ಗೋಹತ್ಯೆ ನಿಷೇಧ ಕಾಯ್ದೆಗೆ ಅಂಗೀಕಾರ
ಬೆಂಗಳೂರು, ಡಿ. 9: ಕಾಂಗ್ರೆಸ್ ಹಾಗೂ ಜೆಡಿಎಸ್ ವಿರೋಧದ ನಡುವೆಯೇ ವಿಧಾನಸಭೆಯಲ್ಲಿ 2020ನೇ ಸಾಲಿನ ಕರ್ನಾಟಕ ಜಾನುವಾರು ಹತ್ಯೆ ಪ್ರತಿಬಂಧಕ ಮತ್ತು ಸಂರಕ್ಷಣಾ ವಿಧೇಯಕ ಮಂಡನೆ ಮಾಡಲಾಗಿದ್ದು ರಾಜ್ಯ ವಿಧಾನಸಭೆ ಅಂಗೀಕಾರ ನೀಡಿದೆ. ಪಶು ಸಂಗೋಪನೆ ಮತ್ತು ವಕ್ಪ್ ಸಚಿವ ಪ್ರಭು ಚೌವ್ಹಾಣ್ ವಿಧೇಯಕ ಮಂಡನೆಗೆ ಆರಂಭಿಸುತಿದ್ದಂತೆ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ವಿರೋಧ ವ್ಯಕ್ತಪಡಿಸಿದರು. ಸದನ ಸಲಹಾ ಸಮಿತಿಯಲ್ಲಿ ಹೊಸ ವಿಧೆಯಕ ಮಂಡನೆ ಮಾಡಬಾರದು. ಈಗಾಗಲೇ ಸುಗ್ರೀವಾಜ್ಞೆ ಹೊರಡಿಸಿರುವ ವಿಧೇಯಕ ಗಳನ್ನು ಮಾತ್ರ ಮಂಡಿಸಬೇಕು ಎಂದು ತೀರ್ಮಾನಿಸಲಾಗಿದೆ. ಈಗ ಏಕಾಏಕಿ ಹೊಸ ಬಿಲ್ ಮಂಡಿಸುತ್ತಿದ್ದಾರೆ. ನಾವು ಇದನ್ನು ಒಪ್ಪುವುದಿಲ್ಲ ಎಂದು ಸದನದ ಬಾವಿಗಿಳಿದು ಕಾಂಗ್ರೆಸ್ ಸದಸ್ಯರ ಪ್ರತಿಭಟನೆ ನಡೆಸಿದರು. ಈ ಸಂದರ್ಭ ರಾಜ್ಯ ಸರ್ಕಾರದ ಮುಖ್ಯ ಸಚೇತಕ ಸುನೀಲ್‍ಕುಮಾರ್ ಯಾವುದಾದರೂ ಅಗತ್ಯ ಬಿಲ್ ಇದ್ದರೆ ಅದನ್ನು ತರಬಹುದು ಎಂದು ಚರ್ಚೆಯಾಗಿತ್ತು. ಇದು ಅಗತ್ಯ ಬಿಲ್ ಇದೆ. ಅದನ್ನು ನಾವು ಮಂಡಸಿದ್ದೇವೆ. ನಿಮ್ಮ ಮಾತು ಕೇಳಿ ಬಿಲ್ ತರಬೇಕಿಲ್ಲ. ನೀವು ಅದರ ಮೇಲೆ ಚರ್ಚೆ ಮಾಡಿ ಎಂದು ಹೇಳಿದರು.
