಮೊಣ್ಣಪ್ಪನವರು ಉದ್ಘಾಟಿಸಲಿದ್ದು, ಉಳಿದಂತೆ 7 ಸೀಮೆತಕ್ಕರು, ಸಾಂಪ್ರದಾಯಿಕ 35 ನಾಡುಗಳಿಗೆ ಸಂಬಂಧಿಸಿದ ನಾಡುತಕ್ಕರು ಹಾಗೂ ಊರು ತಕ್ಕರುಗಳು ಸೇರಿದಂತೆ 120ಕ್ಕೂ ಹೆಚ್ಚು ತಕ್ಕಮುಖ್ಯಸ್ಥರುಗಳು ಈ ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಅವರು ತಿಳಿಸಿದರು. ಸಭೆಯಲ್ಲಿ ಕಳ್ಳಿಚಂಡ ರಾಬಿನ್ ಸುಬ್ಬಯ್ಯ, ಚೆಪ್ಪುಡಿರ ಸುಜು ಕರುಂಬಯ್ಯ, ನೆಲ್ಲಮಕ್ಕಡ ಮಾದಯ್ಯ, ಕಾಟಿಮಾಡ ಗಿರಿ ಅಯ್ಯಪ್ಪ, ಮದ್ರೀರ ಮಹೇಶ್ ಮುತ್ತಪ್ಪ ಹಾಜರಿದ್ದರು.