ಮಡಿಕೇರಿ, ಡಿ. 9: ಜಿಲ್ಲಾ ಕೇಂದ್ರವಾಗಿರುವ ಮಡಿಕೇರಿ ನಗರದ ಹೃದಯ ಭಾಗದಲ್ಲೇ ಇರುವ ಆಕರ್ಷಕ ತಾಣವಾದ ರಾಜಾಸೀಟು ಉದ್ಯಾನವನದ ಪರಿಸರವನ್ನು ಮತ್ತಷ್ಟು ಚಂದಗಾಣಿಸುವ ಪರಿಕಲ್ಪನೆಯಂತೆ ಹಮ್ಮಿಕೊಂಡಿರುವ ವಿನೂತನ ಕೆಲಸ ಕಾರ್ಯಗಳು ಪ್ರಗತಿಯಲ್ಲಿವೆ. ರಾಜಾಸೀಟು ಉದ್ಯಾನವನ ಹಾಗೂ ಇದಕ್ಕೆ ಹೊಂದಿಕೊಂಡಿರುವ ಜಾಗದಲ್ಲಿ ಕೆಲವು ಅಭಿವೃದ್ಧಿ ಯೋಜನೆಗಳನ್ನು ಕೈಗೆತ್ತಿಕೊಳ್ಳಲಾಗಿದೆ. ಈ ಜಾಗದಲ್ಲಿ ಸಮಗ್ರ ಉದ್ಯಾನವನಗಳ ಅಭಿವೃದ್ಧಿಗಾಗಿ ಪ್ರವಾಸೋದ್ಯಮ ಇಲಾಖೆ ವತಿಯಿಂದ ರೂ. 455 ಲಕ್ಷಗಳಿಗೆ ಕ್ರಿಯಾಯೋಜನೆಗೆ ಅನುಮೋದನೆಯಾಗಿದೆ.ಇದರಲ್ಲಿ 369 ಲಕ್ಷಗಳನ್ನು ಲೋಕೋಪಯೋಗಿ ಇಲಾಖೆಗೆ ಬಿಡುಗಡೆ ಮಾಡಿ ಕಾಮಗಾರಿಗಳನ್ನು ಕೈಗೊಳ್ಳಲು ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ. ಅದರಂತೆ ಇತ್ತೀಚೆಗೆ ಕಾಮಗಾರಿಗೆ ಚಾಲನೆ ನೀಡಲಾಗಿತ್ತು. ಆದರೆ ಆ ಸಂದರ್ಭ ಬೃಹತ್ ಜೆಸಿಬಿ ಯಂತ್ರಗಳನ್ನು ಬಳಸಿ ಕೆಲಸಕ್ಕೆ ಮುಂದಾಗಿದ್ದರಿಂದ ಈ ಬಗ್ಗೆ ಎಂಎಲ್‍ಸಿ ವೀಣಾ ಅಚ್ಚಯ್ಯ ಹಾಗೂ ಇತರರು ಯಾಂತ್ರೀಕೃತ ಕೆಲಸದಿಂದ ಅಪಾಯ ಸಂಭವಿಸುವ ಸಾಧ್ಯತೆ ಇದೆ ಎಂದು ಆಕ್ಷೇಪ ವ್ಯಕ್ತಪಡಿಸಿದ್ದರು. ಬಳಿಕ ಯಂತ್ರೋಪಕರಣ ಬಳಸಿ ಕಾಮಗಾರಿ ನಡೆಸುವದನ್ನು ಸಂಬಂಧಿಸಿದ ಇಲಾಖೆ ಕೈ ಬಿಟ್ಟಿದ್ದು, ಇದೀಗ ಜನರನ್ನು ಬಳಸಿಕೊಂಡೇ ಕಾಮಗಾರಿ ನಡೆಸಲಾಗುತ್ತಿದೆ. ಉದ್ಯಾನವನದ ಸುತ್ತಮುತ್ತಲು ಪಾಳು ಬಿದ್ದಂತಿದ್ದ ಜಾಗವನ್ನು ಸಮರ್ಪಕಗೊಳಿಸುವದು, ಪಾತ್‍ವೇ ನಿರ್ಮಾಣ, ಈ ಹಿಂದೆ ಅತಿವೃಷ್ಟಿಯಿಂದ ಭೂಕುಸಿತವಾಗಿದ್ದ ಸ್ಥಳವನ್ನು ಸರಿಪಡಿಸುವದು ಮತ್ತಿತರ ಕೆಲಸಗಳನ್ನು ನಿರ್ವಹಿಸಲಾಗುತ್ತಿವೆ.ಉದ್ದೇಶಿತ ಕೆಲಸಗಳೇನು?

