ಕುಶಾಲನಗರ, ಡಿ. 7: ಕೊಡಗು ಜಿಲ್ಲೆಯ ವಿವಿಧೆಡೆ ಕಾಡಿನಿಂದ ನಾಡಿಗೆ ಲಗ್ಗೆಯಿಡುತ್ತಿರುವ ಕಾಡಾನೆ ಗಳ ಉಪಟಳಕ್ಕೆ ಶಾಶ್ವತ ಪರಿಹಾರ ಕಂಡುಹಿಡಿದಿರುವ ಅರಣ್ಯ ಇಲಾಖೆಯ ಕೆಲವೊಂದು ಅವೈಜ್ಞಾನಿಕ ಯೋಜನೆಗಳಿಂದ ಇತ್ತ ರೈತರು ಮತ್ತು ವನ್ಯಜೀವಿಗಳ ಜೀವಕ್ಕೆ ಕುತ್ತು ಬರುವ ಪರಿಸ್ಥಿತಿ ಕೂಡ ಎದುರಾಗಲಿದೆ. ಆನೆಗಳ ಓಡಾಟ ವನ್ನು ನಿಯಂತ್ರಿಸಲು ಸರಕಾರದ ಮೂಲಕ ಅರಣ್ಯ ಇಲಾಖೆ ರೈಲ್ವೇ ಕಂಬಿ ಅಳವಡಿಸುವ ಬೃಹತ್ ಯೋಜನೆಯೊಂದನ್ನು ಜಿಲ್ಲೆಯ ಕೆಲವೆಡೆ ಅಳವಡಿಸಲಾಗಿದ್ದು ಇದು ಆನೆಗಳ ನಿರಂತರ ಓಡಾಟವನ್ನು ತಪ್ಪಿಸುವಲ್ಲಿ ಸಫಲವಾದರೂ ಕಾಡಾನೆಗಳ ಆವಾಸಸ್ಥಾನಕ್ಕೆ ತೆರಳುವ ಆನೆ ಮಾರ್ಗಗಳಿಗೆ ಅಡ್ಡಿಯುಂಟಾಗಿ ರುವುದಂತೂ ಸತ್ಯ. ಈ ನಡುವೆ ಕಾಫಿ ತೋಟ ಮತ್ತಿತರ ಕೃಷಿ ಚಟುವಟಿಕೆಗಳನ್ನು ರಕ್ಷಿಸಲು ರೈತಾಪಿ ವರ್ಗ ಸೋಲಾರ್ ಬೇಲಿ ಅಳವಡಿಸಿರುವುದು ಒಂದೆಡೆಯಾದರೆ ಇತ್ತೀಚಿನ ರೈಲ್ವೇ ಕಂಬಿ ಯೋಜನೆ ಆನೆಗಳ ಸರಾಗವಾದ ಓಡಾಟಕ್ಕೆ ಅಡ್ಡಿಯುಂಟು ಮಾಡುವುದ ರೊಂದಿಗೆ ಜೀವಕ್ಕೆ ಅಪಾಯ ಕೂಡ ಎದುರಾಗುತ್ತಿದೆ. ದಿನವೊಂದಕ್ಕೆ 100 ರಿಂದ 150 ಕಿಮೀ ವ್ಯಾಪ್ತಿಯಲ್ಲಿ ಓಡಾಟ ನಡೆಸುವ ಕಾಡಾನೆಗಳಿಗೆ ಟನ್‍ಗಟ್ಟಲೆ ಆಹಾರದ ಅಗತ್ಯತೆ ಇದೆ. 100 ಲೀಟರ್‍ಗೂ ಅಧಿಕ ಕುಡಿಯುವ ನೀರಿನ ಅವಶ್ಯಕತೆಗಾಗಿ ಆನೆಗಳು ಹೆಚ್ಚಿನ ಪ್ರಮಾಣದಲ್ಲಿ ನದಿ ಕೆರೆಗಳನ್ನು ಅವಲಂಬಿತವಾಗಿವೆ. ಇದೀಗ ಕುಶಾಲನಗರ ಸುತ್ತಮುತ್ತ ಒಂದೆಡೆ ರೈಲ್ವೇ ಕಂಬಿ ಯೋಜನೆ ಇನ್ನೊಂದೆಡೆ ಕಾಫಿ ತೋಟಗಳ ಸೋಲಾರ್ ಬೇಲಿ ಇನ್ನು ಹಾರಂಗಿ ಜಲಾಶಯ ಯೋಜನೆ ಇವೆಲ್ಲಾ ಆನೆಗಳ ಸಂಚಾರಕ್ಕೆ ಅಡ್ಡಿಯುಂಟಾ ಗಲು ಪ್ರಮುಖ ಕಾರಣ ಎನ್ನಲಾಗಿದೆ.
