ಸೋಮವಾರಪೇಟೆ, ಡಿ. 6: ದಶಕಗಳ ಬೇಡಿಕೆಗಳಿಗೆ ಇಂದಿಗೂ ಸ್ಪಂದನ ಸಿಗದ ಹಿನ್ನೆಲೆ ತಾಲೂಕಿನ ತೋಳೂರುಶೆಟ್ಟಳ್ಳಿ ಗ್ರಾಮ ಪಂಚಾಯಿತಿಯ ಕೂತಿ ಗ್ರಾಮಸ್ಥರು ಈ ಬಾರಿ ನಡೆಯುವ ಗ್ರಾಮ ಪಂಚಾಯಿತಿ ಚುನಾವಣೆಯನ್ನು ಬಹಿಷ್ಕರಿಸಲು ನಿರ್ಧರಿಸಿದ್ದಾರೆ.
ಗ್ರಾಮದಲ್ಲಿ ನೆಟ್ವರ್ಕ್ ಸಮಸ್ಯೆ, ರಸ್ತೆ ಸಮಸ್ಯೆ, ವಿದ್ಯುತ್ ಸಮಸ್ಯೆಗಳಿದ್ದು, ಇದನ್ನು ಬಗೆಹರಿಸುವಂತೆ ಸರ್ಕಾರ ಗಳಿಗೆ ಮನವಿ ಸಲ್ಲಿಸಿದ್ದರೂ ಯಾವದೇ ಸ್ಪಂದನ ಲಭಿಸಿಲ್ಲ. ಈ ಹಿನ್ನೆಲೆ ಪ್ರಸಕ್ತ ಸಾಲಿನಲ್ಲಿ ನಡೆಯುವ ಗ್ರಾ.ಪಂ. ಚುನಾವಣೆಗೆ ಗ್ರಾಮದಿಂದ ಯಾರೂ ಸ್ಪರ್ಧಿಸಬಾರದು ಹಾಗೂ ಮತ ಚಲಾಯಿಸಬಾರದು ಎಂಬ ತೀರ್ಮಾನಕ್ಕೆ ಗ್ರಾಮಸ್ಥರು ಬಂದಿದ್ದಾರೆ.
ಗಡಿ ಗ್ರಾಮವಾಗಿರುವ ಕೂತಿ ಗ್ರಾಮದಲ್ಲಿ ಈವರೆಗೂ ಯಾವುದೇ ನೆಟ್ವರ್ಕ್ ವ್ಯವಸ್ಥೆ ಇಲ್ಲ. ಇದರ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳಿಗೆ ಪತ್ರ ಬರೆದು, ಪೆÇೀಸ್ಟ್ ಕಾರ್ಡ್ ಅಭಿಯಾನ ಮಾಡಿದ್ದರೂ ಸ್ಪಂದನ ದೊರೆತಿಲ್ಲ. ಇದರೊಂದಿಗೆ ಸಂಸದ ಪ್ರತಾಪ್ ಸಿಂಹ ಅವರಿಗೂ ಮನವಿ ಸಲ್ಲಿಸಿದ್ದರೂ ಪ್ರಯೋಜನವಾಗಿಲ್ಲ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.
ಈ ಭಾಗದ ಸುಮಾರು 40ಕ್ಕೂ ಅಧಿಕ ವಿದ್ಯಾರ್ಥಿಗಳು 2 ಕಿ.ಮೀ. ತೆರಳಿ ರಸ್ತೆ ಬದಿಯ ಬಸ್ ನಿಲ್ದಾಣದಲ್ಲಿ ಆನ್ಲೈನ್ ತರಗತಿಯಲ್ಲಿ ಭಾಗವಹಿಸುತ್ತಿದ್ದಾರೆ. ಗ್ರಾಮದಲ್ಲಿ ಜನರಿಗೆ ಯಾವುದೇ ಆರೋಗ್ಯ ಸಮಸ್ಯೆ ಕಂಡುಬಂದಲ್ಲಿ ತುರ್ತು ವಾಹನಕ್ಕೆ ಕರೆ ಮಾಡಬೇಕಾದರೂ 2 ಕಿ.ಮೀ. ಬಂದು ಕರೆ ಮಾಡಬೇಕಾದ ಸ್ಥಿತಿ ನಿರ್ಮಾಣ ವಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಮತದಾನ ಏಕೆ ಮಾಡಬೇಕು ಎಂದು ಗ್ರಾಮಸ್ಥರು ಪ್ರಶ್ನಿಸುತ್ತಿದ್ದಾರೆ.