ಉದ್ಯಾನವನದ ಕಾಮಗಾರಿಯಲ್ಲಿ ಪೊದೆ ಸಸ್ಯಗಳಾದ (Shಡಿub) ಡ್ರೀಸಿನಾ, ಹೇಮೀಲಿಯಾ, ಕೇಶಿಯಾ, ಟಿಕೋಮಾ, ಸ್ಟೇಫೀಲಿರ ಇತ್ಯಾದಿ 21300 ಸಸ್ಯಗಳನ್ನು ನಾಟಿ ಮಾಡಲು ಉದ್ದೇಶಿಸಲಾಗಿದೆ. ಇಳಿಜಾರು ಪ್ರದೇಶದಲ್ಲಿ ಮಣ್ಣಿನ ಸವಕಳಿಯನ್ನು ತಡೆಗಟ್ಟಲು ನೆಲದಲ್ಲಿ ಹಬ್ಬುವ ಹಾಗೂ ಬಳ್ಳಿಗಳ ಜಾತಿಯ ಗಿಡಗಳಾದ ಲಂಟನಾ, ವರ್ಬಿನಾ, ಗಜೇನಿಯಾ, ಬೋಗನ್‍ವಿಲ್ಲಾ, ಸೈಡರ್‍ಲಿಲ್ಲಿ ಇತ್ಯಾದಿ 25000 ಸಂಖ್ಯೆಯ ಗಿಡಗಳನ್ನು ನಾಟಿ ಮಾಡುವದು, ಹೂವಿನ ಮರಗಳಾದ ಅಶೋಕ, ಸಂಪಿಗೆ, ಪ್ಲೋಮೀರಿಯಾ, ತಬೋಬಿಯಾ, ಸ್ಪೇತೋಡಿಯಾ, ಲಗೋಸ್ಟ್ರೀಮಿಯಾ ಇತ್ಯಾದಿ 1265 ಮರಗಳನ್ನು ನಾಟಿ ಮಾಡಲು ಉದ್ದೇಶಿಸಲಾಗಿದೆ.

ಉದ್ಯಾನವನದಲ್ಲಿ 17222 ಚ.ಅಡಿ ವಿಸ್ತೀರ್ಣದಲ್ಲಿ ಸ್ಥಳೀಯ ಹವಾಗುಣಕ್ಕೆ ಹೊಂದಿಕೊಳ್ಳುವ ಬರ್ಮುಡಾ, ಕೆಂಟುಕಿ ಬ್ಲೂ, ಸೈಟೋಪೋರಮ್ ಇತ್ಯಾದಿ ಹುಲ್ಲು ಹಾಸು (ಲಾನ್) ಮಾಡಲು ಉದ್ದೇಶಿಸಲಾಗಿದೆ. ಸುತ್ತಲೂ ಅಂದಾಜು 1.350 ಕಿ.ಮೀ.ಗಳ ಉದ್ದದ ಪಾಥ್ ವೇ, ನಡೆದಾಡುವ ರಸ್ತೆಯನ್ನು ಸಾದರಳ್ಳಿ, ಶಿರಾ, ಕೋಬಲ್ ಕಲ್ಲುಗಳಿಂದ ನಿರ್ಮಿಸಲಾಗುವುದು. ಪಾಥ್ ವೇ ಯ ಎರಡು ಬದಿಗಳಲ್ಲಿ ಮಣ್ಣು ಸವಕಳಿಯಾಗದಂತೆ ತಡೆಗೋಡೆ ಹಾಗೂ ರೈಲಿಂಗ್ಸ್ (ರಕ್ಷಣಾತ್ಮಕ ಕಂಬಿಗಳು) ಮಾಡಲಾಗುವುದು.

(ಮೊದಲ ಪುಟದಿಂದ) ಇಳಿಜಾರಿನಲ್ಲಿ ಮೆಟ್ಟಿಲುಗಳು ಹಾಗೂ ತಡೆಗೋಡೆಗಳನ್ನು ಎರಡು ಕಡೆ ನಿರ್ಮಿಸಲಾಗುವುದು. ಈಗಾಗಲೇ ಲಭ್ಯವಿರುವ ಉದ್ಯಾನವನ ಎತ್ತರದ ಗುಡ್ಡದಲ್ಲಿ ಮೂಲ ಸ್ವರೂಪಗಳಿಗೆ ಧಕ್ಕೆಯಾಗದಂತೆ ಎರಡು ವೀಕ್ಷಣಾ ಗೋಪುರಗಳನ್ನು ಹಾಗೂ ಮಳೆ, ಬಿಸಿಲಿನಲ್ಲಿ ವಿಶ್ರಾಂತಿಗಾಗಿ ಮೂರು ಅಲಂಕಾರಿಕ ಮಂಟಪ. ಉದ್ಯಾನವನದ ವಿವಿಧ ಭಾಗಗಳಲ್ಲಿ ಅಲಂಕಾರಿಕ ಹೂವಿನ ಬಳ್ಳಿಗಳನ್ನು ಹಬ್ಬಿಸಲು ಕಲ್ಲಿನ ಎಂಟು ಪೆರ್ಗೊಲಾ (Peಡಿgoಟಚಿ)ಗಳನ್ನು ನಿರ್ಮಿಸಲಾಗುವುದು.

