ಸೋಮವಾರಪೇಟೆ, ಡಿ. 9: ಪಟ್ಟಣ ಪಂಚಾಯಿತಿಯಲ್ಲಿರುವ ಸಮಸ್ಯೆಗಳು, ಆಗಬೇಕಿರುವ ಅಭಿವೃದ್ಧಿ ಕಾರ್ಯಗಳ ಕುರಿತು ಚರ್ಚಿಸಲು ಇದೇ ಪ್ರಥಮವಾಗಿ ಆಯೋಜಿಸ ಲಾಗಿದ್ದ ವಿವಿಧ ಇಲಾಖಾಧಿಕಾರಿಗಳ ಸಭೆಯಲ್ಲಿ, ಉಪಯುಕ್ತ ಚರ್ಚೆಗಳು ನಡೆದು, ಸಮಸ್ಯೆಗಳು ಬಗೆಹರಿಯುವ ಭರವಸೆ ವ್ಯಕ್ತವಾಯಿತು.
ಪ.ಪಂ. ಸಭಾಂಗಣದಲ್ಲಿ ಅಧ್ಯಕ್ಷೆ ನಳಿನಿ ಗಣೇಶ್ ಅಧ್ಯಕ್ಷತೆಯಲ್ಲಿ ನಡೆದ ವಿಶೇಷ ಸಭೆಯಲ್ಲಿ ಭಾಗವಹಿಸಿದ್ದ ಸದಸ್ಯರುಗಳು, ತಮ್ಮ ವಾರ್ಡ್ ಸೇರಿದಂತೆ ಒಟ್ಟಾರೆ ಪಂಚಾಯಿತಿ ವ್ಯಾಪ್ತಿಯಲ್ಲಿ ಇರುವ ಸಮಸ್ಯೆಗಳ ಬಗ್ಗೆ ಸಂಬಂಧಿಸಿದ ಅಧಿಕಾರಿಗಳ ಗಮನ ಸೆಳೆದರು. ಪ್ರಮುಖವಾಗಿ ರಸ್ತೆ, ವಿದ್ಯುತ್, ಪಾರ್ಕಿಂಗ್, ಸರ್ವೆ ಇಲಾಖೆಗೆ ಸಂಬಂಧಿಸಿದಂತೆ ಅಧಿಕಾರಿಗಳು ಭಾಗವಹಿಸಿ ತಮ್ಮ ಇಲಾಖೆ ಮೂಲಕ ಕೈಗೊಳ್ಳಬಹುದಾದ ಕೆಲಸಗಳ ಬಗ್ಗೆ ಮಾಹಿತಿ ಒದಗಿಸಿದರು.
ಪಂಚಾಯಿತಿಯೊಂದಿಗೆ ವಿವಿಧ ಇಲಾಖೆಗಳ ಅಧಿಕಾರಿಗಳು ಪರಸ್ಪರ ಸಹಕಾರ ಹಾಗೂ ಸಮನ್ವಯತೆಯಿಂದ ಕೆಲಸ ನಿರ್ವಹಿಸಿದರೆ ಮಾತ್ರ ಪಟ್ಟಣದ ಅಭಿವೃದ್ಧಿ ಸಾಧ್ಯ. ಈ ಹಿನ್ನೆಲೆ ಸಭೆ ಆಯೋಜಿಸಲಾಗಿದೆ ಎಂದು ಅಧ್ಯಕ್ಷೆ ನಳಿನಿ ಗಣೇಶ್ ಹೇಳಿದರು.
ಪಟ್ಟಣದ ಮಡಿಕೇರಿ ರಸ್ತೆ, ಎಂ.ಜಿ.ರಸ್ತೆ, ಹಾಗೂ ಶಾಲಾ ರಸ್ತೆ, ಬಸವೇಶ್ವರ ರಸ್ತೆ ಮತ್ತು ಬಾಣಾವರ ರಸ್ತೆಗಳು ಹೆದ್ದಾರಿಗಳಾಗಿ ವಿಸ್ತರಣೆ ಆಗುತ್ತದೆ ಎಂಬ ಮಾತುಗಳು ಅನೇಕ ವರ್ಷಗಳಿಂದ ಕೇಳಿಬರುತ್ತಿರುವ ಹಿನ್ನೆಲೆ, ಸ್ಥಳೀಯ ನಿವಾಸಿಗಳು ಆತಂಕದಲ್ಲಿದ್ದಾರೆ. ಈ ಬಗ್ಗೆ ಮಾಹಿತಿ ನೀಡುವಂತೆ ಸದಸ್ಯೆ ಎಸ್.ಆರ್. ಸೋಮೇಶ್ ಹೇಳಿದರು.
