ಭಾರತ ಬಂದ್‍ಗೆ ನೀರಸ ಪ್ರತಿಕ್ರಿಯೆ

ನವದೆಹಲಿ, ಡಿ. 8: ದೇಶಾದ್ಯಂತ ಮಂಗಳವಾರ ರೈತ ಸಂಘಟನೆಗಳು ಕರೆ ನೀಡಿದ್ದ ಭಾರತ ಬಂದ್‍ಗೆ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ. ಸಾಮಾನ್ಯ ಜನಜೀವನ, ವ್ಯಾಪಾರ-ವಹಿವಾಟುಗಳು ಎಂದಿನಂತೆ ಮುಂದುವರಿದಿತ್ತು. ಕೃಷಿ ಸುಧಾರಣೆ ಕಾಯ್ದೆಗಳನ್ನು ವಿರೋಧಿಸಿ ರೈತ ಸಂಘಟನೆಗಳು ಕೈಗೊಂಡಿರುವ ಭಾರತ ಬಂದ್‍ನಲ್ಲಿ ಕರ್ನಾಟಕ ಸೇರಿದಂತೆ ಹಲವು ರಾಜ್ಯಗಳಲ್ಲಿ ಸಂಘಟನೆಗಳು ಅಲ್ಲಲ್ಲಿ ಪ್ರತಿಭಟನೆ, ರಸ್ತೆತಡೆ, ರೈಲ್ ರೋಕೋ ಅಂಗಡಿ-ಮುಂಗಟ್ಟುಗಳನ್ನು ಒತ್ತಾಯಪೂರ್ವಕವಾಗಿ ಬಂದ್ ಮಾಡಿಸುವುದು ಬಿಟ್ಟರೆ ಬೇರೆ ಯಾವುದೇ ಬದಲಾವಣೆ ಕಂಡುಬಂದಿಲ್ಲ. ಖಾಸಗಿ, ಸರ್ಕಾರಿ ಬಸ್ ಸಂಚಾರ, ಇತರ ವಾಹನಗಳ ಸಂಚಾರ ಸೇವೆ ಎಂದಿನಂತೆ ಇಂದು ಕೂಡ ಮುಂದುವರಿದಿತ್ತು. ಆದರೆ ಭದ್ರತೆ, ಕಾನೂನು-ಸುವ್ಯವಸ್ಥೆ ಕ್ರಮವಾಗಿ ನಗರಗಳಲ್ಲಿ, ಮಾರುಕಟ್ಟೆ, ಜನದಟ್ಟಣೆ ಪ್ರದೇಶಗಳಲ್ಲಿ ಪೆÇಲೀಸ್ ಭದ್ರತೆಯನ್ನು ಬಿಗಿಗೊಳಿಸಲಾಗಿತ್ತು. ಮೋದಿ ಸರ್ಕಾರ ನಮ್ಮ ಬೇಡಿಕೆಗಳನ್ನು ಒಪ್ಪಿ ಜಾರಿಗೆ ತರಲೇಬೇಕು. ಹೊಸ ಸುಧಾರಣಾ ಕಾಯ್ದೆ ಎಂದು ಹೇಳುವ ಸರ್ಕಾರ ಅವುಗಳನ್ನು ವಾಪಸ್ ಪಡೆಯುವುದೊಂದೇ ನಮ್ಮ ಬೇಡಿಕೆ ಎಂದು ರೈತ ನಾಯಕ ಬಲ್ಬಿರ್ ಸಿಂಗ್ ರಾಜೇವಾಲ್ ತಿಳಿಸಿದ್ದಾರೆ. ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ರೈತಪರ ಸಂಘಟನೆಗಳು ರಸ್ತೆಗಿಳಿದು ಪ್ರತಿಭಟನೆ ಮಾಡುವುದು ಬಿಟ್ಟರೆ ಅಗತ್ಯ ವಸ್ತುಗಳು, ವಾಹನ ಸಂಚಾರ, ತುರ್ತು ಸೇವೆ ಯಾವುದಕ್ಕೂ ತೊಂದರೆಯಾಗಿಲ್ಲ.

