ರೈತ ಸಂಘಟನೆಗಳಿಂದ ಬಂದ್ ಹೋರಾಟ
ಬೆಂಗಳೂರು, ಡಿ.7 : ಕೃಷಿ ಭೂಮಿ ಖರೀದಿಗಿದ್ದ ನಿರ್ಬಂಧವನ್ನು ತೆಗೆದು ಹಾಕಿರುವುದೂ ಸೇರಿದಂತೆ ಕೇಂದ್ರ ಸರ್ಕಾರ ಜಾರಿಗೊಳಿಸಿರುವ ಮೂರು ಹೊಸ ಕೃಷಿ ಕಾಯ್ದೆಗಳನ್ನು ಹಿಂಪಡೆಯುವಂತೆ ಒತ್ತಾಯಿಸಿ ಮಂಗಳವಾರ ಭಾರತ ಬಂದ್ ಗೆ ಕರೆ ನೀಡಲಾಗಿದ್ದು, ರಾಜ್ಯದಲ್ಲೂ ಬೆಂಬಲ ವ್ಯಕ್ತವಾಗಿದೆ. ದೇಶದ ವಿವಿಧ ರೈತ ಸಂಘಟನೆಗಳು ನಡೆಸುತ್ತಿರುವ ಭಾರತ ಬಂದ್ ಗೆ ರಾಜ್ಯದಲ್ಲೂ ವ್ಯಾಪಕ ಬೆಂಬಲ ವ್ಯಕ್ತವಾಗಿದೆ. ರಾಜ್ಯ ರೈತ ಸಂಘ, ಕರ್ನಾಟಕ ರಕ್ಷಣಾ ವೇದಿಕೆ, ಕರ್ನಾಟಕ ರಕ್ಷಣಾ ಪಡೆ, ಕನ್ನಡ ಚಳವಳಿ ವಾಟಾಳ್ ಪಕ್ಷ, ರಾಜ್ಯ ಕಬ್ಬು ಬೆಳೆಗಾರರ ಸಂಘ ಸೇರಿದಂತೆ ಅಸಂಖ್ಯಾತ ಸಂಘಟನೆಗಳು ಬಂದ್ ಗೆ ಬೆಂಬಲ ವ್ಯಕ್ತಪಡಿಸಿದ್ದು ಆ ಮೂಲಕ ರಾಜ್ಯ ಬಹುತೇಕ ಸ್ತಬ್ದವಾಗಲಿದೆ. ಕೃಷಿ ಭೂಮಿ ಖರೀದಿಗಿದ್ದ ನಿರ್ಬಂಧವನ್ನು ತೆಗೆದು ಹಾಕಿರುವುದರಿಂದ ದುಡ್ಡಿದ್ದವರು ಯಾರೇ ಆದರೂ ದಂಡಿಯಾಗಿ ಭೂಮಿ ಖರೀದಿಸಬಹುದು. ಇದರಿಂದಾಗಿ ಕೃಷಿ ಹಿಡುವಳಿಗಳ ಸಂಖ್ಯೆ ಕಡಿಮೆ ಆಗುವುದಲ್ಲದೆ ಆಹಾರ ಉತ್ಪಾದನೆಯ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ. ಇದರಿಂದಾಗಿ ಆಹಾರ ಪದಾರ್ಥಗಳ ಮೇಲೆ ಉಳ್ಳವರು ನಿಯಂತ್ರಣ ಸಾಧಿಸಲಿದ್ದು ಅದೇ ಕಾಲಕ್ಕೆ ಮನಸೋ ಇಚ್ಚೆ ಭೂಮಿ ಖರೀದಿಸುವವರು ರಿಯಲ್ ಎಸ್ಟೇಟ್ ಸೇರಿದಂತೆ ಹಲ ಕೃಷಿಯೇತರ ಉದ್ದೇಶಗಳಿಗಾಗಿ ಭೂಮಿ ಬಳಕೆಯಾಗಲಿದೆ. ಇದೇ ರೀತಿ ಕೇಂದ್ರ ಸರ್ಕಾರ ಜಾರಿಗೊಳಿಸಿರುವ ವಿವಿಧ ತಿದ್ದುಪಡಿ ಕಾಯ್ದೆಗಳು ರೈತ ಸಮುದಾಯವನ್ನು ಬೀದಿಗೆ ತಳ್ಳಲಿವೆ. ಹೀಗಾಗಿ ತಕ್ಷಣವೇ ಈ ಕೃಷಿ ತಿದ್ದುಪಡಿ ಕಾಯ್ದೆಯನ್ನು ಹಿಂಪಡೆಯಬೇಕು ಎಂದು ರೈತ, ಮತ್ತಿತರ ಸಂಘಟನೆಗಳು ಒತ್ತಾಯಿಸಿವೆ. ಈ ಒತ್ತಾಯದ ಅಂಗವಾಗಿ ಮಂಗಳವಾರ ಭಾರತ್ ಬಂದ್ ನಡೆಯಲಿದ್ದು, ನೂರಕ್ಕೂ ಹೆಚ್ಚು ಸಂಘಟನೆಗಳು ಬಂದ್ ಗೆ ಬೆಂಬಲ ನೀಡಿವೆ.
