ಸೋಮವಾರಪೇಟೆ, ಡಿ. 6: ಜಗತ್ತನ್ನೇ ಬಾಧಿಸುತ್ತಿರುವ ಕೊರೊನಾ ವೈರಸ್ನಿಂದ ತಪ್ಪಿಸಿಕೊಳ್ಳಲು ಪ್ರಾಥಮಿಕವಾಗಿ ಮಾಸ್ಕ್ ಧರಿಸಬೇಕು ಎಂಬ ನಿಯಮ ಎಲ್ಲೆಡೆ ಪ್ರಚಲಿತದಲ್ಲಿದ್ದು, ಸಾರ್ವಜನಿಕರೂ ಸಹ ಸರ್ಕಾರದ ನಿಯಮವನ್ನು ಸಾಧ್ಯವಾದಷ್ಟು ಪಾಲಿಸುತ್ತಿದ್ದಾರೆ.ಇದೀಗ ಕರ್ನಾಟಕ ಸರ್ಕಾರದ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಮೂಲಕ ಕೊರೊನಾ ಜಾಗೃತಿಗಾಗಿ ನೂತನ ಪ್ರಚಾರ ಫಲಕ ಗಳನ್ನು ಎಲ್ಲೆಡೆ ಅಳವಡಿಸಲಾಗುತ್ತಿದ್ದು, ಇದರಲ್ಲಿ ಮಾಸ್ಕ್ ಧರಿಸುವ ಬಗ್ಗೆ ಜಾಗೃತಿ ಮೂಡಿಸಲಾಗುತ್ತಿದೆ.“ನನ್ನ ರಕ್ಷಣೆ ನನ್ನ ಜವಾಬ್ದಾರಿ- ಮಾಸ್ಕ್ ಧರಿಸಲು ನಾನು ಪ್ರತಿಜ್ಞೆ ಮಾಡುತ್ತೇನೆ” ಎಂಬ ಘೋಷ ವಾಕ್ಯವಿದ್ದು, ಆ್ಯನಿಮೇಷನ್ ಚಿತ್ರದಲ್ಲಿ ತನ್ನ ಮೂಗು ಮತ್ತು ಬಾಯಿ ಮುಚ್ಚಿರುವಂತೆ ಯುವಕನೋರ್ವ ಮಾಸ್ಕ್ ಧರಿಸಿರುವ ಚಿತ್ರವಿದೆ. ಇದೇ ಪ್ರಚಾರ ಫಲಕದಲ್ಲಿ ರಾಜ್ಯದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಚಿತ್ರವನ್ನೂ ಮುದ್ರಿಸಿದ್ದು, ಇದರಲ್ಲಿ ರಾಜ್ಯದ ಮುಖ್ಯಮಂತ್ರಿ ಮಾಸ್ಕ್ ರಹಿತವಾಗಿ ಕಾಣಿಸಿಕೊಂಡಿದ್ದಾರೆ.
ಕೊರೊನಾ ವೈರಸ್ ಹರಡುವಿಕೆ ಯಿಂದ ದೂರವಿರಲು ಮಾಸ್ಕ್ ಧರಿಸಿ ಎಂದು ಜಾಗೃತಿ ಮೂಡಿಸುವ ಫಲಕದಲ್ಲಿ, ಮಾಸ್ಕ್ ಧರಿಸದ ಮುಖ್ಯಮಂತ್ರಿಗಳ ಚಿತ್ರವನ್ನು ಅಳವಡಿಸಿರುವದು ಅಪಹಾಸ್ಯಕ್ಕೆ ಎಡೆಮಾಡಿಕೊಟ್ಟಿದೆ.
‘ಕೋವಿಡ್-19 ಎಚ್ಚರ ವಹಿಸಿ, ಎಲ್ಲಿಯವರೆಗೆ ಔಷಧಿ ಲಭ್ಯವಾಗುವುದಿಲ್ಲವೋ ಅಲ್ಲಿಯವರೆಗೆ ಜಾಗ್ರತೆಯಿಂದಿರಿ. ಕಡ್ಡಾಯವಾಗಿ ಮಾಸ್ಕ್ ಧರಿಸಿ’ ಎಂದು ತಿಳುವಳಿಕೆ ನೀಡುವ ಪೋಸ್ಟರ್ನಲ್ಲಿ ಮುಖ್ಯಮಂತ್ರಿ ಗಳು ಮಾಸ್ಕ್ ಧರಿಸಿರುವ ಚಿತ್ರ ಪ್ರಕಟಿಸಿದ್ದರೆ ಪ್ರಚಾರ ಫಲಕಕ್ಕೆ ಅರ್ಥವಿರುತ್ತಿತ್ತು.
ಇದು ಮುಖ್ಯಮಂತ್ರಿಗಳಿಂದ ಆದ ಅಚಾತುರ್ಯವೋ/ ಸಾರ್ವಜನಿಕ ಸಂಪರ್ಕ ಇಲಾಖೆಯ ಆಯುಕ್ತರ ಅಚಾತುರ್ಯವೋ ಅಥವಾ ಪೋಸ್ಟರ್ ರಚಿಸಿದ ಕಂಪ್ಯೂಟರ್ ಆಪರೇಟರ್ನ ಅಚಾತುರ್ಯವೋ.. ಒಟ್ಟಾರೆ ಜಾಗೃತಿಯ ಫಲಕ ಮಾತ್ರ ಅಪಹಾಸ್ಯಕ್ಕೀಡಾಗಿದೆ!
-ವಿಜಯ್ ಹಾನಗಲ್