ರೈತರ ವಿರೋಧದ ನಡುವೆಯೂ ಮಸೂದೆ ಅಂಗೀಕಾರ

ಬೆಂಗಳೂರು, ಡಿ. 8: ರೈತ ಸಂಘಟನೆಗಳ ಪ್ರತಿಭಟನೆ ಹಾಗೂ ಕಾಂಗ್ರೆಸ್‍ನ ತೀವ್ರ ವಿರೋಧದ ನಡುವೆಯೇ ಕರ್ನಾಟಕ ಭೂ ಸುಧಾರಣಾ ತಿದ್ದುಪಡಿ ಮಸೂದೆಯನ್ನು ಮಂಗಳವಾರ ವಿಧಾನ ಪರಿಷತ್‍ನಲ್ಲಿ ಅಂಗೀಕರಿಸಲಾಯಿತು. ಹಿಂದಿನ ಅಧಿವೇಶನದಲ್ಲಿ ಭೂ ಸುಧಾರಣಾ ತಿದ್ದುಪಡಿ ಮಸೂದೆಗೆ ವಿಧಾನ ಪರಿಷತ್ ಒಪ್ಪಿಗೆ ದೊರಕಿರಲಿಲ್ಲ. ಹೀಗಾಗಿ ಸೋಮವಾರ ಆರಂಭವಾದ ಅಧಿವೇಶನದಲ್ಲಿ ಕಂದಾಯ ಸಚಿವ ಆರ್. ಅಶೋಕ ಅವರು ಮತ್ತೆ ಪರಿಷ್ಕøತ ಮಸೂದೆ ಮಂಡಿಸಿದ್ದರು. ಮಸೂದೆಯ ಕುರಿತು ವಿಸ್ತೃತ ಚರ್ಚೆ ಆಗಬೇಕೆಂದು ಕಾಂಗ್ರೆಸ್ ಮತ್ತು ಜೆಡಿಎಸ್ ಸದಸ್ಯರು ಪಟ್ಟು ಹಿಡಿದ ಹಿನ್ನೆಲೆಯಲ್ಲಿ ಚರ್ಚೆಯ ನಂತರ ಇಂದು ಮಸೂದೆಯನ್ನು ಮತಕ್ಕೆ ಹಾಕಲಾಯಿತು. ವಿಧೇಯಕದ ಪರವಾಗಿ 31 ಮತ ಹಾಗೂ ವಿರುದ್ಧವಾಗಿ 21 ಮತಗಳು ಚಲಾವಣೆಯಾಗಿದ್ದು, ಜೆಡಿಎಸ್ ಬೆಂಬಲದೊಂದಿಗೆ ಮಸೂದೆ ಅಂಗೀಕರಿಸಲಾಗಿದೆ. ಇದರೊಂದಿಗೆ ಭೂಮಿ ಮಾರಲು ಹಾಗೂ ಖರೀದಿಸಲು ಇದ್ದ ದೊಡ್ಡ ಬೇಲಿಯೊಂದನ್ನು ಕಿತ್ತುಹಾಕಿದಂತಾಗಿದ್ದು, ಇನ್ನುಮುಂದೆ ಯಾರೂ ಬೇಕಾದರೂ ಕೃಷಿ ಭೂಮಿ ಖರೀದಿಸಬಹುದಾಗಿದೆ. ಜೆಡಿಎಸ್ ವಿಧೇಯಕದ ಪರವಾಗಿ ಮತ ಚಲಾಯಿಸಿದ್ದಕ್ಕೆ ಬಿಜೆಪಿ ಸದಸ್ಯರು ಮೇಜು ಕುಟ್ಟಿ ಸ್ವಾಗತಿಸಿದರು. ಈ

