ಗೋಣಿಕೊಪ್ಪಲು, ಡಿ 8: ಆಹಾರ ಹುಡುಕಿಕೊಂಡು ಬಂದ ಕಾಡಾನೆಯೊಂದು ಆಹಾರಕ್ಕಾಗಿ ಗುಡಿಸಲನ್ನು ಧ್ವಂಸಗೊಳಿಸಿ, ತನ್ನ ಹೊಟ್ಟೆ ತುಂಬಿಸಿಕೊಳ್ಳುವ ಭರದಲ್ಲಿ ಗುಡಿಸಿಲಿನಲ್ಲಿದ್ದ ಗಾದ್ರೇಜ್ ಕಪಾಟನ್ನು ಬೀಳಿಸಿದ ಪರಿಣಾಮ ವಾಗಿ ಗುಡಿಸಿಲಿನಲ್ಲಿ ಮಲಗಿದ್ದ ವಯೋವೃದ್ಧೆ ಮಹಿಳೆ ಜೇನು ಕುರುಬರ ರಂಗಿ (60) ಎಂಬಾಕೆ ಗಾಯಗೊಂಡು ಪ್ರಾಣಾಪಾಯದಿಂದ ಪಾರಾದ ಘಟನೆ ಮಾಲ್ದಾರೆ ಪಂಚಾಯಿತಿ ವ್ಯಾಪ್ತಿಯ ಬಸವನಹಳ್ಳಿ ಗಿರಿಜನರ ಹಾಡಿಯಲ್ಲಿ ನಡೆದಿದೆ. ಸಣ್ಣ ಪುಟ್ಟ ಗಾಯಗೊಂಡ ರಂಗಿ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಮನೆಗೆ ಮರಳಿದ್ದಾರೆ.ಅರಣ್ಯದ ಅಂಚಿನಲ್ಲಿ ವಾಸಮಾಡುವ ಕಾರ್ಮಿಕರು, ಅದರಲ್ಲೂ ವಿಶೇಷವಾಗಿ ಜೇನು ಕುರುಬ ಜನಾಂಗದವರು ಕಾಡಾನೆ, ವನ್ಯ ಜೀವಿಗಳೊಂದಿಗೆ ಉತ್ತಮ ಬಾಂಧವ್ಯ ಹೊಂದಿರುವವರು. ಯಾವುದೇ
(ಮೊದಲ ಪುಟದಿಂದ) ಕಾಡಾನೆಗಳು ಬಂದರೂ ಅದನ್ನು ಬೆದರಿಸಿ, ಬೊಬ್ಬೆಹಾಕಿ ಓಡಿಸುವ ಕಲೆ ಉಳ್ಳವರು. ಆದರೆ ಇದೀಗ ಬಸವನಹಳ್ಳಿ ವ್ಯಾಪ್ತಿಯಲ್ಲಿ ಕಳೆದ ಮೂರು ತಿಂಗಳಿನಿಂದ ಕಾಡಾನೆ ಹಾಗೂ ಮರಿಯಾನೆ ಸೇರಿಕೊಂಡು ಈ ಭಾಗದಲ್ಲಿ ವಾಸಿಸುವ ಜನರ ನಿದ್ದೆಗೆಡಿಸಿದೆ. ಕಳೆದ ಅಕ್ಟೋಬರ್ ತಿಂಗಳಲ್ಲಿ ಇದೇ ಆನೆ ಸಮೀಪದ ಅಂಗನವಾಡಿಯ ಬಾಗಿಲು ಮುರಿದು ಕೊಠಡಿಯಲ್ಲಿ ಶೇಖರಿಸಿಟ್ಟಿದ್ದ, ಬೆಲ್ಲ, ತೆಂಗಿನಕಾಯಿ ಇತ್ಯಾದಿ ವಸ್ತುಗಳನ್ನು ತಿಂದು ತೆರಳಿತ್ತು. ಈ ಆನೆಯು ಆಹಾರದ ರುಚಿ ಕಂಡುಕೊಂಡಿರುವದರಿಂದ ನವೆಂಬರ್ ತಿಂಗಳಲ್ಲಿ ಬಸವನಹಳ್ಳಿ ಜಂಕ್ಷನ್ ಬಳಿ ಇರುವ ಜೇನುಕುರುಬರ ಮಡಿಕೆ ಬೋಜ ಎಂಬಾತನ ಮನೆಗೆ ನುಗ್ಗಿ, ಮನೆಯನ್ನು ಹಾನಿಗೊಳಿಸಿ ಮನೆಯಲ್ಲಿದ್ದ ಬೆಲ್ಲಕ್ಕಾಗಿ ಹುಡುಕಾಟ ನಡೆಸಿದೆ. ಆದರೆ ಮನೆಯಲ್ಲಿ ಏನೂ ಸಿಗದ ಕಾರಣ ಮನೆಯ ಗೋಡೆ, ಬಾಗಿಲು ಬೀಳಿಸಿ ತೆರಳಿತ್ತು. ಇದೀಗ ಇದೇ ಕಾಡಾನೆ ಹಾಗೂ ಮರಿಯಾನೆ ರಂಗಿ ಮನೆಗೆ ನುಗ್ಗಿ ಆಹಾರಕ್ಕಾಗಿ ಹುಡುಕಾಟ ನಡೆಸಿದೆ. ಇದರಿಂದಾಗಿ ಈ ಭಾಗದಲ್ಲಿ ವಾಸಿಸುವ ಬಹುತೇಕ ಜೇನುಕುರುಬ ಜನಾಂಗದವರಿಗೆ ದಿಕ್ಕೇ ತೋಚದಂತಾಗಿದೆ.
