ಕುಶಾಲನಗರ, ಡಿ. 9: ಕುಶಾಲನಗರ ಗಣಪತಿ ದೇವಾಲಯ ವಾರ್ಷಿಕ ಜಾತ್ರೋತ್ಸವ ಅಂಗವಾಗಿ ತೆಪ್ಪೋತ್ಸವ ಕಾರ್ಯಕ್ರಮ ನಡೆಯಿತು. ದೇವಾಲಯದಿಂದ ಉತ್ಸವ ಮೂರ್ತಿಯನ್ನು ಅಲಂಕೃತ ಮಂಟಪದಲ್ಲಿ ಕುಳ್ಳಿರಿಸಿ ರಥಬೀದಿ ಮೂಲಕ ತೆರಳಿ ನಂತರ ಕಾವೇರಿ ನದಿಯಲ್ಲಿ ದೇವರನ್ನು ರ್ಯಾಫ್ಟರ್ ಮೂಲಕ ಪ್ರದಕ್ಷಿಣೆ ನಡೆಸಲಾಯಿತು.

ಈ ಸಂದರ್ಭ ಪ್ರಧಾನ ಅರ್ಚಕ ಆರ್.ಕೆ. ನಾಗೇಂದ್ರ ನೇತೃತ್ವದಲ್ಲಿ ರಾಘವೇಂದ್ರ ಆಚಾರ್ ಅವರು ಮತ್ತು ತಂಡದ ಸದಸ್ಯರು ವಿಶೇಷ ಪೂಜಾ ಕಾರ್ಯಕ್ರಮ ನೆರವೇರಿಸಿದರು.

ಸೇವಾರ್ಥದಾರರಾದ ದಿ. ಆರ್. ನಂಜುಂಡರಾಜು ದಂಪತಿಗಳು ಜ್ಞಾಪಕಾರ್ಥವಾಗಿ ಅವರ ಮಕ್ಕಳಾದ ಎನ್. ನವೀನ್‍ಕುಮಾರ್, ಎನ್. ನಿರಂಜನ್‍ಕುಮಾರ್ ಸೇವಾರ್ಥದಾರರಾಗಿ ಪ್ರಸಾದ ವಿನಿಯೋಗ ಮಾಡಿದರು. ಈ ಸಂದರ್ಭ ದೇವಾಲಯ ಕಾರ್ಯಕಾರಿ ಮಂಡಳಿ ಅಧ್ಯಕ್ಷ ವಿ.ಎನ್. ವಸಂತಕುಮಾರ್, ವಿ.ಡಿ. ಪುಂಡರೀಕಾಕ್ಷ ಮತ್ತಿತರರು ಇದ್ದರು.

ಜಾತ್ರೆಯ ಅಂಗವಾಗಿ ಕಳೆದ 9 ದಿನಗಳಿಂದ ನಡೆದ ಧಾರ್ಮಿಕ ವಿಧಿವಿಧಾನಗಳು ಬುಧವಾರದಂದು ಅಂತಿಮಗೊಂಡಿದ್ದು ಗಣಪತಿಗೆ ಕಾವೇರಿ ನದಿಯಲ್ಲಿ ತೀರ್ಥಸ್ನಾನ ನಡೆಸಿ ನಂತರ ಧ್ವಜ ಅವರೋಹಣ ನಂತರ ಮಹಾಮಂಗಳಾರತಿ, ತೀರ್ಥಪ್ರಸಾದ ವಿನಿಯೋಗದೊಂದಿಗೆ ಈ ಬಾರಿಯ ರಥೋತ್ಸವ ಮತ್ತು ಉತ್ಸವ ಕಾರ್ಯಕ್ರಮಗಳಿಗೆ ತೆರೆ ಬಿದ್ದಿದೆ.