ಚಿನ್ನದ ದರದಲ್ಲಿ ಭಾರೀ ಏರಿಕೆ

ನವದೆಹಲಿ, ಡಿ. 8: ಚಿನ್ನ ಹಾಗೂ ಬೆಳ್ಳಿಯ ದರದಲ್ಲಿ ಭಾರೀ ಏರಿಕೆಯಾಗಿದೆ. ಚಿನ್ನದ ದರ 816 ರೂಪಾಯಿ ಏರಿಕೆಯಾಗಿದ್ದು ಪ್ರತಿ 10 ಗ್ರಾಮ್ ಗೆ 49,430 ರೂಪಾಯಿ ಆಗಿದ್ದರೆ, ಬೆಳ್ಳಿಯ ದರ 3,063 ರೂಪಾಯಿ ಏರಿಕೆ ಕಂಡಿದ್ದು ಕೆ.ಜಿ. ಬೆಳ್ಳಿ 61,298 ರೂಪಾಯಿಗಳಿಂದ 64,361 ಕ್ಕೆ ಏರಿಕೆಯಾಗಿದೆ. ಚಿನ್ನದ ಈ ಹಿಂದಿನ ದರ 10 ಗ್ರಾಮ್‍ಗೆ 48,614 ರೂಪಾಯಿಗಳಷ್ಟಿತ್ತು. ದೆಹಲಿಯಲ್ಲಿ 24 ಕ್ಯಾರೆಟ್ ಚಿನ್ನದ ದರ 816 ರೂಪಾಯಿಗಳಷ್ಟು ಏರಿಕೆಯಾಗಿದ್ದು, ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಏರಿಕೆ ಕಂಡಿದೆ ಎಂದು ಹೆಚ್‍ಡಿಎಫ್‍ಸಿ ಸೆಕ್ಯುರಿಟೀಸ್‍ನ ವಿಶ್ಲೇಷಕ ತಪನ್ ಪಟೇಲ್ ಹೇಳಿದ್ದಾರೆ. ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಚಿನ್ನದ ಹಸಿರು ಬಣ್ಣದಲ್ಲಿದ್ದು, ಔನ್ಸ್‍ಗೆ 1,864 ಯುಎಸ್ ಡಾಲರ್ಸ್ ನಷ್ಟಿದ್ದರೆ, ಬೆಳ್ಳಿಯ ದರ ಪ್ರತಿ ಔನ್ಸ್‍ಗೆ 24.52 ಯುಎಸ್ ಡಾಲರ್ಸ್ ನಷ್ಟಿದೆ.

ಆಂಧ್ರದಲ್ಲಿ ನಿಗೂಢ ಕಾಯಿಲೆ

ವಿಜಯವಾಡ, ಡಿ. 8: ಪಶ್ಚಿಮ ಗೋದಾವರಿ ಜಿಲ್ಲೆಯ ಎಲೂರು ವ್ಯಾಪ್ತಿಯಲ್ಲಿ ನಿಗೂಢ ಕಾಯಿಲೆಯಿಂದ ಆಸ್ಪತ್ರೆಗೆ ದಾಖಲಾಗುತ್ತಿರುವ ರೋಗಿಗಳ ಸಂಖ್ಯೆ ಮಂಗಳವಾರವೂ ಹೆಚ್ಚುತ್ತಲೇ ಇದ್ದರೂ, ಪ್ರಕರಣಗಳ ಸಂಖ್ಯೆ ಸ್ಥಿರವಾಗಿ ಕಡಿಮೆಯಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಭಾನುವಾರ ಸಂಜೆ ನಿಧನರಾದ ವಿದ್ಯಾನಗರದ 45 ವರ್ಷದ ಶ್ರೀಧರ್ ಹೊರತುಪಡಿಸಿ ಯಾವುದೇ ಸಾವು-ನೋವು ಸಂಭವಿಸಿಲ್ಲ. ಏತನ್ಮಧ್ಯೆ, ದೆಹಲಿಯ ಏಮ್ಸ್‍ಗೆ ಕಳುಹಿಸಲಾದ ರಕ್ತದ ಮಾದರಿಗಳ ಮೇಲೆ ನಡೆಸಿದ ಪರೀಕ್ಷೆಗಳಲ್ಲಿ ನಿಕ್ಕಲ್ ಹಾಗೂ ಸೀಸದ ಅಂಶಗಳಿರುವುದು ಬಹಿರಂಗಗೊಂಡಿದೆ, ಇದು ನೀರು ಅಥವಾ ಹಾಲಿನ ಸೇವನೆಯ ಮೂಲಕ ರೋಗಿಗಳ ದೇಹಕ್ಕೆ ಪ್ರವೇಶಿಸಿರುವ ಸಾಧ್ಯತೆ ಇದೆ ಎಂದು ಶಂಕಿಸಲಾಗಿದೆ. ಆ ಎರಡು ಲೋಹಗಳ ಅಂಶ ನಾವು ದೆಹಲಿಯ ಏಮ್ಸ್‍ಗೆ ಕಳುಹಿಸಿದ ರಕ್ತದ ಮಾದರಿಗಳಲ್ಲಿ ಪತ್ತೆಯಾಗಿದೆ. ಈ ಎರಡೂ ಲೋಹಗಳ ಅಂಶ ಸಾಮಾನ್ಯಕ್ಕಿಂತ ಹೆಚ್ಚಾಗಿವೆ. ಸೀಸವು ನ್ಯೂರೋಟಾಕ್ಸಿನ್ ಆಗಿದ್ದು ನರಮಂಡಲದ ಮೇಲೆ ಪರಿಣಾಮ ಬೀರುತ್ತದೆ. ಆದಾಗ್ಯೂ, ಒಂದು ತೀರ್ಮಾನಕ್ಕೆ ಬರಲು ಇದಿನ್ನೂ ಸಾಧ್ಯವಾಗುವುದಿಲ್ಲ, ಏಮ್ಸ್‍ನ ವಿನಂತಿಯಂತೆ ನಾವು ಇನ್ನೂ 40 ಹಾಲು, ನೀರಿನ ಮಾದರಿಗಳನ್ನು ಕಳುಹಿಸಿದ್ದೇವೆ ಮತ್ತು ವರದಿಯನ್ನು ಪಡೆದ ನಂತರ, ನಿಗೂಢ ಕಾಯಿಲೆ ಕಾರಣವನ್ನು ಕಂಡುಹಿಡಿಯಲು ನಮಗೆ ಸಾಧ್ಯವಾಗಬಹುದು ಎಂದು ಎಲೂರು ಸರ್ಕಾರಿ ಜನರಲ್ ಆಸ್ಪತ್ರೆ ಅಧೀಕ್ಷಕ ಡಾ. ವಿ. ಮೋಹನ್ ತಿಳಿಸಿದರು.

