ಗೋಣಿಕೊಪ್ಪ ವರದಿ, ಡಿ. 6: ಕೃಷಿಯಲ್ಲಿ ಆದಾಯ ದ್ವಿಗುಣಕ್ಕೆ ಆದ್ಯತೆ ನೀಡಬೇಕಿದೆ ಎಂದು ಬೆಂಗಳೂರು ಭಾರತೀಯ ಅನುಸಂಧಾನ ಕೃಷಿ ಸಂಶೋಧನಾ ಸಂಸ್ಥೆ ನಿರ್ದೇಶಕ ಡಾ. ವಿ. ವೆಂಕಟಸುಬ್ರಮಣ್ಯನ್ ಸಲಹೆ ನೀಡಿದರು. ಕೆವಿಕೆ ಸಭಾಂಗಣದಲ್ಲಿ ಆಯೋಜಿ ಸಿದ್ದ ವೈಜ್ಞಾನಿಕ ಸಲಹಾ ಸಮಿತಿ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದರು. ವೆಚ್ಚ ಕಡಿಮೆಗೊಳಿಸಿ ಉತ್ಪಾದನೆ ಹೆಚ್ಚಿಸಲು ರೈತರು ಹೆಚ್ಚು ಆದಾಯ ದ್ವಿಗುಣಗೊಳಿಸಲು ವೈಜ್ಞಾನಿಕ ಕೃಷಿ ಪದ್ದತಿಯಿಂದ ಸಾಧ್ಯವಿದೆ.

ನೂತನ ತಂತ್ರಗಾರಿಕೆಯನ್ನು ಬಳಸಿಕೊಂಡು ಉತ್ಪಾದನಾ ವೆಚ್ಚವನ್ನು ತಗ್ಗಿಸುವತ್ತ ಕೃಷಿಕ ಗಮನ ಹರಿಸಬೇಕು ಎಂದು ಅವರು ಸಲಹೆಯಿತ್ತರು.

ಮಣ್ಣಿಗೆ ಅನುಗುಣವಾಗಿ ಗೊಬ್ಬರ ನೀಡುವುದು, ದುಂದುವೆಚ್ಚ ತಗ್ಗಿಸುತ್ತದೆ. ಸಾಕಷ್ಟು ರೈತರು ವಿಭಿನ್ನ ಪ್ರಯತ್ನದ ಮೂಲಕ ಕೃಷಿಯಲ್ಲಿ ತೊಡಗಿ ಕೊಳ್ಳುತ್ತಾರೆ. ಇಂತಹ ಕೃಷಿಕ ಸುತ್ತಲಿನ ರೈತರ ಅಭಿವೃದ್ಧಿಗೆ ತನ್ನ ತಂತ್ರ ಗಾರಿಕೆಯನ್ನು ಹಂಚಿಕೊಳ್ಳುವುದರಿಂದ ಕೃಷಿಗೆ ಪ್ರೋತ್ಸಾಹ ನೀಡಿದಂತಾಗುತ್ತದೆ.

ರೈತ ಉತ್ಪಾದಕ ಸಂಘದಿಂದ ಸ್ಥಳೀಯ ರೈತರ ಅಭಿವೃದ್ಧಿಗೆ ಬೆಂಬಲ ದೊರೆಯುತ್ತದೆ. ಉತ್ತಮ ಮಾರುಕಟ್ಟೆ ಕೂಡ ನೀಡಬಹುದಾಗಿದೆ ಎಂದರು.

ಕೆವಿಕೆ ಮುಖ್ಯಸ್ಥ ಡಾ. ಸಾಜುಜಾರ್ಜ್ ತಮ್ಮ ಕೇಂದ್ರದ ಅಭಿವೃದ್ಧಿ ಕಾರ್ಯಗಳ ಬಗ್ಗೆ ಮಾಹಿತಿ ನೀಡಿದರು. ಡಾ. ಕೆ.ಎ. ದೇವಯ್ಯ ಅತ್ತೂರು ಸಸ್ಯಕ್ಷೇತ್ರದ ಮೂಲಕ ಅನುಷ್ಠಾನಗೊಳಿಸಿದ ನೂತನ ಕೃಷಿ ಪದ್ಧತಿ, ರೈತರೊಂದಿಗೆ ಅಳವಡಿಸಿರುವ ಕಾಳುಮೆಣಸು, ಏಲಕ್ಕಿ, ತರಕಾರಿ ಬೆಳೆಗಳ ಅಭಿವೃದ್ಧಿಯ ಬಗ್ಗೆ ಮಾಹಿತಿ ನೀಡಿದರು.

ಕೆವಿಕೆಯಿಂದ ಹೊರ ತಂದಿರುವ ಮಿಶ್ರತಳಿ ಕರುಗಳ ಪಾಲನೆಯಿಂದ ಲಾಭದಾಯಕ ಹೈನುಗಾರಿಕೆ ಸಂಚಿಕೆ ಯನ್ನು ಬಿಡುಗಡೆಗೊಳಿಸಲಾಯಿತು. ನಲ್ಲೂರು ಗ್ರಾಮದ ರೈತ ಸೋಮೇಂಗಡ ಗಣೇಶ್ ತಿಮ್ಮಯ್ಯ ಅವರಿಗೆ ಭಾರತೀಯ ಕೃಷಿ ಅನುಸಂಧಾನ ಪರಿಷತ್‍ನಿಂದ ಘೋಷಿಸಿದ್ದ ಜಗಜೀವನ್‍ರಾಂ ಕೃಷಿ ಸಮ್ಮಾನ್ ರಾಷ್ಟ್ರ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಶಿವಮೊಗ್ಗ ಯುಎಹೆಚ್‍ಎಸ್ ವಿಸ್ತರಣಾ ನಿರ್ದೇಶಕ ಡಾ. ಕೆ.ಸಿ ಶಶಿಧರ್, ಕೆವಿಕೆ ನೋಡಲ್ ಅಧಿಕಾರಿ ಎಂ. ಹಂಜಿ, ಪೊನ್ನಂಪೇಟೆ ಅರಣ್ಯ ಕಾಲೇಜು ಮುಖ್ಯಸ್ಥ ಡಾ. ಚೆಪ್ಪುಡೀರ ಜಿ. ಕುಶಾಲಪ್ಪ, ಕೃಷಿ ಇಲಾಖೆ ಜಂಟಿ ನಿರ್ದೇಶಕಿ ಶಭೀನಾ ಶೇಕ್, ತೋಟ ಗಾರಿಕಾ ಇಲಾಖೆ ಉಪ ನಿರ್ದೇಶಕ ಶಶಿಧರ್, ಕೆವಿಕೆ ವಿಜ್ಞಾನಿಗಳಾದ ಡಾ. ವೀರೇಂದ್ರಕುಮಾರ್, ಡಾ. ಪ್ರಭಾಕರ್, ಡಾ. ಸುರೇಶ್ ಇತರರಿದ್ದರು.