ಸಿದ್ದಾಪುರ, ಡಿ. 6: ಸಿದ್ದಾಪುರ ಗ್ರಾ.ಪಂ. ಚುನಾವಣೆಯ ಸ್ಪರ್ಧಿಗಳು ಮತ ಯಾಚಿಸುತ್ತಿದ್ದು, ಚುನಾವಣೆ ಕಾವು ಏರತೊಡಗಿದೆ. ಜಿಲ್ಲೆಯಲ್ಲಿ ಅತ್ಯಧಿಕ ಸದಸ್ಯರುಗಳಿರುವ ಹಾಗೂ ಅಧಿಕ ವರಮಾನವಿರುವ ಗ್ರಾ.ಪಂ. ಎಂದೇ ಖ್ಯಾತಿ ಪಡೆದಿರುವ ಸಿದ್ದಾಪುರ ಗ್ರಾ.ಪಂ. ಚುನಾವಣೆಯಲ್ಲಿ ಸ್ಪರ್ಧಿಸುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಗ್ರಾ.ಪಂ. ವ್ಯಾಪ್ತಿಯಲ್ಲಿ 25 ಸ್ಥಾನಗಳಿದ್ದು, ಈಗಾಗಲೇ ಪಂಚಾಯಿತಿಗೆ ಸ್ಪರ್ಧಿಸುವ ಅಭ್ಯರ್ಥಿಗಳು ಹಾಗೂ ರಾಜಕೀಯ ಪಕ್ಷದ ಬೆಂಬಲದಿಂದ ಸ್ಪರ್ಧಿಸುವ ನಿರೀಕ್ಷೆಯಲ್ಲಿರುವವರು ಕೂಡ ಪಟ್ಟಣ ಹಾಗೂ ಇನ್ನಿತರ ಸ್ಥಳಗಳಲ್ಲಿ ಮತ ಯಾಚನೆಯಲ್ಲಿ ತೊಡಗಿದ್ದಾರೆ. ಪಂಚಾಯಿತಿ ಚುನಾವಣೆಯು ರಾಜಕೀಯ ರಹಿತವಾಗಿ ನಡೆಯುವ ಚುನಾವಣೆ ಯಾಗಿದ್ದರೂ ಕೂಡ ಎಲ್ಲಾ ರಾಜಕೀಯ ಪಕ್ಷಗಳು ತಮ್ಮ ಬೆಂಬಲಿತ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಿ ತೀರ್ಮಾನ ಮಾಡುವ ಅಭ್ಯರ್ಥಿಗಳಿಗೆ ಸ್ಪರ್ಧಿಸಲು ಅವಕಾಶ ನೀಡಲಾಗುತ್ತಿದೆ. ಈ ಬಗ್ಗೆ ಸಭೆ ಕರೆದು ರಾಜಕೀಯ ಪಕ್ಷಗಳ ಮುಖಂಡರ ಸಮ್ಮುಖದಲ್ಲಿ ಆಯ್ಕೆಗೊಳಿಸಲಾಗುತ್ತಿದೆ. ಈತನ್ಮಧ್ಯೆ ಮಾಜಿ ಸದಸ್ಯರುಗಳು ಕೂಡ ತಮಗೆ ಮತ್ತೊಂದು ಬಾರಿ ಸ್ಪರ್ಧಿಸಲು ಅವಕಾಶ ನೀಡಬೇಕೆಂದು ತಮ್ಮ ಬೆಂಬಲಿಗರ ಮುಖಾಂತರ ಪಕ್ಷಗಳ ಮುಖಂಡರ ಬಳಿ ಒತ್ತಡ ಹೇರುತ್ತಿರುವುದು ಕಂಡು ಬರುತ್ತಿದೆ. ಸಿದ್ದಾಪುರ ಗ್ರಾ.