ಕಣಿವೆ, ಡಿ. 8: ನಾಲ್ಕು ದಶಕಗಳ ಹಿಂದೆ ಕಾವೇರಿ ನದಿಯ ನೀರನ್ನು ಮೇಲೆತ್ತಿ ಸುಮಾರು ಮುನ್ನೂರು ಎಕರೆ ಭೂಮಿಗೆ ನೀರು ಹರಿಸಲು ಕಾರ್ಯಗತಗೊಳಿಸಿದ ಕೂಡ್ಲೂರು ಏತನೀರಾವರಿ ಯೋಜನೆ ಇದೀಗ ರೈತರ ಪಾಲಿಗೆ ವರವಾಗುವ ಬದಲು ಶಾಪವಾಗಿ ಪರಿಣಮಿಸಿದೆ.
ಸಕಾಲದಲ್ಲಿ ಸಂಬಂಧಿಸಿದ ಕೃಷಿಕರ ಬರಡು ಭೂಮಿಗೆ ನೀರು ಹರಿಸಿ ಹೊಲವನ್ನು ತಣಿಸುವುದ ರೊಂದಿಗೆ ರೈತನ ಬದುಕು ಹಸನಾಗಿಸಬೇಕಾಗಿದ್ದ ಈ ಯೋಜನೆಗೆ ಸಂಬಂಧಿಸಿದ ಸಣ್ಣ ನೀರಾವರಿ ಇಲಾಖೆಯ ಅಧಿಕಾರಿಗಳ ಅಸಡ್ಡೆ ಹಾಗೂ ಬೇಜವಾಬ್ದಾರಿ ತನದಿಂದ ಈ ಯೋಜನೆಗೆ ಗರಬಡಿದಿದೆ.
ಹಿಂದೆ ಕೂಡ್ಲೂರು ಹಾಗೂ ಕೂಡುಮಂಗಳೂರು ಗ್ರಾಮಗಳ ಮುನ್ನೂರು ಎಕರೆ ಭೂಮಿಗೆ ನೀರು ಪೂರೈಸುತ್ತಿದ್ದ ಘಟಕ ಈಗ ಕೇವಲ 25 ಎಕರೆ ಭೂಮಿಗೂ ನೀರು ಹರಿಸುತ್ತಿಲ್ಲ ಎಂದರೆ ರೈತನ ಬದುಕನ್ನು ಹಸನಾಗಿಸಬೇಕಾದ ಅಧಿಕಾರಿಗಳ ಪಾತ್ರ ಹೇಗೆ ಮತ್ತು ಏನು ಎಂದು ಅರ್ಥವಾಗುತ್ತದೆ.
ವರ್ಷವಿಡೀ ನಳನಳಿಸುತ್ತಾ ನದಿಯಲ್ಲಿ ಹರಿವ ಕಾವೇರಿಯ ನೀರನ್ನು ಯಂತ್ರಗಳಿಂದ ಮೇಲೆತ್ತಿ ಸಕಾಲದಲ್ಲಿ ಪೂರೈಸಿದರೆ ಇಲ್ಲಿನ ಕೃಷಿಕರು ವಾರ್ಷಿಕವಾಗಿ ಎರಡು ಬೆಳೆಯನ್ನು ಬೆಳೆಯುತ್ತಿದ್ದರು. ಜೊತೆಗೆ ತರಕಾರಿ ಕಾಯಿಪಲ್ಯೆಗಳನ್ನು ಬೆಳೆಯುತ್ತಿದ್ದರು. ನೀರಾವರಿ ಅಧಿಕಾರಿಗಳು ಏತನೀರಾವರಿ ಘಟಕ ಹಾಳಾದರೂ ಕೂಡ ಅತ್ತ ಗಮನಿಸದೇ ಸಮಯ ಹರಣ ಮಾಡುತ್ತಾ ಬಂದದ್ದು ಇಲ್ಲಿನ ರೈತರಲ್ಲಿ ಕೃಷಿಯತ್ತ ನಿರಾಸಕ್ತಿ ಮೂಡಿಸಿತ್ತು. ಅಂದರೆ ಈ ಹಿಂದೆ ತಿಂಗಳು ಮಾತ್ರವಲ್ಲ ವರ್ಷವಿಡೀ ಯಂತ್ರಗಳು ದುರಸ್ಥಿಯಾದರೂ ಕೂಡ ಇತ್ತ ಗಮನಹರಿಸದ ಸಣ್ಣ ನೀರಾವರಿ ಇಲಾಖೆಯ ಅಧಿಕಾರಿಗಳು, ಈ ಅಧಿಕಾರಿಗಳನ್ನು ಪ್ರಶ್ನಿಸದ ಜನಪ್ರತಿನಿಧಿಗಳು, ಇಚ್ಛಾಶಕ್ತಿ ತೋರಿಸದ ರಾಜಕಾರಣಿಗಳು, ಸ್ಥಳೀಯರ ಸಮಸ್ಯೆಗಳ ನಿವಾರಕರಾಗ ಬೇಕಿದ್ದ ಸ್ಥಳೀಯ ಪಂಚಾಯಿತಿ ವ್ಯವಸ್ಥೆಗಳ ಒಟ್ಟಾರೆ ವೈಫಲ್ಯದಿಂದಾಗಿ ಈ ಏತ ನೀರಾವರಿ ಯೋಜನೆ ಹೆಸರಿಗಷ್ಟೇ ಇದೆ.
