ಕುಶಾಲನಗರ, ಡಿ. 6: ಕಾಡಾನೆಗಳ ಕಾಟದಿಂದ ಭೂಮಿ ಕಳೆದುಕೊಂಡ ಜಿಲ್ಲೆಯ ಶನಿವಾರಸಂತೆ ಹೋಬಳಿಯ ಕೆಲವು ಕುಟುಂಬಗಳಿಗೆ ಆರು ದಶಕಗಳು ಕಳೆದರೂ ಪರ್ಯಾಯ ಜಾಗ ದೊರಕದೆ ಇನ್ನೂ ಪರದಾಡುತ್ತಿರುವ ಪ್ರಕರಣವೊಂದು ಕಾಣಬಹುದು. ಶನಿವಾರಸಂತೆಯ ಗಣಗೂರು ಗ್ರಾಮದ 135/2 ಸರ್ವೆ ನಂ. ಅಡಿಯಲ್ಲಿ 64.61 ಎಕರೆ ಜಾಗವನ್ನು 1957 ರಲ್ಲಿ ಆಗಿನ ಕೂರ್ಗ್ ಕಮಿಷನರ್ ಮೂಲಕ ಹರಾಜಿನಲ್ಲಿ ಪಡೆದ ಜಮೀನಿಗೆ ಪರ್ಯಾಯವಾಗಿ ಜಿಲ್ಲೆಯ ಯಾವುದಾದರೂ ಕಡೆ ಜಮೀನು ಒದಗಿಸಿಕೊಡುವ ಬಗ್ಗೆ ರಾಜ್ಯ ಉಚ್ಚ ನ್ಯಾಯಾಲಯ ಆದೇಶ ನೀಡಿದ್ದು ಇದುವರೆಗೂ ಆ ಕುಟುಂಬಗಳಿಗೆ ಜಾಗ ದೊರಕದಿರುವುದು ಈ ಪ್ರಕರಣದ ವಿಶೇಷ. ಆ ಸಂದರ್ಭ ಕಾಫಿ ಕೃಷಿಗಾಗಿ ಈ ಪ್ರದೇಶದಲ್ಲಿ ಭೂಮಿಯನ್ನು ಹರಾಜು ಮೂಲಕ ಸರಕಾರದಿಂದ ಕೆಲವು ಕುಟುಂಬಗಳು ಪಡೆದಿರುವುದು ದಾಖಲೆಗಳಲ್ಲಿ ಕಂಡುಬಂದಿದೆ. ಆದರೆ ತದನಂತರ ಕಾಡಾನೆಗಳ ಕಾಟದಿಂದ ಈ ಜಾಗದಲ್ಲಿ ಯಾವುದೇ ಕೃಷಿ ಚಟುವಟಿಕೆ ನಡೆಸಲು ಅನಾನುಕೂಲವಾದ ಹಿನ್ನೆಲೆ 1964 ರಲ್ಲಿ ಹರಾಜು ಮಂಜೂರಾತಿ ರದ್ದು ಮಾಡಿದ ಅಂದಿನ ಜಿಲ್ಲಾಧಿಕಾರಿಗಳು ಇವರಿಗೆ ಪರ್ಯಾಯವಾಗಿ ಜಾಗ ಕೊಡುವ ಭರವಸೆ ನೀಡಿದರೆನ್ನಲಾಗಿದೆ. ಪ್ರಕರಣ ವ್ಯಾಜ್ಯ ರಾಜ್ಯ ಉಚ್ಚ ನ್ಯಾಯಾಲಯ ಮೆಟ್ಟಿಲೇರಿ 2010 ರಲ್ಲಿ ಆದೇಶವೊಂದನ್ನು ನೀಡಿ ಆ ಕುಟುಂಬಗಳಿಗೆ ಪರ್ಯಾಯ ಜಾಗವನ್ನು ಕಲ್ಪಿಸುವಂತೆ ಕೊಡಗು ಜಿಲ್ಲಾಡಳಿತಕ್ಕೆ ನಿರ್ದೇಶನ ನೀಡಿತ್ತು.

