ಪೆÇನ್ನಂಪೇಟೆ, ಡಿ.6: ಎಲ್ಲಿಯವರೆಗೆ ವಾಮಾಚಾರ, ಮಾಟ ಮಂತ್ರ ಮುಂತಾದ ಮೌಢ್ಯಗಳನ್ನು ನಂಬುವ ಜನ ಇರುತ್ತಾರೋ ಅಲ್ಲಿಯವರೆಗೂ, ಅಂತಹ ಜನರನ್ನು ತಮ್ಮ ಮೋಸದ ಬಲೆಗೆ ಬೀಳಿಸಲು, ದೇವರ ಹೆಸರಿನಲ್ಲಿ ವಂಚಿಸಲು ವಂಚಕರು ಜಾತಕ ಪಕ್ಷಿಯಂತೆ ಕಾಯುತ್ತಿರುತ್ತಾರೆ ಎಂಬುದಕ್ಕೆ ಇತ್ತೀಚೆಗೆ ದಕ್ಷಿಣ ಕೊಡಗಿನಲ್ಲಿ ನಡೆದ ಘಟನೆಯೇ ಸಾಕ್ಷಿ.

ಬಲ್ಯಮುಂಡೂರಿನ ಮಡಿವಾಳರ ರವಿ ಎಂಬ ವ್ಯಕ್ತಿ ‘ನನಗೆ ದೇವರು ಬರುತ್ತದೆ, ನಾನು ಮಾಟ ಮಂತ್ರ ಯಾವುದೇ ಸಮಸ್ಯೆ ಇದ್ದರೂ ಪರಿಹರಿಸುತ್ತೇನೆ’ ಎಂದು ಹೇಳಿಕೊಂಡು ಬಹಳಷ್ಟು ಜನರಿಂದ ಸಾವಿರಾರು ರೂಪಾಯಿ ವಸೂಲಿ ಮಾಡಿಕೊಂಡು ಜೀವನ ಸಾಗಿಸುತ್ತಿದ್ದ. ಆದರೆ ಆತನ ಅದೃಷ್ಟ ಕೆಟ್ಟುದರ ಪರಿಣಾಮ ಆತ ಬೆಳ್ಳೂರು ಗ್ರಾಮದ ಅಮಾಯಕರೊಬ್ಬರಿಗೆ ಮೋಸ ಮಾಡಲು ನಡೆಸಿದ್ದ ಸಂಚು ಬಯಲಾಗಿದ್ದು, ವಂಚಕ ಇದೀಗ ಸಿಕ್ಕಿ ಬಿದ್ದಿದ್ದಾನೆ.ದಕ್ಷಿಣ ಕೊಡಗಿನ ಗ್ರಾಮ ವೊಂದರ ವ್ಯಕ್ತಿಯೊಬ್ಬರಿಗೆ ಕಾಲು ನೋವು ಕಾಣಿಸಿಕೊಂಡಿತ್ತು. ಅವರ ಮನೆಯಲ್ಲಿಯೂ ಕೂಡ ಸಾಕಷ್ಟು ಸಮಸ್ಯೆಗಳು ಕಾಣಿಸಿಕೊಂಡಿದ್ದವು. ಸಮಸ್ಯೆಗಳ ಪರಿಹಾರಕ್ಕೆಂದು ಇವರು ತನಗೆ ದೇವರು ಬರುತ್ತದೆ ಎಂದು ಹೇಳಿಕೊಂಡಿದ್ದ ರವಿ ಎಂಬುವವರ ಹತ್ತಿರ ಪರಿಹಾರ ಕೇಳಿದ್ದಾರೆ. ಆಗ ದೇವರನ್ನು ಮೈಮೇಲೆ ಬರಿಸಿಕೊಂಡ ರವಿ ‘ನಿಮ್ಮ ಮೇಲೆ ಮಾಟ ಮಾಡಿಸಲಾಗಿದೆ ನಿಮ್ಮ ಸಂಬಂಧಿಕರೇ 4 ವರ್ಷಗಳ ಹಿಂದೆ ನಿಮಗೆ ಮಾಟ ಮಾಡಿಸಿ ಮನೆಯ ಸಮೀಪ ಹೂತು ಹಾಕಿದ್ದಾರೆ. ಆದಷ್ಟು ಬೇಗ ನೀವು ಮಾಟ ಪರಿಹರಿಸಿಕೊಳ್ಳದಿದ್ದರೆ, ಮುಂದೆ ಬಹಳ ದೊಡ್ಡ ಅಪಾಯ ಕಾದಿದೆ’ ಎಂದು ಹೆದರಿಸಿದ್ದಾನೆ.

