ನಗುವೇ ಮರೆತು ಹೋಗಿರುವ ಈ ದಿನಗಳಲ್ಲಿ ಹೊಟ್ಟೆ ತುಂಬಾ ನಕ್ಕು, ಭ್ರಷ್ಟಾಚಾರಿ ವ್ಯವಸ್ಥೆಯ ಬಗ್ಗೆ ವಿಷಾದ ಪಡುವಂತೆ ಮಾಡಿದ್ದು, ಸುಳ್ಯ ರಂಗಮನೆಯಲ್ಲಿ ಅರೆಭಾಷೆಯಲ್ಲಿ ಪ್ರದರ್ಶಿತವಾದ ನಾಟಕ ಸಾಹೇಬರು ಬಂದವೆ. ಹಾಸ್ಯ ಸನ್ನಿವೇಶಗಳಲ್ಲಿ ಬೆಳೆದು ವಿಷಾದದಲ್ಲಿ ಮುಕ್ತಾಯ ವಾಗುವ ಜೀವನ್‍ರಾಮ್ ಸುಳ್ಯ ನಿರ್ದೇಶನದ ಈ ನಾಟಕ ಒಂದು ನಿಮಿಷವೂ ಎಲ್ಲಿಯೂ ಬೋರ್ ಹೊಡಿಸುವುದಿಲ್ಲವೆಂಬುದು ಪ್ಲಸ್ ಪಾಯಿಂಟ್.
ಕರ್ನಾಟಕ ಅರೆಭಾಷೆ ಸಂಸ್ಕøತಿ ಮತ್ತು ಸಾಹಿತ್ಯ ಅಕಾಡೆಮಿ ಪ್ರಸ್ತುತ ಪಡಿಸಿದ ಈ ನಾಟಕದ ಕರ್ತೃ ರಷ್ಯಾದ ನಿಕೋಲಾಯ್ ಗೊಗೋಲ್. ರಷ್ಯಾದ ಕ್ರಾಂತಿ ಪೂರ್ವದ ಝಾರ್ ಆಡಳಿತ ಕಾಲದ ಭ್ರಷ್ಟಾಚಾರ ವ್ಯವಸ್ಥೆಯನ್ನು ವಿಡಂಬಿಸುವ ಈ ನಾಟಕವನ್ನು ಕನ್ನಡಕ್ಕೆ ತಂದವರು ಕೆ.ವಿ. ಸುಬ್ಬಣ್ಣ ಮತ್ತು ಕೆ.ವಿ. ಅಕ್ಷರ. ಅರೆಭಾಷೆಗೆ ತರ್ಜುಮೆ ಮಾಡಿದವರು ಜಯಪ್ರಕಾಶ ಕುಕ್ಕೇಟಿ. ಸ್ಥಳೀಯ ಅಗತ್ಯಗಳಿಗೆ ಸ್ಪಂದಿಸುವಂತಹ ಬದಲಾವಣೆಗಳನ್ನು ಮಾಡಿ ರಂಗಕ್ಕಿಳಿಸಿದವರು ಜೀವನ್‍ರಾಮ್ ಸುಳ್ಯ. ಕೊರೊನಾ ಕಾಲದಲ್ಲಿ ಒಂದು ನಾಟಕವನ್ನು ಸಂಘಟಿಸುವುದೇ ದೊಡ್ಡ ಸಾಹಸ. ಈ ಸಾಹಸದಲ್ಲಿ ಅಕಾಡೆಮಿ ಅಧ್ಯಕ್ಷ ಲಕ್ಷ್ಮೀನಾರಾಯಣ ಕಜೆಗದ್ದೆ ಮತ್ತು ಬಳಗ ನಿಸ್ಸಂಶಯವಾಗಿ ಗೆದ್ದಿದೆ.
ಉನ್ನತ ಅಧಿಕಾರಿಯೊಬ್ಬ ದೆಹಲಿಯಿಂದ ಬಂದು ನಗರದ ಅಭಿವೃದ್ಧಿ ಕಾರ್ಯಗಳ ತಪಾಸಣೆ ಮಾಡಲಿರುವನೆಂಬ ಪತ್ರಮುಖೀ ಸಂದೇಶದಿಂದ ಕಂಗಾಲಾದ ನಗರದ ಮೇಯರ್, ವ್ಯಾಪಾರಿಗಳು ಮತ್ತು ಅಧಿಕಾರಿಗಳು ಪಡುವ ಪಡಿಪಾಟಲು ಈ ನಾಟಕದ ವಸ್ತು. ಐಷಾರಾಮಿ ಹೊಟೇಲಲ್ಲಿ ವಾಸ್ತವ್ಯ ಹೂಡಿದ್ದ ದೆಹಲಿಯ ಗುಮಾಸ್ತೆಯೊಬ್ಬನನ್ನು ಅಧಿಕಾರಿಯೆಂದು ತಪ್ಪಾಗಿ ಭಾವಿಸಿ ಅವನನ್ನು ಮೆಚ್ಚಿಸಲು ಭ್ರಷ್ಟ ವ್ಯವಸ್ಥೆ ಇನ್ನಿಲ್ಲದ ಪ್ರಯತ್ನ ಮಾಡುತ್ತದೆ. ಅವನು ಮೇಯರ್, ವ್ಯಾಪಾರಿ ಮತ್ತು ಅಧಿಕಾರಿಗಳನ್ನು ದೋಚಿ ಪರಾರಿಯಾಗುತ್ತಾನೆ. ನಾಟಕದ ಕೊನೆಯಲ್ಲಿ ನಿಜವಾದ ತನಿಖಾಧಿಕಾರಿ ಪರಿಶೀಲನೆಗೆ ಬಂದಿದ್ದಾನೆಂಬ ವಾರ್ತೆ ಕೇಳಿ ಎಲ್ಲಾ ಭ್ರಷ್ಟರು ಕಂಗಾಲಾಗಿ ಹೋಗುತ್ತಾರೆ.