ಈ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ಸಿದ್ದಾಪುರ ಬಳಿಯ ಬರಡಿಯಿಂದ ರಂಗಸಮುದ್ರ ತನಕ ರೈಲ್ವೇ ಬ್ಯಾರಿಕೆಡ್ ಅಳವಡಿಸುವ ಮೂಲಕ ಆನೆ ಸಂಚಾರಕ್ಕೆ ತಡೆಯುಂಟು ಮಾಡಿದ್ದಾರೆ. ಸುಮಾರು 10 ಕೋಟಿಗೂ ಅಧಿಕ ವೆಚ್ಚದಲ್ಲಿ ಈ ಯೋಜನೆ ಕಾರ್ಯಗತ ಮಾಡಲಾಗಿದ್ದು ಇದೀಗ ಕಾವೇರಿ ನದಿ ದಾಟಿ ಆನೆಗಳ ಬರಲು ಪರದಾಡುವ ಸ್ಥಿತಿ ಸೃಷ್ಠಿಯಾಗಿದೆ. ಜಿಲ್ಲೆಯ ಒಳಭಾಗದಲ್ಲಿರುವ ಆನೆಗಳು ತಮ್ಮ ಮೂಲ ಆವಾಸ ಸ್ಥಾನಕ್ಕೆ ತೆರಳುವ ದಾರಿಯಲ್ಲಿ ರೈಲ್ವೇ ಬ್ಯಾರಿಕೆಡ್, ಸೋಲಾರ್ ಬೇಲಿಗಳು ಇರುವ ಕಾರಣ ಎಲ್ಲೆಂದರಲ್ಲಿ ಓಡಾಡುವ ಪರಿಸ್ಥಿತಿ ಸೃಷ್ಠಿಯಾಗ ತೊಡಗಿದೆ. ಇದರ ಪರಿಣಾಮವೇ ಇತ್ತೀಚೆಗೆ ಎರಡು ಆನೆಗಳು ವಿದ್ಯುತ್ ಅವಘಡಕ್ಕೆ ಸಿಲುಕಿ ಸಾವನ್ನಪ್ಪಿದ ದಾರುಣ ಘಟನೆಗಳು ಎದುರಾಗಿವೆ ಎಂದು ಸ್ಥಳೀಯರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಅಭ್ಯತ್‍ಮಂಗಲ ತೋಟವೊಂದರಲ್ಲಿ ಮತ್ತು ಹೊಸಕೋಟೆ ಬಳಿ ಕೃಷಿ ಭೂಮಿಯಲ್ಲಿ ಇತ್ತೀಚಿನ ದಿನಗಳಲ್ಲಿ ಎರಡು ಕಾಡಾನೆಗಳು ವಿದ್ಯುತ್ ತಂತಿ ತಗುಲಿ ಧಾರುಣವಾಗಿ ಮೃತಪಟ್ಟ ಘಟನೆಗಳನ್ನು ಸ್ಮರಿಸಬಹುದು.
