ಗೋಣಿಕೊಪ್ಪಲು, ಡಿ. 6: ದಶಕಗಳಿಂದ ಸಮಸ್ಯೆಯಾಗಿ ಕಾಡುತ್ತಿರುವ ಕೂಟಿಯಾಲ ರಸ್ತೆಯನ್ನು ಸಾರ್ವಜನಿಕರ ಓಡಾಟಕ್ಕೆ ಅನುಕೂಲ ಮಾಡಿಕೊಡುವಂತೆ ಒತ್ತಾಯಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಕೊಡಗು ಜಿಲ್ಲಾ ಘಟಕದ ಅಧ್ಯಕ್ಷರಾದ ಕಾಡ್ಯಮಾಡ ಮನು ಸೋಮಯ್ಯ ಮುಂದಾಳತ್ವದಲ್ಲಿ ಅರಣ್ಯ ಸಚಿವರನ್ನು ಭೇಟಿ ಮಾಡಿ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸುವಂತೆ ಮನವಿ ಸಲ್ಲಿಸಿದರು.

ಪೊನ್ನಂಪೇಟೆಯ ಅರಣ್ಯ ಮಹಾವಿದ್ಯಾಲಯಕ್ಕೆ ಭೇಟಿ ನೀಡಿದ್ದ ಅರಣ್ಯ ಸಚಿವ ಆನಂದ್ ಸಿಂಗ್ ಅವರನ್ನು ಭೇಟಿ ಮಾಡಿದ ರೈತ ಸಂಘದ ಮುಖಂಡರು ದಕ್ಷಿಣ ಕೊಡಗಿನ ಪೊನ್ನಂಪೇಟೆ ತಾಲೂಕಿನ ಹುದಿಕೇರಿ ಹೋಬಳಿಯ ಬಾಡಗರಕೇರಿ ಗ್ರಾಮದಲ್ಲ್ಲಿ ಸರ್ಕಾರವು ಲೋಕೋಪಯೋಗಿ ಇಲಾಖೆ ಮೂಲಕ ಲಕ್ಷಾಂತರ ರೂಪಾಯಿ ಗಳನ್ನು ವೆಚ್ಚಮಾಡಿ ಜನಹಿತಕ್ಕಾಗಿ “ಕೂಟಿಯಾಲ ಸೇತುವೆ” ನಿರ್ಮಿಸಿದೆ. ಈ ರಸ್ತೆಯು ವಾಹನ, ಜನರ ಪ್ರಯಾಣಕ್ಕೆ ಮುಕ್ತವಾದಲ್ಲಿ ಈ ಭಾಗದ ಜನರಿಗೆ ತಾಲೂಕು ಮುಖ್ಯ ಕೇಂದ್ರವಾದ ವೀರಾಜಪೇಟೆ ಪಟ್ಟಣಕ್ಕೆ ಪ್ರಯಾಣದ ದೂರ ಸುಮಾರು 25 ಕಿ.ಮೀ., ಮಡಿಕೇರಿಗೆ 40 ಕಿ.ಮೀ. ಕಡಿಮೆಯಾಗಲಿದೆ. ಈ ಸೇತುವೆಯ ಪೂರ್ತಿ ಕೆಲಸ ಮುಗಿದಿದ್ದರೂ, ಅರಣ್ಯ ಇಲಾಖೆ ಇದನ್ನು ಜನಬಳಕೆಗೆ ಮುಕ್ತಗೊಳಿಸಿರುವುದಿಲ್ಲ. ಆದಷ್ಟು ಬೇಗನೇ ಜನರ ಅನುಕೂಲಕ್ಕಾಗಿ ಈ ರಸ್ತೆಯನ್ನು ಜನಬಳಕೆಗೆ ಮುಕ್ತಗೊಳಿಸಬೇಕೆಂದು ಮನವಿ ಸಲ್ಲಿಸಿದರು. ಈ ಬಗ್ಗೆ ಲಿಖಿತ ರೂಪದಲ್ಲಿ ಭರವಸೆ ನೀಡುವಂತೆ ಸಚಿವರಲ್ಲಿ ಆಗ್ರಹಿಸಿದರು. ಈ ಬಗ್ಗೆ ಸರ್ಕಾರ ಅಗತ್ಯ ಕ್ರಮ ಕೈಗೊಳ್ಳಬೇಕು ತಪ್ಪಿದಲ್ಲಿ ಈ ಭಾಗದ ಗ್ರಾಮಸ್ಥರೊಂದಿಗೆ ಜೊತೆಗೂಡಿ ಉಗ್ರ ಹೋರಾಟವನ್ನು ರೈತ ಸಂಘದಿಂದ ಹಮ್ಮಿಕೊಳ್ಳುವುದಾಗಿ ಅಧ್ಯಕ್ಷ ಮನು ಸೋಮಯ್ಯ ಸಚಿವರಿಗೆ ತಿಳಿಸಿದರು.

