ಮಡಿಕೇರಿ, ಡಿ. 9: ಗ್ರಾಮ ಪಂಚಾಯತ್ ಚುನಾವಣೆ 2020ರ ಮತದಾನವನ್ನು ಸುಸೂತ್ರವಾಗಿ ನಡೆಸಲು ಹಾಗೂ ಶಾಂತಿಯುತ ಕಾನೂನು ಸುವ್ಯವಸ್ಥೆಯನ್ನು ಕಾಪಾಡುವ ದೃಷ್ಟಿಯಿಂದ ಕರ್ನಾಟಕ ಅಬಕಾರಿ (ಸನ್ನದುಗಳ ಸಾಮಾನ್ಯ ಷರತ್ತುಗಳು) ನಿಯಮಗಳು 1967ರ ನಿಯಮ 10 ಬಿ ಮತ್ತು ಅಬಕಾರಿ ಕಾಯ್ದೆ 1965ರ ಕಲಂ 21 ರ ಅಡಿಯಲ್ಲಿ ಪ್ರತ್ಯಾಯೋಜಿತವಾಗಿರುವ ಅಧಿಕಾರದಂತೆ ಮಡಿಕೇರಿ ಮತ್ತು ಸೋಮವಾರಪೇಟೆ ತಾಲೂಕಿನಲ್ಲಿ ನೀತಿ ಸಂಹಿತೆ ಜಾರಿಯಲ್ಲಿರುವ ಗ್ರಾಮ ಪಂಚಾಯತ್‍ಗಳ ವ್ಯಾಪ್ತಿಯಲ್ಲಿ ತಾ. 20 ರ ಸಂಜೆ 5 ಗಂಟೆಯಿಂದ ತಾ.22 ರ ಸಂಜೆ 5 ಗಂಟೆಯವರೆಗೆ ಹಾಗೂ ವೀರಾಜಪೇಟೆ ತಾಲೂಕಿನಲ್ಲಿ ನೀತಿಸಂಹಿತೆ ಜಾರಿಯಲ್ಲಿರುವ ಗ್ರಾಮ ಪಂಚಾಯತ್‍ಗಳ ವಾಪ್ತಿಯಲ್ಲಿ ತಾ. 25 ರ ಸಂಜೆ 5 ಗಂಟೆಯಿಂದ ತಾ. 27 ರ ಸಂಜೆ 5 ಗಂಟೆಯವರೆಗೆ ಎಲ್ಲಾ ವಿಧದ ಮದ್ಯ ತಯಾರಿಕೆ, ಸಾಗಾಣಿಕೆ, ಶೇಖರಣೆ ಮತ್ತು ಎಲ್ಲಾ ರೀತಿಯ ಅಂಗಡಿ, ಬಾರ್ ಮತ್ತು (ಮೊದಲ ಪುಟದಿಂದ) ರೆಸ್ಟೋರೆಂಟ್, ಕ್ಲಬ್, ಹೊಟೇಲ್ ಮುಂತಾದವುಗಳಲ್ಲಿ ಎಲ್ಲಾ ವಿಧದ ಮದ್ಯ ಮಾರಾಟವನ್ನು ಸೂಚನೆಗಳಿಗೆ ಒಳಪಟ್ಟು ಸಂಪೂರ್ಣವಾಗಿ ನಿಷೇಧಿಸಿ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಆದೇಶ ಹೊರಡಿಸಿದ್ದಾರೆ. ನೀತಿ ಸಂಹಿತೆ ಜಾರಿಯಲ್ಲಿರುವ ಅವಧಿಯಲ್ಲಿ ನೀತಿ ಸಂಹಿತೆಯು ಜಾರಿಯಲ್ಲಿರುವ ಪ್ರದೇಶಗಳಲ್ಲಿರುವ ಎಲ್ಲಾ ಮದ್ಯದ ಅಂಗಡಿಗಳನ್ನು ಮತ್ತು ಮದ್ಯ ತಯಾರಿಕಾ ಘಟಕಗಳನ್ನು ಅದರ ಮಾಲೀಕರು, ಅದಿಭೋಗದಾರರು ಸಂದರ್ಭಾನುಸಾರ ಮುಚ್ಚತಕ್ಕದ್ದು ಹಾಗೂ ಮೊಹರು ಮಾಡಿ ಕೀಯನ್ನು ಜಿಲ್ಲಾಧಿಕಾರಿಗಳಿಗೆ ಅಥವಾ ಅಧಿಕಾರ ವ್ಯಾಪ್ತಿಯುಳ್ಳ ಕಾರ್ಯನಿರ್ವಾಹಕ ಮ್ಯಾಜಿಸ್ಟ್ರೇಟರಿಗೆ ಒಪ್ಪಿಸತಕ್ಕದ್ದು. ನೀತಿ ಸಂಹಿತೆ ಜಾರಿಯಲ್ಲಿರುವ ಅವಧಿಯಲ್ಲಿ ಯಾರಾದರೂ ಮದ್ಯವನ್ನು ಸ್ವಾಧೀನದಲ್ಲಿಟ್ಟುಕೊಂಡಿರುವುದು ಅಥವಾ ಮದ್ಯವನ್ನು ಸೇವಿಸಿ ಬೀದಿಯಲ್ಲಿ ರಂಪಾಟ ಮಾಡುತ್ತಿರುವುದು ಕಂಡು ಬಂದರೆ ಮುನ್ನೆಚ್ಚರಿಕಾ ಕ್ರಮವಾಗಿ ಚುನಾವಣೆ ಮುಕ್ತಾಯವಾಗುವವರೆಗೆ ಅಂತಹವರನ್ನು ವಶಕ್ಕೆ ತೆಗೆದುಕೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ತಿಳಿಸಿದ್ದಾರೆ.

ಸಂತೆ, ಜಾತ್ರೆ ನಿಷೇಧ

ಗ್ರಾಮ ಪಂಚಾಯತ್ ಚುನಾವಣೆ 2020ರ ಮತದಾನವನ್ನು ಸುಸೂತ್ರವಾಗಿ ನಡೆಸಲು ಹಾಗೂ ಶಾಂತಿಯುತ ಕಾನೂನು ಸುವ್ಯವಸ್ಥೆಯನ್ನು ಕಾಪಾಡುವ ದೃಷ್ಟಿಯಿಂದ ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ 1993 ಪ್ರಕರಣ 36 ಮತ್ತು ದಂಡ ಪ್ರಕ್ರಿಯಾ ಸಂಹಿತೆ 1973ರ ಸೆಕ್ಷನ್ 144 ಅಡಿಯಲ್ಲಿ ದತ್ತವಾಗಿರುವ ಅಧಿಕಾರದಂತೆ ಮಡಿಕೇರಿ ಮತ್ತು ಸೋಮವಾರಪೇಟೆ ತಾಲೂಕಿನಲ್ಲಿ ನೀತಿ ಸಂಹಿತೆ ಜಾರಿಯಲ್ಲಿರುವ ಗ್ರಾಮ ಪಂಚಾಯತ್‍ಗಳ ವ್ಯಾಪ್ತಿಯಲ್ಲಿ ತಾ. 21 ರ ಮಧ್ಯರಾತ್ರಿ 12 ಗಂಟೆಯಿಂದ ತಾ. 22 ರ ಮಧ್ಯರಾತ್ರಿ 12 ಗಂಟೆಯವರೆಗೆ ಹಾಗೂ ವೀರಾಜಪೇಟೆ ತಾಲೂಕಿನಲ್ಲಿ ನೀತಿ ಸಂಹಿತೆ ಜಾರಿಯಲ್ಲಿರುವ ಗ್ರಾಮ ಪಂಚಾಯತ್‍ಗಳ ವ್ಯಾಪ್ತಿಯಲ್ಲಿ ತಾ. 26 ರ ಮಧ್ಯರಾತ್ರಿ 12 ಗಂಟೆಯಿಂದ ತಾ. 27 ರ ಮಧ್ಯರಾತ್ರಿ 12 ಗಂಟೆಯವರೆಗೆ ಎಲ್ಲಾ ವಿಧದ ಸಂತೆ ಜಾತ್ರೆಗಳನ್ನು ಸಂಪೂರ್ಣವಾಗಿ ನಿಷೇಧಿಸಿ ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಆದೇಶ ಹೊರಡಿಸಿದ್ದಾರೆ.