ಮಡಿಕೇರಿ, ಡಿ. 6: ಕೊಡಗು ಜಿಲ್ಲೆಯಲ್ಲಿ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಪ್ರತಿ ಆರು ತಿಂಗಳಿಗೊಮ್ಮೆ ನಡೆಯುತ್ತಿದ್ದ ಮಾಜಿ ಸೈನಿಕರ ಸಮಸ್ಯೆಗಳಿಗೆ ಸಂಬಂಧಿಸಿದ ಅದಾಲತ್ ಕಳೆದ ಮೂರು ವರ್ಷಗಳಿಂದ ನಡೆಯದಿರುವ ಕುರಿತು ಮಾಜಿ ಸೈನಿಕರ ಸಂಘದ ವಾರ್ಷಿಕ ಮಹಾಸಭೆಯಲ್ಲಿ ಆಕ್ಷೇಪ ವ್ಯಕ್ತಗೊಂಡಿತು.ಸಂಘದ ಅಧ್ಯಕ್ಷ ನಿವೃತ್ತ ಮೇಜರ್ ಜನರಲ್ ಬಿ.ಎ. ಕಾರ್ಯಪ್ಪ ಅವರ ಅಧ್ಯಕ್ಷತೆಯಲ್ಲಿ ನಗರದ ಹೊಟೇಲ್ ಸಮುದ್ರ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ತಕ್ಷಣ ಅದಾಲತ್ ನಡೆಸಿ ಸೈನಿಕರ ಸಮಸ್ಯೆಗೆ ಪರಿಹಾರ ಸೂಚಿಸುವಂತೆ ಆಗ್ರಹಿಸಲು ನಿರ್ಧರಿಸಲಾಯಿತು. ಈ ಹಿಂದೆ ಸಂಘದ ಒತ್ತಾಯದಂತೆ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಶಾಸಕರ ನಿರ್ದೇಶನದಂತೆ ಕೇವಲ ಸೈನಿಕರ ಪುನರ್ ವಸತಿ ಇಲಾಖೆಯ ಸಭೆಯೊಂದನ್ನು ಮಾತ್ರ ನಡೆಸಲಾಗಿದೆ. ಆದರೆ ಈ ಹಿಂದಿನಿಂದಲೂ ಆರು ತಿಂಗಳಿಗೊಮ್ಮೆ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ (ಮೊದಲ ಪುಟದಿಂದ) ಜರುಗುತ್ತಿದ್ದ ಅದಾಲತ್ ನಡೆದಿಲ್ಲ. ಇದರಿಂದ ಹಲವಾರು ಸಮಸ್ಯೆಗಳು ಮಾಜಿ ಯೋಧರಿಗೆ ಎದುರಾಗುತ್ತಿರುವ ಬಗ್ಗೆ ಚರ್ಚೆ ನಡೆಯಿತು. ಜಿಲ್ಲೆಯಲ್ಲಿ ಸರಕಾರಿ ಜಾಗವಿದ್ದರೂ ಮಾಜಿ ಯೋಧರಿಗೆ ಭೂ ಮಂಜೂರಾತಿ ಮಾಡುತ್ತಿಲ್ಲ. ಈ ಬಗ್ಗೆ ಕಂದಾಯ ಇಲಾಖೆಗಳ ಸಿಬ್ಬಂದಿಗಳು ನಿರ್ಲಕ್ಷ್ಯ ತೋರು ತ್ತಿದ್ದಾರೆ. ಈ ಕುರಿತು ಮುಂದಿನ ದಿನದಲ್ಲಿ ಬೃಹತ್ ರ್ಯಾಲಿ ಸಂಘಟಿಸಿ ಹೋರಾಡುವಂತೆ ಹಾಗೂ ಜಿಲ್ಲಾಧಿಕಾರಿಗಳು ತಕ್ಷಣ ಅದಾಲತ್ ನಡೆಸುವಂತೆ ಒತ್ತಾಯಿಸಲು ಸಭೆಯಲ್ಲಿ ನಿರ್ಧರಿಸಲಾಯಿತು.
ಆರ್ಮಿ ಕ್ಯಾಂಟೀನ್, ಇಸಿಎಚ್ಎಸ್ ಸೌಲಭ್ಯ ಸೇರಿದಂತೆ ಇನ್ನಿತರ ವಿಚಾರಗಳ ಕುರಿತು ಚರ್ಚೆ ನಡೆಯಿತು. ಸಂಘದ ಕಾರ್ಯದರ್ಶಿ ನಿವೃತ್ತ ಮೇಜರ್ ಓಡಿಯಂಡ ಎಸ್. ಚಿಂಗಪ್ಪ ಅವರು ಸಂಘದ ಚಟುವಟಿಕೆ ಹಾಗೂ ಇತರ ವ್ಯವಹಾರಗಳ ಕುರಿತು ವಿವರವಿತ್ತು ಸ್ವಾಗತಿಸಿದರು. ಸಭೆಯಲ್ಲಿ ಸಂಘದ ಪದಾಧಿಕಾರಿಗಳಾದ ಮಾಜಿ ಅಧಿಕಾರಿಗಳಾದ ಕ|| ನೆರ್ಪಂಡ ಚಿಣ್ಣಪ್ಪ, ಏರ್ ಕಮಾಂಡರ್ ದೇವಯ್ಯ, ಕ|| ಅಯ್ಯಪ್ಪ, ಕ|| ಜೋಯಪ್ಪ, ಕ|| ಗಣೇಶ್, ಮೇಜರ್ ಮಂದಪ್ಪ ಮತ್ತಿತರರು ಪಾಲ್ಗೊಂಡಿದ್ದರು.