ಮಡಿಕೇರಿ, ಡಿ. 8: ರಾಜ್ಯದಲ್ಲಿ ಕೊರೊನಾ ಪರಿಸ್ಥಿತಿಯಿಂದಾಗಿ ಲಾಕ್‍ಡೌನ್ ನಿರ್ಬಂಧ ವಿಧಿಸಲಾಗಿದ್ದ ಕಠಿಣ ನಿರ್ಬಂಧದ ಸಂದರ್ಭದಲ್ಲಿ ಜನಸಾಮಾನ್ಯರಿಗೆ ನೀಡಿದ ಸ್ಪಂದನೆ ಹಾಗೂ ಸೇವೆಗಾಗಿ ಕೊಡಗು ಜಿಲ್ಲೆಯವರಾದ ಸ್ಯಾಂಡಲ್‍ವುಡ್ ನಟ - ನಟಿಯರಾದ ಉಳ್ಳಿಯಡ ಭುವನ್ ಪೊನ್ನಣ್ಣ ಹಾಗೂ ಉದ್ದಪಂಡ ಹರ್ಷಿಕಾ ಪೂಣಚ್ಚ ಅವರುಗಳಿಗೆ ಬೆಂಗಳೂರಿನ ಸಂಸ್ಥೆಯೊಂದು ಕೊರೊನಾ ವಾರಿಯರ್ಸ್ ಗೌರವ ನೀಡಿ ಸನ್ಮಾನಿಸಿದೆ.
ಬೆಂಗಳೂರಿನ ವಿಜಯ ನಗರದ ಸರಕಾರಿ ಅನುದಾನಿತ ಸಂಸ್ಥೆಯಾಗಿರುವ ಕಾಶಿ ಅಸೋಸಿಯೇಟ್ಸ್ ವತಿಯಿಂದ ಕೊರೊನಾ ಸಂದರ್ಭದಲ್ಲಿ ಕಾರ್ಯನಿರ್ವಹಿಸಿದ ಹಲವು ವೈದ್ಯರು, ಪೊಲೀಸ್ ಅಧಿಕಾರಿಗಳು ಹಾಗೂ ನಟ - ನಟಿಯರನ್ನು ಸನ್ಮಾನಿಸಲಾಗಿದ್ದು, ಇವರ ಪೈಕಿ ಜಿಲ್ಲೆಯವರಾದ ಭುವನ್ ಹಾಗೂ ಹರ್ಷಿಕಾ ಸನ್ಮಾನ ಸ್ವೀಕರಿಸಿದರು. ತಾ. 6 ರಂದು ನಡೆದÀ ಸಮಾರಂಭದಲ್ಲಿ ಇವರನ್ನು ಸಂಸ್ಥೆಯ ಮೂಲಕ ಸನ್ಮಾನಿಸಲಾಯಿತು.
ಲಾಕ್‍ಡೌನ್‍ನಿಂದ ಸಂಕಷ್ಟದಲ್ಲಿ ಸಿಲುಕಿಕೊಂಡಿದ್ದವರಿಗೆ ಇವರು ತಮ್ಮ ಅಭಿಮಾನಿಗಳೊಂದಿಗೆ ಅವರ ಊರಿಗೆ ತೆರಳಲು, ಸಹಾಯ ಮಾಡಿದ್ದಲ್ಲದೆ, ಆಹಾರ ಪದಾರ್ಥ, ಹಾಲು, ಮತ್ತಿತರರ ಅಗತ್ಯ ಸೌಲಭ್ಯಗಳನ್ನು ಉದಾರವಾಗಿ ನೀಡಿ ಸ್ಪಂದಿಸಿದ್ದರು.