ನಾಲ್ಕೇ ದಿನಕ್ಕೆ ಅಧಿವೇಶನ ಅಂತ್ಯ

ಬೆಂಗಳೂರು, ಡಿ. 8: ಕೊರೊನಾ ವೈರಸ್ ಹಿನ್ನೆಲೆ ವಿಧಾನಸಭೆಯ ಕಲಾಪವನ್ನು ತಾ. 10ಕ್ಕೆ ಅಂತ್ಯಗೊಳಿಸಲು ಕಲಾಪ ಸಲಹಾ ಸಮಿತಿ ಮಂಗಳವಾರ ತೀರ್ಮಾನಿಸಿದೆ. ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅವರ ನೇತೃತ್ವದಲ್ಲಿ ಇಂದು ನಡೆದ ಕಲಾಪ ಸಲಹಾ ಸಮಿತಿ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ನಿನ್ನೆಯಿಂದ ಆರಂಭವಾಗಿರುವ ಚಳಿಗಾಲದ ವಿಧಾನಮಂಡಲ ಅಧಿವೇಶನಕ್ಕೆ ಕಲಾಪದ ಮೊದಲ ದಿನವೇ ಸದನದಲ್ಲಿ ಖುರ್ಚಿಗಳು ಖಾಲಿ ಖಾಲಿಯಾಗಿದ್ದವು. ಹಲವು ಸಚಿವರು, ಆಡಳಿತ ಹಾಗೂ ವಿಪಕ್ಷಗಳ ಅನೇಕ ಸದಸ್ಯರು ಸದನಕ್ಕೆ ಗೈರು ಹಾಜರಾಗಿದ್ದರು. ತಾ. 15 ರವರೆಗೆ ಅಧಿವೇಶನ ನಡೆಯಬೇಕಿತ್ತು. ಆದರೆ ಗ್ರಾಮ ಪಂಚಾಯಿತಿ ಚುನಾವಣೆ ಹಾಗೂ ಕೊರೊನಾ ಹಿನ್ನೆಲೆ ಅಧಿವೇಶನವನ್ನು ನಾಲ್ಕೇ ದಿನಕ್ಕೆ ಮುಕ್ತಾಯಗೊಳಿಸಲು ಸರ್ಕಾರ ನಿರ್ಧರಿಸಿದೆ.