ವೀರಾಜಪೇಟೆ, ಬೈಂದೂರು, ರಾಜ್ಯ ಹೆದ್ದಾರಿ ಈಗಾಗಲೇ ಪಟ್ಟಣದೊಳಗೆ ಹಾದುಹೋಗಿದೆ. ಸಾಧ್ಯವಾದಷ್ಟು ಬೇಗ ಕಾಮಗಾರಿ ನಡೆಯಲಿದೆ. ಈವರೆಗೆ ಕಾಮಗಾರಿ ಪ್ರಾರಂಭದ ದಿನಾಂಕ ನಿಗದಿಯಾಗಿಲ್ಲ ಎಂದು ಲೋಕೋಪಯೋಗಿ ಇಲಾಖಾ ಸಹಾಯಕ ಕಾರ್ಯಪಾಲಕ ಅಭಿಯಂತರ ಮೋಹನ್‍ಕುಮಾರ್ ತಿಳಿಸಿದರು.
ರಾಜ್ಯ ಹೆದ್ದಾರಿಯ ಮಾನದಂಡಗಳ ಬಗ್ಗೆ ಉಪಾಧ್ಯಕ್ಷ ಸಂಜೀವ ಪ್ರಶ್ನಿಸಿದರಲ್ಲದೇ, ಪಟ್ಟಣದೊಳಗೆ ಇದಕ್ಕೆ ವಿನಾಯಿತಿ ಇದೆಯೇ ಎಂದು ಅಭಿಯಂತರರನ್ನು ಕೇಳಿದರು. ರಾಜ್ಯ ಹಾಗೂ ರಾಷ್ಟ್ರೀಯ ಹೆದ್ದಾರಿಗಳಿಗೆ ರಸ್ತೆಯ ಮಧ್ಯಭಾಗದಿಂದ 40 ಮೀಟರ್ ವಿಸ್ತೀರ್ಣ ನಿಗದಿಪಡಿಸಲಾಗಿದೆ. ಆದರೆ ಪಟ್ಟಣ ವ್ಯಾಪ್ತಿಯಲ್ಲಿ ರಸ್ತೆ ಮತ್ತು ಚರಂಡಿಯ ಅಂಚಿನಿಂದ 6 ಮೀಟರ್ ನಿಗದಿಗೊಳಿಸಿದ್ದು, ಈ ಅಂತರವನ್ನು ಬಿಟ್ಟು ಕಟ್ಟಡಗಳನ್ನು ನಿರ್ಮಿಸಿಕೊಳ್ಳಬಹುದು ಎಂದರು.
ಇಂತಹ ಯೋಜನೆಗಳು ಪಟ್ಟಣದಲ್ಲಿ ಜಾರಿಯಾದರೆ ಬಹುತೇಕ ಕುಟುಂಬಗಳು, ವರ್ತಕರು ತನ್ನ ಅಸ್ತಿತ್ವವನ್ನೇ ಕಳೆದುಕೊಳ್ಳಬೇಕಾಗುತ್ತದೆ ಎಂದು ಸದಸ್ಯ ವೆಂಕಟೇಶ್ ಆತಂಕ ವ್ಯಕ್ತಪಡಿಸಿದರು.
ಪಂಚಾಯಿತಿ ವ್ಯಾಪ್ತಿಯಲ್ಲಿ ಹಾದುಹೋಗುವ ರಾಜ್ಯ ಹೆದ್ದಾರಿಗಳ ಚರಂಡಿ ನಿರ್ವಹಣೆಯನ್ನು ಲೋಕೋಪಯೋಗಿ ಇಲಾಖೆ ಮಾಡಬೇಕು ಎಂದು ಸದಸ್ಯೆ ಶೀಲಾ ಡಿಸೋಜ ಹೇಳಿದರು. ಬಾಣಾವರ ರಸ್ತೆಯಲ್ಲಿ ಮಣ್ಣು ಕುಸಿಯುತ್ತಿದ್ದು, ಅಲ್ಲಿ ತಡೆಗೋಡೆ ನಿರ್ಮಿಸಬೇಕೆಂದು ಪಿ.ಕೆ. ಚಂದ್ರು ತಿಳಿಸಿದರು. ತೊಟಗಾರಿಕಾ ಇಲಾಖೆ ಸಮೀಪ ರಸ್ತೆಗೆ ಗುಡ್ಡ ಕುಸಿದು ಬಿದ್ದಿದೆ. ಅದನ್ನು ತೆರವುಗೊಳಿಸಿ ತಡೆಗೋಡೆ ನಿರ್ಮಿಸಬೇಕೆಂದು ಬಿ.ಆರ್. ಮಹೇಶ್ ಹೇಳಿದರು.