ಮಾಟ ತೆಗೆಯಲು 30 ಸಾವಿರದವರೆಗೆ ಖರ್ಚಾಗುತ್ತದೆ ಎಂದು ಹೇಳಿದ್ದಾನೆ. ದೇವರ ಗುಡ್ಡಪ್ಪನ ಮಾತು ನಂಬಿದ ಅಮಾಯಕ ವ್ಯಕ್ತಿ ಮಾಟ ತೆಗೆಸಿ, ಪರಿಹಾರ ಮಾಡಿಕೊಳ್ಳಲು ನಿರ್ಧರಿಸಿದರು. ಯಾವುದಕ್ಕೂ ಇರಲಿ ಎಂದು ತಮ್ಮ ಸಂಬಂಧಿಯಾದ ಕಿರುಗೂರು ಗ್ರಾಮದ ಚೆರಿಯಪಂಡ ಗಣೇಶ್ ಎಂಬವರಿಗೆ ಈ ವಿಷಯವನ್ನು ತಿಳಿಸಿದ್ದಾರೆ. ಆಗ ಅವರಿಗೆ ಸಮಾಧಾನ ಹೇಳಿದ ಗಣೇಶ್ ಅವರು ‘ಇದೆಲ್ಲ ಮೂಢನಂಬಿಕೆ, ಅವನ ಮಾತು ನಂಬಬೇಡಿ ನಿಮ್ಮ ಪಾಡಿಗೆ ನೀವು ಇರಿ ಏನೂ ಆಗುವುದಿಲ್ಲ’ ಎಂದು ಹೇಳಿ, ಪವಾಡ ಬಯಲು ಮಾಡುವದರಲ್ಲಿ ಪ್ರಖ್ಯಾತರಾಗಿರುವ ಹುಲಿಕಲ್ ನಟರಾಜು ಅವರಿಗೆ ಕರೆಮಾಡಿ ವಿಷಯ ತಿಳಿಸಿದ್ದಾರೆ. ಇವರ ಕರೆಗೆ ಸ್ಪಂದಿಸಿದ ಹುಲಿಕಲ್ ನಟರಾಜ್ ‘ನಾನು ಭಾನುವಾರ ಅಲ್ಲಿಗೆ ಬರುತ್ತೇನೆ’ ಎಂದು ಹೇಳಿದ್ದರು. ಆದರೆ ದೇವರು ಬರುವ ರವಿ ಬುಧವಾರ ದಿನವೇ ಮಾಟ ತೆಗೆಯಬೇಕು ತಡವಾದರೆ ಅಪಾಯ ಕಾದಿದೆ ಎಂದು ಮತ್ತಷ್ಟು ಹೆದರಿಸಿದ ಪರಿಣಾಮ ಕಳೆದ ಬುಧವಾರ ರಾತ್ರಿಯೇ ಮಾಟ ತೆಗೆಸುವ ಕಾರ್ಯ ವನ್ನು ನಿಗದಿ ಮಾಡಲಾಯಿತು.