ಶಾಲಾರಂಭ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ ನಿರ್ಧಾರ
ಬೆಂಗಳೂರು, ಡಿ. 9: ಮಕ್ಕಳ ಶೈಕ್ಷಣಿಕ ಹಿತದೃಷ್ಟಿಯಿಂದ ಸುರಕ್ಷತಾ ಕ್ರಮಗಳೊಂದಿಗೆ ಶಾಲಾರಂಭ ಹಾಗೂ ಮಕ್ಕಳ ಕಲಿಕಾ ಪ್ರಕ್ರಿಯೆ ಆರಂಭಿಸುವ ಕುರಿತು ಶೀಘ್ರದಲ್ಲೇ ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ಸಭೆ ಕರೆದು ನಿರ್ಧಾರಕ್ಕೆ ಬರಲಾಗುವುದು ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್. ಸುರೇಶ್‍ಕುಮಾರ್ ತಿಳಿಸಿದ್ದಾರೆ. ಬುಧವಾರ ವಿಧಾನಸೌಧದಲ್ಲಿ ಖಾಸಗಿ ಅನುದಾನ ರಹಿತ ಪದವಿಪೂರ್ವ ಕಾಲೇಜು ಆಡಳಿತ ಮಂಡಳಿಗಳ ಒಕ್ಕೂಟದ ಪ್ರತಿನಿಧಿಗಳೊಂದಿಗೆ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಎಸ್‍ಎಸ್‍ಎಲ್‍ಸಿ ಮತ್ತು ದ್ವಿತೀಯ ಪಿಯುಸಿ ತರಗತಿಗಳನ್ನು ಆರಂಭಿಸುವ ಕುರಿತು ಆರೋಗ್ಯ ಇಲಾಖೆಯ ತಜ್ಞ ಸಮಿತಿಯೊಂದಿಗೂ ಚರ್ಚಿಸಿ ಸೂಕ್ತ ನಿರ್ಧಾರ ಮಾಡಲಾಗುವುದು. ಹಲವು ರೀತಿಯಲ್ಲಿ ಮಕ್ಕಳನ್ನು ಕಲಿಕಾ ಪ್ರಕ್ರಿಯೆಯಲ್ಲಿ ತೊಡಗಿಸಲಾಗಿದೆಯಾದರೂ ಅದು ತರಗತಿ ಪಾಠಗಳಷ್ಟು ಪರಿಣಾಮಕಾರಿಯಾಗಿರುವುದಿಲ್ಲ. ಆದರೆ ಬಹು ದಿನಗಳ ಕಾಲ ಮಕ್ಕಳು ಶಾಲೆಯಿಂದ ಹೊರಗುಳಿಯುವುದರಿಂದ ಆಗುತ್ತಿರುವ ಸಾಮಾಜಿಕ ಸಮಸ್ಯೆಗಳ ಹಿನ್ನೆಲೆಯಲ್ಲಿ ಸುರಕ್ಷತಾ ಕ್ರಮಗಳೊಂದಿಗೆ ಶಾಲೆಗಳನ್ನು ಆರಂಭಿಸುವುದು ಉಚಿತವೆಂದು ಇತ್ತೀಚಿಗೆ ವಿಧಾನಪರಿಷತ್ತಿನ ಪದವೀಧರ ಮತ್ತು ಶಿಕ್ಷಕ ಕ್ಷೇತ್ರದ ಸದಸ್ಯರು ಅಭಿಪ್ರಾಯಪಟ್ಟಿದ್ದಾರೆ. ಮಕ್ಕಳು ಬಹುಕಾಲ ಶಾಲೆಯಿಂದ ಹೊರಗುಳಿಯುವುದರಿಂದ ಸಮಾಜದ ಮೇಲೆ ಆಗಿರುವ ಪರಿಣಾಮಗಳು ಸರ್ಕಾರದ ಗಮನಕ್ಕೂ ಬಂದಿದೆ. ಮಕ್ಕಳ ಭವಿಷ್ಯವೂ ಇದರಲ್ಲಿ ಅಡಗಿರುವುದರಿಂದ ಬಹುಕಾಲ ಮಕ್ಕಳನ್ನು ಶಾಲೆಯಿಂದ ಹೊರಗಿಡುವುದು ಸರಿಯಲ್ಲವಾದ್ದರಿಂದ ಮೇಲಿನ ತರಗತಿಗಳ ವಿದ್ಯಾರ್ಥಿಗಳ ಭವಿಷ್ಯದ ದೃಷ್ಟಿಯಿಂದ ಸುರಕ್ಷತಾ ಕ್ರಮಗಳೊಂದಿಗೆ ತರಗತಿಗಳನ್ನು ಆರಂಭಿಸಲು ಸರ್ಕಾರ ಸೂಕ್ತ ಚರ್ಚೆಯ ನಂತರ ನಿರ್ಣಯಕ್ಕೆ ಬರಲಿದೆ ಎಂದು ಸಚಿವರು ಹೇಳಿದರು. ಉನ್ನತ ಶಿಕ್ಷಣ ಸಚಿವರೂ ಆದ ಉಪಮುಖ್ಯಮಂತ್ರಿ ಡಾ. ಸಿ.ಎನ್. ಅಶ್ವತ್ಥ್ ನಾರಾಯಣ್ ಮಾತನಾಡಿ, ಕೋವಿಡ್ ಹಿನ್ನೆಲೆ ಯಾವುದೇ ರಾಜ್ಯದಲ್ಲೂ ಶಾಲೆಗಳು ಪೂರ್ಣ ಪ್ರಮಾಣದಲ್ಲಿ ಆರಂಭಗೊಂಡಿಲ್ಲ. ವಿದ್ಯಾರ್ಥಿಗಳ ಭವಿಷ್ಯದ ಹಿತದೃಷ್ಟಿಯಿಂದ ಉನ್ನತ ಶಿಕ್ಷಣ ಹಾಗೂ ವಿಶ್ವವಿದ್ಯಾನಿಲಯಗಳ ತರಗತಿಗಳನ್ನು ಆರಂಭಿಸಲಾಗಿದೆ. ಶಾಲಾ ಶಿಕ್ಷಣ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಸುರಕ್ಷತಾ ಕ್ರಮಗಳೊಂದಿಗೆ ಶಾಲೆಗಳನ್ನು ಆರಂಭಿಸಲು ಶೀಘ್ರದಲ್ಲೇ ಮುಖ್ಯಮಂತ್ರಿ ಗಳೊಂದಿಗೆ ಚರ್ಚಿಸಿ ಒಂದು ನಿರ್ಧಾರಕ್ಕೆ ಬರಲಾಗುವುದು ಎಂದರು.
ಮಕ್ಕಳಿಗೆ ಹೋಮ್‍ವರ್ಕ್ ನೀಡುವಂತಿಲ್ಲ
ನವದೆಹಲಿ, ಡಿ. 9: 2ನೇ ತರಗತಿವರೆಗಿನ ಮಕ್ಕಳಿಗೆ ಹೋಮ್‍ವರ್ಕ್ ನೀಡುವಂತಿಲ್ಲ ಮತ್ತು ಶಾಲಾ ಮಕ್ಕಳು ದೇಹದ ತೂಕದ ಶೇ. 10 ಕ್ಕಿಂತ ಹೆಚ್ಚಿನ ಭಾರದ ಬ್ಯಾಗ್‍ಗಳನ್ನು ಹೊರುವಂತಿಲ್ಲ ಎಂದು ಕೇಂದ್ರ ಸರ್ಕಾರ ಹೇಳಿದೆ. ಕೇಂದ್ರ ಶಿಕ್ಷಣ ಸಚಿವಾಲಯದ ‘ಪಾಲಿಸಿ ಆನ್ ಸ್ಕೂಲ್ ಬ್ಯಾಗ್ 2020' ಮಾರ್ಗಸೂಚಿ ಅನ್ವಯ, ಶಾಲಾ ಮಕ್ಕಳ ಬ್ಯಾಗ್ ತೂಕವನ್ನು ನಿಯತವಾಗಿ ಶಾಲೆಗಳಲ್ಲಿ ಗಮನಿಸುತ್ತಿರಬೇಕು. ಇದು ಲಘು ತೂಕದ್ದಾಗಿದ್ದು, ಎರಡು