ಕಾಯ್ದೆಯನ್ನು ಮತ್ತೆ ಸಮರ್ಥಿಸಿಕೊಂಡ ಮೋದಿ
ನವದೆಹಲಿ, ಡಿ.7 : ಕೃಷಿ ತಿದ್ದುಪಡಿ ಕಾಯ್ದೆ ವಿರೋಧಿಸಿ ರೈತರು ಕಳೆದ 11 ದಿನಗಳಿಂದ ದೆಹಲಿಯ ಗಡಿಯಲ್ಲಿ ಪ್ರತಿಭಟನೆ ನಡೆಸುತ್ತಿದ್ದು, ಪ್ರತಿಭಟನೆಯನ್ನು ಮತ್ತಷ್ಟು ತೀವ್ರಗೊಳಿಸಲು ಭಾರತ್ ಬಂದ್ಗೆ ಕರೆ ನೀಡಿದ ಬೆನ್ನಲ್ಲೇ, ಕಾಯ್ದೆಯನ್ನು ಸಮರ್ಥಿಸಿಕೊಂಡಿರುವ ಪ್ರಧಾನಿ ನರೇಂದ್ರ ಮೋದಿ, ಹೊಸ ಸೌಲಭ್ಯಗಳು ಮತ್ತು ವ್ಯವಸ್ಥೆಗಳಿಗೆ ಸುಧಾರಣೆಗಳು ಅತಿ ಮುಖ್ಯ ಎಂದಿದ್ದಾರೆ. ವೀಡಿಯೋ ಕಾನ್ಫರೆನ್ಸ್ ಮೂಲಕ ಆಗ್ರಾ ಮೆಟ್ರೋ ರೈಲು ಯೋಜನೆಯನ್ನು ಉದ್ಘಾಟಿಸಿ ಮಾತನಾಡಿದ ಪ್ರಧಾನಿ. ಹಿಂದಿನ ಶತಮಾನದ ಕಾಯ್ದೆಗಳನ್ನು ಆಧರಿಸಿ ಹೊಸ ಶತಮಾನ ನಿರ್ಮಾಣ ಮಾಡಲು ಸಾಧ್ಯವಿಲ್ಲ. ಹಿಂದಿನ ಶತಮಾನದಲ್ಲಿ ಉಪಯುಕ್ತವಾಗಿದ್ದ ಕಾಯ್ದೆ ಮುಂದಿನ ಶತಮಾನಕ್ಕೆ ಹೊರೆಯಾಗಬಹುದು. ಆದ್ದರಿಂದ ಸುಧಾರಣೆಯ ಪ್ರಕ್ರಿಯೆ ಮುಂದುವರಿಯಬೇಕು ಎಂದಿದ್ದಾರೆ. ನಮ್ಮ ಸರ್ಕಾರ ಸಮಗ್ರ ಸುಧಾರಣೆಗಳನ್ನು'' ತರುತ್ತಿದೆ. ಈ ಮೊದಲು, ಸುಧಾರಣೆಗಳು ಕೆಲವು ಕ್ಷೇತ್ರಕ್ಕೆ ಮಾತ್ರ ಸೀಮಿತವಾಗಿದ್ದವು ಅಥವಾ ಕೆಲವು ವಲಯಗಳು ಮತ್ತು ಇಲಾಖೆಗಳನ್ನು ಗಮನದಲ್ಲಿರಿಸಿಕೊಂಡು ತರಲಾಗಿತ್ತು ಎಂದು ಪ್ರಧಾನಿ ಹೇಳಿದ್ದಾರೆ.
