ಗೋಣಿಕೊಪ್ಪಲು, ಡಿ.9: ಮಂಗಳವಾರ ಸುರಿದ ಅಕಾಲಿಕ ಮಳೆಯಿಂದಾಗಿ ರೈತರು ತಮ್ಮ ಗದ್ದೆಗಳಲ್ಲಿ ಬೆಳೆದಿದ್ದ ಭತ್ತದ ಫಸಲು ನೀರು ಪಾಲಾಗಿದ್ದು ಅನ್ನದಾತ ಆತಂಕಕ್ಕೀಡಾಗಿದ್ದಾನೆ. ಭತ್ತದ ಕೃಷಿ ನಷ್ಟದಲ್ಲಿದ್ದರೂ ತನ್ನ ಭೂಮಿಯನ್ನು ಪಾಳು ಬಿಡದೆ ಸಾಲಮಾಡಿ ಗದ್ದೆ ಯನ್ನು ಉತ್ತಿ,ಬಿತ್ತಿ, ಇನ್ನೇನು ಫಸಲು ಕೈ ಸೇರಬೇಕು ಎನ್ನುವ ಸಂದರ್ಭದಲ್ಲಿ ವರುಣನ ಅವಕೃಪೆಯಿಂದಾಗಿ ಭತ್ತದ ಫಸಲು ನೀರು ಪಾಲಾಗಿದೆ.

ದ.ಕೊಡಗಿನ ಕಿರುಗೂರು ಗ್ರಾಮದ ಸುತ್ತಮುತ್ತಲ ರೈತರು ಭತ್ತದ ಕೃಷಿಯನ್ನು ಅನಾದಿಕಾಲದಿಂದಲೂ ಮುಂದುವರೆಸಿಕೊಂಡು ಬರುತ್ತಿದ್ದಾರೆ. ಮಳೆಯನ್ನೆ ಅವಲಂಭಿಸಿ ಕೃಷಿಯನ್ನು ಮಾಡುವ ಈ ಭಾಗದ ರೈತರು ಡಿಸೆಂಬರ್ ತಿಂಗಳಿನಲ್ಲಿ ತಮ್ಮ ಭತ್ತದ ಗದ್ದೆಯಲ್ಲಿರುವ ಭತ್ತವನ್ನು ಕಟಾವು ಮಾಡುತ್ತಾರೆ. ಆದರೆ ಮಂಗಳವಾರ ಭತ್ತದ ಕಟಾವಿನಲ್ಲಿ ನಿರತರಾಗಿದ್ದ ರೈತರಿಗೆ ದಿಢೀರನೇ ಸುರಿದ ಮಳೆ ಯಿಂದಾಗಿ ದಿಕ್ಕೆ ತೋಚದಂತಾಯಿತು. ಮಳೆಯ ನಡುವೆ ಭತ್ತವನ್ನು ಟ್ರ್ಯಾಕ್ಟರ್‍ನಲ್ಲಿ ಸಂಗ್ರಹಿಸಿದರಾದರೂ ಸುರಿದ ಮಳೆಯಿಂದಾಗಿ ಭತ್ತವು ಹಾಳಾಗಿದೆ. ಇದರಿಂದಾಗಿ ಭತ್ತದ ಮೌಲ್ಯವು ಕಡಿಮೆಯಾಗಿದೆ. ಮೋಡ ಮುಸುಕಿದ ವಾತಾವರಣದಲ್ಲಿ ಭತ್ತವನ್ನು ಒಣಗಿಸಲು ಸಾಧ್ಯವಾಗದೆ ಅನ್ನದಾತ ಆಕಾಶವನ್ನೆ ನೋಡುವ ಸ್ಥಿತಿ ಎದುರಾಗಿದೆ.

