ವೀರಾಜಪೇಟೆ, ಡಿ. 9: ನಗರದ ಕ್ರಿಕೆಟ್ ಹಬ್ಬವೆಂದು ಖ್ಯಾತಿ ಪಡೆದ ವೀರಾಜಪೇಟೆ ಪ್ರೀಮಿಯರ್ ಲೀಗ್ ಸತತ ಆರು ದಿನ ಕ್ರೀಡಾ ಪ್ರೇಮಿಗಳಿಗೆ ಕ್ರಿಕೆಟ್ ಆಟದ ಮನೋರಂಜನೆ ನೀಡಿ ಮುಕ್ತಾಯ ಕಂಡಿತು.
ವೀರಾಜಪೇಟೆ ನಗರದ ಯಂಗ್ ಬಾಯ್ಸ್ ಸಂಸ್ಥೆಯ ಉತ್ಸಾಹಿ ಯುವಕರ ತಂಡದಿಂದ ನಗರದ ಸಂತ ಅನ್ನಮ್ಮ ಶಾಲಾ ಮೈದಾನದಲ್ಲಿ ಅಯೋಜಿಸಲಾಗಿದ್ದ ಆರು ದಿನಗಳ ಕಾಲ ನಡೆದ ವೀರಾಜಪೇಟೆ ಪ್ರೀಮಿಯರ್ ಲೀಗ್ ಮೂರನೇ ಆವೃತ್ತಿಯ ಪಂದ್ಯಾವಳಿ ನಡೆಯಿತು.
ಸಮರೋಪ ಸಮಾರಂಭಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡಿದ ಸಂತ ಅನ್ನಮ್ಮ ದೇವಾಲಯದ ಧರ್ಮಗುರುಗಳಾದ ರೆ.ಫಾ. ಮುದಲೈ ಮುತ್ತು ಅವರು ದೇಶವೇ ಇಂದು ಕೋವಿಡ್ ಸೋಂಕಿನಿಂದ ತತ್ತರಿಸಿದ್ದು, ಕೋವಿಡ್ನ ನಡುವೆಯು ಕ್ರೀಡೆಯ ಆಯೋಜನೆಯು ಉತ್ತಮವಾಗಿ ಮೂಡಿಬಂದಿದೆ ಎಂದರು.
ವೀರಾಜಪೇಟೆ ಆರಕ್ಷಕ ವೃತ್ತ ನೀರಿಕ್ಷಕರಾದ ಕ್ಯಾತೆಗೌಡ ಅವರು ಮಾತನಾಡಿ; ಯುವಕರು ದುಶ್ಚಟಗಳಿಗೆ ಬಲಿಯಾಗದೆ ಕ್ರೀಡೆಯಲ್ಲಿ ಹೆಚ್ಚು ತೊಡಗಿಸಿಕೊಂಡಲ್ಲಿ ಮಾದಕ ವಸ್ತುಗಳಿಂದ ದೂರವಾಗಬಹುದು ಎಂದು ನುಡಿದರು.
ಅಂತರ್ರಾಷ್ಟ್ರೀಯ ರಗ್ಬಿ ಆಟಗಾರ ಮಾದಂಡ ತಿಮ್ಮಯ್ಯ ಅವರು ಮಾತನಾಡಿ; ಕ್ರೀಡಾ ಕ್ಷೇತ್ರದಲ್ಲಿ ವಿಪುಲ ಅವಕಾಶಗಳಿವೆ. ಸದುಪಯೋಗ ಪಡಿಸಿಕೊಳ್ಳಲು ಆಟಗಾರರಿಗೆ ಪದವಿ ಶಿಕ್ಷಣದ ಕೊರತೆಯಿರುವುದು ಕಂಡುಬಂದಿದೆ. ಕ್ರೀಡೆಯೊಂದಿಗೆ ಶಿಕ್ಷಣಕ್ಕೆ ಓತ್ತು ನೀಡಿದಲ್ಲಿ ಪ್ರತಿಭೆಗೆ ತಕ್ಕಂತೆ ಉದ್ಯೋಗ ತಮ್ಮನ್ನು ಅರಸಿ ಬರುತ್ತದೆ. ಶಿಕ್ಷಣದಿಂದ ವಂಚಿತರಾಗದೆ. ಪದವಿಶಿಕ್ಷಣದತ್ತ ಗಮನ ಹರಿಸಿ ಎಂದು ಕ್ರೀಡಾಪಟುಗಳಿಗೆ ಕರೆ ನೀಡಿದರು.
ವೇದಿಕೆಯಲ್ಲಿ ಕ್ರೇಡೊ ಮೆಡಿಕಲ್ ಸೆಂಟರ್ನ ವ್ಯವಸ್ಥಾಪಕರು, ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಸುಶ್ಮೀತಾ ಮಹೇಶ್, ಸದಸ್ಯ ಡಿ.ಪಿ. ರಾಜೇಶ್ ಪದ್ಮನಾಭ, ಉಂಬಳ ಮನೆಯ ಮಾಲೀಕ ಬಿ.ಜೆ. ಬೋಪಣ್ಣ ಮತ್ತು ಆಯೋಜಕರಾದ ಇಂತಿಯಾಜ್, ನಿತೀನ್ ಲೇಪು, ಶವಾಜ್ ಮಲ್ಲಿ, ಮತ್ತು ಅಭಿಷೇಕ್ ಮೊದಲಾದವರು ಉಪಸ್ಥಿತರಿದ್ದರು.