ದೆಹಲಿಯಲ್ಲಿ ಐವರು ಉಗ್ರರ ಬಂಧನ
ನವದೆಹಲಿ, ಡಿ.7 : ಮಹತ್ವದ ಬೆಳವಣಿಗೆಯೊಂದರಲ್ಲಿ ದೆಹಲಿ ಪೆÇಲೀಸರು ಸೋಮವಾರ ಐವರು ಉಗ್ರರನ್ನು ಬಂಧನಕ್ಕೊಳಪಡಿಸುವ ಮೂಲಕ ಭಾರೀ ದಾಳಿ ಸಂಚೊಂದನ್ನು ವಿಪಲಗೊಳ್ಳುವಂತೆ ಮಾಡಿದ್ದಾರೆ. ರಾಷ್ಟ್ರ ರಾಜಧಾನಿ ದೆಹಲಿಯ ಶಕರ್ ಪುರ್ ಎಂಬ ಪ್ರದೇಶದಲ್ಲಿ ಐವರು ಉಗ್ರರನ್ನು ಬಂಧನಕ್ಕೊಳಪಡಿಸಲಾಗಿದೆ ಎಂದು ತಿಳಿದುಬಂದಿದೆ. ಭಾರೀ ಗುಂಡಿನ ಚಕಮಕಿ ಬಳಿಕ ಉಗ್ರರನ್ನು ಬಂಧನಕ್ಕೊಳಪಡಿಸಲಾಗಿದ್ದು, ಬಂಧಿತ ಉಗ್ರರು ಯಾವ ಸಂಘಟನೆಗೆ ಸೇರಿದವರಾಗಿದ್ದಾರೆಂಬುದು ಇನ್ನೂ ತಿಳಿದುಬಂದಿಲ್ಲ. ಬಂಧಿತ ಐವರಲ್ಲಿ ಮೂವರು ಉಗ್ರರು ಜಮ್ಮು ಮತ್ತು ಕಾಶ್ಮೀರ ಮೂಲದವರಾಗಿದ್ದು, ಇಬ್ಬರು ಪಂಜಾಬ್ ರಾಜ್ಯಕ್ಕೆ ಸೇರಿದವರಾಗಿದ್ದಾರೆಂದು ಹೇಳಲಾಗುತ್ತಿದೆ.
ಮೇಲ್ಮನೆಯಲ್ಲಿ ಅಶ್ವಥ್, ವಿಶ್ವನಾಥ್ ಜಟಾಪಟಿ
ಬೆಂಗಳೂರು ಡಿ.7 : ರಾಷ್ಟ್ರೀಯ ಶಿಕ್ಷಣ ನೀತಿ ವಿಚಾರವಾಗಿ ಮೇಲ್ಮನೆಯಲ್ಲಿ ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್.ಅಶ್ವತ್ಥ ನಾರಾಯಣ್ ಹಾಗೂ ಮೇಲ್ಮನೆ ಬಿಜೆಪಿ ಸದಸ್ಯ ಹೆಚ್.ವಿಶ್ವನಾಥ್ ನಡುವೆ ಮಾತಿನ ಜಟಾಪಟಿ ನಡೆಯಿತು. ಇದರಿಂದ ಆಡಳಿತ ಪಕ್ಷಕ್ಕೆ ಮುಜುಗರವನ್ನುಂಟು ಮಾಡುವ ಸಂದರ್ಭವೂ ಸೃಷ್ಟಿಯಾಗಿತು. ವಿಶ್ವನಾಥ್ ಮಾತಿಗೆ ಜೆಡಿಎಸ್ ಸದಸ್ಯರು ಬೆಂಬಲ ಸೂಚಿಸಿದ್ದು ಸದನದಲ್ಲಿ ರಾಜಕೀಯ ಚರ್ಚೆಗೂ ಕಾರಣವಾಯಿತು. ಸಂತಾಪ ಸೂಚನೆ ಬಳಿಕ ಮುಂದೂಡಿಕೆಯಾಗಿದ್ದ ಸದನ ಮತ್ತೆ ಸಮಾವೇಶಗೊಳ್ಳುತ್ತಿದ್ದಂತೆಯೇ ಬಿಜೆಪಿಯ ಹೆಚ್.ವಿಶ್ವನಾಥ್, ಕೇಂದ್ರ ಸರ್ಕಾರದ ಉದ್ದೇಶಿತ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ರಾಜ್ಯದಲ್ಲಿ ಅನುಷ್ಠಾನ ಮಾಡುವ ಕುರಿತು ಪ್ರಸ್ತಾಪಿಸಿದರು. ಉನ್ನತ ಶಿಕ್ಷಣ ಇಲಾಖೆ ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಗೊಳಿಸಿ ಇದಕ್ಕೆ 15 ಜನರ ಸಮಿತಿ ರಚಿಸಿದೆ. ಆ ಸಮಿತಿಯಲ್ಲಿ ನಿವೃತ್ತ ಮುಖ್ಯ ಕಾರ್ಯದರ್ಶಿ ಎಸ್.