ಲೋಕೋಪಯೋಗಿ ಇಲಾಖೆಗೆ ಸೇರಿದ ರಾಜ್ಯ ಹೆದ್ದಾರಿಗಳ ಸಮೀಪ ಹೊಸ ಕಟ್ಟಡಗಳನ್ನು ನಿರ್ಮಿಸುವ ಸಂದರ್ಭ ತಮ್ಮ ಇಲಾಖೆ ನೀಡುವ ನಿರಾಕ್ಷೇಪಣಾ ಪತ್ರದ ಒಂದು ಪ್ರತಿಯನ್ನು ಪಟ್ಟಣ ಪಂಚಾಯಿತಿಗೂ ಕಳುಹಿಸಬೇಕೆಂದು ಮುಖ್ಯಾಧಿಕಾರಿ ನಾಚಪ್ಪ ತಿಳಿಸಿದರು.
ಪಟ್ಟಣದಲ್ಲಿ ಬಹುತೇಕ ಕಡೆಗಳಲ್ಲಿ ವಿದ್ಯುತ್ ಕಂಬಗಳು ಶಿಥಿಲಾವಸ್ಥೆ ಯಲ್ಲಿವೆ. ಈ ಬಗ್ಗೆ ಸಾಕಷ್ಟು ಬಾರಿ ಇಲಾಖೆಗೆ ತಿಳಿಸಿದ್ದರೂ ಪ್ರಯೋಜನ ವಾಗಿಲ್ಲ. ಸದಸ್ಯರ ಬೇಡಿಕೆಗೆ ಸ್ಪಂದಿಸುತ್ತಿಲ್ಲ ಎಂದು ಸದಸ್ಯರಾದ ಶುಭಾಕರ್, ಜೀವನ್ ಹಾಗೂ ಮಹೇಶ್ ಅವರುಗಳು ಸೆಸ್ಕ್ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಅಭಿಯಂತರ ಸಂತೋಷ್, ಇಲಾಖೆಯಲ್ಲಿ ಸಿಬ್ಬಂದಿಗಳ ಕೊರತೆ ಕಾಡುತ್ತಿದೆ. ಹಿಂದೆ 25 ಮಂದಿ ಕಾರ್ಯನಿರ್ವಹಿಸುತ್ತಿದ್ದು, ಇದೀಗ ಕೇವಲ 10 ಮಂದಿ ಮಾತ್ರ ಇದ್ದಾರೆ. ಆದ್ದರಿಂದ ಸಮಸ್ಯೆಯಾಗುತ್ತಿದೆ ಎಂದು ಅಸಹಾಯಕತೆ ವ್ಯಕ್ತಪಡಿಸಿದರು.
ಇತ್ತೀಚೆಗೆ ಪಟ್ಟಣದಲ್ಲಿ ಹೊಸ ಕಂಬಗಳನ್ನು ಅಳವಡಿಸುವ ಸಂದರ್ಭ ಪಂಚಾಯಿತಿಯ ಆಸ್ತಿಯನ್ನು ಹಾನಿಗೊಳಿಸಲಾಗಿದೆ. ಚರಂಡಿಗಳನ್ನು ಒಡೆದುಹಾಕಲಾಗಿದೆ. ಆಗಿರುವ ನಷ್ಟವನ್ನು ವಿದ್ಯುತ್ ಇಲಾಖೆಯೇ ಭರಿಸಬೇಕೆಂದು ಅಧ್ಯಕ್ಷೆ ನಳಿನಿ ಗಣೇಶ್, ಉಪಾಧ್ಯಕ್ಷ ಸಂಜೀವ ಆಗ್ರಹಿಸಿದರು. ಈ ಬಗ್ಗೆ ಇಲಾಖೆಗೆ ನೋಟೀಸ್ ನೀಡಲಾಗಿದೆ ಎಂದು ಮುಖ್ಯಾಧಿಕಾರಿ ನಾಚಪ್ಪ ಹೇಳಿದರು.
ಪಟ್ಟಣದಲ್ಲಿ ವಾಹನ ನಿಲುಗಡೆಗೆ ಸಮಸ್ಯೆಯಾಗುತ್ತಿದೆ. ಸಮರ್ಪಕ ಸಂಚಾರ ವ್ಯವಸ್ಥೆ ಹಾಗೂ ವಾಹನಗಳ ನಿಲುಗಡೆಗೆ ಪೊಲೀಸ್ ಇಲಾಖೆ ಕ್ರಮ ಕೈಗೊಳ್ಳಬೇಕೆಂದು ಸೋಮೇಶ್ ತಿಳಿಸಿದರು. ಸೋಮವಾರ ಸಂತೆಯ ವ್ಯಾಪಾರಕ್ಕಾಗಿ ಬರುವ ವರ್ತಕರ ವಾಹನಗಳನ್ನು ಆರ್‍ಎಂಸಿ ಬಳಿ ನಿಲುಗಡೆಗೆ ಕ್ರಮ ಕೈಗೊಳ್ಳಬೇಕೆಂದು ಶರತ್ ಹೇಳಿದರು.
