ಕ್ರೀಡಾ ಚಟುವಟಿಕೆಗಳೆಂದರೆ ಅಮಿತೋತ್ಸವ ತೋರುವ ಕೊಡಗಿನಲ್ಲಿ ವಿವಿಧ ಕ್ರೀಡೆಗಳಿಗೆ ಕೊರೊನಾ ಎಂಬ ರೋಗ ಪ್ರಸಕ್ತ ವರ್ಷ ಭಾರೀ ಹೊಡೆತವನ್ನೇ ನೀಡಿತ್ತು. ಇದರ ಕಾರಣದಿಂದಾಗಿ ಬಹುತೇಕ ಜಿಲ್ಲೆಯ ಎಲ್ಲಾ ಕ್ರೀಡಾ ಹಬ್ಬಗಳು, ಶಾಲಾ-ಕಾಲೇಜು, ಕ್ರೀಡಾಕೂಟ, ದಸರಾ ಕೂಟ ಇತ್ಯಾದಿ ಕ್ರೀಡೆಗಳು ಈ ಬಾರಿ ಬೇಸಿಗೆಯಿಂದಲೇ ಸ್ಥಗಿತಗೊಂಡಿದ್ದವು. ವಿದ್ಯಾರ್ಥಿಗಳು, ಯುವಕ-ಯುವತಿಯರು ಸೇರಿ ಸ್ವತ: ವಿವಿಧ ಕ್ರೀಡೆಗಳಲ್ಲಿ ಪಾಲ್ಗೊಳ್ಳುವವರಿಗೆ, ವೀಕ್ಷಿಸುತ್ತಿದ್ದವರಿಗೆ ಇದೊಂದು ರೀತಿಯಲ್ಲಿ ದಿಗ್ಭಂಧನದಲ್ಲಿರಿಸಿದಂತಾಗಿತ್ತು. ಇದೀಗ ಹಲವೆಡೆಗಳಲ್ಲಿ ವಿವಿಧ ಕ್ರೀಡಾ ಕೂಟಗಳನ್ನು ವಿವಿಧ ಸಂಘ-ಸಂಸ್ಥೆಗಳು ಆಯೋಜಿಸಲು ಮುಂದಾಗುತ್ತಿವೆ. ಇದಕ್ಕೆ ಕಂಡು ಬರುತ್ತಿರುವ ಸ್ಪಂದನ ಜನತೆಯ ಕ್ರೀಡಾಪ್ರೇಮವನ್ನು ಎತ್ತಿ ಹಿಡಿಯುತ್ತಿದೆ.

ಇದರಂತೆ ಕಳೆದ ವಾರ ದಕ್ಷಿಣ ಕೊಡಗಿನ ಪೊನ್ನಂಪೇಟೆಯಲ್ಲಿ ಕೊಡವ ಕುಟುಂಬಗಳ ನಡುವೆ ಒಂದಷ್ಟು ಯುವಕರು ಸೇರಿ ಪೊನ್ನಂಪೇಟೆ ಕೊಡವ ಸಮಾಜದ ಬ್ಯಾನರ್ ಅಡಿಯಲ್ಲಿ ಫೈವ್ ಎಸೈಡ್ ರಿಂಕ್ ಹಾಕಿ ಹಾಗೂ ಇದೇ ಮೊದಲ ಬಾರಿಗೆ ಫುಟ್ಬಾಲ್ ಪಂದ್ಯಾಟವನ್ನು ಏರ್ಪಡಿಸಿದ್ದರು. ಆಕ್ಸ್ ಸ್ಫೋಟ್ಸ್ ಮತ್ತು ಎಂಟರ್‍ಟೈನ್‍ಮೆಂಟ್‍ನ ಅಜ್ಜೇಟಿರ ವಿಕ್ರಂ ಉತ್ತಪ್ಪ, ಕೊಟ್ಟಂಗಡ ಸೋಮಣ್ಣ, ಮೂಕಳಮಾಡ ಗಣಪತಿ, ನಡಿಕೇರಿಯಂಡ ಬಿಪಿನ್ ಅಪ್ಪಚ್ಚು ಹಾಗೂ ಸ್ನೇಹಿತರ ಬಳಗದ ಈ ಪರಿಕಲ್ಪನೆ ಒಂದು ರೀತಿಯಲ್ಲಿ ಸೂಪರ್ ಹಿಟ್ ಆಯಿತಲ್ಲದೆ, ಹಲವರಿಗೆ ಹಲವು ರೀತಿಯಲ್ಲಿ ಪ್ರಯೋಜನವನ್ನೂ ಕಲ್ಪಿಸಿತು.

