ಗೋಣಿಕೊಪ್ಪಲು, ಡಿ. 9: ಕೂಟಿಯಾಲ ಸೇತುವೆ ಮೂಲಕ ಬಾಡಗರಕೇರಿ, ವೀರಾಜಪೇಟೆಗೆ ಸಂಪರ್ಕ ಕಲ್ಪಿಸುವ ರಸ್ತೆ ನಿರ್ಮಾಣದ ಬಗ್ಗೆ ಆಡಳಿತಾತ್ಮಕ ಪ್ರಕ್ರಿಯೆ ಆರಂಭಿಸುವ ನಿಟ್ಟಿನಲ್ಲಿ ಚರ್ಚಿಸಿ ಕ್ರಮವಹಿಸಲಾಗುವುದು ಎಂದು ಕೊಡಗು-ಮೈಸೂರು ವೃತ್ತದ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಹೀರಲಾಲ್ ಭರವಸೆ ನೀಡಿದರು. ಕೊಡಗು ಜಿಲ್ಲಾ ರೈತ ಸಂಘ ಹಾಗೂ ಹಸಿರು ಸೇನೆಯ ಕೊಡಗು ಜಿಲ್ಲಾಧ್ಯಕ್ಷ ಕಾಡ್ಯಮಾಡ ಮನು ಸೋಮಯ್ಯ ಹಾಗೂ ಜಿಲ್ಲಾ ಪದಾಧಿಕಾರಿಗಳು ಇತ್ತೀಚೆಗೆ ಅರಣ್ಯ ಮಂತ್ರಿಗಳಾದ ಆನಂದ್ ಸಿಂಗ್‍ರವರು ಕೊಡಗು ಜಿಲ್ಲೆಯ ಪೊನ್ನಂಪೇಟೆಗೆ ಆಗಮಿಸಿದ ಸಂದರ್ಭ ಕೂಟಿಯಾಲ ಸೇತುವೆಯ ಮೂಲಕ ರಸ್ತೆ ಸಂಪರ್ಕಕ್ಕೆ ವಿಶೇಷ ಕ್ರಮ ವಹಿಸುವಂತೆ ಮನವಿ ಸಲ್ಲಿಸಿ ಒತ್ತಾಯಿಸಿದ್ದರು. ಈ ಹಿನ್ನೆಲೆ ವಿವಾದಿತ ಸ್ಥಳಕ್ಕೆ ಭೇಟಿ ನೀಡಿದ ಅರಣ್ಯಾಧಿಕಾರಿಗಳು ವಾಸ್ತವ ಚಿತ್ರಣವನ್ನು ಪಡೆದುಕೊಂಡರು. ಈ ಸಂದರ್ಭ ವಿವಾದಿತ ಸ್ಥಳದಲ್ಲಿ ರೈತ ಸಂಘ ಪದಾಧಿಕಾರಿಗಳು, ಗ್ರಾಮದ ಮುಖಂಡರು ಸಮಸ್ಯೆ ಬಗ್ಗೆ ಸಮಗ್ರವಾಗಿ ವಿವರಣೆ ನೀಡಿದರು.

2000ನೇ ಇಸವಿಯಲ್ಲಿ ಸೇತುವೆ ಕಾಮಗಾರಿ ಪೂರ್ಣಗೊಂಡಿದೆ. ಸೇತುವೆಯಿಂದ ಮುಂದೆ ಬಾಡಗರಕೇರಿ ಹಾಗೂ ಹಿಂಭಾಗ ಕುಟ್ಟಂದಿ, ಕೊಂಗಣ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯ ಅವಶ್ಯಕತೆ ಇದೆ. ಆದರೆ, ಅರಣ್ಯ ಇಲಾಖೆ ರಸ್ತೆ ನಿರ್ಮಾಣಕ್ಕೆ ಅನುಮತಿ ನೀಡದೆ ವಿವಾದ ಮಾಡಿದೆ. ಇದು ಸಂರಕ್ಷಿತ ಅರಣ್ಯ, ಆನೆ

