ಗೋಣಿಕೊಪ್ಪ ವರದಿ, ಡಿ. 6: ಜಾಗತಿಕವಾಗಿ ಮಾನವ ಎದುರಿಸುತ್ತಿರುವ ಸಮಸ್ಯೆಗಳಿಗೆ ಲಯನ್ಸ್ ಸಂಸ್ಥೆ ಸ್ಪಂದಿಸುವ ಯೋಜನೆಗಳನ್ನು ರೂಪಿಸಿಕೊಂಡಿದೆ ಎಂದು ಲಯನ್ಸ್ ಜಿಲ್ಲಾ ರಾಜ್ಯಪಾಲೆ ಡಾ. ಗೀತಾ ಪ್ರಕಾಶ್ ಹೇಳಿದರು. ವಿಶ್ವದಲ್ಲೆಡೆ ಲಯನ್ಸ್ ಸಂಸ್ಥೆ ಸೇವೆ ನೀಡುತ್ತಿದೆ. ಆರೋಗ್ಯ ರಕ್ಷಣೆ, ಅಂಧತ್ವ ನಿವಾರಣೆ, ಸ್ವಚ್ಛತೆಯೊಂದಿಗೆ ಹಸಿವು ನೀಗಿಸುವ ಸಾಕಷ್ಟು ಯೋಜನೆಗಳನ್ನು ಅನುಷ್ಠಾನಪಡಿಸಿ ಯಶಸ್ವಿಯಾಗಿದ್ದೇವೆ ಎಂದು ಸುದ್ದಿಗೋಷ್ಠಿಯಲ್ಲಿ ಹೇಳಿದರು. ನಾಯಕತ್ವದೊಂದಿಗೆ ಸೇವೆಗೆ ಹೆಚ್ಚಿನ ಆಧ್ಯತೆ ನೀಡಿದೆ. ಅಂಧತ್ವ ನಿವಾರಣೆ, ಜಲ ಸಂರಕ್ಷಣೆಗೆ ಮಳೆಕೊಯ್ಲು, ಕಸ ನಿರ್ವಹಣೆ ಬಗ್ಗೆ ಹೆಚ್ಚು ಕಾಳಜಿ ವಹಿಸುತ್ತಿದೆ. ಸೂರಿಲ್ಲದವರಿಗೆ ಸೂರು ನೀಡುವ ಯೋಜನೆಯಡಿ ಕೊಡಗು ಜಿಲ್ಲೆಯಲ್ಲಿ ಪ್ರವಾಹದಲ್ಲಿ ಮನೆ ಕಳೆದುಕೊಂಡ ನಾಲ್ಕು ಫಲಾನುಭವಿಗಳಿಗೆ ಧನ ಸಹಾಯ ಮಾಡುವ ಮೂಲಕ ಮನೆ ಕಾಮಗಾರಿ ಪೂರ್ಣಗೊಳಿಸಲು ಸಹಾಯ ಮಾಡ ಲಾಗಿದೆ. ಮತ್ತೆ 3 ಫಲಾನುಭವಿಗಳನ್ನು ಗುರುತಿಸಲಾಗಿದ್ದು, ಅವರಿಗೆ ಧನ ಸಹಾಯ ಮಾಡಲು ಯೋಜನೆ ರೂಪಿಸಲಾಗಿದೆ. ರೂ. 8.5 ಲಕ್ಷ ಅವಶ್ಯಕತೆ ಇದ್ದು ದಾನಿಗಳಿಂದ ಸಂಗ್ರಹಕ್ಕೆ ಮುಂದಾಗಿದ್ದೇವೆ ಎಂದರು.
ಬೆಕ್ಕೆಸೊಡ್ಲೂರು ಶಾರದ ಪ್ರೌಢಶಾಲೆ, ಶ್ರೀಮಂಗಲ ಸರ್ಕಾರಿ ಪದವಿ ಕಾಲೇಜು, ಕೈಕೇರಿ ಭಗವತಿ ದೇವಸ್ಥಾನಕ್ಕೆ ಶುದ್ಧ ಕುಡಿಯುವ ನೀರಿನ ಯಂತ್ರ ನೀಡಲಾಗಿದೆ. ಲೋಪಮುದ್ರ ಆಸ್ಪತ್ರೆಗೆ ಡಯಾಲಿಸಿಸ್ ಘಟಕವನ್ನು ಕೊಡುಗೆಯಾಗಿ ನೀಡಿದ್ದು, ಆರ್ಥಿಕ ವಾಗಿ ಸಂಕಷ್ಟದಲ್ಲಿರುವ ಬಾಲಕನ 2 ತಿಂಗಳ ಡಯಾಲಿಸಿಸ್‍ಗೆ ರೂ. 16 ಸಾವಿರ ಹಣವನ್ನು ಆಸ್ಪತ್ರೆಗೆ ನೀಡಿದ್ದು, ಬಾಲಕನ ಆರೋಗ್ಯ ರಕ್ಷಣೆಗೆ ಮುಂದಾ ಗಿದ್ದೇವೆ ಎಂದರು. ಸ್ಥಳೀಯ ಸರ್ಕಾರಿ ಆಸ್ಪತ್ರೆಗಳಿಗೆ 14 ಪಿಪಿಇ ಕಿಟ್, 300 ಗ್ಲೌಸ್, 35 ಫೇಸ್‍ಶೀಲ್ಡ್, ಮಾಸ್ಕ್ ನೀಡಿ ಕೊರೊನಾ ನಿಯಂತ್ರಣಕ್ಕೆ ಪ್ರೋತ್ಸಾಹ ನೀಡಲಾಗಿದೆ. ಕೂರ್ಗ್ ವೆಲ್‍ನೆಸ್ ಸಂಸ್ಥೆ, ಸಿಂಗಾಪುರ ಕೊಡವ ಕೂಟ ಲಯನ್ಸ್ ಸಂಸ್ಥೆಗೆ ಆರ್ಥಿಕ ಸಹಾಯ ಮಾಡುವ ಮೂಲಕ ಸೇವೆಗೆ ಪ್ರೋತ್ಸಾಹ ನೀಡುತ್ತಿದೆ ಎಂದರು. ಗೋಷ್ಠಿಯಲ್ಲಿ ಗೋಣಿಕೊಪ್ಪ ಲಯನ್ಸ್ ಸಂಸ್ಥೆ ಅಧ್ಯಕ್ಷ ಕೆ. ಅಚ್ಚಯ್ಯ, ಪ್ರಧಾನ ಕಾರ್ಯದರ್ಶಿ ಪುತ್ತಾಮನೆ ಸ್ಮರಣ್ ಸುಭಾಷ್, ಖಜಾಂಚಿ ಕೆ.ಎಸ್. ಸೋಮಣ್ಣ, ಸದಸ್ಯ ಎಂ.ಎಂ. ಗಣಪತಿ ಇದ್ದರು.