ಬರಡಿಯಿಂದ ರಂಗಸಮುದ್ರ ತನಕ ನಿರ್ಮಿಸಿರುವ ರೈಲ್ವೇ ಬ್ಯಾರಿಕೆಡ್ ನಡುವೆ ಸುಮಾರು 12 ಗೇಟ್‍ಗಳನ್ನು ಅಳವಡಿಸಲಾಗುವುದು. ಈ ಮೂಲಕ ಆನೆಗಳನ್ನು ನದಿ ದಾಟಿ ಓಡಿಸಲು ಯೋಜನೆ ಇರುವುದಾಗಿ ಅರಣ್ಯಾಧಿಕಾರಿ ಅನನ್ಯಕುಮಾರ್ `ಶಕ್ತಿ'ಯೊಂದಿಗೆ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ. ಇಲ್ಲಿ ಮುಖ್ಯ ಅಪಾಯಕಾರಿ ವಿಷಯವೊಂದನ್ನು ಈ ಭಾಗದ ಕಾಫಿ ಬೆಳೆಗಾರ ಮುಂಡ್ರಮನೆ ಸುಧೀಶ್ `ಶಕ್ತಿ' ಗಮನಕ್ಕೆ ತಂದಿದ್ದು ರೈಲ್ವೇ ಬ್ಯಾರಿಕೆಡ್ ನಡುವೆ ಹಾದುಹೋಗುವ 11 ಕೆವಿ ಸಾಮಥ್ರ್ಯದ ವಿದ್ಯುತ್ ಲೈನ್‍ಗಳು ಅಪಾಯಕಾರಿಯಾಗಿವೆ. ಕೃಷಿಕರ ಗದ್ದೆ ತೋಟಗಳಿಗೆ ನೀರು ಹಾಯಿಸಲು ಪಂಪ್‍ಸೆಟ್‍ಗಳಿಗೆ ಬ್ಯಾರಿಕೆಡ್ ಮೇಲ್ಭಾಗದಲ್ಲಿ ವಿದ್ಯುತ್ ತಂತಿಗಳನ್ನು ಹಾಯಿಸಲಾಗಿದ್ದು ಅಕಸ್ಮಾತ್ ತಂತಿಗಳು ತುಂಡಾಗಿ ಬಿದ್ದಲ್ಲಿ ವನ್ಯಜೀವಿಗಳಿಗೆ ಹಾಗೂ ಮನುಷ್ಯರಿಗೆ ಭಾರೀ ಅಪಾಯ ಉಂಟಾಗುವ ಸಾಧ್ಯತೆಯಿದೆ. ಸುಮಾರು 10 ಕಿಮಿ ದೂರದ ತನಕ ಕಬ್ಬಿಣದ ಬ್ಯಾರಿಕೆಡ್ ಗಳಿಗೆ ವಿದ್ಯುತ್ ಪ್ರವಾಹಿಸಿ ಭಾರೀ ಪ್ರಾಣಾಪಾಯ ಉಂಟಾಗಲಿದೆ. ಇದಕ್ಕೆ ತಕ್ಷಣ ಕ್ರಮಕೈಗೊಳ್ಳಬೇಕೆಂದು ಸುಧೀಶ್ ಶಕ್ತಿ ಮೂಲಕ ಕೋರಿದ್ದಾರೆ.
ಬರಡಿಯಿಂದ ರಂಗಸಮುದ್ರ ತನಕ ಅಂದಾಜು 10 ಕಿಮೀ ಅಂತರ ದಲ್ಲಿ ಕಾವೇರಿ ನದಿ ತಟದಲ್ಲಿ 100 ಕ್ಕೂ ಅಧಿಕ ಪಂಪ್‍ಶೆಡ್‍ಗಳಿದ್ದು ಇವುಗಳಿಗೆ ಬ್ಯಾರಿಕೆಡ್ ಮೇಲ್ಭಾಗದಲ್ಲಿ ಯಾವುದೇ ಸುರಕ್ಷಿತೆಗಳಿಲ್ಲದೆ ವಿದ್ಯುತ್ ಲೈನ್‍ಗಳ ಸಂಪರ್ಕ ಹಾದು ಹೋಗುತ್ತಿರುವುದು ಕಂಡುಬಂದ ದೃಶ್ಯವಾಗಿದೆ. ಇದಕ್ಕೆ ತಕ್ಷಣ ಪರಿಹಾರ ಹುಡುಕಿ ಮುಂದೆ ಉಂಟಾಗಲಿರುವ ಭಾರೀ ಅಪಾಯವನ್ನು ತಪ್ಪಿಸಲು ವಿದ್ಯುತ್ ಇಲಾಖೆ ಮತ್ತು ಅರಣ್ಯ ಇಲಾಖೆ ಕ್ರಮವಹಿಸಬೇಕಾಗಿದೆ.
