ವೀರಾಜಪೇಟೆ, ಡಿ.7 : ತನ್ನ ಪತ್ನಿಯ ಕುತ್ತಿಗೆಗೆ ಬ್ಲೇಡ್‍ನಿಂದ ಇರಿದು ಕೊಲೆ ಮಾಡಲು ಯತ್ನಿಸಿ ತಲೆ ಮರೆಸಿಕೊಂಡಿದ್ದ ಮೋಹನ್ ಎಂಬಾತನನ್ನು ಇಲ್ಲಿನ ನಗರ ಪೊಲೀಸರು ಮಂಡ್ಯ ಜಿಲ್ಲೆಯ ಕೆ.ಎಂ.ದೊಡ್ಡಿ ಎಂಬಲ್ಲಿ ಬಂಧಿಸಿ ಇಲ್ಲಿನ ಸಮುಚ್ಚಯ ನ್ಯಾಯಾಲಯಗಳ ಪ್ರಿನ್ಸಿಫಲ್ ಮುನ್ಸಿಫ್ ನ್ಯಾಯಾಲಯದ ಮುಂದೆ ಹಾಜರು ಪಡಿಸಿದಾಗ ಆತನನ್ನು 15 ದಿನಗಳ ತನಕ ನ್ಯಾಯಾಂಗ ಬಂಧನದಲ್ಲಿಡುವಂತೆ ನ್ಯಾಯಾಧೀಶರು ಆದೇಶಿಸಿದ್ದಾರೆ.
ವೀರಾಜಪೇಟೆಯ ಸಿದ್ದಾಪುರ ರಸ್ತೆಯ ಸುಂಕದ ಕಟ್ಟೆಯಲ್ಲಿ ಬಾಡಿಗೆ ಮನೆಯಲ್ಲಿ ವಾಸವಿದ್ದ ಮೋಹನ್ ತಾ:29 ರಂದು ರಾತ್ರಿ ಮನೆಯಲ್ಲಿ ತನ್ನ ಪತ್ನಿ ಸುಕನ್ಯಳೊಂದಿಗೆ(25) ಕ್ಷುಲ್ಲಕ ಕಾರಣಕ್ಕಾಗಿ ಜಗಳವಾಗಿ ಬ್ಲೇಡ್‍ನಿಂದ ಇರಿದು ಕೊಲೆಗೆ ಪ್ರಯತ್ನಿಸಿ ಪೋಷಕರು ನಗರ ಪೊಲೀಸರಿಗೆ ದೂರು ನೀಡಿದ ನಂತರ ತಲೆ ಮರೆಸಿಕೊಂಡಿದ್ದನು.
ಪೊಲೀಸರು ಮೋಹನ್ ವಿರುದ್ಧ ಪತ್ನಿಯ ಕೊಲೆ ಪ್ರಯತ್ನದ ಪ್ರಕರಣ ದಾಖಲಿಸಿದ್ದಾರೆ. ಪೊಲೀಸರ ತನಿಖೆಯ ಪ್ರಕಾರ ಮೋಹನ್ ಕಳೆದ ಎಂಟು ವರ್ಷಗಳ ಹಿಂದೆ ಸುಕನ್ಯಳನ್ನು ಮದುವೆಯಾಗಿದ್ದು, ಒಂದು ಹೆಣ್ಣು ಮಗುವಿರುವುದಾಗಿ ಗೊತ್ತಾಗಿದೆ.