ಪಟ್ಟಿಗಳನ್ನು ಹೊಂದಿ ಮಕ್ಕಳ ಹೆಗಲಿನ ಎರಡೂ ಬದಿಗೆ ಸಮತೂಕ ಹಾಕುವ ರೀತಿಯಲ್ಲಿ ಇರಬೇಕು ಹಾಗೂ ಚಕ್ರ ಇರುವ ಸ್ಕೂಲ್‍ಬ್ಯಾಗ್‍ಗಳಿಗೆ ಅವಕಾಶ ಇರುವುದಿಲ್ಲ. ಪ್ರಕಾಶಕರು ಮುದ್ರಿಸುವ ಪಠ್ಯ ಪುಸ್ತಕದ ತೂಕವನ್ನೂ ಈ ನೀತಿ ಶಿಫಾರಸು ಮಾಡಿದೆ. ರಾಷ್ಟ್ರೀಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಮಂಡಳಿ ನಡೆಸಿದ ಹಲವು ಸಮೀಕ್ಷೆ ಮತ್ತು ಅಧ್ಯಯನಗಳ ಆಧಾರದಲ್ಲಿ ಈ ಶಿಫಾರಸು ಮಾಡಲಾಗಿದೆ. ಪ್ರಮುಖವಾಗಿ 2 ರಿಂದ ಹತ್ತನೇ ತರಗತಿವರೆಗಿನ ಮಕ್ಕಳಿಗೆ ಅವರ ದೇಹತೂಕದ ಶೇ. 10 ಕ್ಕಿಂತ ಹೆಚ್ಚು ಭಾರದ ಸ್ಕೂಲ್ ಬ್ಯಾಗ್‍ಗಳನ್ನು ಹೊರಿಸುವಂತಿಲ್ಲ. ಅಂತೆಯೇ ಎರಡನೇ ತರಗತಿವರೆಗಿನ ಮಕ್ಕಳಿಗೆ ಹೋಮ್‍ವರ್ಕ್ ನೀಡಬಾರದು ಎಂದು ಹೇಳಲಾಗಿದೆ.
ಹೆಚ್‍ಡಿಕೆ ವಿರುದ್ಧ ಕೋಡಿಹಳ್ಳಿ ವಾಗ್ಧಾಳಿ
ಬೆಂಗಳೂರು, ಡಿ. 9: ಜೆಡಿಎಸ್ ಮಣ್ಣಿನ ಮಕ್ಕಳ ಪಕ್ಷವಲ್ಲ. ಅದು ರೈತರ ಹೆಸರಿನಲ್ಲಿ ಮಣ್ಣಿನ ಮಕ್ಕಳಿಗೆ ಮೋಸ ಮಾಡುವ ಪಕ್ಷ ಎಂದು ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್ ಮಾಜಿ ಸಿಎಂ ಕುಮಾರಸ್ವಾಮಿ ವಿರುದ್ಧ ವಾಗ್ಧಾಳಿ ನಡೆಸಿದ್ದಾರೆ. ಕರ್ನಾಟಕ ಭೂಸುಧಾರಣಾ ತಿದ್ದುಪಡಿ ಕಾಯ್ದೆಯನ್ನು ಪರಿಷತ್‍ನಲ್ಲಿ ಜೆಡಿಎಸ್ ಬೆಂಬಲಿಸಿದ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಜೆಡಿಎಸ್ ನವರು ರೈತರ ಹೋರಾಟಕ್ಕೆ ನಮ್ಮ ಬೆಂಬಲವಿದೆ ಎಂದು ನಿನ್ನೆ ಬೆಳಿಗ್ಗೆ ಹೇಳಿತ್ತು. ಆದರೆ ಸಂಜೆ ವೇಳೆ ಉಲ್ಟಾ ಹೊಡೆದು ಯಡಿಯೂರಪ್ಪನರಿಗೆ ಬೆಂಬಲ ಕೋಡುತ್ತಾರೆ ಎಂದರೆ ಏನು ಅರ್ಥ ಎಂದು ಪ್ರಶ್ನಿಸಿ ಕಿಡಿಕಾರಿದ್ದಾರೆ.