ಕಷ್ಟದ ನಡುವೆ ಭತ್ತದ ಕೃಷಿಯನ್ನು ಮುಂದುವರೆಸುತ್ತಿದ್ದರೂ ಇದರಿಂದ ಮತ್ತೆ ಮತ್ತೆ ನಷ್ಟ ಸಂಭವಿಸುತ್ತಿ ರುವುದರಿಂದ ಭತ್ತದ ಕೃಷಿಯನ್ನು ಮಾಡಲು ರೈತ ಹಿಂದೇಟು ಹಾಕುವಂತಾಗಿದೆ. ಮಧ್ಯಾಹ್ನದ ವೇಳೆ ಒಂದಷ್ಟು ಬಿಸಿಲು ಕಾಣಿಸಿಕೊಂಡರೂ ಮೂರು ಗಂಟೆಯ ನಂತರ ಸೂರ್ಯನ ಬೆಳಕು ಮಂಕಾಗುತ್ತಿರುವುದರಿಂದ ರೈತರ ಭತ್ತದ ಕಣದಲ್ಲಿ ಒಣಗಿಸಲು ಹಾಕಿರುವ ಭತ್ತ ಒಣಗದೆ ಕಷ್ಟ ಪಡುವಂತಾಗಿದೆ. ಕಿರುಗೂರು ಭಾಗದ ಆಲೆಮಾಡ ದೇವಯ್ಯ, ತಿಮ್ಮಯ್ಯ, ಗಣಪತಿ, ಪೂಣಚ್ಚ, ಸಾಗರ, ಪೊನ್ನಪ್ಪ, ವಿಜಯ, ವಿಠಲ, ಪೊಳಂಗು, ಮಡಿವಾಳರ ಅಶೋಕ್, ಚೆಪ್ಪುಡೀರ ಕುಟ್ಟಪ್ಪ, ಹರೀಶ್, ಬೋಪಣ್ಣ, ಸೋಮಣ್ಣ, ಪೊನ್ನಪ್ಪ, ಚೆಪ್ಪುಡೀರ ಬೋಸು, ಚೆಪ್ಪುಡೀರ ವಿವೇಕ್, ವಸಂತ, ಚೆಪ್ಪುಡೀರ ವಿಜಯ, ಸೇರಿದಂತೆ ಇನ್ನಿತರ ರೈತರು ಐನೂರಕ್ಕು ಅಧಿಕ ಏಕರೆಗಳಲ್ಲಿ ಭತ್ತದ ಕೃಷಿ ಮಾಡಿದ್ದು ಈ ಭಾಗದ ರೈತರಿಗೆ ಹೆಚ್ಚಾಗಿ ನಷ್ಟ ಸಂಭವಿಸಿದೆ.

ಭತ್ತ ಕಟಾವಿಗೆ ಯಾಂತ್ರಿಕೃತ ಯಂತ್ರವನ್ನು ಬಳಸಿದ್ದು ಮಳೆಯಿಂದಾಗಿ ಭತ್ತದ ಗದ್ದೆಯಲ್ಲಿ ಈ ಯಂತ್ರದಿಂದ ನಿಗದಿತ ಸಮಯದಲ್ಲಿ ಕೆಲಸ ಮಾಡಲು ಸಾಧ್ಯವಾಗುತ್ತಿಲ್ಲ. ಗಂಟೆಗೆ 2800 ನೀಡಬೇಕಾದ ಈ ಯಂತ್ರದ ಕೆಲಸಕ್ಕೆ ಇದೀಗ ಮಳೆಯಿಂದಾಗಿ ದುಪ್ಪಟ್ಟು ದರ ನೀಡುವಂತಾಗಿದೆ. ಬಿಸಿಲಿನ ತಾಪವು ಕಡಿಮೆ ಇರುವುದರಿಂದ ಭತ್ತಗಳನ್ನು ಒಣಗಿಸಲು ಸಾಧ್ಯವಾಗುತ್ತಿಲ್ಲ. ಒಟ್ಟಿನಲ್ಲಿ ಅನ್ನದಾತನಿಗೆ ಕಷ್ಟ ಒಂದಲ್ಲ ಒಂದು ರೀತಿಯಲ್ಲಿ ಎದುರಾಗುತ್ತಿದ್ದು ಸಂಕಷ್ಟಕ್ಕೆ ಸಿಲುಕುವÀಂತಾಗಿದೆ.