ಮಡಿಕೇರಿ, ಡಿ. 8: ಕಾಫಿ ಮಂಡಳಿಯು ಮಧ್ಯಮ ಅವಧಿಯ ಕಾಫಿ ಅಭಿವೃದ್ಧಿ ಯೋಜನೆಯಡಿಯಲ್ಲಿ, ಕಾಫಿ ತೋಟದ ಉತ್ಪಾದಕತೆಯ ಸುಧಾರಣೆಗೆ ಮರುನಾಟಿ, ಜಲ ಸಂವರ್ಧನೆ ಮತ್ತು ಗುಣಮಟ್ಟ ಸಂವರ್ಧನೆ ಯೋಜನೆಯಡಿಯಲ್ಲಿ ಸಹಾಯಧನ ನೀಡುವ ನಿಟ್ಟಿನಲ್ಲಿ 10 ಹೆಕ್ಟೇರ್ ವರೆಗಿನ ಹಿಡುವಳಿ ಹೊಂದಿರುವ ಅರ್ಹ ಸಾಮಾನ್ಯ, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಕ್ಕೆ ಸೇರಿದ ಸಣ್ಣ ಕಾಫಿ ಬೆಳೆಗಾರರಿಂದ ಅರ್ಜಿ ಆಹ್ವಾನಿಸಲಾಗಿದೆ.

ಸಾಮಾನ್ಯ ಮತ್ತು ಪರಿಶಿಷ್ಟ ಪಂಗಡಕ್ಕೆ ಸೇರಿದ ಬೆಳೆಗಾರರಿಗೆ ಮರುನಾಟಿಗೆ ಹಾಗೂ ಜಲ ಸಂವರ್ಧನೆಯಡಿಯಲ್ಲಿ ನೀರು ಸಂಗ್ರಹಣಾ ಕೆರೆ, ರಿಂಗ್ ಬಾವಿ, ಹನಿ ನೀರಾವರಿಗೆ, ಸಾಮಾನ್ಯ ವರ್ಗಕ್ಕೆ ಶೇ. 40, ಪರಿಶಿಷ್ಟ ಪಂಗಡಕ್ಕೆ ಶೇ. 50 ರಷ್ಟು ಸಹಾಯಧನವನ್ನು ಯುನಿಟ್ ವೆಚ್ಚದ ಅಥವಾ ಕಾಫಿ ತೋಟದ ವಿಸ್ತೀರ್ಣಕ್ಕನುಗುಣವಾಗಿ ನೀಡಲಾಗುತ್ತದೆ. ಪರಿಶಿಷ್ಟ ಜಾತಿಗೆ ಸೇರಿದ ಬೆಳೆಗಾರರಿಗೆ ಮರುನಾಟಿಗೆ, ಜಲ ಸಂವರ್ಧನೆಯಡಿಯಲ್ಲಿ ನೀರು ಸಂಗ್ರಹಣಾ ಕೆರೆ, ಕೊಳವೆ ಬಾವಿ, ರಿಂಗ್ ಬಾವಿ, ಹನಿ ನೀರಾವರಿಗೆ ಹಾಗೂ ಗುಣಮಟ್ಟ ಸಂವರ್ಧನೆಯಡಿಯಲ್ಲಿ ಕಾಫಿ ಕಣ, ಗೋದಾಮು ಮತ್ತು ಕಾಫಿ ಪಲ್ಪರ್‍ಗೆ ಯುನಿಟ್ ವೆಚ್ಚದ ಅಥವಾ ಕಾಫಿ ತೋಟದ ವಿಸ್ತೀರ್ಣಕ್ಕನುಗುಣವಾಗಿ ಶೇ. 90 ರಷ್ಟು ಸಹಾಯಧನವನ್ನು 2 ಹೆಕ್ಟೇರ್ ಒಳಗಿನ ಬೆಳೆಗಾರರಿಗೆ ಹಾಗೂ ಶೇ. 75 ರಷ್ಟು ಸಹಾಯಧನವನ್ನು 2 ರಿಂದ 10 ಹೆಕ್ಟೇರ್ ಒಳಗಿನ ಬೆಳೆಗಾರರಿಗೆ ನೀಡಲಾಗುತ್ತದೆ. ಈ ಯೋಜನೆಯು 2021ರ ಮಾರ್ಚ್ 31ಕ್ಕೆ ಕೊನೆಗೊಳ್ಳುತ್ತದೆ.

ಆಸಕ್ತ ಕಾಫಿ ಬೆಳೆಗಾರರು ಈ ಯೋಜನೆಯಡಿಯಲ್ಲಿ ದೊರೆಯುವ ಸಹಾಯಧನವನ್ನು ಪಡೆಯಲಿಚ್ಚಿಸುವವರು, ಮೇಲೆ ತಿಳಿಸಿದ ಕಾರ್ಯಗಳನ್ನು ಕೈಗೊಳ್ಳುವ ಮೊದಲು ಕಾಫಿ ಮಂಡಳಿಯ ಕಚೇರಿಯಲ್ಲಿ ಸಂಬಂಧಪಟ್ಟ ದಾಖಲಾತಿಗಳೊಂದಿಗೆ ಅರ್ಜಿ ಸಲ್ಲಿಸಿ, ಮಂಡಳಿಯ ಕಾರ್ಯ ನಿರ್ವಹಣಾ ಪದ್ಧತಿಯ ರೂಪುರೇಷಗಳಿಗನುಗುಣವಾಗಿ ಪೂರ್ವಾನುಮತಿ ಪಡೆಯುವುದರ ಮುಖಾಂತರ ಕಾರ್ಯಗಳನ್ನು ಕೈಗೊಂಡು ಸರ್ಕಾರವು ಮಂಡಳಿಗೆ ಸಹಾಯಧನದಡಿಯಲ್ಲಿ ನೀಡುವ ಅನುದಾನವನ್ನು ಸಮರ್ಪಕವಾಗಿ ಉಪಯೋಗಿಸಿಕೊಳ್ಳಬೇಕಾಗಿ ತಿಳಿಸಿದೆ. ಯೋಜನೆಗಳ ಬಗೆಗಿನ ಹೆಚ್ಚಿನ ಮಾಹಿತಿಗೆ ಹತ್ತಿರದ ಕಾಫಿ ಮಂಡಳಿ ಕಚೇರಿಗಳನ್ನು ಸಂಪರ್ಕಿಸಬಹುದು ಎಂದು ವೀರಾಜಪೇಟೆ ಕಾಫಿ ಮಂಡಳಿಯ ಉಪ ನಿರ್ದೇಶಕರು ತಿಳಿಸಿದ್ದಾರೆ.