ವಿರೋಧಿಸಿದರೂ ಭೂ ವಿಧೇಯಕಕ್ಕೆ ಒಪ್ಪಿಗೆ
ಬೆಂಗಳೂರು, ಡಿ. 9: ಕಂದಾಯ ಸಚಿವ ಆರ್. ಅಶೋಕ್ ಮಂಡಿಸಿದ ಭೂ ವಿಧೇಯಕಕ್ಕೆ ಕಾಂಗ್ರೆಸ್ ತೀವ್ರ ವಿರೋಧ ವ್ಯಕ್ತಪಡಿಸಿ ಸಭಾತ್ಯಾಗ ಮಾಡಿತು. ಸಭಾತ್ಯಾಗದ ನಡುವೆಯೇ ಸದನದಲ್ಲಿ ವಿಧೇಯಕಕ್ಕೆ ಒಪ್ಪಿಗೆ ದೊರೆಯಿತು. ಇದಕ್ಕೂ ಮುನ್ನ ವಿಧೇಯಕಕ್ಕೆ ಕೆಲವು ತಿದ್ದುಪಡಿಗಳನ್ನು ಮಂಡಿಸಿದ ಹೆಚ್.ಕೆ. ಪಾಟೀಲ್ ಕರ್ನಾಟಕದವರಿಗೆ ಮಾತ್ರ ಜಮೀನು ಖರೀದಿಸಲು ಹಾಗೂ ಅನ್ಯ ರಾಜ್ಯದವರು ಜಮೀನು ಖರೀದಿಸಿದರೆ ಅದನ್ನು ರದ್ದುಪಡಿಸುವ ಅಧಿಕಾರ ನೀಡಿ ಎಂದು ತಿದ್ದುಪಡಿ ಮಂಡಿಸಿದರು. ತಿದ್ದುಪಡಿಗಳೊಂದಿಗೆ ವಿಧೇಯಕ ಪರ್ಯಾಲೋಚನೆ ಮಾಡಬೇಕೆಂದು ಒತ್ತಾಯಿಸಿದರು. ತಿದ್ದುಪಡಿ ಮಂಡನೆಗೆ ವಿರೋಧ ವ್ಯಕ್ತಪಡಿಸಿದ ಸಚಿವ ಜೆ.ಸಿ. ಮಾಧುಸ್ವಾಮಿ, ಒಮ್ಮೆ ವಿಧೇಯಕ ಅಂಗೀಕಾರವಾದ ನಂತರ ತಿದ್ದುಪಡಿಗೆ ಅವಕಾಶವಿಲ್ಲ. ವಿಧಾನಪರಿಷತ್‍ನಲ್ಲಿ ಆಗಿರುವ ತಿದ್ದುಪಡಿಗೆ ಸೀಮಿತವಾಗಿದೆ. ಹೆಚ್.ಕೆ. ಪಾಟೀಲ್ ಅವರು ತಂದಿರುವ ತಿದ್ದುಪಡಿಗೆ ಅವಕಾಶವಿಲ್ಲ ಎಂದರು. ಬಿಜೆಪಿ ಶಾಸಕ ಕೆ.ಜಿ. ಬೋಪಯ್ಯ ಹಾಗೂ ಸಚಿವ ಆರ್. ಅಶೋಕ್ ಇದಕ್ಕೆ ದನಿಗೂಡಿಸಿ ಮಾತನಾಡಿದರು. ಹೆಚ್.ಕೆ. ಪಾಟೀಲ್ ಅವರ ಬೆಂಬಲಕ್ಕೆ ನಿಂತ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ರಾಜ್ಯದ ರೈತರನ್ನು ನಿರ್ಗತಿಕರನ್ನಾಗಿ ಮಾಡುತ್ತಿದ್ದೀರಿ ಎಂದರು. ಇದಕ್ಕೆ ನಮ್ಮ ತೀವ್ರ ವಿರೋಧವಿದೆ ಎಂದು ಹೇಳಿದರು.