(ಮೊದಲ ಪುಟದಿಂದ) ಕಾರಿಡರ್ ಎಂದು ಹೇಳುತ್ತಿದೆ. ಕಡತಗಳ ಪ್ರಕಾರ ಕಂದಾಯ ಇಲಾಖೆಗೆ ಸೇರಿದ ಜಾಗವಾಗಿದೆ. ಸೇತುವೆಯ 2 ಕಡೆಗಳಲ್ಲಿ ರಸ್ತೆ ನಿರ್ಮಾಣವಾದರೆ ಜನರಿಗೆ ಅನುಕೂಲವಾಗುತ್ತದೆ. ಜಿಲ್ಲಾ ಕೇಂದ್ರ ಮಡಿಕೇರಿಗೆ ತೆರಳಬೇಕಾದರೆ ಸುತ್ತಿ ಬಳಸಿ ತೆರಳುವ ಸ್ಥಿತಿ ಸೃಷ್ಠಿ ಯಾಗಿದೆ. ಈ ರಸ್ತೆ ನಿರ್ಮಾಣವಾದರೆ 20 ಕಿ.ಮೀ ಕಡಿಮೆಯಾಗುತ್ತದೆ. ವಿದ್ಯಾರ್ಥಿಗಳಿಗೆ ಶಾಲಾ, ಕಾಲೇಜಿಗೆ ತೆರಳಲು, ಅನಾರೋಗ್ಯದಿಂದ ಬಳಲುತ್ತಿರುವವರು ಆಸ್ಪತ್ರೆಗೆ ತೆರಳಲು ಸುಲಭವಾಗುತ್ತದೆ. ಜೊತೆಗೆ ಕೃಷಿಕರು ತಮ್ಮ ಬೆಳೆಗಳನ್ನು ಸಾಗಿಸಲು ಸುಲಭವಾಗುತ್ತದೆ ಎಂದು ರೈತ ಸಂಘದ ಪ್ರಮುಖರು ವಿವರಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಹೀರಲಾಲ್, ಈ ಸಂಬಂಧ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಚರ್ಚಿಸುತ್ತೇನೆ. ಗ್ರಾಮ ಸಭೆಯಲ್ಲಿ ರಸ್ತೆ ನಿರ್ಮಾಣದ ಬಗ್ಗೆ ನಡಾವಳಿ ಮಾಡಿ ಇಲಾಖೆಗೆ ಕಳುಹಿಸಿ ಎಂದರು. ಈ ಸಂದರ್ಭ ರೈತರು ತಮ್ಮ ಬಳಕೆಗೆ ಕಾನೂನಿನ ಪ್ರಕಾರ ಮರ ಕಡಿದರೆ ಅರಣ್ಯ ಇಲಾಖೆ ಅಡ್ಡಿ ಮಾಡಿ ಮುಟ್ಟುಗೋಲು ಹಾಕಿ ಸಮಸ್ಯೆ ಮಾಡುತ್ತಿದೆ ಎಂದು ಮನು ಸೋಮಯ್ಯ ಹಿರಿಯ ಅಧಿಕಾರಿಗಳ ಗಮನ ಸೆಳೆದರು. ಈ ಬಗ್ಗೆ ಸಭೆ ನಡೆಸಿ ನಿರ್ಣಯ ಕೈಗೊಳ್ಳಲಾಗುತ್ತದೆ ಎಂದು ಹೀರಲಾಲ್ ಭರವಸೆ ನೀಡಿದರು.

ಈ ಸಂದರ್ಭ ರೈತ ಸಂಘ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಚೆಟ್ರುಮಾಡ ಸುಜಯ್, ಜಿಲ್ಲಾ ಸಂಚಾಲಕ ಪುಚ್ಚಿಮಾಡ ಸುಭಾಷ್, ಅಮ್ಮತ್ತಿ ಹೋಬಳಿ ಅಧ್ಯಕ್ಷ ಪ್ರವೀಣ್, ಹುದಿಕೇರಿ ಹೋಬಳಿ ಅಧ್ಯಕ್ಷ ಚಂಗುಲಂಡ ಸೂರಜ್, ರೈತ ಮುಖಂಡ ಅಪ್ಪಚ್ಚು, ಮಡಿಕೇರಿ ವೃತ್ತ ಅರಣ್ಯ ಸಂರಕ್ಷಣಾಧಿಕಾರಿ ಪ್ರಭಾಕರನ್, ಮಾಕುಟ್ಟ ವಲಯ ಅರಣ್ಯಾಧಿಕಾರಿ ದೇಚಮ್ಮ, ಶ್ರೀಮಂಗಲ ವೃತ್ತ ಅರಣ್ಯಾಧಿಕಾರಿ ವಿರೇಂದ್ರ ಸೇರಿದಂತೆ ಸ್ಥಳೀಯ ನಿವಾಸಿಗಳು ಹಾಜರಿದ್ದರು.

- ಹೆಚ್.ಕೆ. ಜಗದೀಶ್