ಗಣೇಶ್‍ರವರು ಹುಲಿಕಲ್ ನಟರಾಜ್‍ರವರಿಗೆ ಮತ್ತೆ ಕರೆಮಾಡಿ ವಿಷಯ ತಿಳಿಸಿದಾಗ,

(ಮೊದಲ ಪುಟದಿಂದ) ಅವರು ‘ನನಗೆ ಬುಧವಾರ ಬರಲು ಕಾರಣಾಂತರಗಳಿಂದ ಸಾಧ್ಯವಾಗುವುದಿಲ್ಲ . ನೀವು ಮಾಟ ತೆಗೆಯುವ ಸಂದÀರ್ಭ ಅದನ್ನು ಸಂಪೂರ್ಣವಾಗಿ ವೀಡಿಯೋ ಮಾಡಿ ಕಳಿಸಿಕೊಡಿ, ನಾನು ಪರಿಶೀಲಿಸಿ ಹೇಳುತ್ತೇನೆ ಎಂದಿದ್ದಾರೆ. ಅದರಂತೆ ಅಂದು ರಾತ್ರಿ ಮನೆಯ ಸಮೀಪ ಮಾಟ ಮಾಡಿ ನೆಲದಲ್ಲಿ ಹೂಳಲಾಗಿದೆ ಎಂದು ಮೈಮೇಲೆ ದೇವರು ಬಂದಂತೆ ಆಡುತ್ತ ರವಿ ಜಾಗ ತೋರಿಸಿ ಅಗೆಯಲು ಹೇಳಿದ್ದಾನೆ. ಸ್ಥಳದಲ್ಲಿ ಅಗೆಯುತ್ತಿದ್ದ ಸಂದರ್ಭ, ಅಗೆದ ಗುಂಡಿಯ ಮೇಲೆ ಬಿದ್ದು ಕೊಂಡ ರವಿ ತನ್ನ ಸೊಂಟದ ನಡುವೆ ಪಂಚೆಯ ಒಳಗೆ ನೂಲು ಸುತ್ತಿ ಇಟ್ಟುಕೊಂಡಿದ್ದ ಲೋಹದ ರೀತಿಯ ವಸ್ತುವನ್ನು ತನ್ನ ಕೈಚಳಕದ ಮೂಲಕ ಯಾರಿಗೂ ಕಾಣದ ರೀತಿಯಲ್ಲಿ ಅಗೆದಿದ್ದ ಜಾಗದಲ್ಲಿ ಬೀಳಿಸಿ, ಅದನ್ನು ತನ್ನ ಬಾಯಿಯಿಂದ ತೆಗೆದು ತೋರಿಸಿದ್ದಾನೆ. ರವಿಯ ಕೈಚಳಕವನ್ನು ಸೂಕ್ಷ್ಮವಾಗಿ ಗಮನಿಸಿದ ಗಣೇಶ್ ಎಲ್ಲವನ್ನು ವೀಡಿಯೋ ಮಾಡಿದ್ದಾರೆ. ಸತ್ಯ ಗೊತ್ತಾಗುತ್ತಿದ್ದಂತೆ ರವಿಯ ಮೈಮೇಲಿದ್ದ ದೇವರು ಮಾಯವಾಗಿದೆ. ನಂತರ ಆತ ಸತ್ಯ ಒಪ್ಪಿಕೊಂಡಿದ್ದು, ‘ನನಗೆ ಯಾವುದೇ ದೇವರು ಬರುವುದಿಲ್ಲ, ನಾನು ಜನರಿಗೆ ದೇವರ ಹೆಸರಿನಲ್ಲಿ ಮೋಸ ಮಾಡಿದ್ದೇನೆ. ಇನ್ನು ಮುಂದೆ ಈ ರೀತಿ ಮಾಡುವುದಿಲ್ಲ ನನ್ನನ್ನು ಕ್ಷಮಿಸಿಬಿಡಿ’ ಎಂದು ಅಂಗಲಾಚಿದ್ದಾನೆ. ಇನ್ನು ಮುಂದೆ ಈ ರೀತಿ ಮಾಡದಂತೆ ಅವನಿಗೆ ಎಚ್ಚರಿಕೆ ನೀಡಿ ಬಿಡಲಾಗಿದೆ.

ಚೆರಿಯಪಂಡ ಗಣೇಶ್ ಅವರ ಸಮಯ ಪ್ರಜ್ಞೆಯಿಂದ ರವಿ ಎಂಬ ವಂಚಕನ ನಾಟಕ ಬಯಲಾಗಿದೆ. ಜನರಿಗೆ ದೇವರ ಮೇಲಿರುವ ನಂಬಿಕೆಯನ್ನು ತಮ್ಮ ಲಾಭಕ್ಕೆ ಬಳಸಿಕೊಂಡು ಜೀವನ ಸಾಗಿಸುತ್ತಿರುವ ನಯವಂಚಕರು ನಮ್ಮ ನಡುವೆ ಇನ್ನೂ ಇದ್ದಾರೆ. ಎಚ್ಚರ...!

- ವರದಿ : ಚನ್ನನಾಯಕ