ಪ್ರಧಾನಮಂತ್ರಿ ಪ್ರಯಾಣದ ವಿವರ ನೀಡಲಾಗದು
ನವದೆಹಲಿ, ಡಿ. 9: ಭದ್ರತೆಯ ಹಿನ್ನೆಲೆ ಪ್ರಧಾನಮಂತ್ರಿಗಳ ವಿಮಾನ ಪ್ರಯಾಣದ ವಿವರಗಳನ್ನು ಬಹಿರಂಗಪಡಿಸಲು ಸಾಧ್ಯವಿಲ್ಲ ಎಂದು ಭಾರತೀಯ ವಾಯುಪಡೆ ಹೈಕೋರ್ಟ್‍ನಲ್ಲಿ ಹೇಳಿಕೆ ಸಲ್ಲಿಸಿದೆ. ಪ್ರಧಾನ ಮಂತ್ರಿಯವರ ವಿಮಾನಯಾನದ ವಿವರಗಳನ್ನು ವಿಶೇಷ ವಿಮಾನ ರಿಟನ್ರ್ಸ್ (ಎಸ್‍ಆರ್ ಎಫ್) 11 ಮೂಲಕ ನೀಡಿ ಎಂದು ಕೇಂದ್ರ ಮಾಹಿತಿ ಆಯೋಗ ನೀಡಿದ್ದ ಆದೇಶವನ್ನು ಪ್ರಶ್ನಿಸಿ ಭಾರತೀಯ ವಾಯುಪಡೆ ದೆಹಲಿ ಹೈಕೋರ್ಟ್‍ನಲ್ಲಿ ಅರ್ಜಿ ಸಲ್ಲಿಸಿದೆ. ಪ್ರಧಾನಿಯವರ ವಿಮಾನಯಾನ ವಿವರಗಳನ್ನು ಕೇಳಿರುವ ಮಾಹಿತಿ ಆಯೋಗ ಅದರಲ್ಲಿ ಇತರ ವಿವರಗಳಾದ ಅವರ ಜೊತೆ ಪ್ರಯಾಣಿಸುವವರು, ವಿಶೇಷ ಭದ್ರತಾ ಪಡೆಗಳ ಸಿಬ್ಬಂದಿಗಳ ಬಗ್ಗೆ ಕೇಳಿದ್ದು ಇದರಿಂದ ವಿದೇಶ ಪ್ರಯಾಣದ ವೈಯಕ್ತಿಕ ಸುರಕ್ಷತೆ ಮೇಲೆ ಪರಿಣಾಮ ಬೀರುತ್ತದೆ. ಇವುಗಳನ್ನೆಲ್ಲ ಬಹಿರಂಗಪಡಿಸಿದರೆ ದೇಶದ ಸಮಗ್ರತೆ ಮತ್ತು ಸಾರ್ವಭೌಮತ್ವ, ಕಾರ್ಯತಂತ್ರ, ವೈಜ್ಞಾನಿಕ ಮತ್ತು ಆರ್ಥಿಕ ಹಿತಾಸಕ್ತಿಗಳಿಗೆ ಧಕ್ಕೆಯುಂಟಾಗುತ್ತದೆ ಎಂದು ಭಾರತೀಯ ವಾಯುಪಡೆ ತನ್ನ ಅರ್ಜಿಯಲ್ಲಿ ತಿಳಿಸಿದೆ.