ನೈಸರ್ಗಿಕವಾಗಿರುವ ಪ್ರದೇಶದಲ್ಲಿ ಮಕ್ಕಳ ಸಣ್ಣ ಆಟದ ಉದ್ಯಾನವನ್ನು ನಿರ್ಮಿಸುವುದು. ಸಾರ್ವಜನಿಕರ ವಿಶ್ರಾಂತಿಗಾಗಿ 25 ಆಸನಗಳ ವ್ಯವಸ್ಥೆ ಹಾಗೂ ಮರದ ಸುತ್ತಲೂ ಕೂರಲು ಆಸನದ ವ್ಯವಸ್ಥೆ ನಿರ್ಮಿಸಲಾಗುವುದು. ಉದ್ಯಾನವನದಲ್ಲಿ ಮಕ್ಕಳ ಮನೋರಂಜನೆಗಾಗಿ ವಿವಿಧ ಪ್ರಾಣಿಗಳ ಕಲಾಕೃತಿಗಳನ್ನು ಹಾಗೂ ಶಿಲ್ಪಕಲಾಕೃತಿಗಳನ್ನು ಅಳವಡಿಸಲಾಗುವುದು. ಉದ್ಯಾನವನದಲ್ಲಿ ವಿವಿಧ ಅಲಂಕಾರಿಕ ಹೂವಿನ ಕುಂಡಗಳು, ಕಸದ ಬುಟ್ಟಿ, ಸೂಚನಾ ಫಲಕಗಳು, ಪ್ರವಾಸಿ ಮಾಹಿತಿ ಫಲಕ ಇತ್ಯಾದಿಗಳನ್ನು ಅಳವಡಿಸ ಲಾಗುವುದು. ಉದ್ಯಾನವನದಲ್ಲಿ ಅಲಂಕಾರಿಕ ವಿದ್ಯುತ್ ದೀಪ ಅಳವಡಿಕೆ, ನೀರಾವರಿ ಅಳವಡಿಕೆ ಹಾಗೂ ಸಿಸಿ ಕ್ಯಾಮರವನ್ನು ಅಳವಡಿಸುವಂತೆ ತೀರ್ಮಾನಿಸಲಾಗಿದ್ದು, ಹಂತ ಹಂತವಾಗಿ ಕೆಲಸವನ್ನು ನಿರ್ವಹಿಸಲಾಗುತ್ತಿದೆ.

ಜಿಲ್ಲಾಧಿಕಾರಿಗಳೊಂದಿಗೆ ಚರ್ಚಿಸಿದಂತೆ ಉದ್ದೇಶಿತ ಉದ್ಯಾನವನದಲ್ಲಿ ಪರಿಸರ ಸಂರಕ್ಷಣೆಯ ಉದ್ದೇಶದಿಂದ ಉದ್ದೇಶಿಸಲಾದ ಎರಡು ಕೃತರ ಕೆರೆಗಳು ಹಾಗೂ ಮೆಟ್ಟಿಲು ಸೇತುವೆಗಳನ್ನು ಕೈಬಿಡಲಾಗಿದೆ. ಉದ್ಯಾನವನದಲ್ಲಿ ಜೆಸಿಬಿ, ಇಟಾಚಿ ಯಂತ್ರಗಳಿಂದ ಕಾಮಗಾರಿ ಮಾಡುವುದನ್ನು ಕೈಬಿಡಲಾಗಿದೆ. ಸದರಿ ಪ್ರದೇಶದಲ್ಲಿ ಮೂಲ ಸ್ವರೂಪವನ್ನು ಬದಲಾವಣೆ ಮಾಡದೆ ಯಾವುದೇ ಮರ ಗಿಡ ಕಟಾವು ಮಾಡದೆ ಲಭ್ಯವಿರುವ ಸ್ಥಳದಲ್ಲಿ ಸುಂದರವಾಗಿ ಕಾಮಗಾರಿ ಕೈಗೊಳ್ಳಲಾಗುವುದು ಎಂದು ಉಸ್ತುವಾರಿ ವಹಿಸಿರುವವರು ಮಾಹಿತಿ ನೀಡಿದ್ದಾರೆ.