ಇನ್ನು ಮಳೆಗಾಲದಲ್ಲಿ ಗ್ರಾಮದಲ್ಲಿ ವಿದ್ಯುತ್ ಇರುವದಿಲ್ಲ. ಸೋಮವಾರ ಪೇಟೆಯಿಂದ ಕೂತಿ ಗ್ರಾಮಕ್ಕೆ ಕಂಬಳ್ಳಿ ಗ್ರಾಮದ ಮೂಲಕ 11 ಕೆ.ವಿ. ವಿದ್ಯುತ್ ಸಂಪರ್ಕ ನೀಡಲಾಗಿದ್ದು, ಈ ಮಾರ್ಗದಲ್ಲಿ ದಟ್ಟ ಅರಣ್ಯ, ಕಾಫಿ ತೋಟಗಳಿವೆ. ಮುಖ್ಯರಸ್ತೆಯ ಹೊಸಬೀಡು ಗ್ರಾಮದ ಮೂಲಕ ಹೊಸ ವಿದ್ಯುತ್ ಲೈನ್ ಎಳೆದು ಈ ಭಾಗದ ಗ್ರಾಮಗಳಿಗೆ 11 ಕೆ.ವಿ. ವಿದ್ಯುತ್ ಕಲ್ಪಿಸಿಕೊಂಡುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಹಾಗೂ ಸಂಸದರಿಗೆ ಮನವಿ ಮಾಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.
ಇನ್ನು ಸೋಮವಾರಪೇಟೆ ನಗರದಿಂದ ಕೂತಿ ಗ್ರಾಮಕ್ಕೆ ಸಂಪರ್ಕಿಸುವ ಹೆದ್ದಾರಿ ಬಹಳ ಕಿರಿದಾಗಿದ್ದು ಶಾಲಾ ವಾಹನಗಳು, ಬಸ್ಗಳು ಸೇರಿದಂತೆ ಬೃಹತ್ ವಾಹನಗಳು ಚಲಿಸಲು ಕಷ್ಟಕರವಾಗಿದೆ. ಕೂತಿಯಿಂದ ನಗರಳ್ಳಿ ಮಾರ್ಗವಾಗಿ ಪುಷ್ಪಗಿರಿ ಸಂಪರ್ಕಿಸುವ ರಸ್ತೆಯು ಸಂಪೂರ್ಣ ಹಾಳಾಗಿದೆ. ಇದ ರೊಂದಿಗೆ ಗ್ರಾಮದ ಹಲವು ರಸ್ತೆಗಳು ಗುಂಡಿಮಯವಾಗಿವೆ. ಗ್ರಾಮದಲ್ಲಿ ಮೂಲಭೂತ ಸೌಲಭ್ಯಗಳ ಕೊರತೆ, ನಡೆಯದ ಅಭಿವೃದ್ಧಿ ಕಾರ್ಯ ಗಳಿಂದಾಗಿ ಈ ಬಾರಿ ಚುನಾವಣೆ ಬಹಿಷ್ಕಾರಕ್ಕೆ ನಿರ್ಧರಿಸಲಾಗಿದೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ. ಗ್ರಾಮಾಧ್ಯಕ್ಷ ಡಿ.ಎ. ಪರಮೇಶ್ ಅವರ ಅಧ್ಯಕ್ಷತೆ ಯಲ್ಲಿ ನಡೆದ ಸಭೆಯಲ್ಲಿ ಗ್ರಾಮಸ್ಥರು ಈ ತೀರ್ಮಾನಕ್ಕೆ ಬಂದಿದ್ದಾರೆ.