ಪಂ.ಯಲ್ಲಿ ಈ ಹಿಂದೆ ಆಡಳಿತ ನಡೆಸಿದ ಕಾಂಗ್ರೆಸ್ ಪಕ್ಷ ಬೆಂಬಲಿತ ಅಭ್ಯರ್ಥಿಗಳು ಈ ಬಾರಿಯ ಚುನಾವಣೆಯಲ್ಲಿ ಕೂಡ ಅಧಿಕ ಸ್ಥಾನ ಪಡೆದು ಅಧಿಕಾರದ ಚುಕ್ಕಾಣಿ ಹಿಡಿಯಲು ಪ್ರಯತ್ನಿ ಸುತ್ತಿದ್ದಾರೆ. ಕಳೆದ ಬಾರಿ ಚುನಾವಣೆಯಲ್ಲಿ ಒಂದು ಸ್ಥಾನವನ್ನು ಕೂಡ ಪಡೆಯದ ಬಿಜೆಪಿ ಪಕ್ಷದವರು ಈ ಬಾರಿಯ ಚುನಾವಣೆಯಲ್ಲಿ ಎಲ್ಲಾ ಸ್ಥಾನಗಳಿಗೂ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಲು ಸಿದ್ಧತೆ ಕೈಗೊಂಡಿದೆ. ಬಹುತೇಕ ಯುವಕರಿಗೆ ಸ್ಪರ್ಧಿಸಲು ಅವಕಾಶ ನೀಡಿದ್ದು, ಅಧಿಕಾರ ಪಡೆಯಲು ಶತಾಯ-ಗತಾಯ ಪ್ರಯತ್ನ ನಡೆಸುತ್ತಿದೆ. ಈಗಾಗಲೇ ಪಕ್ಷದ ಮುಖಂಡರ ಸಮ್ಮುಖದಲ್ಲಿ ಸಭೆ ನಡೆಸಿ ಅಭ್ಯರ್ಥಿಗಳ ಆಯ್ಕೆಯನ್ನು ಅಂತಿಮಗೊಳಿಸಿದೆ ಎಂದು ತಿಳಿದು ಬಂದಿದೆ. ಕಳೆದ ಬಾರಿಯ ಚುನಾವಣೆಯಲ್ಲಿ ಎಸ್.ಡಿ.ಪಿ.ಐ. ಪಕ್ಷದ 5 ಮಂದಿ ಬೆಂಬಲಿತ ಅಭ್ಯರ್ಥಿಗಳು ಜಯಗಳಿಸಿದ್ದರು. ಈ ಹಿನ್ನೆಲೆ ಈ ಬಾರಿಯ ಚುನಾವಣೆಯಲ್ಲಿ ಕೂಡ ಹೆಚ್ಚಿನ ಸ್ಥಾನ ಪಡೆಯುವ ನಿಟ್ಟಿನಲ್ಲಿ ಪಕ್ಷದ ಜಿಲ್ಲಾಧ್ಯಕ್ಷರ ಸಮ್ಮುಖದಲ್ಲಿ ಸಿದ್ಧತೆ ಕೈಗೊಂಡಿದ್ದಾರೆ. ಕಳೆದ ಕೆಲವು ವರ್ಷಗಳ ಹಿಂದೆ ಸಿದ್ದಾಪುರದ ಗ್ರಾ.ಪಂ.ಯಲ್ಲಿ ಆಡಳಿತ ನಡೆಸಿದ ಜೆಡಿಎಸ್ ಪಕ್ಷ ಯಾವುದೇ ಸಭೆಗಳನ್ನು ನಡೆಸದೇ ಹಾಗೂ ಅಭ್ಯರ್ಥಿಗಳನ್ನು ಆಯ್ಕೆ ಮಾಡದೇ ಮೌನದಲ್ಲಿರುವುದು ಕಂಡು ಬಂದಿದೆ.