ನಾಟಕದುದ್ದಕ್ಕೂ ಬೆಳಕಿನ ನಿರ್ವಹಣೆ (ಶಿಶಿರ ಕಲ್ಕೂರ) ಮೋಹಕವಾಗಿದೆ. ಸಂಗೀತ (ಗೀತಾ ಗಿರೀಶ್) ವಸ್ತ್ರ ವಿನ್ಯಾಸ (ಗುರು ಮೂರ್ತಿ) ಮತ್ತು ರಂಗ ವಿನ್ಯಾಸ (ಪ್ರಕಾಶ್ ಶೆಟ್ಟಿ) ಅಚ್ಚು ಕಟ್ಟಾಗಿದೆ. ಮೇಯರಾಗಿ ವಿನೋದ್ ಮೂಡುಗದ್ದೆ, ಡಮ್ಮಿ ಅಧಿಕಾರಿಯಾಗಿ ಹಾರಂಬಿ ಯತೀನ್, ಕಾವೇರಿಯಾಗಿ ಮಮತಾ ಕಲ್ಮಕಾರು, ತಿವಾರಿಯಾಗಿ ಸುಚಿನ್ ಕಾಯರ್‍ಕಟ್ಟೆ, ಮನೋಜ್ಞ ಅಭಿನಯ ನೀಡಿದ್ದಾರೆ. ದೋಚಣ್ಣ (ದೀಪಕ್ ಮಜಿಕೋಡಿ) ಬಾಚಣ್ಣ (ರಾಜ್‍ಮುಖೇಶ್ ಸುಳ್ಯ) ತಮ್ಮ ಆಂಗಿಕ ಅಭಿನಯದಿಂದ ನಗೆ ಉಕ್ಕಿಸುತ್ತಾರೆ. ದಮ್ಮಿ ತನಿಖಾಧಿಕಾರಿ ಯೆದುರು ಭ್ರಷ್ಟ ನ್ಯಾಯಾಧೀಶ (ಕುಸುಮಾಧರ ಎ.ಟಿ.), ಪಿಡಬ್ಲ್ಯೂಡಿ ಇಂಜಿನಿಯರ್ (ಅಶ್ವಿನ್ ಕೆ.ಎಸ್.) ಶಿಕ್ಷಣಾಧಿಕಾರಿ (ಶ್ರುತಿ ಮೆದು) ಮತ್ತು ಸರ್ಕಾರಿ ಡಾಕ್ಟರ್ (ಅಮೃತ್ ಕುಕ್ಕೇಟಿ) ಬಯಲಾಗುವುದು ಮನೋಜ್ಞವಾಗಿದೆ. ಕಡ್ಡಿಯಪ್ಪ (ಶಿವಗಣೇಶ್ ಬಂಗಾರಕೋಡಿ), ಗುಡ್ಡಪ್ಪ (ನಿತ್ಯಾನಂದ ಮಲೆಯಾಳ) ಡಿವೈಎಸ್‍ಪಿ (ಭುವನ್ ಕುಂಬಳಚೇರಿ) ಪೋಸ್ಟ್ ಮಾಸ್ಟರ್ (ವಿಲಾಸ್‍ರಾವ್ ತಾನಾಜಿ), ಮಾಣಿ (ಬಂಗಾರಕೋಡಿ ಚೇತನ್) ಮತ್ತು ವ್ಯಾಪಾರಿ (ಬಂಗಾರಕೋಡಿ ಯೋಗಿತಾ) ತಮ್ಮ ಪಾತ್ರಗಳನ್ನು ಯಶಸ್ವಿಯಾಗಿ ನಿರ್ವಹಿಸಿದ್ದಾರೆ. ಮೋನಿಕಳಾಗಿ ಪುಟ್ಟ ಪಾತ್ರದಲ್ಲಿ ಒನಪು ವಯ್ಯಾರ ತೋರಿ ನಾಟ್ಯ ವೈವಿಧ್ಯ ಪ್ರದರ್ಶಿಸುವ ಸುಶ್ಮಿತಾ ಪೊಯ್ಯಮಜಲು ಸಖತ್ ಮಿಂಚುತ್ತಾರೆ.
ನಾಟಕದಲ್ಲಿ ಬಳಕೆಯಾದ ಭಾಷೆಯ ಗುಣಮಟ್ಟವನ್ನು ಇನ್ನಷ್ಟು ಎತ್ತರಿಸಲು ಸಾಧ್ಯವಿದೆ. ಈ ಬಗ್ಗೆ ಗಮನ ಹರಿಸಿದರೆ ಸಾಹಿತ್ಯಿಕ ವಾಗಿಯೂ ಸಾಹೇಬರು ಬಂದವೆ ಅರೆಭಾಷೆಗೆ ಒಂದು ಮಹತ್ವದ ಕೊಡುಗೆಯಾಗಲಿದೆ.
- ಡಾ. ಪ್ರಭಾಕರ ಶಿಶಿಲ