ಮಡಿಕೇರಿ, ಡಿ. 7: ಕೇರಳರಲ್ಲಿ ತಾ. 10 ಮತ್ತು 14 ರಂದು ನಡೆಯುವ ಗ್ರಾಮ ಪಂಚಾಯತ್ ಚುನಾವಣೆ ಮತದಾನ ಸಂಬಂಧ 48 ಗಂಟೆ ಮುಂಚಿತವಾಗಿ ಹಾಗೂ ತಾ. 16 ರಂದು ನಡೆಯುವ ಮತ ಎಣಿಕೆ ಸಂಬಂಧ ನೀತಿ ಸಂಹಿತೆ ಉಲ್ಲಂಘನೆಯಾಗದಂತೆ ಹಾಗೂ ಶಾಂತಿಯುತ ಕಾನೂನು ಸುವ್ಯವಸ್ಥೆಯನ್ನು ಕಾಪಾಡುವ ದೃಷ್ಟಿಯಿಂದ ಕರ್ನಾಟಕ ಅಬಕಾರಿ (ಸನ್ನದುಗಳ ಸಾಮಾನ್ಯ ಷರತ್ತುಗಳು) ನಿಯಮಗಳು 1967ರ ನಿಯಮ 10 ಬಿ ಮತ್ತು ಅಬಕಾರಿ ಕಾಯ್ದೆ 1965ರ ಕಲಂ 21 ರ ಅಡಿಯಲ್ಲಿ ಪ್ರತ್ಯಾಯೋಜಿತವಾಗಿರುವ ಅಧಿಕಾರದಂತೆ ಕೇರಳ ರಾಜ್ಯಕ್ಕೆ ಹೊಂದಿಕೊಂಡಿರುವ ಕೊಡಗು ಜಿಲ್ಲೆಯ ಗಡಿಭಾಗದ 3 ಕಿ.ಮೀ. ವ್ಯಾಪ್ತಿಯಲ್ಲಿ ಎಲ್ಲಾ ವಿಧದ ಮದ್ಯಗಳ ಅನಧಿಕೃತ ಸಾಗಾಣಿಕೆ, ಶೇಖರಣೆ ಮತ್ತು ಎಲ್ಲಾ ರೀತಿಯ ಹೊಟೇಲ್, ಅಂಗಡಿ, ಬಾರ್ ಮತ್ತು ರೆಸ್ಟೋರೆಂಟ್, ಕ್ಲಬ್ ಮುಂತಾದವುಗಳಲ್ಲಿ ಎಲ್ಲಾ ವಿಧದ ಮದ್ಯ ಮಾರಾಟವನ್ನು ಸಂಪೂರ್ಣವಾಗಿ ನಿಷೇಧಿಸಿ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಆದೇಶ ಹೊರಡಿಸಿದ್ದಾರೆ.

ಮತದಾನ ಸಂಬಂಧ ವಯನಾಡ್ ಜಿಲ್ಲೆಗೆ ಹೊಂದಿಕೊಂಡಿರುವ ಕೊಡಗು ಜಿಲ್ಲೆಯ ಗಡಿಭಾಗದ 3 ಕಿ.ಮೀ. ವ್ಯಾಪ್ತಿಯಲ್ಲಿ ತಾ. 8ರ ಸಂಜೆ 5 ಗಂಟೆಯಿಂದ ತಾ. 10 ರ ಮಧ್ಯರಾತ್ರಿ 12 ಗಂಟೆಯವರೆಗೆ. ಮತದಾನ ಸಂಬಂಧ ಕಣ್ಣೂರು ಮತ್ತು ಕಾಸರಗೋಡು ಜಿಲ್ಲೆಗೆ ಹೊಂದಿಕೊಂಡಿರುವ ಕೊಡಗು ಜಿಲ್ಲೆಯ ಗಡಿಭಾಗದ 3 ಕಿ.ಮೀ. ವ್ಯಾಪ್ತಿಯಲ್ಲಿ ತಾ. 12ರ ಸಂಜೆ 5 ಗಂಟೆಯಿಂದ ತಾ. 14 ರ ಮಧ್ಯರಾತ್ರಿ 12 ಗಂಟೆಯವರೆಗೆ ಹಾಗೂ ಮತ ಎಣಿಕೆ ಸಂಬಂಧ ತಾ. 15ರ ಮಧ್ಯರಾತ್ರಿ 12 ಗಂಟೆಯಿಂದ ತಾ. 16ರ ಮಧ್ಯರಾತ್ರಿ 12 ಗಂಟೆಯವರೆಗೆ ಎಲ್ಲಾ ವಿಧದ ಮದ್ಯ ಮಾರಾಟವನ್ನು ಸಂಪೂರ್ಣವಾಗಿ ನಿಷೇಧಿಸಿದೆ ಎಂದು ಅವರು ತಿಳಿಸಿದ್ದಾರೆ.