ಇಷ್ಟೆಲ್ಲದರ ನಡುವೆ 2010 ರಲ್ಲಿ ಅಂದಿನ ಕೊಡಗು ಜಿಲ್ಲಾಡಳಿತದ ಕೆಲವು ಅಧಿಕಾರಿಗಳು ದೊಡ್ಡ ಪ್ರಮಾದವೊಂದನ್ನು ಎಸಗಿರುವುದು ಇದುವರೆಗೂ ಈ ಫಲಾನುಭವಿಗಳಿಗೆ ಪರ್ಯಾಯ ಭೂಮಿ ದೊರಕದಿರಲು ಪ್ರಮುಖ ಕಾರಣ ಎನ್ನಲಾಗಿದೆ. ಕೆಲವು ಮಧ್ಯವರ್ತಿಗಳ ಮೂಲಕ ಆಗಿನ ಅಧಿಕಾರಿಗಳು ಈ ಕುಟುಂಬಗಳಿಗೆ ಕುಶಾಲನಗರ-ಮಡಿಕೇರಿ ರಸ್ತೆಯ 7ನೇ ಹೊಸಕೋಟೆ ಬಳಿ ಸರ್ವೆ ನಂ. 14 ರ ಅತ್ತೂರು ಮೀಸಲು ಅರಣ್ಯ ಪ್ರದೇಶವನ್ನು ಸರ್ವೆ ಮಾಡುವ ಮೂಲಕ ಜಾಗ ನೀಡುವುದಾಗಿ ಭರವಸೆ ನೀಡಿ ಕಂದಾಯ ಇಲಾಖೆ ಮತ್ತು ಅರಣ್ಯ ಇಲಾಖೆಯ ಜಂಟಿ ಸರ್ವೆಗೆ ಆದೇಶ ಕೂಡ ಮಾಡಿತ್ತು. ಆದರೆ ಅತ್ತೂರು ಮೀಸಲು ಅರಣ್ಯದ ಒತ್ತಿನಲ್ಲಿರುವ ಈ ಪ್ರದೇಶ ಅರಣ್ಯ ಇಲಾಖೆಗೆ ಸೇರಿದ ಹಿನ್ನೆಲೆ ಅರಣ್ಯಾಧಿಕಾರಿಗಳು ಎಚ್ಚರಗೊಂಡು ಈ ಭೂಮಿಯನ್ನು ನೀಡಲು ಒಂದೆಡೆ ಆಕ್ಷೇಪ ವ್ಯಕ್ತಪಡಿಸಿದ್ದು ಇದೇ ಸಮಯದಲ್ಲಿ ಶಕ್ತಿ ಪತ್ರಿಕೆಯಲ್ಲಿ 2010ರ ಜೂನ್ 23 ರಂದು ಪ್ರಕಟಗೊಂಡ ರಿಸರ್ವ್ ಫಾರೆಸ್ಟ್ ಇಸ್ ಫಾರ್ ಸೇಲ್ ಎಂಬ ಶಿರೋನಾಮೆ ಅಡಿಯಲ್ಲಿ ಕಂದಾಯ ಇಲಾಖೆಯ ಕರ್ಮಕಾಂಡದ ಬಗ್ಗೆ ವಿಶೇಷ ವರದಿ ಮಾಡುವ ಮೂಲಕ ಅರಣ್ಯ ಇಲಾಖೆಯ ಸುಪರ್ದಿಯ ಭಾರೀ ಪ್ರಮಾಣದ ಜಾಗ ಸಂರಕ್ಷಣೆಯಾಗಿರುವುದು ಇಲ್ಲಿ ಸ್ಮರಿಸಬಹುದು. ವಿಶೇಷವೆಂದರೆ ಈ ಪ್ರದೇಶ ಕೂಡ ಕಾಡಾನೆ ಮತ್ತು ವನ್ಯಜೀವಿಗಳ ಆವಾಸ ಸ್ಥಾನವಾಗಿದ್ದು ಜಾಗದ ಆರ್‍ಟಿಸಿ ಸರಕಾರದ ವಶದಲ್ಲಿದೆ. ಈ ಬೆಳವಣಿಗೆಯಿಂದ ತಕ್ಷಣ ಎಚ್ಚೆತ್ತ ಅರಣ್ಯ ಇಲಾಖೆ ಪೊಲೀಸ್ ಸಹಕಾರ ಪಡೆದು ಸರ್ವೆಗೆ ಬಾರದಂತೆ ಈ ಜಾಗಕ್ಕೆ ಭದ್ರತೆ ನೀಡುವ ಮೂಲಕ ಇದು ಅರಣ್ಯ ಇಲಾಖೆಗೆ ಸೇರಿದ ಜಾಗವೆಂದು ನ್ಯಾಯಾಲಯದ ಮೆಟ್ಟಿಲೇರಿದ ಕಾರಣ ಜಂಟಿ ಸರ್ವೆಗೆ ಅಡ್ಡಿಯುಂಟಾಯಿತು.