ಕಾಂಗ್ರೆಸ್ ಪಕ್ಷದಲ್ಲಿ ಸ್ಪರ್ಧಿಗಳು ಹೆಚ್ಚು!

ಗ್ರಾ.ಪಂ. ಚುನಾವಣೆಯಲ್ಲಿ ಸ್ಪರ್ಧಿಸುವ ಅಭ್ಯರ್ಥಿಗಳು ತಮ್ಮ ಹೆಸರುಗಳನ್ನು ನೀಡುವಂತೆ ಇತ್ತೀಚೆಗೆ ಕಾಂಗ್ರೆಸ್ ಪಕ್ಷದ ಸ್ಥಳೀಯ ಸಮಿತಿ ವತಿಯಿಂದ ತಿಳಿಸಲಾಗಿತ್ತು. ಸಭೆ ಸಂದರ್ಭ ಕಾಂಗ್ರೆಸ್ ಪಕ್ಷದ ಬೆಂಬಲಿತ ಅಭ್ಯರ್ಥಿಗಳ ಸಂಖ್ಯೆ ಹಾಗೂ ಆಕಾಂಕ್ಷಿಗಳ ಸಂಖ್ಯೆಯು ಹೆಚ್ಚಾಗಿದ್ದು, ಈ ಹಿನ್ನೆಲೆ ಆಯ್ಕೆ ಸಮಿತಿಗೆ ಇದೀಗ ತಲೆನೋವಾಗಿ ಪರಿಣಮಿಸಿದೆ. ಸ್ಪರ್ಧಿಸಲು ಅವಕಾಶ ನೀಡದಿದ್ದಲ್ಲಿ ಪಕ್ಷದೊಳಗೆ ಅಸಮಾಧಾನ ಸ್ಫೋಟಗೊಳ್ಳುವ ಸಾಧ್ಯತೆ ಕಂಡು ಬಂದಿದೆ.

ಮಹಿಳೆಯರ ಸಂಖ್ಯೆ ಹೆಚ್ಚಳ!

ಈ ಬಾರಿಯ ಚುನಾವಣೆಯಲ್ಲಿ ಈ ಹಿಂದಿನಂತೆ ಮಹಿಳೆಯರು ಕೂಡ ಸ್ಪರ್ಧಿಸಲು ಉತ್ಸುಕರಾಗಿದ್ದು, ಅವರು ಕೂಡ ರಾಜಕೀಯ ಪಕ್ಷಗಳ ಮುಖಂಡರ ಬಳಿ ತಮಗೂ ಕೂಡ ಅವಕಾಶ ನೀಡಬೇಕೆಂದು ಒತ್ತಡ ಹೇರುತ್ತಿದ್ದಾರೆ. ಈ ಹಿಂದೆ ಹಲವಾರು ಬಾರಿ ಆಯ್ಕೆಯಾಗಿ ನಂತರ ಸೋತ ಅಭ್ಯರ್ಥಿಗಳು ಕೂಡ ಇದೀಗ ಮತ್ತೆ ಸ್ಪರ್ಧಿಸಲು ಮುಂದಾಗಿದ್ದು, ಸಿದ್ದಾಪುರದಲ್ಲಿ ಚುನಾವಣೆಯ ಚಟುವಟಿಕೆಗಳು ಕಾವೇರುತ್ತಿದೆ.

ಪಟ್ಟಣದ ಅಂಗಡಿ, ರಸ್ತೆ ಬದಿಗಳಲ್ಲಿ ಚುನಾವಣೆ ಬಗ್ಗೆ ಚರ್ಚೆಗಳು ನಡೆಯುತ್ತಿವೆ. ಈ ಬಾರಿ ಯಾರು ವಿಜೇತರಾಗುತ್ತಾರೆ ಎಂಬ ಚರ್ಚೆಗಳು ಅಲ್ಲಲ್ಲಿ ಕೇಳಿ ಬರುತ್ತಿವೆ. ಒಟ್ಟಿನಲ್ಲಿ ಆಯ್ಕೆಯಾದ ಅಭ್ಯರ್ಥಿಗಳು ಗ್ರಾಮದ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸಲಿ ಎಂಬದು ಗ್ರಾಮಸ್ಥರ ಆಶಯವಾಗಿದೆ.

- ವಾಸು ಎ.ಎನ್.