ಲೋಕೋಪಯೋಗಿ ಇಲಾಖೆ ಮತ್ತು ದಕ್ಷಿಣ ವನ್ಯಜೀವಿ ವಿಭಾಗದ ವತಿಯಿಂದ 9-01-2001ರಲ್ಲಿ ವೈಲ್ಡ್ ಲೈಫ್ ವಿಭಾಗದ ಅರಣ್ಯ ಸಂರಕ್ಷಣಾಧಿಕಾರಿ ಮೂಲಕ ಪ್ರಸ್ತಾಪಿತ ಸೇತುವೆ ಕಾಮಗಾರಿಗೆ ಅನುಮತಿ ಯೊಂದಿಗೆ ಲೋಕೋಪಯೋಗಿ ಇಲಾಖೆಯಿಂದ 2001ರ ಒಪ್ಪಂದದ ಪ್ರಕಾರ ಹುದಿಕೇರಿ ಹೋಬಳಿಯ ಮರೆನಾಡು ಗ್ರಾಮದ ಕುಟ್ಟಂದಿ-ಬಾಡಗರಕೇರಿ ಗ್ರಾಮದ ಜನರ ಅನುಕೂಲಕ್ಕಾಗಿ ಸಂಪರ್ಕ ರಸ್ತೆ ಕಾಮಗಾರಿ ಹಾಗೂ ಅರಣ್ಯ ಇಲಾಖೆಯ ಅನುಮತಿಯೊಂದಿಗೆ ಸೇತುವೆಯ ನಿರ್ಮಾಣ ಪೂರ್ಣಗೊಳಿಸಲಾಗಿದೆ. ನಂತರದ ದಿನಗಳಲ್ಲಿ ಅರಣ್ಯ ಇಲಾಖೆ ಅಂದಾಜು 600 ಮೀಟರ್ ರಸ್ತೆ ಕಾಮಗಾರಿ ನಡೆಸಲು ಅಡ್ಡಿ ಮಾಡಿರುವುದು ಸರಿ ಅಲ್ಲ.

