ಕೂಡಿಗೆ, ಡಿ. 8: ಕೂಡಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸೀಗೆಹೊಸೂರು ಗ್ರಾಮದ ರಾಜಶೇಖರ ಎಂಬವರಿಗೆ ಸೇರಿದ ಎರಡು ಎಕರೆ ಭೂಮಿಯ ಭತ್ತದ ಬೆಳೆಯನ್ನು ಕಳೆದ ಎರಡು ದಿನಗಳ ಹಿಂದೆಯಷ್ಟೆ ಮನೆಯ ಹತ್ತಿರದ ಕಣದಲ್ಲಿ ಗುಡ್ಡೆ ಹಾಕಲಾಗಿದ್ದು, ಕಾಡಾನೆಗಳು ತಿಂದು ಹಾಕಿವೆ. ಇದೀಗ ಕಾಡಾನೆಗಳ ಹಾವಳಿಯಿಂದ ಬಹಳಷ್ಟು ನಷ್ಟ ಉಂಟಾಗಿದೆ.
ಕಕ್ಕೆ ಹೊಳೆಯ ನೀರನ್ನು ಅವಲಂಬಿಸಿ ಬೆಳೆದ ಬೆಳೆಯು ಬೆಂಕಿ ರೋಗ ಜೊತೆಗೆ ಅಕಾಲಿಕ ಮಳೆಯಿಂದಾಗಿ ಹಾನಿಯಾಗಿತ್ತು. ಆನೆಗಳನ್ನು ಓಡಿಸಲು ಪಟಾಕಿ ಸಿಡಿಸಲು ಮುಂದಾದಾಗ ಮನೆಯ ಹತ್ತಿರದವರೆಗೆ ಬಂದು ಮನೆ ಹತ್ತಿರದ ಬಾಳೆ ಮತ್ತು ಸಿಹಿ ಗೆಣಸು, ನೀರಿನ ಪಂಪ್ಗಳನ್ನು ತುಳಿದು ಹಾಳುಪಡಿಸಿವೆ.
ಈ ವ್ಯಾಪ್ತಿಯಲ್ಲಿ ಈಗಾಗಲೇ ಬೆಳೆಯ ಕಟಾವು ಮುಗಿಯುವ ಹಂತಕ್ಕೆ ಬಂದಿರುವುದರಿಂದ ಕಾಡಾನೆಗಳು ರಸ್ತೆಯ ಮೂಲಕ ಬಂದು ರೈತರ ಜಮೀನಿಗೆ ದಾಳಿ ಮಾಡುತ್ತಿವೆ. ಈ ವ್ಯಾಪ್ತಿಯ ಜನರು ಭಯಬೀತ ರಾಗಿದ್ದಾರೆ. ಸಂಬಂಧಿಸಿದ ಅರಣ್ಯ ಇಲಾಖೆಯವರು ಸ್ಥಳ ಪರಿಶೀಲನೆ ನಡೆಸಿ ಸೂಕ್ತ ಪರಿಹಾರ ನೀಡುವುದರ ಜೊತೆಗೆ ಕಾಡಾನೆಗಳನ್ನು ಮೀಸಲು ಪ್ರದೇಶಗಳತ್ತ ಓಡಿಸುವಂತೆ ಗ್ರಾಮಸ್ಥರ ಆಗ್ರಹಿಸಿದ್ದಾರೆ.