ತಲ ತಲಾಂತರ ಕಾಲದಿಂದಲೂ ಅರಣ್ಯದೊಂದಿಗೆ ಜೀವನ ಶೈಲಿಯನ್ನು ಕಂಡುಕೊಂಡಿರುವ ಜನಾಂಗ ಕಾಡಾನೆಯೊಂದಿಗೆ ಬೆರೆತವರು. ಇಲ್ಲಿಯ ತನಕ ಮನೆಗೆ ಹಾನಿಮಾಡುವುದು, ಮನೆಯ ಬಾಗಿಲನ್ನು ಮುರಿಯುವುದು ಕಾಡಾನೆಗಳು ಮಾಡಿದ ಉದಾಹರಣೆಗಳು ಕಂಡುಬಂದಿಲ್ಲ ಎಂದು ಅರಣ್ಯ ವಾಸಿ ಶಂಕರ್ ತಮ್ಮ ಅಭಿಪ್ರಾಯ ವ್ಯಕ್ತಪಡಿಸುತ್ತಾರೆ. ಬೇರೆ ಜಿಲ್ಲೆಯಿಂದ ಆಗಮಿಸಿದ ಕಾಡಾನೆಯು ಈ ರೀತಿಯಲ್ಲಿ ತೊಂದರೆ ಮಾಡುತ್ತಿದೆ. ನಮ್ಮ ಅರಣ್ಯದಲ್ಲಿ ಇರುವ ಕಾಡಾನೆಗಳು ಇಲ್ಲಿಯ ತನಕ ಈ ರೀತಿಯಲ್ಲಿ ಜನರಿಗೆ ತೊಂದರೆ ನೀಡಿದ ಅನುಭವ ನಾವುಗಳು ಕಂಡಿಲ್ಲ ಎಂದು ಗ್ರಾಮದ ಜನರು ಅಭಿಪ್ರಾಯವನ್ನು ಹಂಚಿಕೊಂಡರು.
ವನ್ಯಜೀವಿ ಸಂರಕ್ಷಣಾ ವ್ಯಾಪ್ತಿಯಲ್ಲಿ ಬರುವ ಈ ಅರಣ್ಯ ಪ್ರದೇಶದಲ್ಲಿ ಸಾಮಾಜಿಕ ಅರಣ್ಯ ಸಿಬ್ಬಂದಿಗಳು, ವನ್ಯ ಜೀವಿ ವಿಭಾಗದ ಸಿಬ್ಬಂದಿಗಳು ಜನರಿಗೆ ತೊಂದರೆ ನೀಡುತ್ತಿರುವ ಕಾಡಾನೆ ಹಾಗೂ ಮರಿಯಾನೆಯನ್ನು ಕಂಡು ಹಿಡಿಯಲು ಬುಧವಾರ ಯೋಜನೆ ರೂಪಿಸಿದ್ದಾರೆ ಎಂದು ತಿಳಿದು ಬಂದಿದೆ. ಇದೀಗ ಹಾಡಿಯಲ್ಲಿ ವಾಸಿಸುವ ಜನರು ಗಾಬರಿಗೊಂಡಿದ್ದು ತಮ್ಮ ಮನೆಯಲ್ಲಿ ವಾಸಮಾಡುವುದು ಹೇಗೆಂದು ಚಿಂತಾಗ್ರಸ್ತರಾಗಿದ್ದಾರೆ.
