ಗೋಣಿಕೊಪ್ಪ ವರದಿ, ಡಿ. 6: ಪೊನ್ನಂಪೇಟೆ ಕರ್ನಾಟಕ ಪಬ್ಲಿಕ್ ಶಾಲಾ ಮೈದಾನದಲ್ಲಿ ಹಾಕಿ ಕರ್ನಾಟಕ, ಹಾಕಿ ಕೂರ್ಗ್, ಪೊನ್ನಂಪೇಟೆ ಸ್ಪೋಟ್ರ್ಸ್ ಹಾಸ್ಟೆಲ್ ಸಹಯೋಗದಲ್ಲಿ ನಡೆದ ಫೈಸೈಡ್ ಪುರುಷರ ರಿಂಕ್ ಹಾಕಿ ಟೂರ್ನಿಯಲ್ಲಿ ಯುಎಸ್‍ಸಿ ಬೇರಳಿನಾಡ್ ಚಾಂಪಿಯನ್, ಬೊಟ್ಯತ್ನಾಡ್ ತಂಡವು ರನ್ನರ್ ಅಪ್ ಸ್ಥಾನ ಪಡೆದುಕೊಂಡಿತು.

ಭಾನುವಾರ ನಡೆದ ಫೈನಲ್ ಪಂದ್ಯದಲ್ಲಿ ಯುಎಸ್‍ಸಿ ಬೇರಳಿನಾಡ್ ತಂಡವು ಬೊಟ್ಯತ್ನಾಡ್ ತಂಡವನ್ನು 5-3 ಗೋಲುಗಳಿಂದ ಮಣಿಸಿ ಚಾಂಪಿಯನ್ ಪಟ್ಟ ಅಲಂಕರಿಸಿತು. ಬೇರಳಿನಾಡ್ ಪರ ಶೇಷಗೌಡ, ರಾಹೀಲ್ ತಲಾ ಎರಡು ಗೋಲು ಹೊಡೆದು ಗೆಲುವಿನ ರೂವಾರಿಯಾದರು. ಆಭರಣ್ 1 ಗೋಲು ಹೊಡೆದು ಗೆಲುವಿನ ಅಂತರ ಹೆಚ್ಚಿಸುವಲ್ಲಿ ಸಫಲರಾದರು. ಬೊಟ್ಯತ್ನಾಡ್ ಪರ ಮುಕುಲ್ ಶರ್ಮ 2, ರಂಜಿತ್ ಅಯ್ಯಪ್ಪ 1 ಗೋಲು ಹೊಡೆದರು.

ಸೆಮಿಫೈನಲ್‍ನಲ್ಲಿ ಬೊಟ್ಯತ್ನಾಡ್ ತಂಡವು ಅತ್ತೂರು ಸ್ಪೋಟ್ರ್ಸ್ ಕ್ಲಬ್ ತಂಡವನ್ನು ಟೈಬ್ರೇಕರ್‍ನಲ್ಲಿ 4-2 ಗೋಲುಗಳಿಂದ ಸೋಲಿಸಿತು. ಬೊಟ್ಯತ್ನಾಡ್ ಪರ ಮುಖುಲ್ ಶರ್ಮ, ನಿತಿನ್ ತಿಮ್ಮಯ್ಯ, ರಂಜನ್ ಅಯ್ಯಪ್ಪ, ಅಯ್ಯಪ್ಪ ತಲಾ ಒಂದೊಂದು ಗೋಲು ಹೊಡೆದರು. ಅತ್ತೂರು ತಂಡದ ಕುಶಗೌಡ, ಪ್ರಧಾನ್ ಸೋಮಣ್ಣ ತಲಾ ಒಂದೊಂದು ಗೋಲು ಹೊಡೆದರು.

2ನೇ ಸೆಮಿಯಲ್ಲಿ ಬೇರಳಿನಾಡ್ ತಂಡವು ಹುಬ್ಬಳ್ಳಿ ಅಕಾಡೆಮಿಯನ್ನು 5-3 ಗೋಲುಗಳಿಂದ ಸೋಲಿಸಿತು. ಬೇರಳಿನಾಡ್ ತಂಡದ ರಾಹಿಲ್, ಆಭರಣ್, ಶೇಷಗೌಡ, ಲಿಕಿತ್, ಸೋನು ಪೊನ್ನಣ್ಣ, ಹುಬ್ಬಳ್ಳಿ ತಂಡದ ಹರೀಶ್ ಮುತಗರ್ 2 ಗೋಲು ಹೊಡೆದರು.

ಬೆಸ್ಟ್ ಗೋಲ್ ಕೀಪರ್ ಪ್ರಶಸ್ತಿಯನ್ನು ಬೇರಳಿನಾಡ್ ತಂಡದ ಸುಬ್ರಮಣಿ ಪಡೆದುಕೊಂಡರು. ಉತ್ತಮ ಮುನ್ನಡೆ ಆಟಗಾರನಾಗಿ ಮೇಕೇರಿರ ನಿತಿನ್ ತಿಮ್ಮಯ್ಯ ಪಡೆದರು.

