ಕೂಡಿಗೆ, ಡಿ. 7: ರಾಜ್ಯ ಸರ್ಕಾರದ ಕೃಷಿ ನೀತಿ ಯೋಜನೆ ಅಡಿಯಲ್ಲಿ ಭತ್ತ ಖರೀದಿ ಕೇಂದ್ರವನ್ನು ಆಯಾ ತಾಲೂಕು ಮಟ್ಟದಲ್ಲಿ ಆರಂಭಿಸಿ ತಾಲೂಕಿನ ರೈತರ ಭತ್ತವನ್ನು ಖರೀದಿ ಮಾಡಲು ಸರಕಾರ ಈಗಾಗಲೇ ಸೂಚನೆಯನ್ನು ನೀಡಿದೆ ಅದರಂತೆ ಜಿಲ್ಲಾಡಳಿತ ಈ ಸಾಲಿನಲ್ಲಿ ಜಿಲ್ಲೆಯಲ್ಲಿ ಮೂರು ಕೇಂದ್ರಗಳಲ್ಲಿ ಭತ್ತದ ಖರೀದಿ ಕೇಂದ್ರವನ್ನು ತೆರೆಯಲಾಗಿದ್ದು ಈಗಾಗಲೇ ಆಯಾ ತಾಲೂಕು ವ್ಯಾಪ್ತಿಯ ಫೆಡರೇಶನ್ ಮೂಲಕ ನೋಂದಣಿ ಕಾರ್ಯ ಆರಂಭವಾಗಿದೆ ಇದರಲ್ಲಿ ಭತ್ತವನ್ನು ಬೆಳೆದ ರೈತರು ನೋಂದಣಿ ಮಾಡಿಕೊಂಡು ಸರಕಾರ ನಿಗದಿ ಮಾಡಿದ ಬೆಲೆಯನ್ನು ಪಡೆದು ಕೊಳ್ಳುವಂತೆ ಮಡಿಕೇರಿ ಕ್ಷೇತ್ರದ ಶಾಸಕ ಎಂ.ಪಿ. ಅಪ್ಪಚ್ಚುರಂಜನ್ ಕರೆ ನೀಡಿದರು. ಈಗಾಗಲೇ ಕುಶಾಲನಗರದಲ್ಲಿ ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳಿಯ ಕುಶಾಲನಗರ ಶಾಖೆಯಲ್ಲಿ ಭತ್ತವನ್ನು ರೈತರಿಂದ ಖರೀದಿ ಮಾಡುವ ವಿಷಯವಾಗಿ ನೊಂದಣಿ ಕಾರ್ಯ ಆರಂಭವಾಗಿದೆ ಇದರ ಸದುಪಯೋಗವನ್ನು ತಾಲೂಕಿನ ರೈತರು ಪಡೆದುಕೊಳ್ಳುವಂತೆ ಅವರು ತಿಳಿಸಿದರು.

ಈಗಾಗಲೇ ಜಿಲ್ಲೆಯ ಮೂರು ಕೇಂದ್ರಗಳಾದ ಮಡಿಕೇರಿ ಕೃಷಿ ಉತ್ಪನ್ನ ಮಾರುಕಟ್ಟೆಯ ಕಟ್ಟಡದಲ್ಲಿ ಮತ್ತು ಗೋಣಿಕೊಪ್ಪಲು ಎಪಿಸಿಎಂಎಸ್ ನ ಕಟ್ಟಡಗಳಲ್ಲಿ ಭತ್ತದ ಖರೀದಿ ಕೇಂದ್ರದ ನೊಂದಣಿ ಅರಂಭವಾಗಿದೆ ಆಯಾ ವ್ಯಾಪ್ತಿಯ ರೈತರು ನೋಂದಣಿ ಮಾಡಿಕೊಂಡು ಪ್ರಯೋಜನಗಳನ್ನು ಪಡೆದುಕೊಳ್ಳಲು ಅವಕಾಶ ಇದೆ ಎಂದು ತಿಳಿಸಿದ್ದಾರೆ. ನೋಂದಣಿ ಕಾರ್ಯವು ಜಿಲ್ಲಾ ಆಹಾರ ಸರಬರಾಜು ಇಲಾಖೆಯ ಮುಖೇನ ಆರಂಭವಾಗಿದ್ದು, ಕೃಷಿ ಅಧಿಕಾರಿ ದೃಢೀಕರಣ ಪತ್ರದ ನಂತರ ಇಲಾಖೆಯ ನಿಯಮಾನುಸಾರವಾಗಿ ಭತ್ತವನ್ನು ಖರೀದಿಗೆ ಅನುಮತಿ ನೀಡಿ ಆಯಾ ವ್ಯಾಪ್ತಿಯ ಅಕ್ಕಿಗಿರಣಿಗಳಲ್ಲಿ ಖರೀದಿ ಮಾಡಲು ಅವಕಾಶವನ್ನು ಕಲ್ಪಿಸಲಾಗಿದೆ ಎಂದು ಕುಶಾಲನಗರ ಶಾಖೆಯ ವ್ಯವಸ್ಥಾಪಕರು ತಿಳಿಸಿದ್ದಾರೆ.