ಈಗ ಈ ಯೋಜನೆಯ ಸಂಬಂಧವಾಗಿ ಇಲಾಖೆ ಅಧಿಕಾರಿ ಗಳಿಗೆ ನೀಡುತ್ತಿರುವ ವಾರ್ಷಿಕ ವೇತನ ಹಾಗೂ ಘಟಕದ ನಿರ್ವಹಣೆಗೆ ವ್ಯಯಿಸುತ್ತಿರುವ ಹಣವನ್ನು ತುಲನೆ ಮಾಡಿ ನೋಡಿದಾಗ ಈ ರೈತರಿಗೆ ಇದರಿಂದಾಗುತ್ತಿರುವ ಪ್ರಯೋಜನ ಕೇವಲ ಶೇ. 10 ರಷ್ಟು ಮಾತ್ರ ಎನ್ನಬಹುದು.
ನೀರಾವರಿ ಇಲಾಖೆಯ ಅಧಿಕಾರಿಗಳ ಇಚ್ಚಾಶಕ್ತಿಯ ಕೊರತೆಯಿಂದಾಗಿ ಸಕಾಲದಲ್ಲಿ ನೀರು ಹರಿಯದ ಕಾರಣ ಬಹಳಷ್ಟು ಕೃಷಿಕರು ತಮ್ಮ ಕೃಷಿ ಭೂಮಿಯನ್ನು ಕೃಷಿ ಯೇತರಕ್ಕಾಗಿ ಬಳಸಲು ಹೊರಟರು.
ಅಲ್ಲದೇ ಕೈಗಾರಿಕಾ ಬಡಾವಣೆ ಅಭಿವೃದ್ಧಿಗೆ ಒಂದಷ್ಟು ಪ್ರಮಾಣದ ಭೂಮಿ ಪರಾಭಾರೆ ಆಯಿತು. ಈ ಏತ ನೀರಾವರಿ ನೀರಿನಿಂದ ಹಿಂದೆ ಭತ್ತ ಬೆಳೆಯುತ್ತಿದ್ದ ಗದ್ದೆಗಳು ಹಾಗೂ ಹೊಲಗಳು ನಗರೀಕರಣಕ್ಕೆ ತುತ್ತಾದವು. ಈಗ ಈ ಘಟಕದಲ್ಲಿ 35 ಅಶ್ವಶಕ್ತಿಯ ಕಿರ್ಲೋಸ್ಕರ್ ವಿದ್ಯುತ್ ಮೋಟಾರ್ ಹಾಗೂ ಎರಡು ಪೈಪುಗಳು ಇದ್ದು ಸರಿಯಾದ ನಿರ್ವಹಣೆಯಾಗುತ್ತಿಲ್ಲ ಎಂದು ಇಲ್ಲಿನ ರೈತರು ದೂರುತ್ತಿದ್ದಾರೆ.
1975 ರಲ್ಲಿ ಇಲ್ಲಿನ ರೈತರ ಅಭ್ಯುದಯಕ್ಕಾಗಿ ಅಂದು ಯುವಜನ ಸೇವಾ ಇಲಾಖೆಯ ಸಚಿವರಾಗಿದ್ದ ದಿ. ಗುಂಡೂರಾವ್ ಅವರು ಈ ಏತನೀರಾವರಿ ಯೋಜನೆಯನ್ನು ಜಾರಿಗೊಳಿಸಿದ್ದರು.
ಜೊತೆಗೆ ಈ ಗ್ರಾಮದಲ್ಲಿ ಈ ನೀರಾವರಿ ಯೋಜನೆಯ ಲಾಭವನ್ನು ಪಡೆಯುತ್ತಿದ್ದ ಕೃಷಿಕರಲ್ಲಿನ ಭಿನ್ನಾಭಿಪ್ರಾಯದ ಲಾಭ ಸಣ್ಣ ನೀರಾವರಿ ಇಲಾಖೆ ಅಧಿಕಾರಿಗಳಿಗೆ ವರವಾಯಿತು. ಯಾವುದೇ ರೈತರು ಈ ಯೋಜನಾ ಘಟಕದ ಜವಾಬ್ದಾರಿ ವಹಿಸದ ಅಧಿಕಾರಿಗಳ ನಡೆಯನ್ನು ಪ್ರಶ್ನೆ ಮಾಡದೇ ಹೋದದ್ದು ಇಂದು ಈ ಘಟಕ ಇದ್ದೂ ಇಲ್ಲದಂತಹ ಸ್ಥಿತಿಗೆ ಬಂದು ತಲುಪಲು ಸಾಧ್ಯವಾಗಿದೆ ಎನ್ನುತ್ತಾರೆ ಗ್ರಾಮದ ಅನೇಕ ಕೃಷಿಕರು. ಕ್ಷೇತ್ರದ ಶಾಸಕರು ಇತ್ತ ಆಗಮಿಸಿ ಈ ಏತ ನೀರಾವರಿ ಯೋಜನೆಗೆ ಹಿಡಿದಿರುವ ಗ್ರಹಣವನ್ನು ಬಿಡಿಸಲು ಮುಂದಾಗುವರೇ ಕಾದು ನೋಡ ಬೇಕಿದೆ. - ಕೆ.ಎಸ್. ಮೂರ್ತಿ