106 ಮಕ್ಕಳ ಶಾಲಾ ಶುಲ್ಕ ಪಾವತಿ

ನಮ್ಮ ದೇಶದಲ್ಲಿ ಹಲವಾರು ಸಂಘ ಸಂಸ್ಥೆಗಳು, ಉದ್ಯಮಿಗಳು, ರಾಜಕಾರಣಿಗಳು ಹಾಗೂ ಇನ್ನಿತರ ಗಣ್ಯರು ಬಡ ಜನರಿಗೆ ಸಹಾಯವನ್ನು ವಿವಿಧ ರೀತಿಯಲ್ಲಿ ಮಾಡುವುದನ್ನು ನೋಡಿದ್ದೇವೆ. ಆದರೆ ಇಲ್ಲೊಬ್ಬ ಯುವಕ ತನ್ನ ಸಣ್ಣ ವಯಸ್ಸಿನಲ್ಲಿಯೇ ಸಾಧನೆಯನ್ನು ಮಾಡಿ ಎಲ್ಲರ ಮೆಚ್ಚುಗೆಗೆ ಪಾತ್ರನಾಗಿದ್ದಾನೆ. ಮೂಲತಃ ವೀರಾಜಪೇಟೆಯ ಯುವಕ ನೀಲ್ ಎಂ. ಪ್ರಕಾಶ್ ಬೆಂಗಳೂರಿನ ಸೆಂಟ್ ಜೋಸೆಫರ ಬಾಲಕರ ಸಂಸ್ಥೆಯ ದ್ವಿತೀಯ ಪಿ. ಯು. ವಿದ್ಯಾರ್ಥಿಯಾಗಿದ್ದು, ಈತ ಬೆಂಗಳೂರಿನಲ್ಲಿರುವ ತನ್ನ ಸ್ನೇಹಿತರು, ಹಿತೈಷಿಗಳು ಹಾಗೂ ವಿವಿಧ ವ್ಯಕ್ತಿಗಳಿಂದ ಮೊತ್ತವೊಂದನ್ನು ಸಂಗ್ರಹಿಸಿದ್ದಾನೆ. ಹಾಗೆ ಸಂಗ್ರಹಿಸಿದ ಹಣದಲ್ಲಿ ತನ್ನ ಹುಟ್ಟೂರಾದ ವೀರಾಜಪೇಟೆಯ ಸಂತ ಅನ್ನಮ್ಮ ವಿದ್ಯಾಸಂಸ್ಥೆಯ ಪ್ರಾಥಮಿಕ ಮತ್ತು ಪ್ರೌಢ ಶಾಲೆಯ ಸುಮಾರು 106 ವಿದ್ಯಾರ್ಥಿಗಳ ಶಾಲಾ ಶುಲ್ಕವನ್ನು ಪಾವತಿಸಿ ಎಲ್ಲರ ಮೆಚ್ಚುಗೆಗೆ ಪಾತ್ರನಾಗಿದ್ದಾನೆ. ಬಡ ಮತ್ತು ಮಧ್ಯಮ ವರ್ಗದ ಕೆಲವು ವಿದ್ಯಾರ್ಥಿಗಳು ಕೋವಿಡ್ 19 ರ ಕಾರಣದಿಂದ ಶಾಲಾ ಶುಲ್ಕ ಪಾವತಿಸಲು ಕಷ್ಟಕರವಾದ ಸಂದರ್ಭದಲ್ಲಿ ನೀಲ್. ಎಂ. ಪ್ರಕಾಶ್ ಈ ವಿದ್ಯಾರ್ಥಿಗಳ ನೆರವಿಗೆ ಧಾವಿಸಿದ್ದಾನೆ. ಮಾತ್ರವಲ್ಲದೆ ಅವರ ಶಿಕ್ಷಣಕ್ಕೆ ನೆರವಾಗುವುದರ ಜೊತೆಯಲ್ಲಿ ಸಣ್ಣ ವಯಸ್ಸಿನಲ್ಲಿಯೇ ಸಮಾಜಮುಖಿ ಕಾರ್ಯವನ್ನು ಮಾಡಿ ಇತರರಿಗೂ ಮಾದರಿಯಾಗಿದ್ದಾನೆ. ವಾಣಿಜ್ಯ ಶಾಸ್ತ್ರದ ಈ ವಿದ್ಯಾರ್ಥಿಯು ಪ್ರತಿಭಾವಂತನಾಗಿದ್ದು, ಜೀವಶಾಸ್ತ್ರದಲ್ಲಿ ಬಹಳ ಆಸಕ್ತಿಯನ್ನು ಹೊಂದಿದ್ದಾನೆ. ಛಾಯಾಚಿತ್ರಗಳನ್ನು ತೆಗೆಯುವುದು, ಸಿನಿಮಾದಲ್ಲಿಯೂ ಆಸಕ್ತಿಯನ್ನು ಹೊಂದಿದ್ದಾನೆ. ಈತ ಬ್ಯಾಡ್ಮಿಂಟನ್‍ನಲ್ಲೂ ಮುಂದಿದ್ದು ಕಾಲೇಜಿನ ಬ್ಯಾಡ್ಮಿಂಟನ್‍ನ ಚಾಂಪಿಯನ್ ಆಗಿದ್ದಾನೆ. ವೀರಾಜಪೇಟೆಯ ಮ್ರಿದುಲ್ ಪ್ರಕಾಶ್ ಅವರ ಮಗ. ಈತನ ಅಜ್ಜ ಸಿ.