ವೀರಾಜಪೇಟೆ ವರದಿ: ತಾಲೂಕು ಆಡಳಿತದಿಂದ ಸರಳವಾಗಿ ಕನಕ ಜಯಂತಿಯನ್ನು ತಾಲೂಕು ಕಚೇರಿ ಆವರಣದಲ್ಲಿ ಕನಕದಾಸರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಆಚರಿಸಲಾಯಿತು.

ತಾಲೂಕು ತಹಶೀಲ್ದಾರ್ ಆರ್. ಯೋಗಾನಂದ್, ಕಂದಾಯ ಪರಿವೀಕ್ಷಕ ಪಳಂಗಪ್ಪ, ಶಿರಸ್ತೇದಾರ್ ಸಂಜೀವ್ ಕುಮಾರ್ ಹಾಗೂ ಸಿಬ್ಬಂದಿಗಳು ಹಾಜರಿದ್ದರು.ಶನಿವಾರಸಂತೆ: ಪಟ್ಟಣದ ಶ್ರೀ ಚಾಮುಂಡೇಶ್ವರಿ ವಿದ್ಯುತ್ ನಿಗಮ ಶಾಖಾ ಕಚೇರಿಯಲ್ಲಿ ಕನಕ ಜಯಂತಿಯನ್ನು ಸರಳವಾಗಿ ಆಚರಿಸಲಾಯಿತು.

ಅಧ್ಯಕ್ಷತೆ ವಹಿಸಿದ್ದ ಶಾಖಾಧಿಕಾರಿ ಹೇಮಂತ್‍ಕುಮಾರ್ ಮಾತನಾಡಿ, ಸಾಹಿತ್ಯದ ವಿವಿಧ ಪ್ರಕಾರಗಳಾದ ಕೀರ್ತನೆಗಳು, ಸುಳಾದಿಗಳು, ಉಗಾಭೋಗಗಳನ್ನು ಕನ್ನಡ ಸಾಹಿತ್ಯ ಲೋಕಕ್ಕೆ ಸಮರ್ಪಿಸಿರುವ ಕನಕದಾಸರು ನಿತ್ಯ ಸ್ಮರಣೀಯರು ಎಂದರು. ಶಾಖಾ ಮೇಲ್ವಿಚಾರಕ ಹೆಚ್.ಡಿ. ಲೋಕೇಶ್ ಹಾಗೂ ಸಿಬ್ಬಂದಿ ವರ್ಗ ಹಾಜರಿದ್ದರು.ಕೂಡಿಗೆ: ಕೂಡುಮಂಗಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚಿಕ್ಕತ್ತೂರು ಗ್ರಾಮದ ಕೆರೆ ಕೊಪ್ಪಲು ಕನಕದಾಸರ ಸಭಾಂಗಣ ನಿರ್ಮಾಣ ಮಾಡಲು ಕಾಯ್ದಿರಿಸಿದ ಜಾಗದ ಆವರಣದಲ್ಲಿ ಕನಕ ಜಯಂತಿ ಆಚರಣೆ ನಡೆಯಿತು.

ಕಾರ್ಯಕ್ರಮದ ಉದ್ಘಾಟನೆಯನ್ನು ಕನಕದಾಸರ ಭಾವಚಿತ್ರಕ್ಕೆ ಪುಷ್ಪ ಹಾಕುವ ಮೂಲಕ ಜಿಲ್ಲೆಯ ಸಂಗೊಳ್ಳಿ ರಾಯಣ್ಣ ಹಿತರಕ್ಷಣಾ ಸಮಿತಿಯ ಅಧ್ಯಕ್ಷ ಪ್ರಭಾಕರ್ ನೆರವೇರಿಸಿ ಮಾತನಾಡಿ, ಕನಕದಾಸರ ಜೀವನ ಚರಿತ್ರೆಯನ್ನು ಇಂದಿನ ಸಮಾಜದ ಯುವಕರು ಮೈಗೂಡಿಸಿಕೊಳ್ಳಬೇಕು ಎಂದರು. ಮುಖ್ಯ ಅತಿಥಿಗಳಾಗಿ ಆಗಮಿಸಿದ ಕೂಡುಮಂಗಳೂರು ಸಹಕಾರ ಸಂಘದ ನಿರ್ದೇಶಕ ಕೆ.ಕೆ. ಭೋಗಪ್ಪ ಮಾತನಾಡಿ, ಕನಕದಾಸರ ಚಿಂತನೆ ಇಂದಿನ ದಿನಗಳಲ್ಲಿ ಅತಿ ಮುಖ್ಯವಾಗಿದೆ. ಅವುಗಳನ್ನು ಅನುಸರಿಸ ಬೇಕಾಗುತ್ತದೆ ಎಂದರು.

ಕಾರ್ಯಕ್ರಮದಲ್ಲಿ ತಾಲೂಕು ಪಂಚಾಯಿತಿ ಸದಸ್ಯ ಗಣೇಶ್ ಮತ್ತು ರಾಜ್ಯ ಕುರುಬ ಸಂಘದ ನಿರ್ದೇಶಕಿ ಹೇಮಲತಾ ದಿನದ ಮಹತ್ವದ ಬಗ್ಗೆ ಮಾತನಾಡಿದರು. ವೇದಿಕೆಯಲ್ಲಿ ಸಂಘದ ಕಾರ್ಯದರ್ಶಿ ಮಂಜುನಾಥ, ರಂಗೇಗೌಡ, ಅಶ್ವಿನಿಕುಮಾರ್, ಕೆ.ಟಿ. ರವಿ, ಎಂ.ಆರ್. ರಾಜೇಗೌಡ, ದಿನೇಶ್, ಜಗದೀಶ್ ಸೇರಿದಂತೆ ಸಮಿತಿಯ ಸದಸ್ಯರು ಮತ್ತು ಚಿಕ್ಕತ್ತೂರು ಕೆರೆಕೊಪ್ಪಲು ದೊಡ್ಡತ್ತೂರು ಗ್ರಾಮಗಳ ಗ್ರಾಮಸ್ಥರು ಭಾಗವಹಿಸಿದ್ದರು.