ಜಿಲ್ಲೆಯಲ್ಲಿ ಭಾರೀ ಯಶಸ್ಸು ಕಂಡಿರುವ ಕೌಟುಂಬಿಕ ಹಾಕಿ ಉತ್ಸವದ ಮಾದರಿಯಲ್ಲಿಯೇ ಈ ಮಿನಿ ಕ್ರೀಡಾಕೂಟವು ಹಬ್ಬದ ನೆನಪನ್ನೇ ಪೊನ್ನಂಪೇಟೆಯಲ್ಲಿ ಸೃಷ್ಟಿಸಿತ್ತು. ಹಾಕಿಯಲ್ಲಿ 80 ಕುಟುಂಬ ಫುಟ್ಬಾಲ್‍ನಲ್ಲಿ 52 ಕುಟುಂಬಗಳು ಭಾಗಿಯಾಗಿದ್ದು, ತಮ್ಮ ತಮ್ಮ ಕುಟುಂಬದ ಪಂದ್ಯಾಟದ ಸಂದರ್ಭ ಅಧಿಕ ಸಂಖ್ಯೆಯ ಕ್ರೀಡಾಪ್ರೇಮಿಗಳು ಇಲ್ಲಿ ಕಂಡುಬಂದರು. ಕೇವಲ ಆಟಗಾರರು ಮಾತ್ರವಲ್ಲ, ಪುಟ್ಟ ಮಕ್ಕಳೊಂದಿಗೆ ಪೋಷಕರು, ಅಬಾಲವೃದ್ಧರಾಗಿ ಭಾಗವಹಿಸಿ ಕ್ರೀಡಾಕೂಟಕ್ಕೆ ನಾಲ್ಕೈದು ದಿನಗಳ ಕಾಲ ಉತ್ತೇಜನ ನೀಡಿದ್ದರು. ಶಾಲಾ ಕಾಲೇಜುಗಳಿಲ್ಲದೆ ಮನೆಯಲ್ಲಿಯೇ ಉಳಿದಿರುವ ವಿದ್ಯಾರ್ಥಿ ಸಮೂಹ, ‘ವರ್ಕ್ ಫ್ರಂ ಹೋಂ’ ಎಂಬ ಕಾರಣದಿಂದ ಜಿಲ್ಲೆಯಲ್ಲೇ ಉಳಿದಿರುವ ಉದ್ಯೋಗಸ್ಥರು ತಮಗಿದೊಂದು ಅವಕಾಶವೆಂಬಂತೆ ಸಂಭ್ರಮಿಸಿದರು. ರಾಜ್ಯ-ರಾಷ್ಟ್ರೀಯ, ಅಂತರ ರಾಷ್ಟ್ರೀಯ ಆಟಗಾರರು ತಮ್ಮ ತಮ್ಮ ಕುಟುಂಬದ ಪರ ಆಡಿ ಗಮನ ಸೆಳೆದರೆ, ತೀರ್ಪುಗಾರಿಕೆ, ತಾಂತ್ರಿಕ ಕೆಲಸದಲ್ಲಿ ತೃಪ್ತಿ ಕಾಣುತ್ತಿದ್ದವರು ಹಾಕಿ ಕೂರ್ಗ್ ಸಂಸ್ಥೆಯ ಮೂಲಕ ಮೈದಾನಕ್ಕಿಳಿದು ಹಲವು ತಿಂಗಳ ಇರಿಸು-ಮುರಿಸನ್ನು ನಿವಾರಿಸಿಕೊಂಡರು.