ಪಟ್ಟಣದ ಪಾರ್ಕ್, ಕ್ರೀಡಾಂಗಣಗಳು, ಶತಮಾನೋತ್ಸವ ಭವನ ಮುಂತಾದ ಸ್ಥಳಗಳು ಮದ್ಯಪಾನ, ಗಾಂಜಾ ಸೇವನೆ ಹಾಗೂ ಅನೈತಿಕತೆಯ ತಾಣವಾಗಿವೆ. ಪೊಲೀಸರು ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಬೇಕೆಂದು ಸದಸ್ಯೆ ಶೀಲಾ ಡಿಸೋಜ ಒತ್ತಾಯಿಸಿದರೆ, ಪಟ್ಟಣದ 11 ವಾರ್ಡ್‍ಗಳಲ್ಲಿ ಬೀಟ್ ವ್ಯವಸ್ಥೆಯಾಗಬೇಕೆಂದು ನಳಿನಿ ಗಣೇಶ್ ಹೇಳಿದರು.
ಇದಕ್ಕೆ ಪ್ರತಿಕ್ರಿಯಿಸಿದ ಠಾಣಾಧಿಕಾರಿ ಶ್ರೀಧರ್, ಸೋಮವಾರ ಸಂತೆ ವರ್ತಕರ ವಾಹನ ಬೇರೆ ಕಡೆ ನಿಲ್ಲಿಸಲು ಹಾಗೂ ಸುಗಮ ಸಂಚಾರ ವ್ಯವಸ್ಥೆ ಮತ್ತು ಪಾರ್ಕಿಂಗ್ ವ್ಯವಸ್ಥೆಗೆ ಕ್ರಮ ಕೈಗೊಳ್ಳಲಾಗುತ್ತದೆ ಎಂದರು. ಪಟ್ಟಣದಲ್ಲಿ ಏಕಮುಖ ಸಂಚಾರ ವ್ಯವಸ್ಥೆಯಲ್ಲಿರುವ ರಸ್ತೆಗಳ ಬಗ್ಗೆ ನೋಟಿಫಿಕೇಷನ್ ಹೊರಡಿಸುವಂತೆ ಠಾಣಾಧಿಕಾರಿ ತಿಳಿಸಿದರು.
ಪಟ್ಟಣ ಪಂಚಾಯಿತಿಯಲ್ಲಿ ಸರ್ವೆಯರ್ ಇಲ್ಲದೇ ಇರುವುದರಿಂದ ಪಟ್ಟಣ ಹಾಗೂ ಖಾಸಗಿ ಆಸ್ತಿಗಳ ಮತ್ತು ಕಟ್ಟಡ ನಿರ್ಮಾಣ ಸಂದರ್ಭ ಸರ್ವೆಗೆ ತೊಡಕಾಗುತ್ತಿದೆ. ಆದ್ದರಿಂದ ಪಂಚಾಯಿತಿಗೆ ಒಬ್ಬ ಸರ್ವೆಯರ್ ನೇಮಿಸಬೇಕೆಂದು ಅಧ್ಯಕ್ಷೆ ನಳಿನಿ, ಉಪಾಧ್ಯಕ್ಷ ಸಂಜೀವ ಅವರುಗಳು, ಸರ್ವೆ ಇಲಾಖೆಯ ಅಧಿಕಾರಿಗಳಿಗೆ ತಿಳಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಭೂಮಾಪನ ಇಲಾಖೆಯ ಪರ್ಯಾವೇಕ್ಷಕ ಬ್ರಹ್ಮೇಶ್, ಇಲಾಖೆಯಲ್ಲಿ ಪ್ರಸ್ತುತ ಈರ್ವರು ಮಾತ್ರ ಭೂಮಾಪಕರಿದ್ದು ತೊಂದರೆಯಾಗುತ್ತಿದೆ. ಆದರೆ ನೋಂದಾಯಿತ ಹಾಗೂ ಪರವಾನಗಿ ಪಡೆದ ಸರ್ವೆಯರ್ ಮೂಲಕ ಕೆಲಸ ಮಾಡಿಸಿಕೊಳ್ಳಬಹುದಾಗಿದೆ ಎಂದರು. ಸಭೆಯಲ್ಲಿ ಪ.ಪಂ.ನ ಇತರ ಸದಸ್ಯರುಗಳು, ಅಭಿಯಂತರ ಹೇಮಂತ್‍ಕುಮಾರ್, ವಿಷಯ ಸಂಗ್ರಹಕಿ ರೂಪಾ ಮಹೇಂದ್ರ, ಲೆಕ್ಕಾಧಿಕಾರಿ ಭಾವನ ಉಪಸ್ಥಿತರಿದ್ದರು.