ವಿ.ರಂಗನಾಥ್ ಅವರನ್ನು ಅಧ್ಯಕ್ಷರನ್ನಾಗಿ ಮಾಡಿದ್ದು ಕಾನೂನುಬಾಹಿರ ಎಂದರು. ಇದಕ್ಕೆ ಉನ್ನತ ಶಿಕ್ಷಣ ಸಚಿವ ಅಶ್ವತ್ಥ ನಾರಾಯಣ್ ಆಕ್ಷೇಪ ವ್ಯಕ್ತಪಡಿಸಿದರು. ಕೆಫೆ ಕಾಫಿ ಡೇ ಮಾಜಿ ಅಧ್ಯಕ್ಷ ಎಸ್.ವಿ ರಂಗನಾಥ್ ಅವರು ಅಪರಾಧ ಮಾಡಿದ ಸಂಸ್ಥೆಯಲ್ಲಿದ್ದವರು. ಅಪರಾಧದಲ್ಲಿ ಭಾಗಿಯಾದ ವ್ಯಕ್ತಿಯನ್ನು ತಂದು ಅಧ್ಯಕ್ಷರನ್ನಾಗಿ ಮಾಡಿದ್ದೇಕೆ? ರಾಜ್ಯದಲ್ಲಿ ಬೇರೆ ಶಿಕ್ಷಣ ತಜ್ಞರಿಲ್ಲವೇ ಎಂದು ಪ್ರಶ್ನಿಸಿದರು.
ಲಾಠಿಚಾರ್ಜ್ನಿಂದ ಬಿಜೆಪಿ ಕಾರ್ಯಕರ್ತ ಸಾವು
ಕೋಲ್ಕತಾ, ಡಿ.7 : ಪಶ್ಚಿಮಬಂಗಾಳ ಸರ್ಕಾರದ ವಿರುದ್ಧ ಬಿಜೆಪಿ ನಡೆಸುತ್ತಿದ್ದ ಪ್ರತಿಭಟನೆ ಸೋಮವಾರ ಹಿಂಸಾಚಾರಕ್ಕೆ ತಿರುಗಿದ್ದು, ಪರಿಸ್ಥಿತಿ ನಿಯಂತ್ರಿಸಲು ಪೆÇಲೀಸರು ನಡೆಸಿದ ಲಾಠಿ ಚಾರ್ಜ್ ನಿಂದಾಗಿ ಬಿಜೆಪಿ ಪಕ್ಷದ ಓರ್ವ ಕಾರ್ಯಕರ್ತ ಮೃತಪಟ್ಟಿದ್ದಾರೆ. ರಾಜ್ಯ ಸರ್ಕಾರದ ದುರಾಡಳಿತ ವಿರೋಧಿ ಬಿಜೆಪಿ ಯುವ ಮೋರ್ಚಾ ಕಳೆದ ಒಂದು ವಾರದಿಂದ ಪ್ರತಿಭಟನೆ ನಡೆಸುತ್ತಿದ್ದು, ಇಂದು ಸಿಲಿಗುರಿಯ ಮಿನಿ ಸಚಿವಾಲಯ ಕಟ್ಟಡಕ್ಕೆ ಮುತ್ತಿಗೆ ಹಾಕಲು ಯತ್ನಿಸಿದ್ದಾರೆ. ಈ ವೇಳೆ ಪೆÇಲೀಸರು ಲಾಠಿ ಚಾರ್ಜ್ ನಡೆಸಿದ್ದು, ಘಟನೆ ಪುಲಿನ್ ರಾಯ್ ಎಂಬ ಕಾರ್ಯಕರ್ತ ಮೃತಪಟ್ಟಿದ್ದಾರೆ ಎಂದು ಬಿಜೆಪಿ ಆರೋಪಿಸಿದೆ. ಪ್ರತಿಭಟನಾ ನಿರತ ಪಕ್ಷದ ಕಾರ್ಯಕರ್ತರ ಮೇಲೆ ಪೆÇಲೀಸರು ನಿರ್ದಯವಾಗಿ ಲಾಠಿ ಚಾರ್ಜ್ ಮಾಡಿದ್ದಾರೆ. ಪ್ರತಿಭಟನಾ ಮೆರವಣಿಗೆಯನ್ನು ನಮ್ಮ ಪಕ್ಷದ ಯುವ ಮೋರ್ಚಾ ಆಯೋಜಿಸಿತ್ತು. ಯುವ ಮೋರ್ಚಾದ ಕಾರ್ಮಿಕರು ಆಡಳಿತ ಕಟ್ಟಡದತ್ತ ಸಾಗುತ್ತಿದ್ದ ವೇಳೆ ಲಾಠಿ ಚಾರ್ಜ್ ಮಾಡಲಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ದಿಲೀಪ್ ಘೋಷ್ ಅವರು ಹೇಳಿದ್ದಾರೆ.