ಆದರೆ ಗಣಗೂರಿನಲ್ಲಿ ಜಾಗ ಕಳೆದುಕೊಂಡ ಕುಟುಂಬಗಳು ಮಾತ್ರ ಅತಂತ್ರ ಪರಿಸ್ಥಿತಿಯಲ್ಲಿ ಮತ್ತೆ ನ್ಯಾಯಾಲಯದ ಮೊರೆ ಹೋಗಬೇಕಾದ ಪರಿಸ್ಥಿತಿ ಸೃಷ್ಟಿಯಾಗಿ ಅರಣ್ಯ ಇಲಾಖೆ ಮತ್ತು ಗಣಗೂರು ನಿವಾಸಿಗಳ ನಡುವೆ ಇನ್ನೂ ವ್ಯಾಜ್ಯ ಮುಂದುವರೆದಿದೆ. ಅರಣ್ಯ ಇಲಾಖೆ ಈ ಬಗ್ಗೆ ನ್ಯಾಯಾಲಯಕ್ಕೆ ಸಂಪೂರ್ಣ ಮಾಹಿತಿ ಒದಗಿಸಿದ್ದು ಸಂಬಂಧಿಸಿದ 64.61 ಎಕರೆ ಜಾಗವನ್ನು ಜಂಟಿ ಸರ್ವೆ ಮೂಲಕ ಪತ್ತೆಹಚ್ಚುವಂತೆ ಕೋರಲಾಗಿದೆ ಎಂದು ಕುಶಾಲನಗರ ಅರಣ್ಯ ವಲಯಾಧಿಕಾರಿ ಜೆ. ಅನನ್ಯಕುಮಾರ್

(ಮೊದಲ ಪುಟದಿಂದ) ‘ಶಕ್ತಿ’ಗೆ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ. ಹೊಸಕೋಟೆ ಗ್ರಾಮಕ್ಕೆ ಸೇರಿದ ಸರ್ವೆ ನಂ 14 ರಲ್ಲಿ ಬರುವ 64.61 ಎಕರೆ ಜಾಗ ಮೀಸಲು ಅರಣ್ಯಕ್ಕೆ ಸೇರಿದ ಜಾಗವೆಂದು ತಿಳಿಸಿರುವ ಅವರು, ಈ ಮೇಲೆ ತಿಳಿಸಿದ ಫಲಾನುಭವಿಗಳಿಗೆ ಗುರುತಿಸಿರುವ ಜಾಗವನ್ನು ಪತ್ತೆಹಚ್ಚಬೇಕಾಗಿದೆ ಎಂದಿದ್ದಾರೆ. ಅರಣ್ಯ ಸಂರಕ್ಷಣಾ ಕಾಯ್ದೆ 1980 ರ ಪ್ರಕಾರ ಅರಣ್ಯ ಇಲಾಖೆಯ ಸುಪರ್ದಿಯಲ್ಲಿ ಇರುವ ಜಾಗವನ್ನು ಯಾವುದೇ ಖಾಸಗಿ ವ್ಯಕ್ತಿಗಳಿಗೆ ನೀಡುವಂತಿಲ್ಲ ಎಂದು ಅವರು ತಿಳಿಸಿದ್ದಾರೆ. ಈ ಪ್ರಕರಣಕ್ಕೆ 2010 ರ ಅವಧಿಯಲ್ಲಿ ಇದ್ದ ಜಿಲ್ಲೆಯ ಹಾಗೂ ತಾಲೂಕಿನ ಅಧಿಕಾರಿಗಳು ತಪ್ಪು ದಾಖಲೆ ಸೃಷ್ಟಿಸುವ ಮೂಲಕ ಇಂತಹ ಒಂದು ಅವಾಂತರ ಎದುರಾಗಲು ಪ್ರಮುಖ ಕಾರಣ ಎನ್ನಬಹುದು. - ಚಂದ್ರಮೋಹನ್