ನವೆಂಬರ್ 29 ರಂದು ಆರಂಭವಾದ ವೀರಾಜಪೇಟೆ ಪ್ರೀಮಿಯರ್ ಕ್ರಿಕೆಟ್ ಲೀಗ್ನಲ್ಲಿ ಒಟ್ಟು 14 ತಂಡಗಳು ಭಾಗವಹಿಸಿದ್ದವು. ಇದೇ ಮೊದಲ ಬಾರಿಗೆ ಎಲ್ಲಾ ಪಂದ್ಯಾಟಗಳನ್ನು ಯುಟ್ಯೂಬ್ನಲ್ಲಿ ನೇರ ಪ್ರಸಾರ ವ್ಯವಸ್ಥೆ ಮಾಡಲಾಗಿತ್ತು. ಪಂದ್ಯಾಟದ ವೀಕ್ಷಕ ವಿವರಣೆ, ತೀರ್ಪುಗಾರರು ಅಂಕಿಅಂಶಗಾರರನ್ನು ಬೆಂಗಳೂರಿನ ಕ್ರಿಕ್ ಶೇ ಸಂಸ್ಥೆಗೆ ವಹಿಸಲಾಗಿತ್ತು. ಪ್ಲೇ ಆಫ್ನಲ್ಲಿ ಅರ್ಹತಾ ಪಂದ್ಯಾಟದ ಮೊದಲ ಪಂದ್ಯ ಕೌ ಬಾಯ್ಸ್ ತಂಡ ಮತ್ತು ಟೀಮ್ ಸ್ಪೀರಿಟ್ ತಂಡಗಳ ಮಧ್ಯೆ ಪಂದ್ಯ ನಡೆದು, ಕೌ ಬಾಯ್ಸ್ ತಂಡವನ್ನು ಮಣಿಸಿ ಫೈನಲ್ ಪಂದ್ಯಕ್ಕೆ ನೇರ ಆರ್ಹತೆ ಪಡೆಯಿತು. ದ್ವಿತೀಯ ಪಂದ್ಯ ಪರಾಜಿತ ತಂಡಗಳಾದ ಆದ್ಯಾ ಕ್ರಿಕೆಟರ್ಸ್ ಮತ್ತು ಟೀಮ್ ಮಾಹಾಮೇಳ ತಂಡಗಳ ನಡುವೆ ನಡೆದು ಮಾಹಾಮೇಳ ತಂಡವು ಆದ್ಯಾ ಕ್ರಿಕೆಟರ್ಸ್ ತಂಡವನ್ನು ಮಣಿಸಿ ಮುಂದಿನ ಸುತ್ತಿಗೆ ಅರ್ಹತೆಯನ್ನು ಪಡೆಯಿತು.
ದ್ವಿತೀಯ ಆರ್ಹತಾ ಪಂದ್ಯಾಟವು ಕೌ ಬಾಯ್ಸ್ ಮತ್ತು ಟೀಮ್ ಮಾಹಾಮೆಳ ತಂಡಗಳ ನಡುವೆ ನಡೆದು ಕೌ ಬಾಯ್ಸ್ ತಂಡ ಮಾಹಾಮೇಳ ತಂಡವನ್ನು ಮಣಿಸಿ ಫೈನಲ್ ಪಂದ್ಯಾಟಕ್ಕೆ ಅರ್ಹತೆ ಪಡೆಯಿತು. ಫೈನಲ್ ಪಂದ್ಯಾಟದಲ್ಲಿ ಮೊದಲಿಗೆ ಬ್ಯಾಟಿಂಗ್ ಮಾಡಿದ ಕೌ ಬಾಯ್ಸ್ ತಂಡ 8 ಒವರ್ಗಳಲ್ಲಿ 57 ರನ್ಗಳನ್ನು ಪೇರಿಸಿತು. ನಂತರದಲ್ಲಿ ಟೀಮ್ ಸ್ಪಿರಿಟ್ ತಂಡವು ನಿಗದಿತ 8 ಒವರ್ಗಳಲ್ಲಿ ಒಂದು ಒವರ್ ಉಳಿಕೆಯೊಂದಿಗೆ 58 ರನ್ ಪಡೆದು ಜಯಗಳಿಸಿತು.
ಪಂದ್ಯ ಪುರುಷೋತ್ತಮ ಪ್ರಶಸ್ತಿಯನ್ನು ಟೀಮ್ ಸ್ಪಿರಿಟ್ ತಂಡದ ಸೋಮಣ್ಣ ಪಡೆದುಕೊಂಡರು. ಸರಣಿ ಪಂದ್ಯಾಟದ ಸರಣಿ ಪುರುಷೋತ್ತಮ ಪ್ರಶಸ್ತಿಯನ್ನು ಕೌ ಬಾಯ್ಸ್ ತಂಡದ ರಜಾಕ್ ಪಡೆದುಕೊಂಡರು.
ಮೂರನೇ ಆವೃತ್ತಿಯಲ್ಲಿ ಜಯಗಳಿಸಿ ಟೀಮ್ ಸ್ಪಿರಿಟ್ ತಂಡವು ಆಕರ್ಷಕ ಟ್ರೋಫಿಯೊಂದಿಗೆ 70 ಸಾವಿರ ನಗದು ಮತ್ತು ವೈಯುಕ್ತಿಕ ಪ್ರಶಸ್ತಿಗಳನ್ನು ಪಡೆದುಕೊಂಡಿತು. ಫೈನಲ್ ಪಂದ್ಯಾಟದಲ್ಲಿ ಪರಾಜಿತವಾದ ಕೌ ಬಾಯ್ಸ್ ತಂಡವು ಟ್ರೋಫಿಯೊಂದಿಗೆ 50 ಸಾವಿರ ನಗದು ಮತ್ತು ವೈಯುಕ್ತಿಕ ಪ್ರಶಸ್ತಿಗಳನ್ನು ಪಡೆಯಿತು.