ಚೆಟ್ಟಳ್ಳಿ, ಡಿ. 9: ವರ್ಷಗಳಿಂದ ಕೆಲಸ ನಿರ್ವಹಿಸಿದರೂ ಕೆಲಸಕ್ಕೆ ತಕ್ಕ ಹಣ ಸಿಗದೆ ಕೆಲಸದ ಹೆಸರಿನಲಿ ಹೆಚ್ಚುವರಿ ಹಣ ಡ್ರಾ ಮಾಡಿ ದುರುಪಯೋಗ ಪಡಿಸಿಕೊಂಡಿದ್ದು ಸೂಕ್ತ ತನಿಖೆ ನಡೆಸಿ ಕ್ರಮ ಕೈಗೊಳ್ಳಬೇಕೆಂದು ಚೆಟ್ಟಳ್ಳಿ ಗ್ರಾಮ ಪಂಚಾಯಿತಿಯ ನೀರುಗಂಟಿಗಳು ಜಿಲ್ಲಾಧಿಕಾರಿಗಳಿಗೆ ದೂರು ನೀಡಿರುವದಾಗಿ ನೀರುಗಂಟಿಗಳಾದ ರಂಗಯ್ಯ ಹಾಗೂ ವಿಶ್ವನಾಥ್ ತಿಳಿಸಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ; ವರ್ಷಗಳಿಂದ ಕೆಲಸ ನಿರ್ವಹಿಸಿದ ಕೆಲಸಗಳಿಗೆ ಕೆಲಸಕ್ಕೆ ತಕ್ಕ ಹಣ ನೀಡದೆ ನಮ್ಮ ಹೆಸರಿನಲ್ಲಿ ಹೆಚ್ಚುವರಿ ಹಣವನ್ನು ಪಂಚಾಯಿತಿಯಲ್ಲಿ ಡ್ರಾ ಮಾಡಿರುವುದು ಕಂಡುಬಂದಿದೆ. ನಾವು ದುಡಿದ ಕೆಲಸಕ್ಕೆ ಮತ್ಯಾರೋ ಹಣ ಹೆಚ್ಚುವರಿಯಾಗಿ ಪಡೆದುಕೊಳ್ಳುವುದು ಸರಿಯಲ್ಲ.

ನೀರಿನ ಪೈಪ್‍ಲೈನ್ ದುರಸ್ತಿ ಹೆಸರಿನಲ್ಲಿಯೂ ದೊಡ್ಡ ಮೊತ್ತದ ಭ್ರಷ್ಟಾಚಾರ ಎಸಗಲಾಗಿರುವದು ಕಂಡುಬಂದಿರುವ ಹಿನ್ನೆಲೆಯಲ್ಲಿ ದೂರು ನೀಡಲಾಗಿದೆ ಎಂದು ಆರೋಪಿಸಿದ ಅವರು, ಪೈಪ್‍ಲೈನ್ ದುರಸ್ತಿ ಮತ್ತು ಟ್ಯಾಂಕ್ ಸ್ವಚ್ಛತೆ ವಿಚಾರವಾಗಿ ತಾನು ಗ್ರಾ.ಪಂ.ಗೆ ಯಾವುದೇ ಅರ್ಜಿ ನೀಡಿರುವುದಿಲ್ಲ. ಆದರೆ ನನ್ನ ಹೆಸರಿನಲ್ಲಿ ಯಾರೋ ನಕಲಿ ಸಹಿ ಮಾಡಿ ಅರ್ಜಿ ನೀಡಿ ಹಣ ಪಡೆದಿರುವುದು ಗಮನಕ್ಕೆ ಬಂದಿದೆ. ಕೂಡಲೇ ಈ ಬಗ್ಗೆ ತನಿಖೆ ನಡೆಸುವಂತೆ ಕೋರಿ ಡಿಸಿಗೆ ದೂರು ನೀಡಿರುವುದಾಗಿ ನೀರುಗಂಟಿ ವಿಶ್ವನಾಥ್ ತಿಳಿಸಿದ್ದಾರೆ.

ಮತ್ತೊಬ್ಬ ನೀರುಗಂಟಿ ರಂಗಯ್ಯ ಮಾತನಾಡಿ, ಎರಡು ನೀರಿನ ಟ್ಯಾಂಕ್ ಶುಚಿಗೊಳಿಸಿದ್ದಲ್ಲಿ 500 ರೂ. ನೀಡುತ್ತಿದ್ದರು. ಆದರೆ ನನ್ನ ವ್ಯಾಪ್ತಿಯ ನೀರಿನ ಟ್ಯಾಂಕ್ ಶುಚಿಗೊಳಿಸಲು 1500 ರೂ.ಗಳಿಂದ 2800 ರೂ.ಗಳವರೆಗೆ ಹಣ ಪಾವತಿ ಮಾಡಲಾಗಿದೆ. ಯಾರ ಹೆಸರಿನಲ್ಲಿ ಬಿಲ್ ಆಗಿದೆ ಮತ್ತು ಯಾರು ಹಣ ಪಡೆದುಕೊಂಡಿದ್ದಾರೆ ಎಂಬ ಬಗ್ಗೆ ಸೂಕ್ತ ತನಿಖೆ ಆಗಬೇಕು. ಇದುವರೆಗೂ ಯಾವುದೇ ಚೆಕ್ ಮೂಲಕ ತಾನು ಹಣ ಪಡೆದುಕೊಂಡಿಲ್ಲ. ಗ್ರಾ.ಪಂ. ಚೆಕ್ ಮೂಲಕ ಹಣ ಪಡೆದುಕೊಂಡವರ ಬಗ್ಗೆ ಸೂಕ್ತ ತನಿಖೆ ಆಗಬೇಕೆಂದು ದೂರು ನೀಡಲಾಗಿದೆ ಎಂದರು.