ಪಿ. ಪ್ರಕಾಶ್ ಅವರು ಕೂಡ ಅನೇಕ ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಂಡವರು. ಇವರು ವೈಷ್ಣವಿ ಕನ್‍ಸ್ಟ್ರಕ್ಷನ್‍ನ ಮ್ಯಾನೇಜಿಂಗ್ ಪಾಟ್ರ್ನರ್ ಹಾಗೂ ಪ್ರೈವೋ ಟೆಕ್ಕಾರ್ಪ್ ಪ್ರೈವೇಟ್ ಲಿಮಿಟೆಡ್ ನಲ್ಲೂ ಸಹಭಾಗಿಗಳಾಗಿದ್ದು, ವೈಷ್ಣವಿ ಕಾಫಿ ಎಲ್‍ಎಲ್‍ಪಿಯ ಸಹಭಾಗಿಗಳು ಮತ್ತು ಕೆದಮುಳ್ಳೂರಿನ ವೈಷ್ಣವಿ ಎಸ್ಟೇಟ್‍ನ ಮಾಲೀಕರು ಆಗಿದ್ದಾರೆ. ವೀರಾಜಪೇಟೆಯ ಸಂತ ಅನ್ನಮ್ಮ ಶಾಲೆಯ ಹಳೆಯ ವಿದ್ಯಾರ್ಥಿಯಾಗಿರುವ ಇವರು ಕೂಡ ಸಂಸ್ಥೆಗೆ ಹಲವು ರೀತಿಯಲ್ಲಿ ನೆರವಾಗಿದ್ದಾರೆ. ಸಂತ ಅನ್ನಮ್ಮ ವಿದ್ಯಾಸಂಸ್ಥೆಗಳ ಆಟದ ಮೈದಾನದಲ್ಲಿರುವ ಒಳಾಂಗಣ ಸಭಾಂಗಣದ ನಿರ್ಮಾಣಕ್ಕೆ ಮತ್ತು ಚರ್ಚ್‍ನ ಜೀರ್ಣೋದ್ಧಾರಕ್ಕೂ ಸಹಾಯವನ್ನು ನೀಡಿ ತಾನು ಶಿಕ್ಷಣ ಪ್ರೇಮಿ ಎಂದು ಸಾಬೀತುಪಡಿಸಿದ್ದಾರೆ. ಮ್ರಿದುಲ್ ಪ್ರಕಾಶ್ ಅವರು ಸಹ ಯು ಎಸ್ ಎ ನಲ್ಲಿ ಎಂ ಬಿ ಎ ವ್ಯಾಸಂಗವನ್ನು ಮಾಡಿ ಸಮಾಜಸೇವೆಯಲ್ಲಿಯೂ ಗುರುತಿಸಿಕೊಂಡಿರುತ್ತಾರೆ. ಸಿ. ಪಿ. ಪ್ರಕಾಶ್ ರವರ ತಂದೆ ಪಿ. ಕುನ್ನಿ ಕಣ್ಣನ್‍ರವರು ಕೂಡ ಕಾಫಿ ಬೆಳೆಗಾರರು ಹಾಗೂ ದಾನಿಗಳು. ಹೀಗೆ ಸಿ.ಪಿ. ಪ್ರಕಾಶ್ ಅವರ ಕುಟುಂಬವು ನಾಲ್ಕು ತಲೆಮಾರುಗಳಿಂದ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿದ್ದು ಗಮನಾರ್ಹವಾಗಿದೆ. ಈ ವಿದ್ಯಾ ಸಂಸ್ಥೆಗೆ ಎಲ್ಲಾ ರೀತಿಯಲ್ಲಿಯೂ ನೆರವಾಗಿದ್ದಾರೆ. ಕೋವಿಡ್ 19ರ ಪರಿಣಾಮವಾಗಿ ಆರ್ಥಿಕವಾಗಿ ಕುಸಿತ ಕಂಡಿರುವ ಈ ಸಂದರ್ಭದಲ್ಲಿ ಯುವಕ ನೀಲ್ ಪ್ರಕಾಶ್ ಮಾಡಿದಂತಹ ಕಾರ್ಯ ಸಂಸ್ಥೆಯಲ್ಲಿ, ಪೆÇೀಷಕರು ಹಾಗೂ ಸಾರ್ವಜನಿಕ ವಲಯದಲ್ಲೂ ಮೆಚ್ಚುಗೆಗೆ ಪಾತ್ರವಾಗಿದೆ. ಎಲೆಮರೆಕಾಯಿಯಂತಿರುವ ನೀಲ್ ಪ್ರಕಾಶನ ಸಮಾಜಮುಖಿ ವ್ಯಕ್ತಿತ್ವವು ಆತನಿಗೆ ಮತ್ತಷ್ಟು ಸೇವೆಯನ್ನು ಸಲ್ಲಿಸಲು ಪ್ರೇರಣೆ ಯಾಗಲಿ ಮುತ್ತಾತ, ತಾತ ಮತ್ತು ತಂದೆಯ ರೀತಿಯಲ್ಲೇ ಈತ ಸಮಾಜ ಸೇವಕನಾಗಿ ಹೊರಹೊಮ್ಮಲಿ. ಕೊಡುಗೈ ದಾನಿಗಳಾದ ಸಿ. ಪಿ. ಪ್ರಕಾಶ್ ಅವರ ಕುಟುಂಬವು ಇತರರಿಗೂ ಮಾದರಿಯಾಗಲಿ ಎಂದು ಹಾರೈಸೋಣ.

-ರೆ.ಫಾ. ಮದುಲೈಮುತ್ತು

ವ್ಯವಸ್ಥಾಪಕರು, ಸಂತ ಅನ್ನಮ್ಮ ವಿದ್ಯಾಸಂಘ