ಮುಳ್ಳೂರು, ಡಿ. 8: ಶನಿವಾರಸಂತೆಯ ಶ್ರೀ ಬೀರಲಿಂಗೇಶ್ವರ ಪ್ರಬಲ ಭೈರವಿ ಪರಿವಾರ ದೇವರ ಸಮಿತಿಯಿಂದ ನಡೆದ ಸರ್ವಧರ್ಮ ಐಕ್ಯತೆ ಸಾರುವ 3ನೇ ವರ್ಷದ ದೇವರುಗಳ ವಾರ್ಷಿಕ ಪೂಜಾ ಮಹೋತ್ಸವ ಸೋಮವಾರ ಸಂಪನ್ನಗೊಂಡಿತು. ಸೋಮವಾರ ಬೆಳಿಗ್ಗೆ ಮಹಿಳೆಯರು ಪೂರ್ಣ ಕುಂಬ ಕಲಶದೊಂದಿಗೆ ಮೆರವಣಿಗೆಯಲ್ಲಿ ಬಂದು ಶ್ರೀ ಬೀರಲಿಂಗೇಶ್ವರ ಪ್ರಬಲ ಭೈರವಿ ದೇವಸ್ಥಾನದಲ್ಲಿ ಪೂರ್ಣಕಂಬ ಕಲಶವನ್ನಿಡಲಾಯಿತು. ಸೋಮವಾರ ಮುಂಜಾನೆ ದೇವಾಲಯದಲ್ಲಿ ಗಂಗಾಪೂಜೆ ಮತ್ತು ಗೋಪೂಜೆ ಯನ್ನು ನೆರವೇರಿಸಲಾಯಿತು. ನಂತರ ದೇವಾಲಯದಲ್ಲಿ ಹೋಮ ಹವನ ಸೇರಿದಂತೆ ವಿವಿಧ ಪೂಜಾ ವಿದಿ ವಿಧಾನ ನೆರವೇರಿಸಲಾಯಿತು. ಅಕ್ಕಪಕ್ಕದ ಗ್ರಾಮದ ಪರಿವಾರ ದೇವರುಗಳಿಗೂ ವಾರ್ಷಿಕ ವಿಶೇಷ ಪೂಜೆ ಸಲ್ಲಿಸುವ ಸಂಪ್ರದಾಯದಂತೆ ಬಿದರೂರು ಗ್ರಾಮದ ಊರೋಡಯ ದೇವರು ಮತ್ತು ಬ್ರಹ್ಮ, ವಿಷ್ಣು, ಮಹೇಶ್ವರ ದೇವರಿಗೆ ವಿಶೇಷ ಪೂಜೆ ಮಾಡಲಾಯಿತು. ಹೆಮ್ಮನೆ ಗ್ರಾಮದ ಮಾರಮ್ಮ ಮತ್ತು ಊರೊಡ ಯನಿಗೆ ಮತ್ತು ಗ್ರಾಮದ ಶ್ರೀ ಬಸವೇಶ್ವರ ದೇವರಿಗೆ ವಿಶೇಷ ಪೂಜೆ ಸಲ್ಲಿಸ ಲಾಯಿತು. ಬಳಿಕ ಪಟ್ಟಣದ ತ್ಯಾಗರಾಜ ಕಾಲೋನಿಯಲ್ಲಿರುವ ಶ್ರೀ ವಿಜಯ ವಿನಾಯಕ ದೇವರಿಗೆ, ಕೆಆರ್‍ಸಿ ಸರ್ಕಲ್‍ನಲ್ಲಿರುವ ಬನ್ನಿಮಂಟಪದಲ್ಲಿ ದೇವರಿಗೆ ವಿಶೇಷ ಪೂಜೆ ಸಲ್ಲಿಸಿದ ತರುವಾಯ ಪಟ್ಟಣದ ಶ್ರೀರಾಮ ಮಂದಿರದಲ್ಲಿ ವಿಶೇóಷ ಪೂಜೆ ಪುನಷ್ಕಾರ ಮಾಡಿದ ಬಳಿಕ ಪಟ್ಟಣದ ಜಾಮೀಯಾ ಮಸೀದಿಯಲ್ಲಿ ಸಾಮೂಹಿಕವಾಗಿ ಸರ್ವಧರ್ಮ ಸಾರುವ ವಿಶೇóಷ ಪ್ರಾರ್ಥನೆ ಸಲ್ಲಿಸಲಾಯಿತು. ಪರಿವಾರ ದೇವರುಗಳಿಗೆ ಪೂಜೆ ಸಲ್ಲಿಸಿದ ಬಳಿಕ ಮತ್ತೆ ಬೀರಲಿಂಗೇಶ್ವರ ಪ್ರಬಲ ಭೈರವಿ ದೇವಸ್ಥಾನದಲ್ಲಿ ಸಾಮೂಹಿಕ ಪೂಜೆ ಮತ್ತು ಮಹಾ ಮಂಗಳಾರತಿಯೊಂದಿಗೆ ಪೂಜಾ ಮಹೋತ್ಸವ ಸಂಪನ್ನ ಗೊಂಡಿತು. ಪೂಜಾ ಮಹೋತ್ಸವದ ಅಂಗವಾಗಿ ದೇವಾಲಯ ಸಮಿತಿ ವತಿಯಿಂದ ಭಕ್ತಾದಿಗಳಿಗೆ ಮತ್ತು ಸಾರ್ವಜನಿಕರಿಗೆ ಅನ್ನದಾನ ಏರ್ಪಡಿಸ ಲಾಗಿತು. ಪರಿವಾರ ದೇವರುಗಳ ಪೂಜಾ ಮಹೋತ್ಸವದಲ್ಲಿ ಮುಸ್ಲಿಂ ಬಾಂಧವರು ಮಸೀದಿಯೊಳಗೆ ನಡೆದ ಪ್ರಾರ್ಥನೆಯಲ್ಲಿ ಹಿಂದೂ ಬಾಂಧವರು ಭಾಗಿಯಾಗಿದ್ದರು.
ಪೂಜಾ ಮಹೋತ್ಸವದಲ್ಲಿ ವಿವಿಧ ಧರ್ಮ ಜಾತಿ ಜನಾಂಗದವರು ಒಂದಾಗಿ ಬೆರೆತು ಐಕ್ಯತೆ ಸಾರಿದರು. ಪೂಜಾ ಕಾರ್ಯಕ್ರಮದಲ್ಲಿ ದೇವಾಲಯ ಸಮಿತಿ ಪ್ರಮುಖರು, ಮುಸ್ಲಿಂ ಸಮುದಾಯದ ಪ್ರಮುಖರು, ಸಮಿತಿ ಪದಾಧಿಕಾರಿಗಳು ಪಾಲ್ಗೊಂಡಿದ್ದರು.
- ಭಾಸ್ಕರ್ ಮುಳ್ಳೂರು