4 ತಿಂಗಳಲ್ಲಿ 6 ಮನೆಗಳಿಗೆ ಧಾಳಿ
ಕಳೆದ 4 ತಿಂಗಳಿನಿಂದ 6 ಮನೆಗಳ ಮೇಲೆ ಕಾಡಾನೆ ದಾಂಧಲೆ ನಡೆಸಿ 5 ಮನೆಗಳನ್ನು ಹಾನಿಪಡಿಸಿದೆ. ಆನೆ ದಾಳಿಯಿಂದ ಮನೆಯಲ್ಲಿದ್ದ ಅಗತ್ಯ ವಸ್ತುಗಳು ಹಾನಿಯಾಗಿ ಮನೆ ಬಿರುಕು ಬಿಟ್ಟು ಒಂದು ಮನೆ ಕುಸಿತಗೊಂಡಿದೆ. ಇತ್ತೀಚೆಗೆ ಹಾಡಹಗಲೇ ಕಾಡಾನೆಯೊಂದು ಹಾಡಿಯ ವ್ಯಕ್ತಿಯೊಬ್ಬರ ಮೇಲೆ ದಾಳಿ ಮಾಡಿದ ಪರಿಣಾಮ ಗಂಭೀರ ಗಾಯಗೊಂಡು ಆಸ್ಪತ್ರೆಯಲ್ಲಿ ಪಡೆದುಕೊಂಡಿದ್ದಾರೆ . ನಿರಂತರವಾಗಿ ಕಾಡುತ್ತಿರುವ ಕಾಡಾನೆ ಹಾವಳಿಯಿಂದ ಹಾಡಿಯ ನಿವಾಸಿಗಳು ಭಯಭೀತರಾಗಿದ್ದು ನೆಮ್ಮದಿಯ ಜೀವನ ನಡೆಸಲು ಸಾಧ್ಯವಾಗದಂತಹ ಪರಿಸ್ಥಿತಿ ನಿರ್ಮಾಣವಾಗಿದ್ದರೂ ಅಧಿಕಾರಿಗಳು ಇತ್ತ ಕಡೆ ಗಮನ ಹರಿಸುತ್ತಿಲ್ಲ ಎಂದು ಹಾಡಿಯ ನಿವಾಸಿ ಗಣೇಶ್ ‘ಶಕ್ತಿ’ಗೆ ತಿಳಿಸಿದ್ದಾರೆ.
ಕಳೆದ ಹಲವು ತಿಂಗಳಿನಿಂದ ನಿರಂತರವಾಗಿ ಕಾಡಾನೆ ಹಾವಳಿಯಿಂದ ಆದಿವಾಸಿ ಕುಟುಂಬಗಳು ಭಯಭೀತರಾಗಿದ್ದು ನೆಮ್ಮದಿಯಾಗಿ ನಡೆದಾಡಲೂ ಸಾಧ್ಯವಾಗದಂಥ ಪರಿಸ್ಥಿತಿ ನಿರ್ಮಾಣವಾಗಿದೆ. ಇದುವರೆಗೆ 6 ಮನೆಗಳ ಮೇಲೆ ದಾಳಿ ಮಾಡಿ ಹಾನಿ ಪಡಿಸಿದ್ದಲ್ಲದೆ ವಾಸಿಸಲು ಯೋಗ್ಯವಲ್ಲದ ಸ್ಥಿತಿಯಲ್ಲಿ ಬದುಕು ಸಾಗಿಸುತ್ತಿದ್ದಾರೆ.
5 ವರ್ಷಗಳ ಹಿಂದೆ ಹಾಡಿಯಲ್ಲಿ ಸಮಾಜ ಕಲ್ಯಾಣ ಇಲಾಖೆಯ ಮೂಲಕ ನಿರ್ಮಿಸಲಾಗಿರುವ ಮನೆಗಳು ಅತ್ಯಂತ ಕಳಪೆಯಿಂದ ಕೂಡಿದ್ದು ಬಾಗಿಲುಗಳು ಇಲ್ಲದೇ ಕಾಡುಪ್ರಾಣಿಗಳ ಭಯದ ನಡುವೆ ಜೀವನ ನಡೆಸುವಂತಾಗಿದೆ ಎಂದು ಯುವ ಕಾಂಗ್ರೆಸ್ ಉಪಾಧ್ಯಕ್ಷ ಸಮೀರ್ ಹೇಳಿದ್ದಾರೆ.
ಮೂಲಸೌಕರ್ಯ ವಂಚಿತರಾಗಿರುವ ಹಾಡಿಯನ್ನು ಕೂಡಲೇ ಅಭಿವೃದ್ಧಿ ಪಡಿಸಿ ಕಾಡಾನೆ ದಾಳಿಯಿಂದ ಹಾನಿಯಾಗಿರುವ ಮನೆಗಳನ್ನು ದುರಸ್ತಿಪಡಿಸಿ ಪರಿಹಾರ ನೀಡಬೇಕೆಂದು ಒತ್ತಾಯಿಸಿರುವ ಸಮೀರ್; ಕಳಪೆ ಗುಣಮಟ್ಟದ ಕೆಲಸ ನಡೆಸಿರುವವರ ಮೇಲೆ ತನಿಖೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ಜಿಲ್ಲಾಡಳಿತವನ್ನು ಒತ್ತಾಯಿಸಿದ್ದಾರೆ.
- ಹೆಚ್.ಕೆ.ಜಗದೀಶ್, ಪುತ್ತಂ ಪ್ರದೀಪ್