ಕುಶಾಲನಗರ, ಡಿ. 7: ಭಗವಂತನ ಅನುಗ್ರಹದೊಂದಿಗೆ ಪ್ರಾಪ್ತವಾದ ಜೀವನವನ್ನು ಸುಂದರಗೊಳಿಸುವ ಕೆಲಸ ನಮ್ಮದಾಗಬೇಕಾಗಿದೆ ಎಂದು ಶ್ರೀ ಸಂಪುಟ ನರಸಿಂಹಸ್ವಾಮಿ ಸುಬ್ರಮಣ್ಯ ಮಠದ ಪೀಠಾಧಿಪತಿ ಶ್ರೀ ವಿದ್ಯಾ ಪ್ರಸನ್ನತೀರ್ಥ ಶ್ರೀಪಾದಂಗಳವರು ತಿಳಿಸಿದರು. ಅವರು ಕುಶಾಲನಗರದ ಗಾಯತ್ರಿ ಕಲ್ಯಾಣ ಮಂಟಪದಲ್ಲಿ ಸ್ಥಳೀಯ ಮಹಿಳಾ ಭಜನಾ ಮಂಡಳಿ ವತಿಯಿಂದ ನಡೆದ ಕಾರ್ತಿಕ ಮಾಸದ ವಿಶೇಷ ಪೂಜೆಯಲ್ಲಿ ಭಾಗಿಯಾಗಿ ಧಾರ್ಮಿಕ ಪ್ರವಚನ ನೀಡಿ ಮಾತನಾಡಿದರು.

ಸರ್ವವ್ಯಾಪಿ, ಸರ್ವಾಂತರಯಾಮಿ ಭಗವಂತ ಅನುಗ್ರಹವೇ ಸಕಲ ಜೀವರಾಶಿಗಳಿಗೆ ಮೂಲ ಮತ್ತು ಜೀವನಾಧಾರ ಎಂದು ಹೇಳಿದ ಯತಿವರ್ಯರು, ಮಾನವ ನ್ಯಾಯದ ಹಾದಿಯಲ್ಲಿ ಜೀವನ ಸಾಗಿಸ ಬೇಕಿದೆ. ಬುದ್ದಿಯನ್ನು ನೂತನ ಆವಿಷ್ಕಾರಗಳನ್ನು ಕಂಡುಹಿಡಿಯಲು ಬಳಸಬೇಕು. ಸಾರ್ವಕಾಲಿಕ ಶಾಂತಿ ಸೃಷ್ಟಿಸುವುದರೊಂದಿಗೆ ಜಗತ್ತಿನ ಪ್ರತಿಯೊಬ್ಬರನ್ನು ಪ್ರೀತಿಸಬೇಕು ಎಂದರು. ಅಧರ್ಮ, ಅನ್ಯಾಯಗಳಿಗೆ ಎಡೆಮಾಡಿಕೊಡದೆ ಭಗವಂತನಿಗೆ ಜೀವನ ಸಮರ್ಪಿಸುವ ರೀತಿಯಲ್ಲಿ ಮುಂದುವರೆಯಬೇಕು. ಸನಾತನ ಧರ್ಮಸಂಸ್ಕøತಿಯೊಂದಿಗೆ ಜೀವನ ಸುಂದರವಾಗಿಸಬೇಕಿದೆ.

ಕಷ್ಟಕಾಲದಲ್ಲಿ ದೃತಿಗೆಡದೆ ಆಶಾವಾದಿಯಾಗುವುದರೊಂದಿಗೆ ಜೀವನ ಸಾಗಿಸುವುದು ಉತ್ತಮ ಎಂದರು. ಗಾಯತ್ರಿ ಕಲ್ಯಾಣ ಮಂಟಪದಲ್ಲಿ ನಡೆದ ಕಾರ್ತಿಕ ಮಾಸದ ವಿಶೇಷ ಪೂಜಾ ಕೈಂಕರ್ಯಗಳನ್ನು ಶ್ರೀಗಳು ನಡೆಸಿಕೊಟ್ಟರು. ಮಹಿಳಾ ಭಜನಾ ಮಂಡಳಿಯಿಂದ ಭಜನೆ, ಕೀರ್ತನೆಗಳು ನಡೆದವು. ಭಜನಾ ಮಂಡಳಿ ಪ್ರಮುಖರಾದ ರಮಾವಿಜಯೇಂದ್ರ, ಪದ್ಮ ಪುರುಷೋತ್ತಮ್, ಶೈಲಾ ಪುಂಡರೀಕಾಕ್ಷ ಸೇರಿದಂತೆ ಮಹಿಳಾ ಭಜನಾ ಮಂಡಳಿ ಪ್ರಮುಖರು, ಸದಸ್ಯರು ಇದ್ದರು.