ಮಿನಿ ಕ್ರೀಡಾಹಬ್ಬದಂತೆ ಜನತೆಯ ಪಾಲ್ಗೊಳ್ಳುವಿಕೆಯೂ ಅಧಿಕವಾಗಿದ್ದರಿಂದ, ಒಂದಷ್ಟು ಮಂದಿ ವ್ಯಾಪಾರ-ವಹಿವಾಟಿನ ಮೂಲಕವೂ ಕ್ರಿಯಾಶೀಲರಾಗಿದ್ದು ಕಂಡುಬಂದಿತು. ಪ್ರೇಕ್ಷಕರ ಗ್ಯಾಲರಿಗೆ ಒಂದಷ್ಟು ತಂಪು ಪಾನೀಯ, ಪಾಪ್‍ಕಾರ್ನ್, ಐಸ್‍ಕ್ರೀಂಗಳನ್ನು ನೀಡುತ್ತಾ ಕೆಲವರು ಒಂದಷ್ಟು ಜೇಬು ತುಂಬಿಸಿಕೊಳ್ಳಲು ಇದು ನೆರವಾಯಿತು. ವ್ಯಾಪಾರ-ವಹಿವಾಟು ಕುಂಠಿತಗೊಂಡು ಪರಿತಪಿಸುತ್ತಿದ್ದ ಪೊನ್ನಂಪೇಟೆ-ಗೋಣಿಕೊಪ್ಪಲು ವಿಭಾಗದ ವ್ಯಾಪಾರಸ್ಥರು, ಹೊಟೇಲ್, ಬಾರ್ ಮತ್ತು ರೆಸ್ಟೋರೆಂಟ್‍ಗಳಿಗೂ ಒಂದಷ್ಟು ವ್ಯಾಪಾರ ಹೆಚ್ಚಾಗಿತ್ತು. ಇದೇ ಸಂದರ್ಭದಲ್ಲಿ ಪೊನ್ನಂಪೇಟೆ ನೂತನ ತಾಲೂಕಿನ ಉದ್ಘಾಟನಾ ಸಮಾರಂಭವೂ ಆಯೋಜನೆಗೊಂಡಿದ್ದು, ಪೊನ್ನಂಪೇಟೆ (ಕಿಗ್ಗಟ್ಟುನಾಡು) ವಿಭಾಗದಲ್ಲಿ ಹೊಸತೊಂದು ಕಳೆ ಸೃಷ್ಟಿಯಾಗಿತ್ತು. ಜತೆಗೆ ಹುತ್ತರಿ ಹಬ್ಬದ ಸಂಭ್ರಮದ ಓಡಾಟ ಪೊನ್ನಂಪೇಟೆಗೆ ಆಗಮಿಸಿದ ರಾಜ್ಯ ಕಂದಾಯ ಸಚಿವರಾದ ಆರ್. ಆಶೋಕ್, ಸಹಕಾರ ಸಚಿವ ಎಸ್.ಟಿ. ಸೋಮಶೇಖರ್, ಜಿಲ್ಲೆಯ ಶಾಸಕರು, ಜನಪ್ರತಿನಿಧಿಗಳು ಜೂನಿಯರ್ ಕಾಲೇಜು ಮೈದಾನಕ್ಕೆ ಭೇಟಿ ನೀಡಿದ್ದು, ಮೈದಾನದಲ್ಲಿ ಕ್ರೀಡಾಪ್ರೇಮಿಗಳಲ್ಲಿ ಜಿಲ್ಲೆಯ ಎಂದಿನ ಕ್ರೀಡಾ ಕಲರವ ಸೃಷ್ಟಿಯಾದಂತಿದ್ದವು. ಜಿಲ್ಲೆಯ ವಿವಿಧ ಭಾಗಗಳಲ್ಲಿರುವ ಕುಟುಂಬದ ಮಂದಿಯೂ ಬೆಳಿಗ್ಗೆ 8 ಗಂಟೆಯ ಸಮಯಕ್ಕೆ ಪಂದ್ಯ ನಿಗದಿಯಾಗಿದ್ದರೂ ಸ್ಥಳಕ್ಕೆ ಆಗಮಿಸಿ ತಮ್ಮ ಕುಟುಂಬ ತಂಡಗಳನ್ನು ಉತ್ತೇಜಿಸುತ್ತಿದ್ದ ಪರಿ ಕೊಡಗಿನ ಕ್ರೀಡಾ ಆಸಕ್ತಿಯನ್ನು ಎತ್ತಿ ಹಿಡಿಯುವಂತೆ ಮಾಡಿತ್ತಲ್ಲದೆ, ಕೊರೊನಾತಂಕವನ್ನು ಮರೆಯಾಗಿಸಿ ಭವಿಷ್ಯದ ಬದುಕಿನ ಹಾದಿಗೆ ಒಂದಷ್ಟು ಉತ್ತೇಜನಕಾರಿ ಎಂಬಂತೆ ಈ ಕ್ರೀಡಾಕೂಟ ಯಶಸ್ಸು ಕಂಡಿತು. ವಿವಿಧ ದಾನಿಗಳ ಸ್ಪಂದನೆ, ಹಾಕಿ ಕೂರ್ಗ್‍ನ ಸಹಕಾರ, ಇತರ ಸಂಘ-ಸಂಸ್ಥೆಗಳ ಸ್ಪಂದನ, ಯುವಕರ ತಂಡದ ಶ್ರಮವನ್ನು ಸಾರ್ಥಕ ಗೊಳಿಸಿತು ಎನ್ನಬಹುದು.

- ಶಶಿ ಕಾಯಪಂಡ,

ಮಡಿಕೇರಿ.