ಕೂಡಿಗೆ, ಡಿ. 6: ಭಾವನೆಗಳನ್ನು ಬೆಳೆಸುವುದರ ಮೂಲಕ ಸಂಘಟನೆಯ ಶಕ್ತಿಯು ಆಡಳಿತಾತ್ಮಕವಾಗಿ ಕಾರ್ಯನಿರ್ವಹಿಸಲು ಸಹಕಾರವಾಗುತ್ತದೆ. ಅಲ್ಲದೆ ಸಂಘಟನೆಯ ಮೂಲಕ ಬದುಕಿನ ಮಟ್ಟವನ್ನು ಹೆಚ್ಚಿಸಿಕೊಳ್ಳಲು ಪೂರಕವಾಗುತ್ತದೆ ಎಂದು ಕೂಡಿಗೆಯ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆಯ ಉಪ ನಿರ್ದೇಶಕ ಎ. ಶ್ರೀಧರನ್ ಅಭಿಪ್ರಾಯ ವ್ಯಕ್ತಪಡಿಸಿದರು.
ಕೂಡಿಗೆಯ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆಯ ಸಭಾಂಗಣದಲ್ಲಿ ಕರ್ನಾಟಕ ರಾಜ್ಯ ಸಾರ್ವಜನಿಕ ಶಿಕ್ಷಣ ಇಲಾಖೆಯ ಲಿಪಿಕ ನೌಕರರ, ವಾಹನ ಚಾಲಕರ ಮತ್ತು ಗ್ರೂಪ್ ಡಿ ನೌಕರರ ಸಂಘದ ಸೋಮವಾರಪೇಟೆ ತಾಲೂಕು ಘಟಕದ ವಾರ್ಷಿಕ ಮಹಾಸಭೆಯನ್ನು ಉದ್ಘಾಟಿಸಿ ಮಾತನಾಡಿದರು.
ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಆಗಮಿಸಿದ ರಾಜ್ಯ ಬೋಧಕೇತರ ಸಂಘದ ಸಂಘಟನಾ ಕಾರ್ಯದರ್ಶಿ ನಾಗಭೂಷಣ ಮಾತನಾಡಿ, ಸಂಘಟನೆಯ ಮೂಲಕ ಒಗ್ಗೂಡಿ ರಚನಾತ್ಮಕವಾಗಿ ಚಿಂತನೆಗಳನ್ನು ಮಾಡಬೇಕು ಎಂದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ತಾಲೂಕು ಬೋಧಕೇತರ ನೌಕರರ ಸಂಘದ ಅಧ್ಯಕ್ಷ ಹೆಚ್.ಆರ್. ಸುರೇಶ್ ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಕ ಡಾ. ಸದಾಶಿವಯ್ಯ ಎಸ್. ಪಲ್ಲೇದ್ ಕುಶಾಲನಗರ ಸರಕಾರಿ ಪದವಿಪೂರ್ವ ಕಾಲೇಜಿನ ಚಿತ್ರಕಲಾ ಶಿಕ್ಷಕ ಊ.ರಾ. ನಾಗೇಶ್, ಡಯಟ್ ಹಿರಿಯ ಉಪನ್ಯಾಸಕ ಸಿದ್ದೇಶ್, ಕೆ.ವಿ. ಸುರೇಶ್, ರಾಜ್ಯ ನೌಕರರ ಸಂಘದ ಖಜಾಂಚಿ ದಿನೇಶ್, ತಾಲೂಕು ಸಂಘದ ಉಪಾಧ್ಯಕ್ಷ ರಾಜೇಶ್, ಕಾರ್ಯದರ್ಶಿ ಯಶೋಧ ಸೇರಿದಂತೆ ಸಮಿತಿಯ ಸದಸ್ಯರು ಹಾಜರಿದ್ದರು.
ಕಾರ್ಯಕ್ರಮದಲ್ಲಿ ತಾಲೂಕು ಮಟ್ಟದಲ್ಲಿ ಎಸ್‍ಎಸ್‍ಎಲ್‍ಸಿ ಮತ್ತು ಪಿಯು ಪರೀಕ್ಷೆಯಲ್ಲಿ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳಿಗೆ ಮತ್ತು ನಿವೃತ್ತ ನೌಕರಿಗೆ ಸಂಘದ ವತಿಯಿಂದ ಸನ್ಮಾನಿಸಲಾಯಿತು. ರಾಜೇಶ್ ಸ್ವಾಗತಿಸಿ, ಮೋಹನ್ ದಾಸ್ ನಿರೂಪಿಸಿ, ಶೈನಿ ವಂದಿಸಿದರು.