ಸಮಾರೋಪದಲ್ಲಿ ಹೈಕೋರ್ಟ್ ಹಿರಿಯ ವಕೀಲ ಅಜ್ಜಿಕುಟ್ಟೀರ ಎಸ್. ಪೊನ್ನಣ್ಣ ಬಹುಮಾನ ವಿತರಣೆ ಮಾಡಿದರು. ಈ ಸಂದರ್ಭ ಜಿಲ್ಲಾ ಪಂಚಾಯಿತಿ ಶಿಕ್ಷಣ, ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷೆ ಅಪ್ಪಂಡೇರಂಡ ಭವ್ಯ, ಬುಟ್ಟಿಯಮಡ ಚೆಂಗಪ್ಪ, ಸಂಘಟನಾ ಕಾರ್ಯದರ್ಶಿ ಕುಪ್ಪಂಡ ಸುಬ್ಬಯ್ಯ ಇದ್ದರು.

ಮಹಿಳೆಯರ ಲೀಗ್ ಫಲಿತಾಂಶ

ಫೈರ್ ಆಂಟ್ಸ್ ತಂಡವು 3-1 ಗೋಲುಗಳಿಂದ ರಾಕರ್ಸ್ ಎದುರು ಜಯ ಗಳಿಸಿತು. ಫೈರ್ ತಂಡದ ಚಂದನಾ 2, ಯಶಿಕಾ, ರಾಕರ್ಸ್‍ನ ಅಂಜಲಿ ಗೋಲು ಬಾರಿಸಿದರು.

ಫೈರ್ ಹಾಕ್ಸ್ ತಂಡವು ವೈಪರ್ಸ್ ತಂಡವನ್ನು 2-1 ಗೋಲುಗಳಿಂದ ಮಣಿಸಿತು. ಫೈರ್ ಹಾಕ್ಸ್ ತಂಡದ ಕೃತಿಕಾ, ಆಧೀರ, ವೈಪರ್ಸ್‍ನ ನಿಶಾ ಗೋಲು ಹೊಡೆದರು.

ಬಂಬ್ಲ್ ಬೀ ತಂಡವು 4-1 ಗೋಲುಗಳ ಅಂತರದಿಂದ ಬ್ಲಿಜರ್ಡ್ ತಂಡವನ್ನು ಪರಾಭವಗೊಳಿಸಿತು. ಭೀ ತಂಡದ ಶಿಲ್ಪಾ, ದೇಚಮ್ಮ ತಲಾ 2 ಗೋಲು, ಬ್ಲಿಜರ್ಡ್ ತಂಡದ ಪವಿತ್ರ 1 ಗೋಲು ಹೊಡೆದರು.

18 ವಯೋಮಿತಿ ಬಾಲಕರ ಹಾಕಿ

ಅತ್ತೂರು ತಂಡವು ಮರ್ಕರಾವನ್ನು 7-1 ಗೋಲುಗಳಿಂದ ಸೋಲಿಸಿತು. ಕುಂದ ತಂಡವು ನೈಟ್ ವಲ್ಫ್ಸ್ ವಿರುದ್ಧ 5-1 ಗೋಲುಗಳಿಂದ ಗೆಲುವು ಪಡೆಯಿತು. ಕೋವಿಲ್‍ಪಟ್ಟಿ ತಂಡವು ಹೈಲ್ಯಾಂಡರ್ಸ್ ವಿರುದ್ಧ 5-2 ಗೋಲುಗಳ ಜಯ ಪಡೆಯಿತು. ಎಸ್‍ಆರ್‍ಸಿ ತಂಡವು 10-0 ಗೋಲುಗಳ ಅಂತರದಲ್ಲಿ ಟಿಂಬರ್ ವಾಲ್ಫ್ಸ್ ತಂಡದೆದುರು ಗೆಲುವಿನ ನಗೆ ಬೀರಿತು. ಹರಿಹರ ಹಾಗೂ ಡಿಫಾಸ್ಟರ್ಸ್ ತಂಡಗಳ ನಡುವಿನ ಪಂದ್ಯ 1-1 ಗೋಲುಗಳ ಡ್ರಾ ಸಾಧನೆ ಫಲಿತಾಂಶ ನೀಡಿತು.

ಫಾಲ್ಕನ್ ಹಾಕಿಯು ಡಾಲ್ಪೀನ್ಸ್ ವಿರುದ್ಧ 4-1 ಗೋಲುಗಳ ಜಯ ಸಾಧಿಸಿತು. ಆರ್ವಿ ಅಕಾಡೆಮಿಯು 4-0 ಗೋಲುಗಳ ಅಂತರದಲ್ಲಿ ಗ್ರೀನ್ ಫೀಲ್ಡ್ ಎದುರು ಜಯ ಸಂಪಾದನೆ ಮಾಡಿತು. ಸೋಮವಾರ ಮಹಿಳೆಯರ ಮತ್ತು 18 ವಯೋಮಾನ ಬಾಲಕರ ಹಾಕಿ ಲೀಗ್ ಪಂದ್ಯಗಳು ನಡೆಯಲಿವೆ.