ಆ ಭಾಗದ ಜನರಿಗೆ ಮಡಿಕೇರಿಯಲ್ಲಿರುವ ಜಿಲ್ಲಾಸ್ಪತ್ರೆಗೆ ತುರ್ತು ಆರೋಗ್ಯ ವೈದ್ಯಕೀಯ ಸೇವೆ ಪಡೆದುಕೊಳ್ಳುವುದು, ಜಿಲ್ಲಾಕೇಂದ್ರ ಮಡಿಕೇರಿಯಲ್ಲಿರುವ ಜಿಲ್ಲಾಧಿಕಾರಿ ಕಚೇರಿಗೆ ತೆರಳಲು, ವಿದ್ಯಾರ್ಥಿಗಳು ನಗರ ಪ್ರದೇಶಗಳಿಗೆ ಉನ್ನತ ವಿದ್ಯಾಭ್ಯಾಸಕ್ಕಾಗಿ ತೆರಳುತ್ತಿದ್ದಾರೆ, ಕೃಷಿ ಉತ್ಪನ್ನಗಳನ್ನು ಮಾರಾಟ ಮಾಡಲು ಬೇರೆಡೆಗೆ ಸರಬರಾಜು ಮಾಡಿ ಉತ್ತಮ ಬೆಲೆ ಪಡೆದುಕೊಳ್ಳಲು ಈ ಭಾಗದಿಂದ ಸಂಚರಿಸಲು ಅನಾನುಕೂಲ ಕಲ್ಪಿಸಿದರೆ ಪ್ರಯೋಜನವಾಗಲಿದೆ. ಬಾಡಗರ ಕೇರಿಯಲ್ಲಿ ಇರುವಂತಹ ಪ್ರಸಿದ್ಧ ಪುಣ್ಯಕ್ಷೇತ್ರ ಮೃತ್ಯುಂಜಯ ದೇವಾಲಯಕ್ಕೆ ನಿತ್ಯವೂ ದೇಶ ಹಾಗೂ ವಿದೇಶದಿಂದ ಭಕ್ತಾದಿಗಳು ಭೇಟಿ ನೀಡುತ್ತಿದ್ದಾರೆ.

ಈ ಸೇತುವೆ ನಿರ್ಮಾಣ ಆದಲ್ಲಿ ಗ್ರಾಮಸ್ಥರು ಹಾಗೂ ಭಕ್ತಾದಿಗಳಿಗೆ ಪ್ರಯೋಜನವಾಗಲಿದೆ. ಅಲ್ಲದೆ ಕೊಡಗಿನ ಪುಣ್ಯ ಕ್ಷೇತ್ರ ಭಾಗಮಂಡಲ-ತಲಕಾವೇರಿಗೆ ತೆರಳಲು ಅನುಕೂಲವಾಗಲಿದೆ ಎಂದು ಸಚಿವರಿಗೆ ಮನವರಿಕೆ ಮಾಡಿದರು.

ಈ ಸಂದರ್ಭ ರೈತ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಚೆಟ್ರುಮಾಡ ಸುಜಯ್ ಬೋಪಯ್ಯ, ಜಿಲ್ಲಾ ಸಂಚಾಲಕ ಪುಚ್ಚಿಮಾಡ ಸುಭಾಶ್ ಸುಬ್ಬಯ್ಯ, ತಾಲೂಕು ಅಧ್ಯಕ್ಷ ಬಾಚಮಾಡ ಭವಿಕುಮಾರ್, ಜಿಲ್ಲಾ ಖಜಾಂಚಿ ಇಟ್ಟೀರ ಸಭಿತ ಭೀಮಯ್ಯ, ಪೊನ್ನಂಪೇಟೆ ಹೋಬಳಿ ಅಧ್ಯಕ್ಷ ಆಲೆಮಾಡ ಮಂಜುನಾಥ್, ಅಮ್ಮತ್ತಿ ಹೋಬಳಿ ಅಧ್ಯಕ್ಷ ಮಂಡೇಪಂಡ ಪ್ರವೀಣ್, ಮಾಯಮುಡಿ ಅಧ್ಯಕ್ಷ ಪುಚ್ಚಿಮಾಡ ರಾಯ್ ಮಾದಪ್ಪ, ಪೊನ್ನಂಪೇಟೆ ಅಧ್ಯಕ್ಷ ಚೊಟ್ಟೆಕಾಳಪಂಡ ಮನು, ವಕೀಲರಾದ ಹೇಮಚಂದ್ರ, ಮುಖಂಡರಾದ ಪುಚ್ಚಿಮಾಡ ಲಾಲ ಪೂಣಚ್ಚ, ಚೆಪ್ಪುಡೀರ ಕಿರಣ್, ಕಮಲ ಸೇರಿದಂತೆ ಇನ್ನಿತರ ಪ್ರಮುಖರು ಹಾಜರಿದ್ದರು.

- ಹೆಚ್.ಕೆ.ಜಗದೀಶ್