ಹಳ್ಳಿಗಳಿಗೆ ಹೈ ಸ್ಪೀಡ್ ಇಂಟರ್ನೆಟ್ ಸೇವೆ

ನವದೆಹಲಿ, ಡಿ. 8: ಮುಂದಿನ ಮೂರು ವರ್ಷಗಳಲ್ಲಿ ಭಾರತದ ಎಲ್ಲಾ ಹಳ್ಳಿಗಳಿಗೆ ಅಧಿಕ ವೇಗದ ಫೈಬರ್ ಡಾಟಾ ಇಂಟರ್ನೆಟ್ ಸಂಪರ್ಕ ಸೇವೆಯನ್ನು ಒದಗಿಸಲಾಗುವುದು ಎಂದು ಪ್ರಧಾನಿ ನರೇಂದ್ರ ಮೋದಿ ಭರವಸೆ ನೀಡಿದ್ದಾರೆ. ಭಾರತೀಯ ಮೊಬೈಲ್ ಕಾಂಗ್ರೆಸ್ (ಐಎಂಸಿ) 2020ನ್ನು ವೀಡಿಯೋ ಕಾನ್ಫರೆನ್ಸ್ ಮೂಲಕ ಉದ್ಘಾಟಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಮೂರು ವರ್ಷಗಳಲ್ಲಿ ದೇಶದ ಪ್ರತಿ ಹಳ್ಳಿಗೆ ಅಧಿಕ ವೇಗದ ಫೈಬರ್ ಆಪ್ಟಿಕ್ ಡಾಟಾ ಸಂಪರ್ಕ ಸೇವೆಯನ್ನು ಒದಗಿಸಲು ಕೇಂದ್ರ ಸರ್ಕಾರ ಕ್ರಮ ಕೈಗೊಳ್ಳಲಿದೆ ಎಂದು ಹೇಳಿದರು. ಮೊಬೈಲ್ ಉತ್ಪಾದನೆಯಲ್ಲಿ ಭಾರತ ದೇಶ ಅತ್ಯಂತ ಪ್ರಶಸ್ತನೀಯ ಸ್ಥಳವಾಗಿ ಮೂಡುತ್ತಿದ್ದು, ಭಾರತದ ಡಿಜಿಟಲ್ ತಂತ್ರಜ್ಞಾನ ವೇಗವಾಗಿ ಬೆಳೆಯುತ್ತಿದೆ. ಈ ಸಮಯದಲ್ಲಿ ಇಂಟರ್ನೆಟ್, ಮೊಬೈಲ್ ಸಂಪರ್ಕ ಸೇವೆ ಪ್ರಮುಖವಾಗಿದೆ. ನಾವು ಈಗಾಗಲೇ ಅಂಡಮಾನ್ ಮತ್ತು ನಿಕೋಬಾರ್ ದ್ವೀಪವನ್ನು ಫೈಬರ್ ಆಪ್ಟಿಕ್ ಕೇಬಲ್‍ನೊಂದಿಗೆ ಜೋಡಿಸಿದ್ದೇವೆ. ದೇಶದ ಹಲವು ಜಿಲ್ಲೆಗಳಲ್ಲಿ, ಈಶಾನ್ಯ ರಾಜ್ಯಗಳಲ್ಲಿ, ಲಕ್ಷದ್ವೀಪಗಳಲ್ಲಿ, ಫಿಕ್ಸ್‍ಲೈನ್ ಬ್ರಾಡ್‍ಬಾಂಡ್ ಸೇವೆಗಳನ್ನು ಮತ್ತು ಸಾರ್ವಜನಿಕ ವೈಫೈ ಹಾಟ್ ಸ್ಪಾಟ್‍ಗಳನ್ನು ನೀಡಲು ಸರ್ಕಾರ ಉತ್ಸುಕವಾಗಿದೆ ಎಂದರು.

ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್‍ಗೆ ಗೃಹ ಬಂಧನ

ನವದೆಹಲಿ, ಡಿ. 8: ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಅವರನ್ನು ಕೇಂದ್ರ ಸರ್ಕಾರ ಗೃಹ ಬಂಧನದಲ್ಲಿರಿಸಿದೆ ಎಂದು ಆಮ್ ಆದ್ಮಿ ಪಕ್ಷ ಆರೋಪಿಸಿದೆ. ಕೇಂದ್ರ ಸರ್ಕಾರದ ಕೃಷಿ ಕಾನೂನನ್ನು ವಿರೋಧಿಸಿ ರೈತರು ನಡೆಸುತ್ತಿರುವ ಪ್ರತಿಭಟನೆ ಹಿನ್ನೆಲೆ ನಿನ್ನೆ ದೆಹಲಿಯ ಸಿಂಗು ಗಡಿಯಲ್ಲಿ ಸಿಎಂ ಕೇಜ್ರಿವಾಲ್ ಅವರು ಪ್ರತಿಭಟನಾ ನಿರತ ರೈತರನ್ನು ಭೇಟಿ ಮಾಡಿದ್ದರು. ಈ ಬೆಳವಣಿಗೆ ಬೆನ್ನಲ್ಲೇ ಅರವಿಂದ್ ಕೇಜ್ರಿವಾಲ್ ಅವರನ್ನು ಗೃಹ ಬಂಧನದಲ್ಲಿರಿಸಲಾಗಿದೆ ಎಂದು ಆಮ್ ಆದ್ಮಿ ಪಕ್ಷ ಆರೋಪಿಸಿದೆ. ಅವರ ನಿವಾಸದೊಳಗೆ ಪ್ರವೇಶಿಸಲು ಯಾರಿಗೂ ಅನುಮತಿ ನೀಡುತ್ತಿಲ್ಲ ಎಂದು ಟ್ವೀಟ್ ಮಾಡಿದೆ.