ಮಡಿಕೇರಿ, ಡಿ. 7 : ನೂತನವಾಗಿ ರಚನೆಗೊಂಡಿರುವ ದಲಿತ ವಿದ್ಯಾರ್ಥಿ ಸಂಘದ ವೀರಾಜಪೇಟೆ ತಾಲೂಕು ಸಂಚಾಲಕಿಯಾಗಿ ಪೂಜಾ ಪೆರುಂಬಾಡಿ ನೇಮಕಗೊಂಡಿದ್ದಾರೆ.
ಗೋಣಿಕೊಪ್ಪದ ಕಾಮತ್ ನವಮಿ ಸಭಾಂಗಣದಲ್ಲಿ ನಡೆದ ವಿದ್ಯಾರ್ಥಿ ಸಂಘದ ಉದ್ಘಾಟನಾ ಕಾರ್ಯಕ್ರಮದಲ್ಲಿ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ನಡೆಯಿತು. ಸಂಘಟನಾ ಸಂಚಾಲಕಿಯಾಗಿ ರಶ್ಮಿ, ಪದಾಧಿಕಾರಿಗಳಾಗಿ ಜ್ಯೋತಿ, ಉಷಾ, ಕಿಶೋರ್, ದೀಪಿಕಾ ಅವರನ್ನು ಆಯ್ಕೆ ಮಾಡಲಾಯಿತು.
ಈ ಸಂದರ್ಭ ಮಾತನಾಡಿದ ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಸಂಚಾಲಕ ಹೆಚ್.ಎಲ್.ದಿವಾಕರ್, ವಿದ್ಯಾರ್ಥಿ ಸಂಘದ ಪದಾಧಿಕಾರಿಗಳು ಹಾಗೂ ಸದಸ್ಯರು ಸಂಘದ ಏಳಿಗೆಯ ಜೊತೆಗೆ ಇತರ ವಿದ್ಯಾರ್ಥಿಗಳ ಶೈಕ್ಷಣಿಕ ಬೆಳವಣಿಗೆಗೂ ಸಹಕಾರಿಯಾಗಬೇಕೆಂದು ಸಲಹೆ ನೀಡಿದರು.
ದಲಿತ ಸಂಘರ್ಷ ಸಮಿತಿಯ ಮಡಿಕೇರಿ ತಾಲೂಕು ಅಧ್ಯಕ್ಷ ಎ.ಪಿ.ದೀಪಕ್ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಕೊಡಗು-ಮೈಸೂರು ವಿಭಾಗೀಯ ಸಂಚಾಲಕ ಎನ್.ವೀರಭದ್ರಯ್ಯ, ಜಿಲ್ಲಾ ಸಂಘಟನಾ ಸಂಚಾಲಕ ಈರಪ್ಪ, ಪ್ರಮುಖರಾದ ಕುಮಾರ್, ಲೋಕೇಶ್ ಮತ್ತಿತರರು ಹಾಜರಿದ್ದರು.