ಪೆಟ್ರೋಲ್, ಡೀಸೆಲ್ ಬೆಲೆ ಹೆಚ್ಚಳ
ನವದೆಹಲಿ, ಡಿ.7 : ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಸತತ ಆರನೇ ದಿನ ಏರಿಕೆಯಾಗಿದ್ದು ಸವಾರರಿಗೆ ಹೊರೆಯಾಗುತ್ತಿದೆ. ತೈಲ ಮಾರುಕಟ್ಟೆ ಕಂಪನಿಗಳ ಬೆಲೆ ಅಧಿಸೂಚನೆಯ ಪ್ರಕಾರ, ಪೆಟ್ರೋಲ್ ಬೆಲೆ ಲೀಟರ್ಗೆ 30 ಪೈಸೆ ಮತ್ತು ಡೀಸೆಲ್ ಬೆಲೆ ಲೀಟರ್ ಗೆ 26 ಪೈಸೆ ಹೆಚ್ಚಳವಾಗಿದೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಕಚ್ಚಾ ತೈಲ ಬೆಲೆ ಗಣನೀಯವಾಗಿ ಕಡಿಮೆ ಆಗುತ್ತಿದ್ದರೂ, ಕೊರೊನಾ ಮತ್ತು ಲಾಕ್ಡೌನ್ ಕಾರಣಗಳಿಂದ ಜನ ಸಾಮಾನ್ಯರು ಕಷ್ಟದಲ್ಲಿದ್ದರೂ, ಸಾರ್ವಜನಿಕರು ವ್ಯಾಪಕವಾದ ವಿರೋಧ ವ್ಯಕ್ತಪಡಿಸುತ್ತಿದ್ದರೂ ಇದಾವುದನ್ನು ಲೆಕ್ಕಿಸದ ಸರ್ಕಾರಿ ಒಡೆತನದ ತೈಲ ಕಂಪನಿಗಳು ಸತತವಾಗಿ ಬೆಲೆ ಏರಿಕೆಯಲ್ಲಿ ನಿರತವಾಗಿವೆ. ದೆಹಲಿಯಲ್ಲಿ ಪೆಟ್ರೋಲ್ ದರ 83.41 ರೂ.ಗಳಿಂದ 83.71 ರೂ.ಗೆ ಏರಿದರೆ. ಡೀಸೆಲ್ ಬೆಲೆ 73.61 ರೂ.ನಿಂದ 73.87 ರೂ.ಗೆ ಏರಿದೆ. ಸುಮಾರು ಎರಡು ತಿಂಗಳ ವಿರಾಮದ ನಂತರ ತೈಲ ಕಂಪನಿಗಳು ದೈನಂದಿನ ಬೆಲೆ ಪರಿಷ್ಕರಣೆಯನ್ನು ಪುನರಾರಂಭಿಸಿವೆ. ಇನ್ನು ನವೆಂಬರ್ 20ರಿಂದ 15 ಬಾರಿ ಬೆಲೆ ಏರಿಕೆಯಾಗಿದ್ದರೆ ಸತತ ಆರನೇ ದಿನ ದರ ಏರಿಕೆಯಾಗಿದೆ.