ಮಾಲ್ದಾರೆ, ದುಬಾರೆ, ದೊಡ್ಡಹರವೆ, ಚಿಕ್ಕನಹಳ್ಳಿ ಮೀಸಲು ಅರಣ್ಯ ವ್ಯಾಪ್ತಿಯಿಂದ ಆನೆಗಳ ಸಂಚಾರ ನಿರಂತರವಾಗಿದ್ದು ಆನೆಗಳಿಗೆ ಆಹಾರದ ಕೊರತೆ ಎದುರಾಗಿದೆ. ಬಹುತೇಕ ತೋಟ ಗಳಲ್ಲಿ ವಿದ್ಯುತ್ ತಂತಿಗಳು ಕೆಳಭಾಗದಲ್ಲಿ ಅಳವಡಿಸಲಾಗಿದೆ. ಆನೆಗಳು ಆಹಾರ ಅರಸಿಕೊಂಡು ಬರುವ ಸಂದರ್ಭ ಈ ತಂತಿಗಳು ಸೊಂಡಿಲಿಗೆ ತಾಗಿ ಅಪಾಯ ಎದುರಾಗುತ್ತಿದೆ. ವಾಲ್ನೂರು, ಬರಡಿ, ತ್ಯಾಗತ್ತೂರು ವ್ಯಾಪ್ತಿಯಲ್ಲಿ 10 ಕ್ಕೂ ಅಧಿಕ ಕಡೆ ವಿದ್ಯುತ್ ತಂತಿಗಳು ಕೆಳಭಾಗದಲ್ಲಿ ಹಾದುಹೋಗುತ್ತಿರುವ ಬಗ್ಗೆ ಅರಣ್ಯ ಇಲಾಖೆಯಿಂದ ಮಾಹಿತಿ ಹೋದರೂ ಸಂಬಂಧಿಸಿದ ಇಲಾಖೆಗಳು ಕ್ರಮಕೈಗೊಂಡಿಲ್ಲ ಎನ್ನುವ ದೂರುಗಳು ಕೇಳಿಬಂದಿವೆ.
ದಿಕ್ಕುತಪ್ಪಿ ಬರುವ ಆನೆಗಳ ಹಿಂಡು ಈ ಸಂದರ್ಭ ಅಪಾಯಕ್ಕೆ ಸಿಲುಕಿ ಅನಾಹುತಗಳು ಆಗದಂತೆ ಕೂಡ ಅರಣ್ಯ ಇಲಾಖೆ ಮತ್ತು ವಿದ್ಯುತ್ ಇಲಾಖೆ ಎಚ್ಚರವಹಿಸ ಬೇಕಿದೆ. ಆನೆಗಳಿಗೆ ಬೇಕಾದ ಆಹಾರವನ್ನು ಕಾಡಲ್ಲಿ ಬೆಳೆಸಲು ತಳಮಟ್ಟದ ನೌಕರರೊಂದಿಗೆ ಇಲಾಖೆ ಕಾರ್ಯಯೋಜನೆ ಸಿದ್ದಪಡಿಸಬೇಕು. ಅರಣ್ಯದಲ್ಲಿ ಹುಲ್ಲುಬೀಜ, ಪೊಂಗಾರೆ ಗಿಡಗಳು, ಹಣ್ಣಿನ ಗಿಡಗಳನ್ನು ಬೆಳೆಸುವಂತಾಗ ಬೇಕು. ಮೀಸಲು ಅರಣ್ಯದ ಒಳಭಾಗದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕೆರೆಗಳನ್ನು ನಿರ್ಮಿಸಬೇಕು. ಈ ರೀತಿ ನಾಡಿಗೆ ದಾಳಿಯಿಡುವ ಕಾಡಾನೆಗಳ ಸಮಸ್ಯೆಗೆ ಪರಿಹಾರ ಹುಡುಕಬೇಕಾಗಿದೆ ಎನ್ನುವುದು ನಿವೃತ್ತ ಅರಣ್ಯಾಧಿ ಕಾರಿ ಎಂ.ಎಸ್. ಚಿಣ್ಣಪ್ಪ ಅವರ ಅಭಿಪ್ರಾಯವಾಗಿದೆ.
-ಚಂದ್ರಮೋಹನ್